ದಿನಕ್ಕೊಂದು ಪದ : ನೋಟ

ದಿನಕ್ಕೊಂದು ಪದ : ನೋಟ

Comments

ಬರಹ

ನೋಟ, ನೋಂಟ (ನಾ)

೧. ನೋಡುವಿಕೆ; ಅವಲೋಕನ; ಕಾಣುವಿಕೆ; ದರ್ಶನ: ನಿಭಾಳನಂ, ನಿಶಮನಂ, ನಿಧ್ಯಾನಂ, ಅವಲೋಕನಂ, ಲಕ್ಷಣಂ, ದರ್ಶನಂ, ದೃಷ್ಟಿಃ, ದ್ಯೋತನಂ- ಈ ಎಂಟು ನೋಟಂ (ಹಲಾಯುಧಪುರಾಣ ೯೩-೪೧೨); ನುಡಿಯಂ ತಗುೞ್ಚಿ ನೋಟಂ ನುಡಿ ಪರಿಚಯಮಂ ತಗುೞ್ಚಿ ಪರಿಚಯಮಳಿಪಂ ತಡೆಯದೆ ತಗುೞ್ಚಿ ಮನದಳಿಪೊಡಗೂ[ಡಿದು]ದಂ ತಗುೞ್ಚಗುಂ ಕಾಮಿಗಳಾ (ಕವಿರಾಜಮಾರ್ಗ ೩-೨೦೩); ನೋಟದೊಳೞ್ಕಜಂಬಡೆದು ಮೆಲ್ನುಡಿಯೊಳ್ ಬಗೆವೊಕ್ಕು ಜಾಣೊಳಳ್ಳಾಟಮನೆಲ್ಲಮಂ ಕಿಡಿಸಿ . . . ಕೂಟಸುಖಂಗಳಂ ಪಡೆದನೇಂ ಚದುರಂ ಗಳ ಬದ್ದೆದಲ್ಲೞಂ (ಪಂಪಭಾರತ ೩-೮೨); ಜಂಗಮವಿಲ್ಲದ ಮಾಟ ಕಂಗಳಿಲ್ಲದ ನೋಟ ಹಿಂಗಿತ್ತು (ಬಸವ ೪೨೬); ನೋಟವಿದು ಲೇಸಲ್ಲ ದೈತ್ಯರ ಕೋಟಿಗದು ಗಂಟಲನು ಕೊಯ್ಯಲಿಕಾಟವಿದು ಪರಸತಿಯ ನೋಟವು ಸಲ್ಲದಿಹಪರಕೆ (ಸಂಭಪ ೫-೧೨೫); ನೋಟದಳಾವುದೊ ವೇದನೆ ತೋರಿತು ನಾನದ ಬಣ್ಣಿಸಲರಿಯೆ (ಇಚಾಪ ೪೩-೫); ನೋಟ ನೆಟ್ಟಗಿದ್ದರೆ ಕಾಟವೇಕೆ ಬಂದೀತು? (ಗಾದೆ)

೨. ನೋಡುವ ಅಂಗ; ಕಣ್ಣು; ನೇತ್ರ: ಮಲ್ಲಿಗೆಯ ತುಂಬಿಯ ಕೂಟಮೆ ನೋಟಮಾದ ನಂದನವನಲಕ್ಷ್ಮಿ ಕಣ್ಗೆಸೆದು ತನ್ನನೆ ನೋಡಿಸಿದಳ್ ತದಾರ್ಯರಿಂ (ಶಾಂತಿಪುರಾಣ ೭-೧೦); ದೂರದಿಂ ತವೆ ನೋಳ್ಪ ನೋಟವು ದೂರದಲಿ ಸಲೆ ಕೇಳ್ವ ಕರ್ಣಂ ದೂರದಿಂದಱಿವಱಿವು ಮೊದಲಾದಖಿಳಸಿದ್ಧಿಗಳು (ಬಸಪು ೧೦-೫೫); ಹೊಕ್ಕುಳಲಿ ಮಗವುಂಟೆ ಹಣೆಯಲಿ ನೋಟವೇ ಹಗೆಗೆ (ಕುವ್ಯಾಕ ೧೩-೧೦)

೩.ದೃಶ್ಯ: ಆ ಸಂಜೆಬಿಸಿಲಿನಲ್ಲಿ ಆ ಕಾಡಿನಲ್ಲಿ ಎತ್ತ ನೋಡಿದರೂ ಸುಂದರವಾದ ನೋಟವೇ ಕಾಣುತ್ತಿತ್ತು! (ಕಳಹು ೩); ಆ ನೋಟ ನೋಡಲು ತುಂಬ ಸುಂದರವಾಗಿದೆ (ರೂಢಿ)

೪. ದೃಷ್ಟಿಕೋನ: ಆರ್ಥಿಕ ಉದ್ಯಮಗಳನ್ನು ಹಣದ ಕಡೆಯಿಂದ ನೋಡುವ ನೋಟ ಮಾತ್ರ ಇಲ್ಲಿನದು (ಹಣಪ್ರ XI ಅರಿಕೆ)

೫. (ನಾಣ್ಯ, ರತ್ನ ಮೊದಲಾದವುಗಳ) ಪರೀಕ್ಷೆ; ವಿಮರ್ಶೆ: ಸಾಧಾರಣಸಂವತ್ಸರದ ಫಾಲ್ಗುಣ ಸು ೧ ಆರಲೆಹದರೆಂಮರಸರ ಮಗ ನೋಟದ ಪಡರಿದೇವನು (ಮೈಸೂರು ಆರ್ಕಿಯಾಲಜಿಕಲ್ ರಿ ೧೯೩೯, ೬೩-೪; ಸು 1371); ಗೌಡುಪಣ ತಳವಾಱಿಕೆಯ ಹಣ ಅಕ್ಕಸಾಲೆಯ ನೋಟದ ಹಣ ಕೆರೆಯಭಣ್ಡಿಯ ಹಣಯಿವು ಮುನ್ತಾದ ಸಮಸ್ತ ಸುಙ್ಕಸ್ವಾಮ್ಯವನು... ಪಾಲಿಸಿ ಬಿಟ್ಟ ಧರ್ಮಶಾಸನ (ಎಪಿಗ್ರಾಫಿಯಾ ಕರ್ನಾಟಿಕ XII, ಚಿಕ್ಕನಾಯಕನಹಳ್ಳಿ ೫-೧೭; 1535); ನಾಣ್ಯದ ನೋಟವ ಬಲ್ಲವನೇ ಸೆಟ್ಟಿ (ಗಾದೆ)

೬. ಚಿತ್ರ, ನಾಟಕ ಮೊದಲಾದವುಗಳ ಪ್ರದರ್ಶನ: ಆ ಹಳ್ಳಿಯ ಜನ ಇಂದು ನೋಟ ನೋಡಲು ಹೋಗಿದ್ದರು (ರೂಢಿ)

೭. ರೂಪ; ಆಕೃತಿ: ಅಂಗದ ನೋಟವು ಸಿಂಗದ ಗಾತ್ರವು ಹಿಂಗದು ಮನದಲ್ಲಿ ನಾನಾ ವಿಕಾರವು (ಬಸವ ೪೨)

೮. ನಾಟಕದಲ್ಲಿಯ ದೃಶ್ಯ; ಅಂಕದಲ್ಲಿಯ ಭಾಗ:
ನೋಟ ೩: ೨ನೆಯ ನೋಟದ ಸುಮಾರು ೧-೨ ವರ್ಷಗಳ ಬಳಿಕ ೧ನೆಯ ನೋಟದಲ್ಲಿ ಹೇಳಿದ ಭಿಲ್ಲರ ಹಳ್ಳಿಯಲ್ಲಿ . . . ಕುಳಿತುಕೊಂಡಿರುತ್ತಾರೆ (ಹೆಬ್ಬೆರ ೧೫)

ನೋಂಟ: ಚಂಡವೇಗಂ ಕರುಮಾಡದ ಮೇಗಣ ನೆಲೆಯೊಳಿರ್ದು ನೋಂಟಕ್ಕೆ ಗೆಂಟುಪೋಗೆ [ಪಾಠಾಂ. ವಿನೋದದಿಂ ಗೆಂಟಱೊಳು] ಚಕ್ರಮನಿಟ್ಟೊಡೆ (ವಡ್ಡಾರಾಧನೆ ೧೨೧-೭)

[ತಮಿಳು / ಮಲಯಾಳದಲ್ಲಿ ನೋಟ್ಟ; ತುಳು. ನೋಟ)

ನೋಟಕ (ನಾ): ನೋಡುವವನು, ವೀಕ್ಷಕ, ಪ್ರೇಕ್ಷಕ
ನೋಡು (ಕ್ರಿ): ೧. ಈಕ್ಷಿಸು; ಕಾಣು; ದೃಷ್ಟಿಸು. ೨. ಪರೀಕ್ಷಿಸು; ಪರಾಮರ್ಶಿಸು. ೩. ಆಲೋಚಿಸು; ವಿಚಾರಮಾಡು. ೪. ಭೇಟಿಮಾಡು; ಸಂಧಿಸು. ೫. ಎದುರಿಸಲು ಸಮರ್ಥವಾಗಿರು; ಪ್ರತಿಭಟಿಸಲು ಸಿದ್ಧವಾಗಿರು; ವಿಚಾರಿಸಿಕೊಳ್ಳು. ೬. ತಿಳಿ; ಅರಿ. ೭. ಹುಡುಕು; ಅರಸು. ೮. ಆರೈಕೆಮಾಡು; ಯೋಗಕ್ಷೇಮವನ್ನು ನೋಡಿಕೊಳ್ಳು. ೯. ಲಕ್ಷ್ಯಕ್ಕೆ ತೆಗೆದುಕೊಳ್ಳು; ಗಮನಿಸು; ಎಣಿಸು. ೧೦. ಅನುಭವದಿಂದ ತಿಳಿ; ಕಂಡುಕೊಳ್ಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet