ದಿನದಿನವೂ ಭೂತಾಯಿಗೆ ಶರಣು
![](https://saaranga-aws.s3.ap-south-1.amazonaws.com/s3fs-public/styles/article-landing/public/Addoor%20Harvest1%20Cocum%20-20200503_165437.jpg?itok=7xXX9goX)
![](https://saaranga-aws.s3.ap-south-1.amazonaws.com/s3fs-public/styles/article-landing/public/Addoor%20Harvest2%20-3Fruits%2020200503_163903.jpg?itok=jKn7PvfU)
![](https://saaranga-aws.s3.ap-south-1.amazonaws.com/s3fs-public/styles/article-landing/public/Addoor%20Harvest3%20-Gandhari%2020200503_164145.jpg?itok=WJLUuxSk)
ಇವತ್ತು ಬೆಳಗಾಗುತ್ತಿದ್ದಂತೆ ಮಡದಿಯೊಂದಿಗೆ ಅಡ್ಡೂರಿನ ನಮ್ಮ ತೋಟಕ್ಕೆ ಪ್ರಯಾಣ - ತೆಂಗಿನ ಮರಗಳಿಗೂ, ಇತರ ಗಿಡಗಳಿಗೂ ವಾರಾಂತ್ಯದಲ್ಲಿ ನೀರುಣಿಸಲಿಕ್ಕಾಗಿ.
ಅಲ್ಲಿ ಗೇಟಿನ ಪಕ್ಕದಲ್ಲೇ ಇರುವ ಹಳೆಯ ಪುನರ್ಪುಳಿ (ಕೋಕಂ) ಮರದಲ್ಲಿ ಹಣ್ಣುಗಳನ್ನು ಕಂಡು ಖುಷಿ. ಯಾಕೆಂದರೆ, ಕಳೆದ ವರುಷ ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ) ಕೆಲಸಗಾರರು ಅದರ ಗೆಲ್ಲುಗಳನ್ನು ಕಡಿದು ಹಾಕಿದ್ದರಿಂದಾಗಿ ಅದು ಫಲ ಕೊಟ್ಟಿರಲಿಲ್ಲ. ಅಂತೂ ಅದರ ಹಣ್ಣುಗಳನ್ನೆಲ್ಲ ಕೊಯ್ದೆ.
ಆಗ ಮಡದಿ ಕರೆದು ಹೇಳಿದ್ದು: “ಇಲ್ಲೂ ಇದೆ ನೋಡಿ ಪುನರ್ಪುಳಿ.” ಓ, ಮನೆಯ ಹಿಂಬದಿಯ ಪುನರ್ಪುಳಿ ಮರದಲ್ಲಿ ಮೊದಲ ಬಾರಿ ಹಣ್ಣು! ಅದನ್ನು ಕಂಡು ಖುಷಿಯೋ ಖುಷಿ. ಯಾಕೆಂದರೆ, ಕಳೆದ ಐದು ವರುಷಗಳಿಂದ ಆ ಮರದ ಬುಡಕ್ಕೆ ಬೇಸಗೆಯಲ್ಲಿ ನೀರೆರೆಯುತ್ತಿದ್ದೆ. ಯಾವಾಗ ಈ ಮರ ಹಣ್ಣು ಕೊಟ್ಟೀತು ಎಂದು ಕಾಯುತ್ತಿದ್ದೆ. ಅಂತೂ ನನ್ನ ನಿರೀಕ್ಷೆ ಇಂದು ಹಣ್ಣಾಗಿತ್ತು. (ಇವೆರಡು ಮರಗಳ ಈ ವರುಷದ ಹಣ್ಣುಗಳ ಸಿಪ್ಪೆ ಸುಲಿದು ಒಣಗಿಸಲು ಬಿಸಿಲಿಗಿಟ್ಟಿರುವ ಫೋಟೋ ನೋಡಿ. ಇಡೀ ವರುಷ ತುರ್ತಾಗಿ ಊಟಕ್ಕೆ ಸಾರು ಮಾಡಲು ನಮಗೆ ಸಾಕಾಗುವಷ್ಟಿದೆ.)
ಅಲ್ಲಿ ಮನೆಯಂಗಳದಲ್ಲಿ ಎರಡು ವರುಷಗಳಿಗೊಮ್ಮೆ ಫಲ ಬಿಡುವ ಹಲಸಿನ ಮರ. ಈ ವರುಷ ಅದರ ಕೊಂಬೆಗಳಲ್ಲಿ ಮೂಡಿದ ಕಾಯಿಗಳು ಬಲಿಯುತ್ತಿವೆ. ತಲೆಯೆತ್ತಿ ನೋಡಿದಾಗ ಕಾಣಿಸಿತು ಮರದಲ್ಲೇ ಹಣ್ಣಾಗಿರುವ ಒಂದು ಹಣ್ಣು. ಏಣಿ ಇಟ್ಟು ಅದನ್ನೂ ಕೊಯಿದಾಯಿತು. ಆ ಮರದಲ್ಲಿವೆ ಕೆಲವು ಕುಟುಂಬಗಳಿಗೆ ಮೇ ತಿಂಗಳಿಗೆ ಸಾಕಾಗುವಷ್ಟು ಹಲಸಿನ ಕಾಯಿಗಳು.
ಅನಂತರ ಭತ್ತದ ಗದ್ದೆಯ ಬದಿಗೆ ಹೋದಾಗ, ಅಲ್ಲೊಂದು ಬಾಳೆಗಿಡದಲ್ಲಿ ಬಲಿತ ಪುಟ್ಟ ಬಾಳೆಗೊನೆ. ಅದನ್ನೂ ಕಡಿದು ತಂದೆವು.
ತೋಟದ ಅಂಚಿನಲ್ಲಿ ನಡೆದು ಬರುವಾಗ ಕಾಣಿಸಿತೊಂದು ಅನಾನಸ್. ಇಂದಿನ ಹಣ್ಣುಗಳ ಕೊಯ್ಲಿನ ಬುಟ್ಟಿಗೆ ಅದೂ ಸೇರಿತು. (ಇವು ಮೂರರ ಫೋಟೋ ನೋಡಿ.) ಇಷ್ಟೇ ಅಲ್ಲ, ಎರಡು ಜೀಗುಜ್ಜೆ ಮತ್ತು ಹತ್ತಾರು ಪನ್ನೇರಳೆ ಹಣ್ಣುಗಳೂ ನಮ್ಮ ಬುಟ್ಟಿ ತುಂಬಿದವು.
ಕೊನೆಯದಾಗಿ ಕಾಣಿಸಿತು- ಮನೆಯ ಪಕ್ಕ ತಾನಾಗಿಯೇ ಬೆಳೆದಿದ್ದ ಗಾಂಧಾರಿ ಮೆಣಸಿನ ಗಿಡದ ಫಸಲು. ಅದರ ತುಂಬ ಕೆಂಪು ಗಾಂಧಾರಿ ಮೆಣಸು. ಅವನ್ನೂ ಕೊಯ್ದು ತಟ್ಟೆಯಲ್ಲಿ ಹರಡಿದಾಗ ತಟ್ಟೆ ಭರ್ತಿಯಾಯಿತು (ಫೋಟೋ ನೋಡಿ.) ನಮಗಿದು ಐದಾರು ತಿಂಗಳ ಅಡುಗೆಗೆ ಸಾಕು.
ಒಂದು ಕ್ಷಣ ನಾನು ಮೂಕನಾದೆ. ಈ ಮರಗಳಿಗೂ ಗಿಡಗಳಿಗೂ ನಾನೇನು ಕೊಟ್ಟಿದ್ದೇನೆ? ಏನೂ ಇಲ್ಲ. ಆದರೆ ಈ ಗಿಡಮರಗಳು ನನಗೆ ಕೈತುಂಬ ಫಸಲು ಕೊಟ್ಟಿವೆ; ಮನತುಂಬ ಖುಷಿಯನ್ನೂ ನೀಡಿವೆ.
ಹೌದು, ಭೂತಾಯಿ ಎಂದಿಗೂ ನಮ್ಮ ಕೈಬಿಡುವುದಿಲ್ಲ. ನಮ್ಮ ಅಗತ್ಯಗಳನ್ನೆಲ್ಲ ಪೂರೈಸಲಿಕ್ಕಾಗಿ ಮತ್ತೆಮತ್ತೆ ಕೈತುಂಬ ಕೊಡುತ್ತಲೇ ಇರುತ್ತಾಳೆ.
ಆದರೆ ನಮ್ಮ ದುರಾಶೆಗೆ ಮಿತಿಯಿಲ್ಲವಾಗಿದೆ. ಅದು ಮಿತಿ ಮೀರಿದಾಗ, ಸಮತೋಲನಕ್ಕೆ ಮುಂದಾಗುತ್ತಾಳೆ ಭೂತಾಯಿ. ಈಗ ಜಗತ್ತಿನಲ್ಲೆಲ್ಲ ಅಲ್ಲೋಲಕಲ್ಲೋಲ ಮಾಡಿರುವ ಕೊರೊನಾ ವೈರಸ್ (ಕೊವಿಡ್ ೧೯) ಧಾಳಿ ಭೂತಾಯಿಯ ಅಂತಹ ಒಂದು ನಡೆ, ಅಷ್ಟೇ.
ಕೊರೊನಾ ವೈರಸಿನಿಂದಾಗಿ ೨.೪೦ ಲಕ್ಷಕ್ಕಿಂತ ಅಧಿಕ ಜನರು ಸಾವಿಗೀಡಾಗಿ, ೩೪ ಲಕ್ಷಕ್ಕಿಂತ ಅಧಿಕ ಜನರಿಗೆ ಸೋಂಕು ತಗಲಿ ಇಡೀ ಜಗತ್ತೇ ತತ್ತರಿಸಿದೆ. ಭಾರತದಲ್ಲಿ ೧,೩೦೦ ಜನ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ ೪೦,೦೦೦ ದಾಟಿದೆ.
ಅಂದರೆ, ಭೂತಾಯಿ ತೋರಿಸಿ ಕೊಟ್ಟಿದ್ದಾಳೆ - ಈ ಭೂಮಿ “ಒಂದು ತಲೆಮಾರಿನ ಸೊತ್ತಲ್ಲ, ಮುಂದಿನ ತಲೆಮಾರುಗಳ ಸೊತ್ತು” ಎಂಬುದನ್ನು ಮರೆತು ಜೀವಿಸಿದರೆ ಏನಾಗುತ್ತದೆ ಎಂಬುದನ್ನು.
ಇನ್ನಾದರೂ, ನಾವೇ ಈ ಭೂಮಿಯ ಒಡೆಯರು; ನಮಗೆ ಖುಷಿ ಬಂದಂತೆ ಇಲ್ಲಿನ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯೋಣ ಎಂಬ ಧೋರಣೆ ಬಿಡೋಣ. ಭೂತಾಯಿಗೆ ದಿನದಿನವೂ ಶರಣು ಎನ್ನೋಣ. ಭೂತಾಯಿ ಕರುಣೆಯಿಂದ ನಮಗೆ ದಯಪಾಲಿಸುವುದರಲ್ಲೇ ನೆಮ್ಮದಿಯಿಂದ ಬದುಕಲು ಶುರು ಮಾಡೋಣ, ಅಲ್ಲವೇ?