ದಿನಗೂಲಿ ಪೌರಕಾರ್ಮಿಕರು ಖಾಯಂ !

ದಿನಗೂಲಿ ಪೌರಕಾರ್ಮಿಕರು ಖಾಯಂ !

ದಿನಗೂಲಿ ಪೌರಕಾರ್ಮಿಕರು ಖಾಯಂ ಸರ್ಕಾರಿ ಅಧಿಕಾರಿಗಳಾದ ಸಂತೋಷದ ಸುದ್ದಿ. ಕಾರ್ಮಿಕರ ದಿನದಂದು ಕರ್ನಾಟಕ ಸರ್ಕಾರ ಪೌರ ಕಾರ್ಮಿಕರಿಗೆ ಬಹುದೊಡ್ಡ ಮರೆಯಲಾಗದ  ಕೊಡುಗೆಯನ್ನು ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಹಳ ವರ್ಷಗಳಿಂದ ಒಪ್ಪಂದದ ಮೇರೆಗೆ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರರನ್ನು ಖಾಯಂಗೊಳಿಸಿ, ಹಕ್ಕು ಪತ್ರ ನೀಡಿ, ಸರ್ಕಾರಿ ಡಿ ದರ್ಜೆಯ ನೌಕರರೆಂದು ಘೋಷಿಸಿದೆ ಮತ್ತು ಇದನ್ನು ಬಹುತೇಕ ಭ್ರಷ್ಟಾಚಾರ ಮುಕ್ತವಾಗಿಸಿ ನೇರ ನೇಮಕಾತಿ ಪತ್ರ ನೀಡಿದೆ. 

ನಿಜಕ್ಕೂ ಇದೊಂದು ಕ್ರಾಂತಿಕಾರಕ ಹೆಜ್ಜೆ. ತುಂಬಾ ತುಂಬಾ ಸಂತೋಷದ ಸುದ್ದಿ. ಮಾಸಿಕ 10-15 ಸಾವಿರಕ್ಕೆ ಬೆಂಗಳೂರಿನ ಎಲ್ಲಾ ಕೆಟ್ಟ, ಕೊಳಕು ಕಸವನ್ನು ಮನೆಮನೆಗೆ ಹೋಗಿ ಸಂಗ್ರಹಿಸಿ, ಜೊತೆಗೆ ಅಲ್ಲಲ್ಲಿ ಬೀದಿಯಲ್ಲಿ ಬಿದ್ದ ಎಲ್ಲಾ ಮಲಿನ ವಸ್ತುಗಳನ್ನು ಒಟ್ಟು ಮಾಡಿಕೊಂಡು, ಧೂಳಿನ ಕಸ ಗುಡಿಸುತ್ತಾ, ವಾಸನೆಯುಕ್ತ ಸನ್ನಿವೇಶದಲ್ಲಿ ಕೆಲಸ ಮಾಡುತ್ತಾ, ಅತೃಪ್ತಿ ಅಸಹನೆಯಿಂದ, ಕೆಲವೊಮ್ಮೆ ಅನಾರೋಗ್ಯದಿಂದ ಬದುಕನ್ನು ಸವೆಸುತ್ತಿದ್ದ ಜನರು ಇನ್ನು ಮುಂದೆ ಸರ್ಕಾರಿ ನೌಕರರೆಂದು ಕರೆಸಿಕೊಳ್ಳುವುದೇ ಹೆಮ್ಮೆಯ ವಿಷಯ. 

ಸರ್ಕಾರಿ ನೌಕರರೆಂದರೆ ಆ ಜ‌ನರಿಗೆ ಅದು ನೀಡುವ ಆತ್ಮವಿಶ್ವಾಸ, ಭದ್ರತೆ, ನೆಮ್ಮದಿ, ಗೌರವ ಎಲ್ಲವೂ ಒಂದು ರೀತಿ ಹೆಮ್ಮೆಯ ಸಾಧನೆ ಎಂದೇ ಪರಿಗಣಿಸಬಹುದು. ಇನ್ನು ಮುಂದೆ ಅವರ ಮಕ್ಕಳು, ಸಂಸಾರ, ಅವಲಂಬಿತರು ಒಂದಷ್ಟು ನೆಮ್ಮದಿಯನ್ನು ಕಾಣುವುದಂತು ನಿಜ. ಅವರ ಶಿಕ್ಷಣ, ಆರೋಗ್ಯ, ಒಟ್ಟಾರೆ ಜೀವನಮಟ್ಟ ಸ್ವಲ್ಪ ಮಟ್ಟಿಗೆ ಉತ್ತಮವಾಗುತ್ತದೆ. ಜೊತೆಗೆ ಸಮಾಜ ಅವರಿಗೆ ನೀಡುವ ಗೌರವವು ಹೆಚ್ಚಾಗುತ್ತದೆ. 

ಏಕೆಂದರೆ ಇಲ್ಲಿಯವರೆಗೂ ಅವರನ್ನು ಕಸ ಎತ್ತುವ ಕೂಲಿ ಕಾರ್ಮಿಕರೆಂದು ಕೆಲವರು ತುಚ್ಛವಾಗಿ ಕಾಣುತ್ತಿದ್ದರು. ಸಾಮಾನ್ಯವಾಗಿ ಸಿರಿವಂತರಿಗೋ ಅಥವಾ ಇನ್ಯಾರಿಗೋ ಲಾಭವಾಗಿದ್ದರೆ, ಅನುಕೂಲವಾಗಿದ್ದರೆ ಆಗುತ್ತಿದ್ದ ಸಂತೋಷಕ್ಕಿಂತ ಈ ಬಡಪಾಯಿಗಳಿಗೆ ಹಾಗೂ ನಗರವನ್ನು ಸ್ವಚ್ಛವಾಗಿಡುವ ಕಠಿಣ ಕೆಲಸ ಮಾಡುವವರಿಗೆ ಖಾಯಂ ಕೆಲಸ ದೊರೆತಿದ್ದು ನಮ್ಮ ಸಂತೋಷ ದ್ವಿಗುಣವಾಗಲು ಕಾರಣವಾಗಿದೆ. 

ಈ ಆಧುನಿಕ ಕಾಲದ ಸಂಕೀರ್ಣ ಮತ್ತು ಆರ್ಥಿಕ ಕೇಂದ್ರಿಕೃತ ಸಮಾಜದಲ್ಲಿ ಬಡವರು ಬದುಕುವುದು ತುಂಬಾ ಕಷ್ಟ. ಅವರು ಎದುರಿಸಬೇಕಾದ ಸಮಸ್ಯೆಗಳು ಹಲವಾರು. ಎಷ್ಟೋ ಬಾರಿ ಈ ಬದುಕು ಬೇಡವೇ ಬೇಡ ಎನ್ನುವಷ್ಟು ಕಠಿಣ ಸವಾಲುಗಳನ್ನು ಒಡ್ಡುತ್ತದೆ. ಅದರಲ್ಲೂ ಆರ್ಥಿಕ ಹೊಡೆತ ಮನುಷ್ಯನನ್ನು ಹೈರಾಣಾಗಿಸುತ್ತದೆ. ಬಡವರಾಗಿ ಹುಟ್ಟುವುದೇ ಒಂದು ಶಾಪ ಎನಿಸುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ಕೆಲಸ ಖಾಯಂ ಆಗಿ ಸುಮಾರು ಪ್ರಾರಂಭದಲ್ಲಿ 37 ಸಾವಿರದವರೆಗೂ ಸಂಬಳ ಮತ್ತು ಇತರ ಸೌಕರ್ಯಗಳು ಸಿಗುವುದಲ್ಲದೇ ಸರ್ಕಾರಿ ನೌಕರ ಎನ್ನುವ ಹಣೆಪಟ್ಟೆ ಅವರ ಬದುಕನ್ನೇ ಬದಲಾಯಿಸುತ್ತದೆ. ಅದಕ್ಕಾಗಿ ಅವರನ್ನು ಮತ್ತು ಅದನ್ನು ಜಾರಿಗೊಳಿಸಿದ ಸರ್ಕಾರವನ್ನು ಅಭಿನಂದಿಸುತ್ತಾ,...

ನಮ್ಮ ವ್ಯವಸ್ಥೆಯಲ್ಲಿ ಇದರ ಇನ್ನೊಂದು ಮುಖವೂ ಇದೆ. ಈ ದಿನಗೂಲಿ ನೌಕರರು ಇಷ್ಟು ದಿವಸ ದಿನಗೂಲಿ ಎಂದು ಒಪ್ಪಂದದ ಮೇರೆಗೆ ಒಂದಷ್ಟು ಶ್ರದ್ದೆಯಿಂದ, ಭಯ ಭಕ್ತಿಯಿಂದ, ತಗ್ಗಿ ಬಗ್ಗಿ ಕೆಲಸ ಮಾಡುತ್ತಿದ್ದರು. ಸಂಬಳವೂ ಕಡಿಮೆ ಇದ್ದ ಕಾರಣ ಕೆಲವು ಮನೆಯವರು ಅವರಿಗೆ ಊಟ ತಿಂಡಿ ಬಟ್ಟೆ, ಸ್ವಲ್ಪ ಹಣ ಕೊಡುತ್ತಿದ್ದರು. ಆದರೆ ಈಗ ಸರ್ಕಾರಿ ನೌಕರರಾದ ಕಾರಣ, ಸಂಬಳವೂ ಹೆಚ್ಚಾಗಿದ್ದರಿಂದ ಈ ಸೌಕರ್ಯಗಳಿಗೆ ಸ್ವಲ್ಪಮಟ್ಟಿಗೆ ಕತ್ತರಿ ಬೀಳಬಹುದು. 

ಅಷ್ಟೇ ಅಲ್ಲ ಇದೇ ಪೌರಕಾರ್ಮಿಕರು ನಿಧಾನವಾಗಿ ಸರ್ಕಾರಿ ವ್ಯವಸ್ಥೆಯ ಭ್ರಷ್ಟಾಚಾರ, ಅಹಂಕಾರ, ಸೋಮಾರಿತನ, ಇನ್ನೊಬ್ಬರನ್ನು ನಿಂದಿಸುವುದು ಎಲ್ಲವೂ ಕೆಲವರಲ್ಲಿ ಪ್ರಾರಂಭವಾಗಬಹುದು. ಆದ್ದರಿಂದ ಆ ದುಶ್ಚಟಗಳು, ದುರ್ನಡತೆಗಳು ಅವರಿಂದ ಆಗದಂತೆ ಎಚ್ಚರಗೊಳಿಸಬೇಕಾದ ಜವಾಬ್ದಾರಿಯು ಸರ್ಕಾರಕ್ಕೆ ಇರುತ್ತದೆ.  ಏಕೆಂದರೆ ಸರ್ಕಾರಿ ವ್ಯವಸ್ಥೆ ಒಂದು ರೀತಿಯಲ್ಲಿ ನಿಧಾನವಾಗಿ ಜಡ್ಡುಗಟ್ಟುತ್ತದೆ. ಜೀವನ ಭದ್ರತೆ ಅಹಂಕಾರವನ್ನು ಸೃಷ್ಟಿಸುತ್ತದೆ. ಇದು ಕೇವಲ ಪೌರಕಾರ್ಮಿಕರಿಗೆ ಮಾತ್ರವಲ್ಲ ಎಲ್ಲಾ ಸರ್ಕಾರಿ ನೌಕರರಿಗೂ ಅನ್ವಯಿಸುತ್ತದೆ. ಈ ಕ್ಷಣದಲ್ಲಿ ದಿನಗೂಲಿ ಮಾಡುತ್ತಿದ್ದ ಪೌರಕಾರ್ಮಿಕರು ಖಾಯಂ ಆದ ಪ್ರಯುಕ್ತ ಸಮಾಜ ಮತ್ತು ಅವರ ನಡುವೆ ಆಗಬಹುದಾದ ಸಂಘರ್ಷವನ್ನು ಊಹಿಸಲಾಗುತ್ತಿದೆ.

ಇದು ಆಗಬಹುದು ಅಥವಾ ಆಗದೆಯೂ ಇರಬಹುದು. ವೈಯಕ್ತಿಕ ಮಟ್ಟದಲ್ಲಿ ಬಗೆಹರಿಯಲೂಬಹುದು. ಆದರೆ ಒಟ್ಟಾರೆಯಾಗಿ ಮತ್ತು ನಿಧಾನವಾಗಿ ಕೆಲವು ಬದಲಾವಣೆಗಳಾಗುವುದು ಖಚಿತ. ಜನ ಅವರನ್ನು ಹಿಂದಿನಂತೆಯೇ ಕಸ ಎತ್ತುವ ಕೂಲಿ ಕಾರ್ಮಿಕರಂತೆಯೇ ನೋಡಿದಾಗ ಆ ಪೌರಕಾರ್ಮಿಕರಿಗೆ ಹಿಂಸೆಯಾಗಬಹುದು. ಬದಲಾದ ಪರಿಸ್ಥಿತಿಯಲ್ಲಿ ಇವರು ಸಹ ಒಂದಷ್ಟು ನೇರವಾಗಿ, ಧೈರ್ಯವಾಗಿ, ಅಧಿಕಾರಯುತವಾಗಿ ಕೆಲವು ಜನರ ಕಸ ಸಂಗ್ರಹ ವಿಧಾನವನ್ನು ಪ್ರಶ್ನಿಸಬಹುದು. ಆಗೆಲ್ಲಾ ಘರ್ಷಣೆ ಖಚಿತ. ಇದನ್ನು ಸಾರ್ವಜನಿಕರು ಸಹ ಸ್ವಲ್ಪ ಜವಾಬ್ದಾರಿಯಿಂದ ನಿರ್ವಹಿಸಬೇಕು. 

ಏನೇ ಆಗಲಿ 12,500 ಕ್ಕೂ ಹೆಚ್ಚು ಜನ ಒಂದೇ ಬಾರಿಗೆ ಸರ್ಕಾರಿ ನೌಕರರಾಗುತ್ತಿರುವುದು ಅವರಿಗೂ ಮತ್ತು ಅವರನ್ನು ಅವಲಂಬಿತ ಕುಟುಂಬದವರಿಗೂ ಒಂದು ನೆಮ್ಮದಿಯ ಬದುಕು ಕಾಣುತ್ತಿರುವ ಸಂದರ್ಭದಲ್ಲಿ ಅವರಿಗೆ ಹೃದಯಪೂರ್ವಕ, ಸಂತೋಷದಾಯಕ ಅಭಿನಂದನೆಗಳನ್ನು ಸಲ್ಲಿಸುತ್ತಾ...

ಹಾಗೆಯೇ, ಸರ್ಕಾರ ಈ ಒಪ್ಪಂದದ ಮೇರೆಗೆ ದಿನಗೂಲಿ ಕೆಲಸ ಮಾಡುತ್ತಿರುವ ರಾಜ್ಯದ ಎಲ್ಲಾ ನೌಕರರನ್ನು ಖಾಯಂಗೊಳಿಸಬೇಕು ಮತ್ತು ಮುಂದೆ ಈ ಒಪ್ಪಂದದ ದಿನಗೂಲಿ ವ್ಯವಸ್ಥೆಯನ್ನೇ ನಿಲ್ಲಿಸಬೇಕು. ಇದು ಕೆಲಸದ ದಕ್ಷತೆಯನ್ನು ಕಡಿಮೆ ಮಾಡುವುದಲ್ಲದೆ ಬೇಜವಾಬ್ದಾರಿತನವನ್ನು ಬೆಳೆಸುತ್ತದೆ. ಸರ್ಕಾರ ನಿಗದಿಪಡಿಸಿದ ವೈಜ್ಞಾನಿಕ ರೀತಿಯ ಉದ್ಯೋಗಿಗಳ ಸಂಖ್ಯೆಯನ್ನು ಕಾಲ ಕಾಲಕ್ಕೆ ಭರ್ತಿ ಮಾಡುತ್ತಾ ಬಂದರೆ ಖಂಡಿತವಾಗಲೂ ಈ ವ್ಯವಸ್ಥೆ ಅಥವಾ ಅವ್ಯವಹಾರ ನಡೆಯುವುದೇ ಇಲ್ಲ.  

ಅತಿಥಿ ಶಿಕ್ಷಕರು ಮತ್ತು ಇತರ ಇಲಾಖೆಗಳಲ್ಲಿ ಈ ರೀತಿಯ ಕೆಲಸ ಮಾಡುವವರ ಬದುಕು ಶೋಚನೀಯವಾಗಿದೆ. ಅವರಿಗೆ ಖಾಯಂ ಉದ್ಯೋಗ ನೀಡಲಿ, ಇಲ್ಲದಿದ್ದರೆ ಖಾಲಿ ಇರುವ ಎಲ್ಲಾ ಉದ್ಯೋಗಗಳನ್ನು ಭರ್ತಿ ಮಾಡಲಿ. ಆಗ ಆಡಳಿತದ ದಕ್ಷತೆ ಹೆಚ್ಚಾಗುತ್ತದೆ. ಇದರ ಜೊತೆಗೆ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದ ನಿಯಂತ್ರಣ ಕ್ರಮಗಳನ್ನು ಸಹ ಹೆಚ್ಚು ಹೆಚ್ಚು ಮಾಡಬೇಕು. ಅವರ ಮೇಲಿನ ನಿಯಂತ್ರಣವನ್ನು, ಅವರಿಗೆ ನೀಡಬಹುದಾದ ಶಿಕ್ಷಾ ವಿಧಾನವನ್ನು ಬಲಗೊಳಿಸಬೇಕು. ಸರ್ಕಾರಿ ನೌಕರರ ಮೇಲೆ ಸಂಪೂರ್ಣ ಹಿಡಿತ ಹೊಂದಿದಲ್ಲಿ ಈ ರಾಜ್ಯ ನಿಜಕ್ಕೂ ಅಭಿವೃದ್ದಿಯ ಪಥದಲ್ಲಿ ನಡೆಯುವುದು ನಿಶ್ಚಿತ. 

ಏಕೆಂದರೆ ಇಡೀ ದೇಶದಲ್ಲಿ ತೆರಿಗೆ ನೀಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅಂದರೆ ಕರ್ನಾಟಕ ಒಂದು ಸಂಪದ್ಭರಿತ ರಾಜ್ಯ. ಆ ಸಂಪತ್ತನ್ನು ಸಾರ್ವಜನಿಕರಿಗೆ ಸರಿಯಾದ ಕ್ರಮದಲ್ಲಿ ಹಂಚಿದ್ದೇಯಾದರೆ ನಮ್ಮೆಲ್ಲರ ಜೀವನಮಟ್ಟ ಇನ್ನೂ ಉತ್ತಮವಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳುವಂತಾಗಲಿ ಎಂದು ಆಶಿಸುತ್ತಾ.....

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ