ದಿನವಿಡೀ ಪಾದರಕ್ಷೆಗಳನ್ನು ಧರಿಸುವಿರಾ?
ಇಂದಿನ ಯುಗದಲ್ಲಿ ಕಾಲಿಗೆ ಸುಂದರವಾದ ಶೂ ಅಥವಾ ಚಪ್ಪಲ್ ಗಳನ್ನು ಧರಿಸುವುದು ಎಲ್ಲರ ನಿಯಮಿತವಾದ ಅಭ್ಯಾಸವಾಗಿದೆ. ಕಾಲಿನ ಸೌಂದರ್ಯ ಮತ್ತು ಸುರಕ್ಷೆಗೆ ಇದು ಅತ್ಯಂತ ಅನಿವಾರ್ಯವೂ ಆಗಿದೆ. ರಸ್ತೆಯಲ್ಲಿ ಬಿದ್ದಿರುವ ಕೊಳಕು, ಮೊಳೆಯಂತಹ ವಸ್ತುಗಳಿಂದ ರಕ್ಷೆ ಸಿಗಲು ಪಾದರಕ್ಷೆ ಅತ್ಯಗತ್ಯ. ಕೆಲವು ಸಂಸ್ಥೆಗಳಲ್ಲಿ, ಕ್ಲಬ್ ಗಳಲ್ಲಿ ಶೂವನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಕ್ರೀಡಾಳುಗಳಿಗಂತೂ ಶೂ ಧರಿಕೆ ಅನಿವಾರ್ಯ. ಆದರೆ ನಾವು ದಿನವಿಡೀ ಶೂ ಧರಿಸುವುದರಿಂದ ನಮ್ಮ ಕಾಲುಗಳಿಗೆ, ಆರೋಗ್ಯಕ್ಕೆ ಏನಾದರೂ ತೊಂದರೆ ಇದೆಯೇ? ಇದ್ದರೆ ಅದರಿಂದ ನಿವಾರಣೆ ಹೇಗೆ? ಬನ್ನಿ ತಿಳಿದುಕೊಳ್ಳುವ…
ಮೊದಲು ಬಹುತೇಕ ಮಂದಿ ಕೃಷಿ ಕೆಲಸವನ್ನೇ ಮಾಡುತ್ತಿದ್ದರು. ಅವರು ಕಾಲಿಗೆ ಪಾದರಕ್ಷೆಯನ್ನು ಧರಿಸುತ್ತಿದ್ದುದು ಕಡಿಮೆ. ನಂತರ ಮನೆಯಿಂದ ಹೊರಗಡೆ ಹೋಗುವಾಗ ಮಾತ್ರ ಪಾದರಕ್ಷೆಗಳನ್ನು ಧರಿಸುವ ಕ್ರಮ ಚಾಲ್ತಿಗೆ ಬಂತು. ಈಗ ಹೊರಗಡೆಗೆ ಬೇರೆ ಪಾದರಕ್ಷೆ, ಮನೆಯೊಳಗೆ ಬೇರೆ, ಸ್ನಾನ ಗೃಹಕ್ಕೆ ಬೇರೆ, ಶೌಚಾಲಯಕ್ಕೆ ಬೇರೆ ಹೀಗೆ ಮೂರು ನಾಲ್ಕು ನಮೂನೆಯ ಪಾದರಕ್ಷೆಗಳು ಬಹುತೇಕ ಮನೆಗಳಲ್ಲಿ ಕಂಡು ಬರುತ್ತವೆ. ಶಾಲಾ ಮಕ್ಕಳಿಗೂ ಸಮವಸ್ತ್ರದ ಜೊತೆಗೆ ಶೂ ಧರಿಕೆ ಈಗ ಕಡ್ಡಾಯವಾಗಿದೆ. ನಿರಂತರ ಪಾದರಕ್ಷೆಗಳನ್ನು ಧರಿಸುವುದರಿಂದ ಆಗುವ ತೊಂದರೆಗಳು ಏನು ಗೊತ್ತೇ?
ಕೀಲು ನೋವು: ನಿಮ್ಮ ಕೆಲಸದ ಅನಿವಾರ್ಯತೆಗೋ, ಸುಂದರವಾಗಿ ಕಾಣಿಸಲೋ ನೀವು ಸಣ್ಣ ವಯಸ್ಸಿನಿಂದಲೇ ಇಡೀ ದಿನ ಶೂ ಅಥವಾ ಚಪ್ಪಲಿ ಧರಿಸಿದರೆ ನಿಮಗೆ ಕೀಲು ನೋವುಗಳು ಪ್ರಾರಂಭವಾಗುವ ಸಂಭವ ಇರುತ್ತದೆ. ಅದರಲ್ಲೂ ಮಹಿಳೆಯರು ಫ್ಯಾಷನ್ ಎಂಬ ನೆಪಕ್ಕೆ ಧರಿಸುವ ಹೈಹೀಲ್ಡ್ ಚಪ್ಪಲಿಗಳು ಕೀಲು ನೋವಿಗೆ ಮೂಲ ಕಾರಣ. ಅದಕ್ಕಾಗಿಯೇ ತಜ್ಞ ವೈದ್ಯರು ಹೈ ಹೀಲ್ಡ್ ಚಪ್ಪಲಿಗಳನ್ನು ಧರಿಸದಂತೆ ಅಥವಾ ಅಪರೂಪಕ್ಕೆ ಧರಿಸುವಂತೆ ಸಲಹೆ ನೀಡುತ್ತಾರೆ. ಕಡಿಮೆ ಗುಣಮಟ್ಟದ ಚಪ್ಪಲಿಗಳನ್ನು ಧರಿಸುವುದರಿಂದ ನಾನಾ ಬಗೆಯ ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ಅಲರ್ಜಿಯಾಗಿ ತುರಿಕೆಗಳಂತಹ ಸಮಸ್ಯೆಗಳೂ ಕಾಣಿಸಬಹುದು. ಅದರಲ್ಲೂ ಸಂಧಿವಾತದಂತಹ ಸಮಸ್ಯೆಗಳು ಬರುವ ಅಪಾಯವೂ ಇದೆ. ಇವುಗಳಿಂದ ದೂರವಿರಬೇಕಾದರೆ ನೀವು ಧರಿಸುವ ಪಾದರಕ್ಷೆಗಳ ಗುಣಮಟ್ಟವನ್ನು ಪರೀಕ್ಷಿಸಿ ಮತ್ತು ನಿಮ್ಮ ಕಾಲಿನ ಆರೋಗ್ಯಕ್ಕೆ ಸರಿಹೊಂದುವ ಚಪ್ಪಲಿಗಳನ್ನು ಧರಿಸಿ.
ಮೂಳೆ ಸಮಸ್ಯೆ: ಸಣ್ಣ ಪ್ರಾಯದಲ್ಲೇ ಬಿಗಿಯಾದ ಶೂಗಳನ್ನು ಧರಿಸುವುದರಿಂದ ನಿಮ್ಮ ಕಾಲಿನ ಬೆರಳುಗಳ ಸರಿಯಾದ ಬೆಳವಣಿಗೆ ಆಗುವುದಿಲ್ಲ. ಅದರಲ್ಲೂ ಕಾಲಿನ ಹೆಬ್ಬೆರಳು ಉದ್ದವಾಗಿರುವುದರಿಂದ ಅದರ ಮೂಳೆ ವಕ್ರವಾಗುತ್ತದೆ. ಇದು ಮೂಳೆಗಳ ಸಮಸ್ಯೆಗೆ ನಾಂದಿ ಹಾಡಬಹುದು. ಈ ಕಾರಣಗಳಿಂದಾಗಿಯೇ ೨೦೧೮ರಲ್ಲಿ ನಡೆಸಲಾದ ‘ಜರ್ನಲ್ ಆಫ್ ಫುಟ್ ಮತ್ತು ಆಂಕಲ್ ರಿಸರ್ಚ್’ ಕಾಲು ನೋವಿನ ಜೊತೆಗೆ, ಪಾದದ ಆಕಾರವೂ ಬದಲಾಗುತ್ತದೆ.ಮತ್ತು ಹ್ಯಾಮರ್ ಬೋಟ್ ನಂತಹ ರೋಗಗಳು ಬರುವ ಸಾಧ್ಯತೆ ಇರುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಖ್ಯಾತ ತಜ್ಞರಾದ ಡಾ. ಹಿಲ್ ಎಸ್ ಥಾಮಸ್ ಮತ್ತು ಟಕರ್ ಆರ್ ಇವರು ಈ ಸಂಶೋಧನೆಯ ರೂವಾರಿಗಳು.
ಸೋಂಕುಗಳು: ದಿನವಿಡೀ ಗಾಳಿಯಾಡದ ಶೂಗಳನ್ನು ಧರಿಸುವುದರಿಂದ ಪಾದಗಳಲ್ಲಿ ಬ್ಯಾಕ್ಟೀರಿಯಾ ಸೋಂಕು ಮತ್ತು ಶಿಲೀಂದ್ರಗಳ ಸೋಂಕು ಆಗುವ ಸಂಭವವಿದೆ. ಪಾದಗಳಿಗೆ ನೈಸರ್ಗಿಕ ಗಾಳಿ ಮತ್ತು ಬೆಳಕಿನ ಕೊರತೆಯು ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಯಾವುದೇ ಪಾದರಕ್ಷೆಗಳನ್ನು ಧರಿಸದೇ ಹುಲ್ಲಿನ ಮೇಲೆ ನಡೆಯುವುದು ಪಾದಗಳ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ಆಯುರ್ವೇದ ತಜ್ಞರು. ಸುರಕ್ಷಿತ, ಸ್ವಚ್ಛ ಸ್ಥಳಗಳಲ್ಲಿ ಬರೀ ಕಾಲಿನಲ್ಲಿ ನಡೆಯುವುದು ಕಾಲಿಗೆ ಆಕ್ಯುಪಂಕ್ಚರ್ ನೀಡಿದಂತೆ ಆಗುತ್ತದೆ. ಇದರಿಂದ ಕಾಲಿನಲ್ಲಿರುವ ರಕ್ತನಾಳಗಳಲ್ಲಿ ಸರಿಯಾಗಿ ರಕ್ತದ ಚಲನೆ ಆಗುತ್ತದೆ. ಆದುದರಿಂದ ದಿನವಿಡೀ ಶೂ ಧರಿಸಬೇಕಾದ ಅನಿವಾರ್ಯತೆ ಇದ್ದರೆ ಆಗಾಗ ಶೂ ಬಿಚ್ಚಿ ಬರಿ ಕಾಲಿನಲ್ಲಿ ಸ್ವಲ್ಪ ಹೊತ್ತು ವಾಕ್ ಮಾಡಿ. ಕಾಲಿನ ಆರೋಗ್ಯವನ್ನು ಕಾಪಾಡಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ