ದಿಲ್ಲಿ ಮಾಲಿನ್ಯ ತಡೆಗೆ ಬೀಜಿಂಗ್ ಮಾದರಿ ಶಾಶ್ವತ ಕ್ರಮ ಅವಶ್ಯ

ದಿಲ್ಲಿ ಮಾಲಿನ್ಯ ತಡೆಗೆ ಬೀಜಿಂಗ್ ಮಾದರಿ ಶಾಶ್ವತ ಕ್ರಮ ಅವಶ್ಯ

ಚಳಿಗಾಲ ಆರಂಭವಾಗುತ್ತಲೇ ಪ್ರತಿ ವರ್ಷ ರಾಷ್ಟ್ರ ರಾಜಧಾನಿಯನ್ನು ಕಾಡುವ ವಾಯುಮಾಲಿನ್ಯ ಸಮಸ್ಯೆ ಈ ಬಾರಿ ಪ್ರಕೋಪಕ್ಕೆ ತಲುಪಿದ್ದು, ದೆಹಲಿ ವಾಸಿಗಳು ಹೈರಾಣಾಗುವಂತಾಗಿದೆ. ದೆಹಲಿಯ ವಾತಾವರಣದಲ್ಲಿ ಮಂಜು ಮಿಶ್ರಿತ ದಟ್ಟ ಹೊಗೆ ಆವರಿಸಿರುವುದರಿಂದ ರಾಜಧಾನಿ ಇದೀಗ ಗ್ಯಾಸ್ ಚೇಂಬರ್ ನಂತಾಗಿರುವುದು ಕಳವಳಕಾರಿ ಸಂಗತಿ. ವಾಯುಗುಣಮಟ್ಟ ಸೂಚ್ಯಂಕ ೧೦೦ರಿಂದ ೨೦೦ರ ಒಳಗೆ ಇದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ೪೦೦ರ ಗಡಿ ದಾಟಿದರೆ ಅದು ಅತ್ಯಂತ ಗಂಭೀರ ಎಂದು ಪರಿಗಣಿಸಲಾಗುತ್ತದೆ. ಆದರೆ ದೆಹಲಿಯ ಕೆಲವೆಡೆ ವಾಯುಗುಣಮಟ್ಟ ಸಾರ್ವಕಾಲಿಕ ದಾಖಲೆಯ ೯೯೯ಕ್ಕೆ ತಲುಪಿದ್ದು, ಅತಿ ಗಂಭೀರ ಪರಿಸ್ಥಿತಿಗಿಂತ ಎರಡೂವರೆ ಪಟ್ಟು ಅಧಿಕ ಮಟ್ಟ ಮುಟ್ಟಿದೆ. ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ರಾಜಸ್ಥಾನದಂತಹ ರಾಜ್ಯಗಳಲ್ಲಿ ರೈತರು ಬೆಳೆ ಕೊಯ್ಲಿನ ಬಳಿಕ ಕೂಳೆ ಸುಡುವುದು, ಚಳಿಗಾಲದಲ್ಲಿ ವಾಯು ವೇಗ ತಗ್ಗುವುದು, ಲಕ್ಷಾಂತರ ವಾಹನಗಳು-ಕಾರ್ಖಾನೆಗಳು ಉಗುಳುವ ಹೊಗೆಯಿಂದ ಪ್ರತಿ ಬಾರಿ ದೆಹಲಿಯಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಇಂತಹ ಸಂಕಷ್ಟ ಎದುರಾದಾಗಲೆಲ್ಲಾ ಮಾಲಿನ್ಯ ಹತ್ತಿಕ್ಕಲು ಹೊಸ ಹೊಸ ನೀತಿಗಳು ಜಾರಿಗೆ ಬಂದು, ಮಾಲಿನ್ಯ ತಗ್ಗುತ್ತಿದ್ದಂತೆ ಮರೆಯಾಗಿಬಿಡುತ್ತವೆ. ಆಳುವವರು ಮತ್ತೆ ಎಚ್ಚೆತ್ತು ಕೊಳ್ಳುವುದು ಮುಂದಿನ ಚಳಿಗಾಲಕ್ಕೇ ಎಂಬ ವ್ಯಾಪಕ ದೂರು ಇದೆ.

ಅಮೇರಿಕ, ಬ್ರಿಟನ್ ನಲ್ಲೂ ಈ ರೀತಿ ವಾಯುಮಾಲಿನ್ಯ ದಶಕಗಳ ಹಿಂದೆ ಆಗುತ್ತಿತ್ತು. ಆದರೆ ಅದು ಸುದೀರ್ಘ ಅವಧಿಗೆ ಇರುತ್ತಿರಲಿಲ್ಲ. ಆದರೆ ನೆರೆಯ ಚೀನಾ ರಾಜಧಾನಿ ಬೀಜಿಂಗ್ ನಗರವು ದೆಹಲಿಗಿಂತ ಭೀಕರ ಮಾಲಿನ್ಯವನ್ನು ಸುದೀರ್ಘವಾಗಿ ಅನುಭವಿಸಿತ್ತು. ವಾಯುಮಾಲಿನ್ಯ ಎಂಬುದು ಯಾವುದೇ ನಗರದ ಪ್ರಗತಿಗೆ ಅಡ್ಡಿಯಾಗಬಹುದು. ಇದನ್ನು ಮನಗಂಡ ಚೀನಾ ಸರಕಾರ, ಬೆಳೆ ತ್ಯಾಜ್ಯ ಸುಡುವುದನ್ನು ನಿಷೇಧಿಸಿತು. ಬೀಜಿಂಗ್ ಸುತ್ತ ಇದ್ದ ಹೊಗೆ ಉಗುಳುವ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಅನಿಲ ಸ್ಥಾವರಗಳಾಗಿ ಬದಲಿಸಿತು. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು ನೀಡಿತು. ಕಾರ್ಖಾನೆಗಳ ಸಾಮರ್ಥ್ಯ ಇಳಿಸಿತು. ವಾಹನಗಳ ಮೇಲೆ ನಿಯಂತ್ರಣ ಹೇರಿತು. ಸಹಸ್ರಾರು ಕೋಟಿ ರೂ. ವ್ಯಯಿಸಿ ಬೀಜಿಂಗ್ ನ ವಾಯುಗುಣಮಟ್ಟವನ್ನು ಸುಧಾರಿಸಿತು. ಕಳಪೆ ವಾಯುಮಾಲಿನ್ಯದಲ್ಲಿ ನಂ.೧ ಸ್ಥಾನದಲ್ಲಿರುತ್ತಿದ್ದ ಬೀಜಿಂಗ್ ತನ್ನ ಸ್ಥಾನವನ್ನು ಈಗ ದೆಹಲಿಗೆ ದಯಪಾಲಿಸಿ ಪಟ್ಟಿಯಲ್ಲಿ ಕೆಳಜಾರಿದೆ. ದೆಹಲಿಯನ್ನು ಕೂಡ ವಾಯುಮಾಲಿನ್ಯದ ಸಂಕೋಲೆಯಿಂದ ಪಾರು ಮಾಡಲು ಬೀಜಿಂಗ್ ರೀತಿಯ ಶಾಶ್ವತ ಕ್ರಮಗಳು ಅಗತ್ಯವಿದೆ. ಆದರೆ ದೆಹಲಿಯಲ್ಲಿ ತಾತ್ಕಾಲಿಕ ಕ್ರಮಗಳಿಗಷ್ಟೇ ಒತ್ತು ನೀಡುತ್ತಿರುವುದು ಸಮಸ್ಯೆಯ ಮೂಲ. ಸರ್ಕಾರಗಳು ಜನರಿಗೆ ಸ್ವಚ್ಛ ಗಾಳಿಯನ್ನೂ ಕೊಡದಿದ್ದರೆ, ಇನ್ನೇನು ಕೊಟ್ಟು ಪ್ರಯೋಜನ?

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೪-೧೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ