ದಿನಕರ ದೇಸಾಯಿಯವರ ಐದು ಚುಟುಕುಗಳು

ದಿನಕರ ದೇಸಾಯಿಯವರ ಐದು ಚುಟುಕುಗಳು

ಕವನ

ಚುಟುಕುಗಳ ಬರೆಯುವುದು ಇನ್ನೆಷ್ಟು ದಿವಸ ?

ಏನು ಹೇಳಲಿ, ಮಗನೆ ? ನನಗಿಲ್ಲ ಕೆಲಸ

ಮಾಯವಾಗಲಿ ಪುಢಾರಿಗೆ ಹಿಡಿದ ರೋಗ

ಆತನಕ ನನಗಿಲ್ಲ ಬೇರೆ ಉದ್ಯೋಗ.

ಕೋಗಿಲೆಯ ಉಲಿ ಸಾಕು, ಹುಲಿ ಬಂತು ನೋಡು

ಊರಲ್ಲ, ಮಾರಾಯ ! ಸುತ್ತಲೂ ಕಾಡು !

ಈ ಕಾಡಿನೊಳಗಿಂದ ಪಾರಾದ ಬಳಿಕ

ಕೋಗಿಲೆಯ ಪದ ಹಾಡಿ ಮಾಡೋಣ ಜಳಕ.

ಕೊನೆಗೆ ನಿಲ್ಲುವುದೊಂದೆ; ಜೀವನದ ಸತ್ಯ

ಸತ್ಯವಿದ್ದರೆ ಮಾತ್ರ ಬದುಕು ಕೃತಕೃತ್ಯ

ಉಳಿದುದೆಲ್ಲ ಹಾರಿ ಹೋಗುವುದು ಮಗನೆ

ಗಾಳಿಪಟವಾಗುವುದು ಜೀವನದ ರಚನೆ.

ಕವಿಗೇಕೆ ಹೂಮಾಲೆ ಬೇಕೇ ಸತ್ಕಾರ

ಕೃತಿಯನೋದದೆ ಪಾಪ ! ಹಾಕುವರು ಹಾರ

ಕವಿಯ ಗೌರವಿಸಲಿಕೆ ಒಂದು ಉಪಾಯ

ಅವನ ಕೃತಿಗಳನೋದಿ ಸುಖಿಸು, ಮಾರಾಯ.

ಒಂದೆಡೆಗೆ ರವೆಯಷ್ಟು ಒಡೆದರೂ ಮುತ್ತು

ಚೂರು ಚೂರಾಗುವುದು ಇಂದಿನ ಜಗತ್ತು

ಆಮೇಲೆ ಆ ಬ್ರಹ್ಮದೇವನ ಸವಾರಿ

ಧರೆಗಿಳಿದರೂ ವ್ಯರ್ಥ, ಆಗದು ರಿಪೇರಿ.

(ಸಂಗ್ರಹ)

ಚಿತ್ರ್