ದಿನಕ್ಕೊಂದು ಪದ
ಶಬ್ದ (ನಾ).
೧.ಸದ್ದು; ಸಪ್ಪುಳ; ಧ್ವನಿ: ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈ ದುಡಿಕಿದರೆ ಅದು ಪ್ರಸಾದವಲ್ಲ ಕಿಲ್ಬಿಷ (ಬಸವ. ೩೯೯);
ಶಬ್ದವೆಂದರೆ ನಮ್ಮ ಕಿವಿಗಳಲ್ಲಿ ಉಂಟಾಗುವ ಒಂದು ಅನುಭವ ಮತ್ತು ಆ ಅನುಭವವನ್ನು ಉಂಟುಮಾಡಬಲ್ಲ ಕಾರಣವಿಶೇಷ.(ಭೌತವಿಜ್ಞಾನ)
೨. [ವ್ಯಾಕರಣ] ಅಕ್ಷರಗಳ ಗುಂಪು; ಪದ; ಪ್ರಾಯಿಕಮಕ್ಕುಂ ದೀರ್ಘಾಮ್ನಾಯಮದಂತೆಲ್ಲ ಶಬ್ದದೊಳ್ ವೃತ್ತಿಗತಂ (ಕಾವ್ಯಾವಲೋಕನ ೨೫೧); ಅನುಕೂಲಪವವನಿಂ ಜೀವನಿಷ್ಟದಿಂ ನಾಭಿಮೂಲದೊಳ್ ಕಹಳೆಯ ಪಾಂಗಿನವೋಲ್ ಶಬ್ದದ್ರವ್ಯಂ ಜನಿಯಿಸುಗುಂ ಶ್ವೇಮದಱ ಕಾರ್ಯಂ ಶಬ್ದಂ (ಶಬ್ದಮಣಿದರ್ಪಣ ೨);
೧,೨: ವೈಯಾಕರಣನಂತೆ ಶಬ್ದಮನಾಲಿಸಿಯುಂ ಬೇಂಟೆಕಾಱನಂತೆ ಅಡಿವಜ್ಜೆಯನಱಸಿಯುಂ (ಗದಾಯುದ್ದ ೬-೨೮)
೩. ವ್ಯಾಕರಣ
೪. [ನ್ಯಾಯಶಾಸ್ತ್ರದಲ್ಲಿ] ಹನ್ನೆರಡು ಪ್ರಮಾಣಗಳಲ್ಲಿ ಒಂದು; ಪ್ರಮಾಣವು ಪ್ರತ್ಯಕ್ಷ, ಅನುಮಾನ, ಉಪಮಾನ, ಶಬ್ದ, ಅರ್ಥಾಪತ್ತಿ . . . ಪ್ರಾತಿಭ ಎಂದು ಹನ್ನೆರಡು ಎಂದು ಕೆಲವರು ಹೇಳುತ್ತಾರೆ.
೫. [ದ್ವೈತ ಸಿದ್ಧಾಂತದಲ್ಲಿ] ನಲವತ್ತು ವಿಧವಾದ ಗುಣಗಳಲ್ಲಿ ಒಂದು : ಶಬ್ದಬುದ್ಧಿ . . . ಸೌಭಾಗ್ಯವೆಂದು ಸಾಮಾನ್ಯವಾಗಿ ನಲವತ್ತು ವಿಧ ಗುಣಗಳು
೬. [ಶೈವಧರ್ಮದಲ್ಲಿ] ಶೈವಾಗಮದ ಮೂವತ್ತಾರು ತತ್ತ್ವಗಳಲ್ಲಿ ಒಂದು: ಷಟ್ ತ್ರಿಂಶತ್ತತ್ವಗಳು: - ಶಿವ, ಶಕ್ತಿ, . . . ಶಬ್ದ, ಸ್ಪರ್ಶ, ರೂಪ, ರಸ, ಗಂದ, ಆಕಾಶ . . . ಭೂಮಯಃ (ಇವು ಶೈವಾಗಮದಲ್ಲಿರುವ ತತ್ವಸಂದೋಹಗಳು)
೭. [ಜೈನಧರ್ಮದಲ್ಲಿ] ವಸ್ತುವಿನ ಭಾವ; ದ್ರವ್ಯತ್ವ: ಶಬ್ದಕ್ಕೆ ದ್ರವ್ಯತ್ವಮಂ ಜೈನರ್ ಪೇೞ್ದಪರ್ (ಶಬ್ದಮಣಿದರ್ಪಣ ೨ ಟೀಕೆ)
(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)