ದಿ ಲಾಸ್ಟ ಟೆನ್ ಮಿನಿಟ್ಸ್

ದಿ ಲಾಸ್ಟ ಟೆನ್ ಮಿನಿಟ್ಸ್

      ಸ್ಟೇಜ್ ನ ಮೇಲೆ ಸ್ವಪ್ನ ಬಹಳ ಚೆನ್ನಾಗಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿ ಕೆಳಗಿಳಿದಳು. ನಂತರ ಒಂದು ಚಿಕ್ಕ ವಿರಾಮ ತದನಂತರ ಅಕ್ಷಯ್ ಮತ್ತು ಸಂದೀಪ್ ಮಾತನಾಡಬೇಕಿತ್ತು. ಆ ಟಾಕ್ ಶೋ ನಲ್ಲಿ ಯಾರೊಬ್ಬರೂ ತನಗೆ ಆದ ಅನುಭವಗಳ ಬಗ್ಗೆ , ನೋಡಿದ ಹೊಸ ಜಾಗದ ಬಗ್ಗೆ ಅಥವಾ ಹೊಸ ವಿಷಯದ ಬಗ್ಗೆ ಒಂದು  ಹತ್ತರಿಂದ ಹದಿನೈದು ನಿಮಿಷದ ವರೆಗೂ  ಮಾತನಾಡಬೇಕಿತ್ತು. ಅಕ್ಷಯ್ ಮೂಲತಃ ಮಹಾರಾಷ್ಟ್ರದವನು ಅವನು ತನಗೆ ಆದ ಹೊಸ ಅನುಭವದ ಬಗ್ಗೆ ಹಾಗು  ಅವನು ನೋಡಿದ ಒಂದು ಹೊಸ ರೆಸಾರ್ಟ್ ನ ಬಗ್ಗೆ ಮಾತನಾಡಿ  ಕೆಳಗೆ ಇಳಿದ. ನಂತರ ಮೈಸೂರಿನ ಹುಡುಗ ಸಂದೀಪ್ ನ ಸರದಿ ಇತ್ತು. ಸಂದೀಪ್ ಸ್ಟೇಜ್ ಮೇಲೆ ಹೋಗಿ ಮೈಕ್ ಅನ್ನು ತೆಗೆದು ಕೊಂಡು ಸುತ್ತಲೂ ಒಂದು ಕಣ್ಣು ಹಾರಿಸಿದ.ನಂತರ ಮಾತನಾಡಲು ಶುರು ಮಾಡಿದ...
         ನಾನು ಮತ್ತು ಅಜಯ್ ಅವನನ್ನೇ ನೋಡುತ್ತಾ ಕುಳಿತಿದ್ದೆವು. 
 
ಮೂರು ದಿನಗಳ ಕೆಳಗೆ...
 
         ನಾನು ಮತ್ತು ಅಜಯ್ ಮಲ್ಲೇಶ್ವರಂನ ೧೯೪೭ ರೆಸ್ಟುರೆಂಟ್ ನಲ್ಲಿ ಸುಮಾರು ಸಂಜೆ ಏಳುವರೆ  ಹೊತ್ತಲ್ಲಿ ಸಂದೀಪ್ ಗಾಗಿ ಕಾಯುತ್ತಿದ್ದೆವು.
        ಅಜಯ್ ಕೇಳತೊಡಗಿದ "ವಿಷಯ ಏನಂತೆ ?". ಅದಕ್ಕೆ ನಾನು " ಗೊತ್ತಿಲ್ಲ ಇದ್ದಕ್ಕಿದ್ದಂತೆ ಫೋನ್ ಮಾಡಿ ಸಂಜೆ ಇಲ್ಲಿಗೆ ನಮ್ಮಿಬ್ಬರಿಗೂ ಬರ ಹೇಳಿದ.  ಇಲ್ಲೇ ಊಟ ಮುಗಿಸಿ ಅವನ ಮನೆಗೆ ಹೋಗಬೇಕಂತೆ ಅವನ ಮನೆಯಲ್ಲಿ ಎಲ್ಲರೂ ಪ್ರವಾಸಕ್ಕೆ ಹೋಗಿದ್ದರಂತೆ. ಸ್ವಲ್ಪ ಕಳವಳದಲ್ಲಿದ್ದಂತೆ ಮಾತನಾಡುತಿದ್ದ ".ಎಂದು ಅಲ್ಲಿಟ್ಟಿದ್ದ ತಿನಿಸುಗಳ ಕಡೆಗೆ ಗಮನ ಹರಿಸಿದೆ.ಅಷ್ಟರಲ್ಲಿ ಸಂದೀಪ್ ಅಲ್ಲಿಗೆ ಬಂದ.
       ಅವನನ್ನು ನೋಡಿದರೆ ಏನೋ ಕಳಮಳದಲ್ಲಿ ಇದ್ದವನಂತೆ ತೋರುತ್ತಿತ್ತು. ಅಜಯ್ ಕೇಳಿದ "ಏನಾಯಿತೋ ಸಂದೀಪ?". ಅದಕ್ಕೆ ಸಂದೀಪ "ನಾನು ಕಂಪನಿಯಲ್ಲಿ ಸ್ವಲ್ಪ ಜನಗಳ ಹತ್ತಿರ ಜಗಳ ಆಡಿದೆ. ನನಗ್ಯಾಕೋ ಅಲ್ಲಿ ಸರಿ ಹೋಗ್ತಾಯಿಲ್ಲಾ ಬೇರೆ ಕಡೆಗೆ ಹೋಗ್ತೀನಿ  " ಎಂದ. ಅವನದು ಇದು ಮಾಮೂಲು ಎಂದು ನಾನು " ಸಂತೋಷದ ವಿಷಯ ತಾನೇ ಖುಷಿ ಪಡು , ಅದಕ್ಯಾಕೆ ಒಳ್ಳೆ ಹರಳೆಣ್ಣೆ ಕುಡಿದವನ ಹಾಗೆ ಮುಖ ಮಾಡಿಕೊಂಡಿದೀಯ " ಎಂದೆ. ಅದಕ್ಕೆ ಅವನು ಕೂಪದಲ್ಲಿ " ನೀನು ಹೇಳಿದ್ದು ನಿಜ ಆದರೆ ಹೊರಗಡೆಯಿಂದ ಬಂದು ನಮ್ಮ ಕೆಲಸಗಳನ್ನು ಕಸಿದು ಮೆರೆಯುತ್ತಿರುವವರಿಗೆ, ನಮ್ಮ ಮೇಲೆಯೇ ದಬ್ಬಾಳಿಕೆ ನಡೆಸುತ್ತಿರುವವರಿಗೆ  ಒಂದು ಸರಿಯಾದ ಉತ್ತರ ಕೊಡಬೇಕಿದೆ ಆ ಅವಕಾಶ ನನಗೆ ಈಗ ಬಂದಿದೆ ". "ಏನದು ?" ಎಂದು ಅಜಯ್ ಕೇಳಿದ. "ಟಾಕ್ ಶೋ ಏರ್ಪಾಡು ಮಾಡಿದ್ದಾರೆ ಅದರಲ್ಲಿ ನಾನು ಭಾಗವಹಿಸುತ್ತಿದ್ದೇನೆ. " ಎಂದ.
 
ಇಂದು..  
 
      ನಾನು ಕಣ್ಣುಗಳನ್ನು ಅರಳಿಸಿ ಅವನನ್ನೇ ನೋಡುತ್ತಿದ್ದೆ. ಅಲ್ಲೊಂದು  ದೋಷ ಇತ್ತು .ಜೀವಮಾನವಿಡೀ ಕಂಪ್ಯೂಟರ್ ಅನ್ನೇ ತನ್ನ ಆರಾಧ್ಯ ದೈವ ಎಂದು ಪೂಜಿಸಿದ್ದ ಸಂದೀಪನಿಗೇ ಬೇರೆ ಯಾವ ವಿಷಯದ ಬಗ್ಗೆಯೂ ಅಷ್ಟೊಂದು ಸರಿಯಾಗಿ ಗೊತ್ತಿರಲಿಲ್ಲ. ಮೇಲಾಗಿ ಸ್ವಲ್ಪ ನಯ ನಾಜೂಕಿನಿಂದ ಬೆಳೆದ ಹುಡುಗ ಯಾವ ಕೆಟ್ಟ ಹವ್ಯಾಸವೂ ಇಲ್ಲದವನು. ಏಯ್ ಎಂದು ಗಟ್ಟಿಯಾಗಿ ಹೇಳಿದರೆ ಪಾಪ ಉತ್ತರಿಸುವುದಕ್ಕೆ ಚಡಪಡಿಸುತ್ತಿದ್ದ. ಇಂತವನು ಅಷ್ಟು ಜನರ ಮಧ್ಯೆ ಏನು ಮಾತನಾಡುತ್ತಾನೆ ?ಆದರೆ ಒಂದತೂ ಸತ್ಯ ಇದ್ದಿತು ಟಾಕ್ ಶೋ ಗೆ ಇವನನ್ನು ಬಲವಂತದಿಂದ ಭಾಗವಹಿಸುವಂತೆ ಮಾಡಿದ್ದರೆಂಬುದು. ಇವನು ಏನು ಮಾತನಾಡುತ್ತಾನೆ ಎಂಬ  ಕೂತುಹಲದಿಂದ ನಾನು ಮತ್ತು ಅಜಯ್ ಅಲ್ಲಿಗೆ ಹೋಗಿದ್ವಿ.
 
            ಸಂದೀಪ ಶುರು ಮಾಡಿದ " ಈವರೆಗೂ ಮಾತನಾಡಿದಿದ ಎಲ್ಲರದ್ದೂ ರೋಚಕ ಅನುಭವಗಳಾಗಿದ್ದಿತು. ಆದರೆ ನನ್ನದು ಅಂತಹ ಯಾವುದು ಇಲ್ಲವ್ವಾದ್ದರಿಂದ ಮಾತನಾಡಲು ಸ್ವಲ್ಪ ಮುಜುಗರವಾಗುತ್ತಿದೆ. ಹೇಳಿಕೊಳ್ಳೋಣವೆಂದರೆ ಸ್ವಪ್ನ ಖರೀದಿಸಿದ ಒಡವೆಯಷ್ಟು ಅಥವಾ ಅಕ್ಷಯ್ ರೆಸಾರ್ಟ್ ಬಗ್ಗೆ ಹೇಳಿಕೊಂಡು ಸಂತೋಷಪಟ್ಟಷ್ಟು ಅಥವಾ ಮುಕುಂದರವರ ಪ್ರೇಮ ಕಥೆಯಷ್ಟು ರೋಚಕವಾಗಿ  ಇಲ್ಲ.
          ನನ್ನ ಅನುಭವದ ಬಗ್ಗೆ ತಿಳಿಯುವುದಕ್ಕೂ ಮುನ್ನ ನನ್ನ ಬಗ್ಗೆ ಹೇಳಿಕೊಳ್ಳಬೇಕಿತ್ತು. ನಾನು ಮೂಲತಃ ಮೈಸೂರಿನವನು.ನನ್ನ ಶಿಕ್ಷಣ ಪೂರ್ತಿ ಪ್ರಮಾಣದಲ್ಲಿ ಮೈಸೂರಿನಲ್ಲೇ ಮುಗಿಸಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದೆ. ಸಂಪೂರ್ಣ ಹೊಸ ಪ್ರಪಂಚ ಹೊಸ ವ್ಯಕ್ತಿಗಳು ಹೊಸ ಕೆಲಸ ಮೇಲಾಗಿ ಕೈಯಲ್ಲಿ ಸಂಬಳ. ನನ್ನ ಬಗ್ಗೆ ಅಪ್ಪ ಅಮ್ಮನಲ್ಲಿದ್ದ ಹೆಮ್ಮೆ ಹಾಗು ಪ್ರೀತಿ.
         ಮೊದಲಿನಿಂದ ಮನೆಯಲ್ಲಿಯೇ ಬೆಳೆದ ನಾನು ಮನೆಯನ್ನು ಬಿಟ್ಟು ಹೊಸ ಪ್ರಪಂಚವನ್ನ  ಅನುಭವಿಸುವುದಕ್ಕೆ ಸಿದ್ದನಾದೆ. ಆದರೆ ಯಾಕೋ ಏನೋ ಆ ಉತ್ಸಾಹ ಬಹಳ ದಿನ ಉಳಿಯಲಿಲ್ಲ. ಜೀವನ ಒಂದು ಯಂತ್ರದ ತರಹ  , ಅದೇ ಆಫಿಸು , ಅದೇ ಕೆಲಸ , ಅದೇ ರೂಮು , ಅದೇ ಊಟ ಹಾಗು ಅದೇ ನಿದ್ದೆ. ಹೀಗೆ ಸುಮಾರು ಮೂರು ವರುಷಗಳು ಉರುಳಿದವು.ಮೂರು ವರುಷಗಳಲ್ಲಿ ಮುಂದಿನ ಮೂವತ್ತು ವರುಷಗಳು ಹೇಗಿರುತ್ತವೆಂಬ ಮೊದಲ ಅನುಭವ ಆಗಿದ್ದಿತು. ನಂತರ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡೆ. ಅವಾಗ ನನಗೆ ಒಳ್ಳೆಯ ಸ್ನೇಹಿತರು ಇದ್ದರು.ಅವರದ್ದೂ  ನನ್ನದೇ ಪರಿಸ್ಥಿತಿಯಾದ್ದರಿಂದ ತಲೆ ಕೆಟ್ಟ ಹಾಗೆ ಅನ್ನಿಸುತ್ತಿತ್ತು. ಆ ಸಮಯದಲ್ಲಿ ಮನಸ್ಸು ಓಡಬಾರದ ಕಡೆ ನುಸುಕುತ್ತಿತ್ತು. ಕೈ ತುಂಬಾ ಕಾಸು ಇದ್ದರೂ ಏನೋ ರೋಗ ಬಂದವನಂತೆ ಆಡುತ್ತಿದ್ದೆ.
          ಆ ಸಮಸ್ಯೆಗೆ  ಪರಿಹಾರವನ್ನು ಹುಡುಕುವುದಕ್ಕೆ ಶುರು ಮಾಡಿದೆ.ಮೊದಲು ಪುಸ್ತಕಗಳನ್ನು ಓದಲು  ಶುರು ಮಾಡಿದೆ. ನಂತರ ಆ ಪುಸ್ತಕಗಳಲ್ಲಿ ಉಲ್ಲೇಖಿಸಿರುವುದನ್ನು ಸಾಧ್ಯವಾಗುವಷ್ಟರ ಮಟ್ಟಿಗೆ ಹುಡುಕಾಡಿದೆ. ಉದಾಹರಣೆಗೆ ಕೆ ನ್ ಗಣೇಶಯ್ಯ ನವರು ಬರೆದಿರುವ 'ಕರಿಸಿರಿಯಾನ' ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ ನಾನು ಸುಮಾರು ಹಂಪೆ, ಪೆನುಕೊಂಡ ಹಾಗು ತಿರುಪತಿಗೆ ಹೋಗಿ ಅಲ್ಲಿನ ಇತಿಹಾಸ ಹಾಗು ವಿಶಿಷ್ಟ್ಯವನ್ನು ತಿಳಿಯಲು ಪ್ರಯತ್ನಿಸಿದೆ.
       ಹೀಗೆ ಮಾಡಿ ಮಾಡಿ ಅರಬ್ಬೀ ಸಮುದ್ರ , ಬಂಗಾಲ ಕೊಲ್ಲಿ ಸಮುದ್ರ ಹಾಗು ಹಿಂದೂ ಮಹಾಸಾಗರ ಮೂರನ್ನು ನೋಡಿದ ಹೆಮ್ಮೆ ಇದೆ. ಚಾರಿತ್ರಿಕವಾಗಿ ಅಷ್ಟೇ ಅಲ್ಲದೆ  ಪೌರಾಣಿಕ ವಾಗಿಯೂ ಕೂಡ ಅರ್ಥೈಸಿಕೊಳ್ಳಲು ಪ್ರಯತ್ನಪಟ್ಟೆ ಉದಾಹರಣೆಗೆ 'ಮಾಭಾರತ ' ಹಾಗು 'ರಾಮಾಯಣ' ವನ್ನು ಎಷ್ಟು ತಿಳಿದು ಕೊಳ್ಳೋಕೆ ಆಗುತ್ತೋ ಅಷ್ಟು ತಿಳಿದುಕೊಂಡೆ. ಇದಷ್ಟೇ ಅಲ್ಲದೆ ನಮ್ಮ ನೆಲ,ಜಲ,ಭಾಷೆ ಹಾಗು ಸಂಸ್ಕೃತಿ  ಗಳ ಬಗ್ಗೆ  ಸ್ವಲ್ಪ ಸ್ವಲ್ಪ ತಿಳಿದುಕೊಂಡೆ"
           ನಾನು ಮತ್ತು ಅಜಯ್ ಬಾಯಿ ತೆಗೆದು ಅವನನ್ನೇ ನೋಡುತ್ತಿದ್ದೆವು. ಇಷ್ಟು ಹೊತ್ತು ಸೌಜನ್ಯದಿಂದ ಮಾತನಾಡಿದ ಸಂದೀಪ ಅಂದಿನಿಂದ ಸಿಟ್ಟಿನಲ್ಲಿ ಸ್ವಲ್ಪ ಕಣ್ಣು ಕೆಂಪಾಗಿಸಿಕೊಂಡು ಮುಂದುವರೆಸಿದ "ಆಫಿಸಿನಲ್ಲಿ  ನಾವೆಲ್ಲರೂ ಕೆಲಸಗಾರರು.  ನಮ್ಮನ್ನು ಯಂತ್ರದ ತರಾ ಬಳಸಿಕೊಂಡು ದಬ್ಬಾಳಿಕೆ ನಡೆಸುವರನ್ನು ನಾವು ಒಲಿಸುತ್ತಿದ್ದೇವೆ . ಯಾವಾಗ ನಮ್ಮಲ್ಲಿ ಸೃಜನ ಶೀಲತೆ ಕಳೆದು ಬರೀ ದುಡ್ಡಿನ ಹಿಂದೆ ಓಡುತ್ತೀವೋ ಆಗ ಜೀವನದಲ್ಲಿ ಬೇರೆ ಗುರಿಯೇ ಇರದಂತೆ ಆಗುತ್ತದೆ.ಸಂಬಳಕ್ಕೋಸ್ಕರ, ನಮ್ಮ ಅನುಕೂಲತೆಗೊಸ್ಕರ, ನಮ್ಮ ಭವಿಷ್ಯಕ್ಕೋಸ್ಕರ,ದುಡ್ಡಿಗೋಸ್ಕರ ನಮ್ಮನ್ನೇ ನಾವು ಮಾರಿಕೊಂಡುಬಿಟ್ಟಿದ್ದೇವೆ.  
              "ಅಷ್ಟೆಲ್ಲ ಯಾಕೆ ಮಾಡಿದ್ದಿಯ ನೀನೂ ಎಲ್ಲರ ತರಹ ಗಳಿಸಿದ ದುಡ್ಡನ್ನು ತೆಗೆದುಕೊಂಡು ಮಜಾ ಮಾಡಬಹುದಿತ್ತಲ್ಲಾ?"  ಎಂದು ನೀವು ಕೇಳಬಹುದು. ನನ್ನ ಉತ್ತರ ಇಷ್ಟೇ. ನಾನು ಇಷ್ಟೆಲ್ಲಾ ಮಾಡಿ  ನಾನೊಬ್ಬ ಭಾರತೀಯ ಹಾಗು ನಾನೊಬ್ಬ ಕನ್ನಡಿಗ ಎಂದು ಕರೆಸಿಕೊಳ್ಳುವ ಕನಿಷ್ಠ ಅರ್ಹತೆಯನ್ನು ಪಡೆದುಕೊಂಡೆ. ಇಲ್ಲಾ ಎಂದರೆ ನಾನೊಬ್ಬ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವ ಗುಲಾಮ ಎಂದು ಪರಿಗಣಿಸಲ್ಪಡುತ್ತಿದ್ದೆ. ಬೇರೆಯವರ ಬಗೆಗೆ ಹೇಗೆ ಕಾಳಜಿ, ಸೌಜನ್ಯ ಹಾಗು ಕರುಣೆ ತೋರಿಸಬೇಕು ಎಂಬ ಕಿಂಚಿತ್ತೂ  ಜ್ಞಾನ ಕೂಡ ಇಲ್ಲದ ಕಡೆ ನನಗೆ ಇರುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. " ಒಂದು ದೀರ್ಘ ಉಸಿರು ತೆಗೆದುಕೊಂಡು "ನಾನು ನನ್ನ ಕೆಲಸಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ನನ್ನ  ಏಳಿಗೆ ಈ ಕಂಪೆನಿಯಲ್ಲಲ್ಲ . ನಿಮಗೆಲ್ಲರಿಗೂ ಎಲ್ಲ ದಿ ಬೆಸ್ಟ್ " ಎಂದು ಹೇಳಿ ಸ್ಟೇಜ್ ನಿಂದ ಕೆಳಗೆ  ಇಳಿದ. ಪ್ರೇಕ್ಷಕರು  ಎಲ್ಲರೂ ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸುತ್ತಿದ್ದರು.
 
          ಅಷ್ಟು ಹೇಳಿ ಸೀದಾ ನಮ್ಮ ಹತ್ತಿರಕ್ಕೆ ಬಂದ.  ಅಜಯ್ ತರಾತುರಿಯಲ್ಲಿ ಬೇಗ ನಡೆ ಎಂದು ಪಾರ್ಕಿಂಗ್ ಲಾಟ್ ಗೆ ಹೋಗಿ ಮೂವರು ಕಾರ್ ನಲ್ಲಿ ಕೂತೆವು. ಅಜಯ್ ಗಾಡಿಯನ್ನು ಓಡಿಸಲಿಕ್ಕೆ ಶುರು ಮಾಡಿ ನನನ್ನು ಕುರಿತು "ಭರತ ಸ್ಕ್ರಿಪ್ಟ್ ಚೆನ್ನಾಗಿತ್ತು ಪರವಾಗಿಲ್ಲ ಚೆನ್ನಾಗಿ ಪ್ರಾಕ್ಟೀಸ್ ಮಾಡಿಸಿದ್ದೀಯಾ " ಎಂದ . ಅದಕ್ಕೆ ನಾನು "ಎಲ್ಲಾ ಓಕೆ ಆದರೆ ಒಂದು ಲೈನ್ ಮಿಸ್ ಆದಹಂಗೆ  ಇತ್ತು ಅದೇ ನಾನೊಬ್ಬ ಈ ದೇಶದ ಪ್ರಜೆಯಾಗಿ ನನ್ನ ಹಕ್ಕು ಮತ್ತು ಕರ್ತವ್ಯ ಪ್ರತಿ ವರ್ಷ  ಚಲಾಯಿಸುತ್ತೀನಿ ಅಂದರೆ ಪ್ರತಿ ಭಾರಿಯೂ ಚುನಾವಣೆಯಲ್ಲಿ  ನನ್ನ ಮತ ಹಾಕುತ್ತೇನೆ ಅಂತ ಇತ್ತು ... ". ಅಷ್ಟರಲ್ಲಿ ಸಂದೀಪ "ಲೋ ಬಿಡ್ರೋ ನನಗೆ ಕೈ ಕಾಲು ನಡುಗುತ್ತಿದೆ  ಅಷ್ಟು ಜನರ ಮುಂದೆ ನಾನು ಹೇಗೆ ಮಾತನಾಡಿದ್ದು ಏನು ಪರಿಣಾಮ ಬಿರುವುದೋ ಎಂದು ಭಯ ಆಗ್ತಾಯಿದೆ ".
          ಅದಕ್ಕೆ ನಾನು ಸಂದೀಪನನ್ನು ಕುರಿತು " ರಾಜಿನಾಮೆಯ ಸಂದೇಶವನ್ನು ಸ್ಟೇಜ್ ಮೇಲೆ ಅಷ್ಟು ಧೈರ್ಯದಿಂದ ಕೊಟ್ಟೆಯಲ್ಲ ಶಹಭಾಷ್, ಇಷ್ಟೆಲ್ಲಾ ಹೇಗೆ ಸಾಧ್ಯ?ಅಷ್ಟೆಲ್ಲಾ ಧೈರ್ಯ ಎಲ್ಲಿಂದ ಬಂತು ?". ಅದಕ್ಕೆ ಸಂದೀಪ ಅಜಯ್ ಗೆ ಸನ್ಹೆ ಮಾಡಿದ. ಅಜಯ್ ನನ್ನನು ಕುರಿತು " ನನ್ನದೇನು ತಪ್ಪಿಲ್ಲ ನಾನು ಅವನಿಗೆ ಸಂಪೂರ್ಣವಾಗಿ ಅದರ ಪರಿಣಾಮವನ್ನು ವಿವರಿಸಿ ಅವನ ಒಪ್ಪಿಗೆಯ ನಂತರ ಆ ರೀತಿ ಮಾಡಿದೆ". ಅಷ್ಟರಲ್ಲಿ ಸಂದೀಪನ ತಂದೆಯಿಂದ ನನಗೆ ಕರೆ ಬಂತು ,ಆ ಕಡೆಯಿಂದ "ಭರತ್  ಎಲ್ಲಿದ್ದೀಯ? ನಮ್ಮ ಸಂದ್ದೀಪ ನಿನ್ನ ಜೊತೆ ಇದ್ದಾನೆಯೇ ? ಅವನಿಗೆ ಕರೆ ಮಾಡಿದರೆ ಕನೆಕ್ಟ್ ಆಗುತ್ತಲಿಲ್ಲ". ಅದಕ್ಕೆ ನಾನು " ಸಂದೀಪ ನಮ್ಮ ಜೊತೆಗೆ ಇದ್ದಾನೆ. ಸುಮ್ಮನೆ ಹೀಗೆ ಹೊರಗಡೆ ಬಂದಿದ್ದೀವಿ. ಏನು ವಿಷಯ ಅಂಕಲ್" ಎಂದೆ. 
 
         ಅದಕ್ಕೆ "ಒಹ್ ಹೌದ ಒಳ್ಳೆಯದೇ ಆಯಿತು ನಾವು ಪ್ರವಾಸದಿಂದ ಮನೆಗೆ ಬಂದಿದ್ದೀವಿ ಸಂದೀಪನಿಗೆ ಮನೆಗೆ ಬರುವಂತೆ ಹೇಳಿಬಿಡು." ಎಂದು ಹೇಳಿ ಇಟ್ಟರು. ನಾನು ಸಂದೀಪನ ಕಡೆಗೆ ತಿರುಗಿ ನೋಡಿದೆ ಅವನ ಮುಖ ಯಾಕೋ ಎಂದಿನಂತೆ ಇರಲಿಲ್ಲ. ಸ್ವಲ್ಪ ಅಜಯ್ ನನ್ನ ಗಾಬರಿ ಇಂದ ನೋಡಿ " ಏನು ಮಾಡಿದೆಯೋ ಅವನಿಗೆ "ಎಂದು ಅರಚಿದೆ . ಅದಕ್ಕೆ ಅಜಯ್ " ಜಾಸ್ತಿ  ಏನು ಇಲ್ಲ ಮಾರಾಯ, ಸ್ವಲ್ಪ ಧೈರ್ಯ ಬರಲಿ ಅಂತ ಓಲ್ಡ್ ಮಾಂಕ್ ರಮ್  ನ  ಕುಡಿಸಿದ್ದೆ ಅಷ್ಟೇ.ನೀನು  ಕುಡಿಯುವುದಿಲ್ಲವಾದ್ದರಿಂದ ನಿನಗೆ ಗೊತ್ತಿಲ್ಲ.  ನೀನು ಸ್ಕ್ರಿಪ್ಟ್ ವರ್ಕ್ ಮಾಡಿಕೊಟ್ಟೆ ನಾನು ಧೈರ್ಯಕ್ಕೆ ದಾರಿ ತೋರಿಸಿಕೊಟ್ಟೆ ಅಷ್ಟೇ"ಅಂತ ಹೇಳುವಷ್ಟರಲ್ಲಿ ಹಿಂದಿನಿಂದ ಗೊರಕೆಯ ಶಬ್ದ ಕೇಳಿ ಬರುತ್ತಿತ್ತು.ನಾನು ಮತ್ತು ಅಜಯ್ ತಲೆ ಮೇಲೆ ಕೈ ಹೊತ್ತು ಕೂತೆವು. 
 
                                                                                                                      -----------ಭರತ್