ದೀಡೆಕರೆ ಜಮೀನು

ದೀಡೆಕರೆ ಜಮೀನು

ಪುಸ್ತಕದ ಲೇಖಕ/ಕವಿಯ ಹೆಸರು
ಮಲ್ಲಿಕಾರ್ಜುನ ಶೆಲ್ಲಿಕೇರಿ
ಪ್ರಕಾಶಕರು
ಕಾಚಕ್ಕಿ ಪ್ರಕಾಶನ, ಕುಣಿಗಲ್, ತುಮಕೂರು
ಪುಸ್ತಕದ ಬೆಲೆ
ರೂ.150.00, ಮುದ್ರಣ 2022

“ಇಲ್ಲಿಯ ಕಥೆಗಳಲ್ಲಿ ಬಲಿಯಾಗುವ ಯಾರೊಬ್ಬರೂ ತಪ್ಪಿತಸ್ತರಲ್ಲ ಎನ್ನುವುದು ಕೇಡಿನ ಭೀಕರತೆಯನ್ನು ಹೆಚ್ಚು ಮಾಡುತ್ತದೆ. ಕತೆಗಾರ ಮಲ್ಲಿಕಾರ್ಜುನ ಅವರು ಸಹಜವಾಗಿ ಕಟ್ಟಿದ ಕಥೆಗಳು ನಮ್ಮ ಅಂತರಂಗಕ್ಕೆ ಇಳಿಯುತ್ತವೆ. ಆದರೆ ಕೆಲವು ಸಲ ಅವರು ಮಹತ್ವಾಕಾಂಕ್ಷಿಯಿಂದ ಕಥೆಗಳಲ್ಲಿ ಇಣುಕಿದಾಗ ಕಥೆ ಓದುಗರ ಪರಿಧಿಯಿಂದ ದೂರ ಹೋಗುತ್ತದೆ ಎನ್ನಿಸುತ್ತದೆ” ಲೇಖಕ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕೆರೆ ಜಮೀನು ಪುಸ್ತಕಕ್ಕೆ ನಾನು ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಕನ್ನಡದಲ್ಲಿ ಗ್ರಾಮೀಣ ಸಂವೇದನೆಯ ಕತೆಗಳಿಗೆ ಬರ ಎಂಬುದಿಲ್ಲ. ನಮ್ಮ ಕತೆಗಳ ಜೀವ ಚೈತನ್ಯಕ್ಕೆ ಗ್ರಾಮ ಜಗತ್ತಿನ ಹಲವಾರು ಗೋಜಲುಗಳು, ದ್ವಂದ್ವಗಳು, ಹರಾಹರಿಗಳೇ ಮೂಲದ್ರವ್ಯವಾಗಿವೆ. ಹೊರ ಜಗತ್ತಿನಲ್ಲಿ ಸಂಭವಿಸುತ್ತಿರುವ ಘಟು ಘಟಕಗಳು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಬದುಕುತ್ತಿರುವ ಗ್ರಾಮೀಣರ ಸಾಮಾಜಿಕ ನಡುವಳಿಕೆಯನ್ನು ನೋಡಿದರೆ ಈ ಅಧುನಿಕ ಜಗತ್ತಿನಲ್ಲಿ ಒಂದು ಬಗೆಯ ಸಾಮಾಜಿಕತೆಯ ದ್ವೀಪವನ್ನು ಆಹ್ವಾನಿಸಿಕೊಂಡು ಬದುಕು ಮಾಡುತ್ತಿರುವಂತೆ ಕಾಣಿಸುತ್ತಿದೆ. ಅಥವಾ ಗ್ರಾಮೀಣರ ಮತಿಕೋಶವನ್ನು ಆಧುನಿಕತೆಯ ತಲ್ಲಣಗಳು ಅಲ್ಲಾಡಿಸಲಾರವೋ ಏನೋ. ಅದಕ್ಕಾಗಿಯೇ ಗ್ರಾಮೀಣ ಹಿನ್ನೆಲೆಯಿಂದ ಬಂದ ಬಹುತೇಕ ಕತೆಗಾರರಿಗೆ ಅದೊಂದು ಸೋಜಿಗದ, ಕುತೂಹಲಕಾರಕವಾದ ಕಥನ ಮೂಲವಾಗಿದೆಯೆಂದು ಅನ್ನಿಸುತ್ತದೆ. ಅದಕ್ಕೆ ಗೆಳೆಯರಾದ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಹೊರತಲ್ಲ.

ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಗ್ರಾಮ ಮೂಲದಿಂದ ಬಂದವರು, ಕೆ.ಎ.ಎಸ್‌ ಪಾಸು ಮಾಡಿ ಈಗ ಉನ್ನತ ಹುದ್ದೆಯಲ್ಲಿದ್ದವರು. ಮಿತಭಾಷಿ, ಮೃದು ಮಾತಿನ ಸಮಾಜ ಜೀವಿ ಆಗಿರುವ ಅವರ ಒಳಗೊಬ್ಬ ಜೀವ ಮಿಡಿತದ ಅನಾಹತಕ್ಕೆ ಸಂದಿಸುವ ಅಪ್ಪಟ ಮನುಷ್ಯನಿದ್ದಾನೆ. ಈ ಕಾರಣಕ್ಕಾಗಿಯೇ ಇವರ ಕತೆಗಳಲ್ಲಿ ಕೇಡನ್ನು ಬಯಸುವ ಜನರ ಎದುರಿಗೆ ಒಳಿತಿಗೆ ಹಾತೊರೆಯುವ ಜೀವಿಗಳಿವೆ. ಸತ್ಯಕ್ಕಾಗಿ ಒಳ್ಳೆಯದಕ್ಕಾಗಿ ತಮ್ಮ ಜೀವವನ್ನೇ ಬಲಿ ಕೊಡಲು ಮುಂದಾಗುವ ಸಾಮಾಜಿಕ ಕಳಕಳಿಯ ಮನುಷ್ಯರು ಇಲ್ಲಿ ಕತೆಯಾಗಿ ಬಂದಿದ್ದಾರೆ. ಆದರೆ ಕೇಡಿನ ಬೆಂಕಿಯಲ್ಲಿ ಒಳ್ಳೆಯತನ ಸುಟ್ಟು ಹೋಗುವ ಘಟನೆಗಳೇ ಇವರ ಕತೆಗಳಲ್ಲಿ ಸ್ಥಾನ ಪಡೆದಿವೆ. ಇದೊಂದು ಕುತೂಹಲಕಾರಕ ಸಂಗತಿಯೇ ಆಗಿದೆ. ಎಲ್ಲೆಲ್ಲೂ ಕೇಡು ವಿಜೃಂಭಿಸುವ ಮತ್ತು ಕೇಡು ಜಯ ಸಾಧಿಸುವ ಇಲ್ಲಿಯ ಕತೆಗಳು ಗ್ರಾಮ ಜಗತ್ತಿನ ಅಸ್ವಸ್ತತೆಯನ್ನು ಎತ್ತಿ ತೋರಿಸುತ್ತಿರುವಂತಿವೆ.

ಸಂಕಲನದ ಮೊದಲ ಕತೆ 'ಆಲದ ಮರ ಈ ಬಗೆಯದು, ತಲೆಮಾರುಗಳಿಂದ ಇದ್ದ ಊರ ಪಂಚಾಯತಿ ಕಟ್ಟೆಯ ಮೇಲಿನ ಆಲದ ಮರವನ್ನು ಕಡಿದು ಹಾಕಿ ಅದೇ ಜಾಗದಲ್ಲಿ ಮಂಗಲಭವನವನ್ನು ಕಟ್ಟಿಸುವುದಕ್ಕಾಗಿ ಊರಲ್ಲಿ ಹಣಾಹಣಿ ನಡೆಯುತ್ತದೆ. ಊರ ಹಿರಿಯ ಪರಪ್ಪಜ್ಜ ಮತ್ತು ಚೇರಮನ್ ಪಂಚಾಕ್ಷರಿಯ ನಡುವಿನ ಈ ತಿಕ್ಕಾಟದಿಂದಾಗಿ ಆಲದ ಮರವನ್ನು ಕಡಿದು ಮಂಗಲಭವನ ಕಟ್ಟಿಸುವ ಹಠವನ್ನು ಚೇರಮನ್ ತೊಡುತ್ತಾನೆ. ನಿಜ ಸಂಗತಿ ಎಂದರೆ ಮಂಗಲಭವನ ಕಟ್ಟಲಿಕ್ಕೆ ಊರಲ್ಲಿ ಬೇರೆ ಜಾಗ ಇರುತ್ತದೆ. ಆದರೆ ಕೇಡನ್ನು ಸಾಧಿಸುವ ಹಠದಿಂದಾಗಿ ಪಂಚಾಯತಿಯಲ್ಲಿ ಗಿಡ ಕಡಿಯುವ ಠರಾವು ಪಾಸಾಗುತ್ತದೆ. ಗಿಡ ಕಡಿಯದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ನಗರಕ್ಕೆ ಹೋದ ವಿಶ್ವನಾಥ ತಡೆಯಾಜ್ಞೆ ತಂದು ಊರಿಗೆ ಬಂದರೆ ಪರಪ್ಪಜ್ಜ ಗಾಂಧಿವಾದಿಯಂತೆ ಆಲದ ಮರದ ಕೆಳಗೆ ಅಂಗಾತ ಬಿದ್ದು ಸತ್ತು ಹೋಗಿರುತ್ತಾನೆ. ಕತೆ ವಿಷಾದದ ದುರಂತದಲ್ಲಿ ಮುಕ್ತಾಯವಾಗುತ್ತದೆ.

ಹಾಗೆ ನೋಡಿದರೆ ಸಂಕಲನದ ಬಹುತೇಕ ಕತೆಗಳು ದುರಂತದಲ್ಲೇ ಕೊನೆಗಾಣುತ್ತವೆ. ಈ ಕತೆಗಳನ್ನು ನಾನು ಪಥನಮುಖ ಚಲನೆಯ ಕಥೆಗಳು ಎಂದು ಕರೆಯಲು ಬಯಸುತ್ತೇನೆ. ಭಜಿ ಅಂಗಡಿಯ ಮಲ್ಲಕ್ಕನ ಹೊಟೇಲ್ ಸುಡುವದು, 'ದಿವ್ಯ ಮೌನದ ಸಂತ' ಕಥೆಯಲ್ಲಿ ಸಂತನ ಕೊಲೆಯಾಗುವದರಲ್ಲಿ ಕಥೆ ಅಂತ್ಯಗೊಳ್ಳುವುದು, 'ತಲ್ಲಣ' ಕಥೆಯಲ್ಲಿ ಬಸನಿಂಗುವಿನ ಸಾವು ಇವೆಲ್ಲ ಈ ಹೇಳಿಕೆಗೆ ಪೂರಕವಾಗಿವೆ.

ವಿನಾಕಾರಣ ದ್ವೇಷದ ಕಿಡಿಯೊಂದು ಇಲ್ಲಿಯ ಕಥೆಗಳಲ್ಲಿ ಹೊಗೆಯಾಡುತ್ತಾ ಕೇಡುಗೈಯುತ್ತಲೇ ಹೋಗುತ್ತದೆ. ಇಲ್ಲಿ ಬಲಿಯಾಗುವ ಯಾರೊಬ್ಬರೂ ತಪ್ಪಿತಸ್ತರಲ್ಲ ಎನ್ನುವುದು ಕೇಡಿನ ಭೀಕರತೆಯನ್ನು ಹೆಚ್ಚು ಮಾಡುತ್ತದೆ. ಕತೆಗಾರ ಮಲ್ಲಿಕಾರ್ಜುನ ಅವರು ಸಹಜವಾಗಿ ಕಟ್ಟಿದ ಕಥೆಗಳು ನಮ್ಮ ಅಂತರಂಗಕ್ಕೆ ಇಳಿಯುತ್ತವೆ. ಆದರೆ ಕೆಲವು ಸಲ ಅವರು ಮಹತ್ವಾಕಾಂಕ್ಷಿಯಿಂದ ಕಥೆಗಳಲ್ಲಿ ಇಣುಕಿದಾಗ ಕಥೆ ಓದುಗರ ಪರೀಧಿಯಿಂದ ದೂರ ಹೋಗುತ್ತದೆ ಎನ್ನಿಸುತ್ತದೆ, ಉದಾಹರಣೆಗೆ ಹೇಳುವದಾದರೆ 'ದಿವ್ಯ ಮೌನದ ಸಂತ' ಕಥೆಯಲ್ಲಿ ಸಾಕಷ್ಟು ರೋಚಕ ತಿರುವು ಮತ್ತು ನಿಗೂಢತೆಯಿಂದ ತನ್ನ ಒಡಲನ್ನು ತುಂಬಿಕೊಂಡಿದ್ದರೂ ಸಂತನ ಮಾತುಗಳಲ್ಲಿ ಬಂದ ಆಧ್ಯಾತ್ಮದ ನುಡಿಗಳು ಕಥೆಗೆ ಯಾವುದೇ ಶಕ್ತಿಯನ್ನು ತುಂಬಿಕೊಡದೆ ಹೋಗುತ್ತದೆ. ಎಲ್ಲಿಂದಲೋ ಬಂದ ಒಬ್ಬ ಸನ್ಯಾಸಿ ಕಾಡಿನಲ್ಲಿ ಹಾಯ್ದು ಹೋಗುವ ರಸ್ತೆಯನ್ನು ಊರವರ ಸಹಕಾರದಿಂದ ನಿರ್ಮಿಸಿ ಕೊನೆಗೆ ಊರ ಪುಂಡನೊಬ್ಬನಿಂದ ವಿನಾಕಾರಣ (ಹೆಣ್ಣಿನ ಶೀಲ ಭಂಗ ಮಾಡಿದ ಅಪರಾಧ ಹೊತ್ತು ಕೊಲೆಯಾಗುತ್ತಾನೆ. ಈ ಸಮಾಜದಲ್ಲಿ ಒಳ್ಳೆಯವರಿಗೆ ಕಾಲವಿಲ್ಲವೇ…? ಎಂಬ ಪ್ರಶ್ನೆ ಓದುಗರಲ್ಲಿ ಮೂಡುವುದರೊಂದಿಗೆ ಕಥೆ ವಿರಾಮ ಪಡೆಯುತ್ತದೆ.

'ತಣ' ಕತೆ ಕೂಡಾ ಮನ ಕರಗುವ ದುರಂತವನ್ನೇ ವಸ್ತುವನ್ನಾಗಿಸಿಕೊಂಡಿದೆ. ಈ ಜಗತ್ತು ಕಂಡ ಈ ಶತಮಾನದ ಮಹಾ ದುರಂತವಾದ ಕರೋನ ಎಂಬ ಮುವ್ಯಾಧಿ ಸೃಷ್ಟಿಸಿ ಹೋದ ದುರಂತವನ್ನು ಇನ್ನೂ ಕನ್ನಡ ಜಗತ್ತು ಕಥನವಾಗಿ ತರಲು ಕಾಯುತ್ತಿದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಈ ವಸ್ತುವನ್ನು ಹೊಂದಿದ ಕತೆ, ಕಾದಂಬರಿಗಳು ಬರತೊಡಗಿವೆ. ಕತೆಗಾರ ಮಲ್ಲಿಕಾರ್ಜುನ ಅವರು ಈ ವಸುವನ್ನು ಕಥೆಯಾಗಿ ಹೇಳಲು ಪ್ರಯತ್ನಿಸಿದ್ದಾರೆ. ಜೊತೆಗೆ ಅದರಲ್ಲಿ ಅವರ ಯಶಸ್ಸು ಸಾಧಿಸಿದ್ದು ಎದ್ದು ಕಾಣುತ್ತದೆ. ಆದರೆ ಈ ಕಥೆಯಲ್ಲಿ ಒಂದು ಕುಟುಂಬ ಮಾತ್ರ ತಲ್ಲಣಕ್ಕೆ ಒಳಗಾಗುತ್ತದೆಯೇ ವಿನಃ ಇಡೀ ಸಮುದಾಯವಲ್ಲ, ಉದ್ಯೋಗ ಹುಡುಕಿಕೊಂಡು ವೀರಭದ್ರನ ಬಡ ಕುಟುಂಬವೊಂದು ದೂರದ ರತ್ನಾಗಿರಿಗೆ ಹೋಗುತ್ತದೆ. ಆದರೆ ಆ ಊರಿನ ಗೌಡನ ಮಾತಿಗೆ ವಿರುದ್ಧವಾಗಿ ಹೋದ ಈ ಕುಟುಂಬವು ಆತನ ಕೆಂಗಣ್ಣಿಗೆ ಕಾರಣವಾಗುತ್ತದೆ. ಆದರೆ ದುರಂತವೆಂದರೆ ಇವರು ರತ್ನಾಗಿರಿಯಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಕರೋನ ಮಹಾಮಾರಿಯ ಕಾರಣದಿಂದ ಇವರಿರುವ ಪ್ರದೇಶ ಶೀಲ್‌ಡೌನ್‌ ಆಗಿ ಕೆಲಸಕ್ಕೆ ಹೋಗುವುದಕ್ಕೂ ಸಂಚಕಾರ ಬರುತ್ತದೆ. ಕಂಗಾಲಾದ ಆ ಕುಟುಂಬ ಮತ್ತೇ ತನ್ನ ಊರಿಗೆ ನಡೆಯುತ್ತ ಬವಣೆ ಪಡುತ್ತ ಹೇಗೋ ತಿರುಗಿ ಬರುತ್ತದೆ. ಅವರು ಬರುವ ವೇಳೆಗೆ ಇಡೀ ಭಾರತವೇ ಲಾಕ್‌ಡೌನ್‌ಗೆ ಒಳಗಾಗುತ್ತದೆ. ಇದರಿಂದ ಅವರಿಗೆ ಊರಲ್ಲಿ ಪ್ರವೇಶ ಸಿಗುವುದಿಲ್ಲ. ಹೇಗೋ ತನ್ನ ಮನೆಗೆ ಬಂದ ಬಸನಿಂಗುವನ್ನು ಜನ ಅಟ್ಟಾಡಿಸಿ ಹೊಡೆದು ಸಾಯಿಸುತ್ತಾರೆ. ದೈವದ ಕ್ರೌರ್ಯದ ಮುಂದೆ ಮಾನವ ನಿರ್ಮಿತ ಕೌರ್ಯ ನಮ್ಮ ಸಂವೇದನೆಯನ್ನು ಕಲಕುತ್ತದೆ.

'ಮಹಾಪೂರ' ಕಥೆಯು ಆಣೆಕಟ್ಟಿನ ನಿರ್ಮಾಣದಿಂದ ಉಂಟಾಗುವ ಹಿನ್ನೀರಿನ ಪರಿಣಾಮದಿಂದ ಗ್ರಾಮಸ್ಥರ ಪಡುವ ಬವಣೆಯ ಧಾರುಣ ಚಿತ್ರಣವಿದೆ. ಸಮಾಜಮುಖಿ ಜನ ಪ್ರತಿನಿಧಿಯೊಬ್ಬರ ದೂರದರ್ಶಿತ್ವದಿಂದ ಬರವನ್ನು ನೀಗಿಸುವ ದೃಷ್ಟಿಯಿಂದ ಕಟ್ಟಲ್ಪಡುವ ಆಣೆಕಟ್ಟಿನ ನಿರ್ಮಾಣ ಅವರ ಮರಣಾಂತರ ಅದರ ಹಿನ್ನೀರಿನಿಂದ ಜನರು ಪಡುವ ಸಂಕಟ, ಆತಂಕ ವರ್ಣನಾತೀತ, ಮೂರು ವರ್ಷಕೊಮ್ಮೆ ಕಟ್ಟೆಯಲ್ಲಿ ಹೆಚ್ಚಿನ ನೀರು ನಿಲ್ಲಿಸಿದಾಗ ಅಲ್ಲಿಯ ಜನಜೀವನದ ದಯನೀಯ ಬದುಕು, ದನ ಕರುಗಳ ಗೋಳಿನ ಚಿತ್ರಣ ಮನ ಕರಗುವಂತಿದೆ.

‘ದೀಡೆಕೆರೆ ಜಮೀನು' 'ತಪ್ಪಂಡ ಋಣ ಮುಕ್ತ' ಇತ್ಯಾದಿ ಕತೆಗಳಲ್ಲಿ ಕೂಡ ಲೇಖಕರು ಕಥೆಯ ಮುನ್ನೆಡೆಗಾಗಿ ಸಂಭಾಷಣೆಗಳನ್ನು ನೆಚ್ಚಿಕೊಂಡಿದ್ದಾರೆ. ಇದು ಕಷ್ಟದ ದಾರಿ. ಆದರೆ ಕಥೆಗಾರರಿಗೆ ಇದು ಇಷ್ಟವಾದಂತಿದೆ. ಜೊತೆಗೆ ಕಥನ ಸಂವಹನಕ್ಕೆ ಒಂದಿನಿತೂ ತಡೆ ಎನಿಸದ ಹಾಗೆ ಅವರು ಸಂಭಾಷಣೆಯನ್ನು ನಿರ್ವಹಿಸಬಲ್ಲವರಾಗಿದ್ದಾರೆ. ಲೇಖಕರ ಬಹುಶೃತ ಜ್ಞಾನ ಎಲ್ಲ ಕಥೆಗಳಲ್ಲಿ ಚೆಲ್ಲುವರೆದಿರುವುದರಿಂದ ಕಥೆಗಳ ಓದು ಸರಾಗವಾಗುವುದರೊಂದಿಗೆ ಗ್ರಾಮ ಪರಿಸರದ ಲೋಕವಿವರಗಳು ಓದುಗರನ್ನು ಹೃದ್ಯವಾಗಿ ತಟ್ಟುತ್ತವೆ. ಗ್ರಾಮದ ಸಾಮಾಜಿಕ ಆಚರಣೆಗಳು, ಅಲ್ಲಿಯ ವಸ್ತು ವೈವಿಧ್ಯತೆಗಳು, ಕಂಬಾರಶಾಲೆ, ಆಲದಮರದ ಕಟ್ಟೆ, ಜಮೀನು, ಬೆಟ್ಟಗುಡ್ಡಗಳು, ಹರಿವ ನದಿಯನ್ನು ದಾಟುವ ಸಾಧನಗಳು ಹೀಗೆ ಹಲವು ಬಗೆಯ ವಿವರಗಳು ಕಥೆಗಳ ಒಡಲಲ್ಲಿ ತುಂಬಿಕೊಂಡು ಕಥೆಗಳನ್ನು ಓದುವ ಸುಖವನ್ನು ಹೆಚ್ಚು ಮಾಡುತ್ತವೆ.

“ದೀಡೆಕರೆ ಜಮೀನು" ಕಥೆಯಲ್ಲಿಯ ರೈತನ ಸರಳ ಜೀವನ ಮತ್ತು ಆತನಿಗೆ ಅನಾಯಾಸ ದೊರೆಯಲಿದ್ದ ಭೂಮಿಯನ್ನು ಆತ ನಿರಾತಂಕದಿಂದ ತಿರಸ್ಕರಿಸಿ ತನ್ನ ದೀಡ ಎಕರೆ ಜಮೀನದಲ್ಲೇ ಉಪಜೀವನ ಮಾಡಿಕೊಂಡು ಇರುವ ಸಂಕಲ್ಪವನ್ನು ಮಾಡುವುದು ಓದುಗರ ಮನ ಗೆದೆಯುತ್ತದೆ. ನಾಲ್ಕು ಮೊಳ ಜಮೀನಿಗಾಗಿ ರಕ್ತಪಾತವೇ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ರೈತನ ಸರಳ ಜೀವನದ ಈ ಕತೆ ನಮ್ಮ ಮನಸ್ಸನ್ನು ಕಲಕುತ್ತದೆ.

ಕತೆಗಾರ ಮಲ್ಲಿಕಾರ್ಜುನ ಅವರಿಗೆ ಕಥೆ ಕಟ್ಟುವ ಕಲೆಗಾರಿಕೆ ಸಿದ್ಧಿಸಿದೆ. ಕಥೆಯ ಒಡಲಲ್ಲಿ ಸೇರಿಕೊಳ್ಳುವ ಯಾವ ಸಂಗತಿಯನ್ನೂ ಮುದ್ದಾಮ ಆಗಿ ರೋಚಕಗೊಳಿಸದೆ ನಿತಾಂತವಾಗಿ ಕತೆ ಹೇಳುವ ಅವರ ಶೈಲಿ ಇಷ್ಟವಾಗುತ್ತದೆ. ಅವರು ಇನ್ನಷ್ಟು ಬರೆಯಲಿ ಎಂದು ಆಶಿಸುತ್ತೇನೆ.

-ಬಾಳಾಸಾಹೇಬ ಲೋಕಾಪುರ