ದಿನಕರ ದೇಸಾಯಿಯವರ ಐದು ಚುಟುಕುಗಳು
ಕವನ
೧
ವಿಶ್ವ ಪರಿಷತ್ತು ಸೇರಲು ನಿನ್ನೆ ಸಂಜೆ
ಮಾತಾಡಿ ಮಾತಾಡಿ ಭೂವಲಯ ಬಂಜೆ
ಮುಂಜಾನೆ ಗದ್ದೆ ಹೂಡಲು ಎರಡು ಎತ್ತು
ಸಂಜೆಯಾಗುವತನಕ ಬಾಯೊಳಗೆ ತುತ್ತು.
೨
ಮಂತ್ರಿಗಳು ನಮಗಿತ್ತ ಭರವಸೆಯ ನಂಬಿ
ಒಡೆದು ನೋಡಿದೆವು ಪ್ರತಿಯೊಂದು ಗೋಡಂಬಿ
ಒಂದರಲ್ಲೂ ಬೀಜ ಸಿಗಲಿಲ್ಲ ಪಾಪ !
ಎಲ್ಲವೂ ಒಣಬಾಯಿ ಮಾತಿನ ಪ್ರಲಾಪ.
೩
ಮನೆಯೊಳಗೆ ಖಾಲಿ ಇದ್ದರೆ ನಿಮ್ಮ ದುಡ್ಡು
ವೃದ್ಧನಾರಿಯ ಹಾಗೆ ಸಂಪೂರ್ಣ ಗೊಡ್ಡು
ಬ್ಯಾಂಕಿನಲಿ ತುಂಬಿದರೆ ಯೌವನದ ಪ್ರಾಯ
ಪ್ರತಿವರ್ಷ ಮರಿ ಹಾಕಿ ಭರ್ತಿ ಆದಾಯ.
೪
ಭಾಷಣಕೆ ನಿತ್ಯವೂ ಹಾಕಿದರೆ ಬಣ್ಣ
ನೀನೊಂದು ದಿನ ಮಂತ್ರಿಯಾಗಬಹುದಣ್ಣ
ಹಾಕಿದರೆ ಬಣ್ಣ ಬದಲಾಯಿಸಿದ ಕೋಟು
ನಿನ್ನ ಪೆಟ್ಟಿಗೆಯೊಳಗೆ ಸಾಕಷ್ಡು ಓಟು.
೫
ಮಂಗಳವ ಹಾಡಲಿಕೆ ನನಗಿಲ್ಲ ಬಾಯಿ
ಯಾವಾಗಲೂ ಕಾವಲಿಡಬೇಕು ನಾಯಿ
ಸ್ತುತಿಪಾಠ ಅತಿಯಾಗಿ ಹಾಳಾಯ್ತು ದೇಶ
ಬೊಗಳಬೇಕೆನ್ನುವುದೆ ನನ್ನ ಉದ್ಧೇಶ.
(ಸಂಗ್ರಹ)
ಚಿತ್ರ್