ದಿನಕರ ದೇಸಾಯಿಯವರ ಚುಟುಕುಗಳು
೧.
*ನನ್ನ ಕನ್ನಡ ನುಡಿಯೆ ನೀನೆಷ್ಟು ಚಂದ*
*ಏನು ಗೀಚಿದರು ಆಗುವುದು ಶ್ರೀಗಂಧ*
*ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು*
*ಬಂಗಾರಕ್ಕಿಂತಲೂ ಶ್ರೇಷ್ಠ ನುಡಿಮುತ್ತು*
೨
*ಸರ್ವಜ್ಞ ಹಿಡಿದದ್ದು ತ್ರಿಭುವನದ ಹಾದಿ*
*ನಾನು ಹಿಡಿದದ್ದು ನವಭಾರತದ ಬೀದಿ*
*ಸರ್ವಜ್ಞ ತ್ರಿಪದಿಯಲಿ ಮನುಕುಲದ ಕಾಳು*
*ನನ್ನ ಚೌಪದಿಯೊಳಗೆ ಮಾನವನ ಗೋಳು*
೩
*ಶೀಲವೆಂಬುದು ಮಗನೆ, ಜೀವನದ ಜೇನು*
*ಎಂದು ಕಾಗುಣಿತ ಕಲಿಸಿದೆ ನೀನು*
*ನೀನು ಕಲಿಸಿದ ವರ್ಣಮಾಲೆಯ ಸುವರ್ಣ*
*ಬಂಗಾರಕ್ಕಿಂತಲೂ ಶ್ರೇಷ್ಠ, ದತ್ತಣ್ಣ*
೪
*ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು*
*ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು*
*ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ*
*ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು, ನಲ್ಲೆ*
೫
*ಎಲೆ ಕವಿಯೆ, ಸುಡು ನಿನ್ನ ಕವನಗಳ ಕೀರ್ತಿ*
*ತಿಳಿ ಬಾನು, ಗಿರಿಕಾನುಗಳೇ ನಿನ್ನ ಸ್ಪೂರ್ತಿ*
*ಕೇರಿ ಕೇರಿಗಳಲ್ಲಿ ಉರಿದರೂ ಜ್ವಾಲೆ*
*ಕವನ ಕಟ್ಟುವೆ ನೀನು ಮಲ್ಲಿಗೆಯ ಮೇಲೆ*
***
ಸೆಪ್ಟೆಂಬರ್ ಹತ್ತು, ದೇಸಾಯಿಯವರ ಜನ್ಮದಿನ. ಡಾ|| ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನವು ಸೆಪ್ಟೆಂಬರ್ ತಿಂಗಳನ್ನು "ದಿನಕರ ಮಾಸ" ಎಂದು ಆಚರಿಸಲು ಕರೆನೀಡಿದೆ. ದಿನಕರ ಮಾಸದ ಸಲುವಾಗಿ ಓದುಗರಿಗಾಗಿ ದೇಸಾಯಿಯವರು ರಚಿಸಿದ ಈ ಮೇಲಿನ ಐದು ಚುಟುಕುಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
~ ಶ್ರೀರಾಮ ದಿವಾಣ