ದಿನಕರ ದೇಸಾಯಿಯವರ ಐದು ಚುಟುಕುಗಳು
ಕವನ
೧
ರೈತನಿಗೆ ಭೂಮಿ ಸಿಕ್ಕಿದರೆ ನಾನು ಗೆದ್ದೆ
ಜೀವಂತವಾಗುವುದು ಪ್ರತಿಯೊಂದು ಗದ್ದೆ
ಆಮೇಲೆ ಯಾವ ಬದನಿಕೆಗಿಲ್ಲ ಜಾಗ
ಗೇಣಿಯೆಂಬುದು ದವಸ ಧಾನ್ಯಗಳ ರೋಗ.
೨
ಗಂಗೆಗೂ ಹಿರಿದಾಗಿ ಹರಿಯುತಿದೆ ಭದ್ರಾ
ಅರಸಿಕೆರೆ ಎಂಬುದೇ ಅರಬೀ ಸಮುದ್ರ
ದಿಲ್ಲಿಗಿಂತಲೂ ಧಾರವಾಡವೆ ಪ್ರಚಂಡ
ಮಾನಸ ಸರೋವರವೆ ಕಲಘಟಕಿ ಹೊಂಡ.
೩
ಈ ಚುನಾವಣೆಯಲ್ಲಿ ಹೋರಾಡಿ ಬಿದ್ದೆ
ಬಿದ್ದರೂ ಜೀವನದ ಗುರಿಯಲ್ಲಿ ಗೆದ್ದೆ
ಸೋಲಿನಲಿ ಜಯ ಕಂಡು ಊರೆಲ್ಲ ಸುತ್ತಿ
ಹೆಜ್ಜೆ ಹೆಜ್ಜೆಗೆ ಹಚ್ಚಿದೆನು ಮೇಣಬತ್ತಿ.
೪
ನಾನಾದೆ ನಾನಾದೆ ನಾನಾದೆ ದೊಡ್ಡ
ಎಂದು ಭಾವಿಸಿದಾಗ ತಲೆಯಾಯ್ತು ಹೆಡ್ಡ
ನಾನಾದೆ ನಾನಾದೆ ಬಲುಸಣ್ಣ ಧಾನ್ಯ
ಎಂದು ಭಾವಿಸಿದಾಗ ಬಾಳಾಯ್ತು ಧನ್ಯ.
೫
ಈ ಜಗದ ಮೇಲೆನಗೆ ವಿಪರೀತ ಒಲವು
ಸ್ವರ್ಗದಲ್ಲೂ ಆಣಸಿಗ್ಉ ಈ ನೆಲವು
ತರತರದ ಗಿಡಬಳ್ಳಿ ಹೂಕಾಯಿ ಹಣ್ಣು
ಸ್ವರ್ಗದೊಳಗುಂಟೇನು ಈ ತರದ ಮಣ್ಣು ?
(ಸಂಗ್ರಹ)
ಚಿತ್ರ್