ದೀಪಕ್ ಶೋಧನ್ ಎಂಬ ನತದೃಷ್ಟ ಕ್ರಿಕೆಟಿಗ

ದೀಪಕ್ ಶೋಧನ್ ಎಂಬ ನತದೃಷ್ಟ ಕ್ರಿಕೆಟಿಗ

ಭಾರತದ ಪರ ತಾನಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದರೂ ಈ ವ್ಯಕ್ತಿಯ ಟೆಸ್ಟ್ ಜೀವನ ಮೂರೇ ಪಂದ್ಯಗಳಿಗೆ ಮುಗಿದು ಹೋದದ್ದು ದುರಂತವೇ ಸರಿ. ಇದು ಆ ವ್ಯಕ್ತಿಗಾದ ನಷ್ಟವೋ ಅಥವಾ ಭಾರತ ಕ್ರಿಕೆಟ್ ತಂಡಕ್ಕೆ ಆದ ನಷ್ಟವೋ ನಿರ್ಧಾರ ಮಾಡುವುದು ಈಗ ಕಷ್ಟ. ಲಾಲಾ ಅಮರನಾಥ್ ಭಾರತದ ಪರ ತನ್ನ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಮೊದಲ ವ್ಯಕ್ತಿ. ಮೇಲೆ ಹೇಳಿದ ವ್ಯಕ್ತಿ ಎರಡನೇಯವರು. ಅದೂ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ವ್ಯಕ್ತಿ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸುವುದು ಅಚ್ಚರಿಯ ಸಂಗತಿಯೇ ಸರಿ. ಆ ವ್ಯಕ್ತಿಯೇ ದೀಪಕ್ ಶೋಧನ್ ಅಥವಾ ರೋಷನ್ ಹರ್ಷದ್ಲಾಲ್ ಶೋಧನ್.  

ಅಕ್ಟೋಬರ್ ೧೮, ೧೯೨೮ರಂದು ಗುಜರಾತಿನ ಅಹಮದಾಬಾದ್ ನಲ್ಲಿ ಜನಿಸಿದ ದೀಪಕ್ ಬಾಲ್ಯದಿಂದಲೂ ಕ್ರಿಕೆಟ್ ಆಟದಲ್ಲಿ ಆಸಕ್ತಿಯನ್ನು ಹೊಂದಿದ್ದರು. ಇವರು ಎಡಗೈ ದಾಂಡಿಗ ಹಾಗೂ ಎಡಗೈ ಮಧ್ಯಮ ವೇಗದ ಬೌಲರ್ ಆಗಿದ್ದರು. ರಣಜಿ ಪಂದ್ಯಗಳಲ್ಲಿ ಗುಜರಾತ್ ಹಾಗೂ ಬರೋಡಾ ತಂಡಗಳಿಗೆ ಆಡಿದ ಇವರು ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಯಾದದ್ದೇ ಒಂದು ಅನಿರೀಕ್ಷಿತ ಸಂದರ್ಭದಲ್ಲಿ. ೧೯೫೨ರಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಟೆಸ್ಟ್ ಸರಣಿ ಆಡಲು ಬಂದಾಗ ಶೋಧನ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಪಾಕಿಸ್ತಾನದ ವಿರುದ್ಧ ಆಡಲಾದ ಅಭ್ಯಾಸ ಪಂದ್ಯವೊಂದರಲ್ಲಿ ಇವರು ಪಶ್ಚಿಮ ವಲಯವನ್ನು ಪ್ರತಿನಿಧಿಸಿದ್ದರು. ಆ ಪಂದ್ಯದಲ್ಲಿ ಇವರು ಅಜೇಯ ೮೯ ರನ್ ಹೊಡೆದಿದ್ದರು. ಕೊಲ್ಕತ್ತಾದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯಕ್ಕೆ ಇವರು ೧೨ ನೇ ಆಟಗಾರರಾಗಿ ಆಯ್ಕೆಯಾಗಿದ್ದರು. ಆದರೆ ಪಂದ್ಯಕ್ಕೂ ಮೊದಲು ವಿಜಯ್ ಹಜಾರೆ ಗಾಯಾಳುವಾದ್ದರಿಂದ ಶೋಧನ್ ಅವರಿಗೆ ಟೆಸ್ಟ್ ತಂಡದ ಬಾಗಿಲು ತೆರೆಯಿತು. ಆದರೆ ಅವರಿಗೆ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಆಟವಾಡಲು ಕ್ರೀಸಿಗೆ ಕಳುಹಿಸಿದ್ದು ೮ನೇ ಆಟಗಾರನಾಗಿ. ಆಗ ಭಾರತ ತಂಡ ೧೭೯ ರನ್ ಗಳಿಗೆ ತನ್ನ ೬ ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಶೋಧನ್ ತಮ್ಮ ನೈಜ ಪ್ರತಿಭೆಯ ಅನಾವರಣ ಮಾಡಿದ್ದೇ ತಮ್ಮ ಈ ಚೊಚ್ಚಲ ಪಂದ್ಯದಲ್ಲಿ. ಮೊದಲ ಪಂದ್ಯವನ್ನಾಡುತ್ತಿರುವ ಶೋಧನ್ ಅವರಿಂದ ಭಾರತ ತಂಡ ಹೆಚ್ಚೇನೂ ನಿರೀಕ್ಷೆ ಮಾಡುತ್ತಿರಲಿಲ್ಲ. ಆದರೆ ಶೋಧನ್ ಎಲ್ಲರ ನಿರೀಕ್ಷೆಗೂ ಮೀರಿ ಶತಕವನ್ನು ಬಾರಿಸಿಯೇ ಬಿಟ್ಟರು. ಅದೂ ತಂಡ ೯ ವಿಕೆಟ್ ಕಳೆದು ಕೊಂಡ ಬಳಿಕ. 

ಭಾರತದ ೯ ವಿಕೆಟ್ ಪತನವಾದಾಗ ಶೋಧನ್ ೯೨ರಲ್ಲಿದ್ದರು. ಈ ಅವಕಾಶ ಕೈಚೆಲ್ಲಿದರೆ ತನ್ನ ಶತಕ ತಪ್ಪಿ ಹೋಗುತ್ತದೆ ಎಂಬ ಅರಿವಿದ್ದ ಇವರು ಬೆನ್ನು ಬೆನ್ನಿಗೇ ಎರಡು ಬೌಂಡರಿಗಳನ್ನು ಬಾರಿಸಿಯೇ ಬಿಟ್ಟರು. ತಾನಾಡಿದ ಪ್ರಥಮ ಪಂದ್ಯದಲ್ಲಿ ಅದೂ ೮ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ದಾಂಡಿಗ ಶತಕ ಹೊಡೆದದ್ದು ಅಪರೂಪದಲ್ಲಿ ಅಪರೂಪದ ಘಟನೆ ಆಗಿತ್ತು. ಇವರ ಹಾಗೂ ಕೊನೆಯ ದಾಂಡಿಗ ಗುಲಾಮ್ ಅಹ್ಮದ್ ನಡುವಿನ ಜೊತೆಯಾಟದಲ್ಲಿ ೪೦ ರನ್ ಗಳು ಹರಿದು ಬಂದವು. ಶೋಧನ್ ಈ ಪಂದ್ಯದಲ್ಲಿ ೧೧೦ ರನ್ ಗಳಿಸಿದರು. ಈ ಟೆಸ್ಟ್ ಪಂದ್ಯದ ಸ್ವಾರಸ್ಯಕರವಾದ ಸಂಗತಿಯೆಂದರೆ ಭಾರತದ ೧೦ ದಾಂಡಿಗರೂ ಎರಡಂಕೆಯ ಮೊತ್ತ ಗಳಿಸಿದ್ದರು. ದೀಪಕ್ ಶೋಧನ್ ಮೂರು ಅಂಕೆಯ ಮೊತ್ತ ದಾಖಲಿಸಿದ್ದರು. ಇವರ ಈ ಆಟದಿಂದ ಸೋಲುವತ್ತ ಮುಖ ಮಾಡಿದ್ದ ಭಾರತ ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಸಫಲವಾಯಿತು.

ನಂತರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಶೋಧನ್ ಆಯ್ಕೆಯಾದರು. ವೆಸ್ಟ್ ಇಂಡೀಸ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ೪೫ ಮತ್ತು ೧೧ ರನ್ ಹೊಡೆದರು. ಆದರೆ ಅಚ್ಚರಿಯ ರೀತಿಯಲ್ಲಿ ಅವರನ್ನು ಮುಂದಿನ ಮೂರು ಟೆಸ್ಟ್ ಪಂದ್ಯಗಳಿಂದ  ಕೈಬಿಟ್ಟರು. ಸರಣಿಯ ಕೊನೆಯ ಟೆಸ್ಟ್ ನಲ್ಲಿ ಸ್ಥಾನ ಪಡೆದರೂ ಅನಾರೋಗ್ಯದ ಕಾರಣದಿಂದ ಶೋಧನ್ ಮೊದಲ ಇನ್ನಿಂಗ್ಸ್ ನಲ್ಲಿ ಆಟವಾಡಲಿಲ್ಲ. ಕೊನೆಯ ಇನ್ನಿಂಗ್ಸ್ ನಲ್ಲಿ ಕೊನೆಯ ದಾಂಡಿಗನಾಗಿ ಆಟವಾಡಿದ ಶೋಧನ್ ಗಳಿಸಿದ ರನ್ ಅಜೇಯ ೧೫. ಈ ಟೆಸ್ಟ್ ಪಂದ್ಯವೇ ಶೋಧನ್ ಅವರ ಕೊನೆಯ ಪಂದ್ಯವಾಗಲಿದೆ ಎಂದು ಯಾವ ಕ್ರಿಕೆಟ್ ಅಭಿಮಾನಿಯೂ ಯೋಚನೆ ಮಾಡಿರಲಿಲ್ಲ.

ವಿಚಿತ್ರ ಸಂಗತಿಯೆಂದರೆ ನಂತರದ ದಿನಗಳಲ್ಲಿ ಯಾವ ಟೆಸ್ಟ್ ಪಂದ್ಯಗಳಿಗೂ ಶೋಧನ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಿಲ್ಲ. ಕ್ರಿಕೆಟ್ ಲೋಕದ ಹೀನ ರಾಜಕೀಯಕ್ಕೆ ಒಂದು ಉತ್ತಮ ಪ್ರತಿಭೆ ಕಮರಿ ಹೋಯಿತು. ಆ ಸಮಯದಲ್ಲಿ ತಂಡದಲ್ಲಿ ವೀನೂ ಮಂಕಡ್ ಮತ್ತು ವಿಜಯ್ ಹಜಾರೆ ಇವರುಗಳ ಬೆಂಬಲಿಗರ ಪ್ರತ್ಯೇಕ ಗುಂಪುಗಳಿದ್ದುವು. ಇವರುಗಳ ಕ್ಷುಲ್ಲುಕ ಕ್ರೀಡಾ ರಾಜಕೀಯದ ದಾಳಕ್ಕೆ ಸಿಕ್ಕ ಕಾಯಿಯಾದರು. ಉತ್ತಮ ಕ್ರೀಡಾ ಪ್ರತಿಭೆಯೊಂದಕ್ಕೆ ಸೂಕ್ತ ಅವಕಾಶ ನೀಡದೇ ಶೋಧನ್ ಅವರ ಕ್ರೀಡಾ ಬದುಕು ಕಮರಿ ಹೋದದ್ದು ನಮ್ಮ ಭಾರತದ ಕ್ರಿಕೆಟ್ ಇತಿಹಾಸದ ದುರಂತಗಳಲ್ಲಿ ಒಂದು. 

ದೀಪಕ್ ಶೋಧನ್ ಅವರು ೪೩ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ೩೧.೬೧ರ ಸರಾಸರಿಯಲ್ಲಿ ೧೮೦೨ ರನ್ ಪೇರಿಸಿದ್ದಾರೆ. ಅದರಲ್ಲಿ ೪ ಶತಕ ಹಾಗೂ ೭ ಅರ್ಧ ಶತಕಗಳು. ೨೬೧ ಇವರ ಗರಿಷ್ಟ ವೈಯಕ್ತಿಕ ರನ್. ಇವರು ಬೌಲಿಂಗ್ ನಲ್ಲೂ ೭೩ ವಿಕೆಟ್ ಗಳನ್ನು ಗಳಿಸಿದ್ದಾರೆ. ೪೯ ರನ್ ಗಳಿಗೆ ೫ ವಿಕೆಟ್ ಕಿತ್ತದ್ದು ಇವರ ಸರ್ವಶ್ರೇಷ್ಟ ಸಾಧನೆ. ಟೆಸ್ಟ್ ಪಂದ್ಯಗಳಲ್ಲಿ ನೀವು ಈಗಾಗಲೇ ಓದಿರುವಂತೆ ಆಡಿದ್ದು ಮೂರು ಪಂದ್ಯಗಳನ್ನು ಮಾತ್ರ. ಒಂದು ಶತಕದೊಂದಿಗೆ ಒಟ್ಟು ೧೮೧ರನ್. ಇವರ ಸರಾಸರಿ ರನ್ ೬೦.೩೩. ಈ ಸರಾಸರಿಯು ಈಗಲೂ ಓರ್ವ ಮಾಜಿ ಭಾರತೀಯ ಆಟಗಾರನೊಬ್ಬನ ಗರಿಷ್ಟ ಸರಾಸರಿ ಮೊತ್ತ ಎನ್ನುವುದೇ ಇವರ ಸಾಧನೆಯನ್ನು ತಿಳಿಸುತ್ತದೆ. 

ದೀಪಕ್ ಶೋಧನ್ ಅವರ ಮೊದಲ ಪಂದ್ಯದ ಶತಕದ ಬಳಿಕ ವರದಿಗಾರರೊಬ್ಬರು ‘ನೀವು ಮೊದಲ ಶತಕದ ಹೊಸ್ತಿಲಿನಲ್ಲಿರುವಾಗ ೯ ನೇ ವಿಕೆಟ್ ಪತನವಾದಾಗ ನಿಮಗೆ ಏನು ಅನಿಸಿತು?’ ಎಂದು ಕೇಳಿದರು. ಆಗ ಶೋಧನ್ ಹೇಳಿದ್ದು ‘ ಆ ಟೆಸ್ಟ್ ನಲ್ಲಿ ೯ ವಿಕೆಟ್ ಗಳು ಪತನವಾದಾಗ ಎದುರಾಳಿ ಪಾಕಿಸ್ತಾನ ತಂಡದವರು ತುಂಬಾ ಬಿಗುವಾದ ಫೀಲ್ಡಿಂಗ್ ಸೆಟ್ ಮಾಡಿದ್ದರು. ನಾನು ಮೊದಲಿಂದಲೂ ಆಕ್ರಮಣ ಶೈಲಿಯ ಹೊಡೆತಗಾರ. ಆ ಕಾರಣದಿಂದಲೇ ನಾನು ಬೆನ್ನು ಬೆನ್ನಿಗೇ ಎರಡು ಬೌಂಡರಿಗಳನ್ನು ಬಾರಿಸಿ ನನ್ನ ಶತಕ ಪೂರ್ಣಗೊಳಿಸಿದೆ".

ತಂಡದ ಒಳಗಿನ ಕೀಳು ರಾಜಕೀಯಕ್ಕೆ ಬಲಿಯಾದ ದೀಪಕ್ ಶೋಧನ್ ಅವರನ್ನು ನಿವೃತ್ತಿಯ ಬಹು ಸಮಯದ ನಂತರ ವರದಿಗಾರರೊಬ್ಬರು ಪ್ರಶ್ನಿಸಿದಾಗ ‘ನಮ್ಮ ತಂಡದಲ್ಲಿ ಎರಡು ಬಣಗಳಿದ್ದವು. ವಿನೂ ಮಂಕಡ್ ಒಮ್ಮೆ ನನ್ನ ಬಳಿ ಬಂದು  ಕೇಳಿದರು, ‘ನೀನು ಯಾವ ಕಡೆ ಇದ್ದಿಯಾ? ನನ್ನ ಕಡೆಯೋ ಅಥವಾ ವಿಜಯ್ ಹಜಾರೆ ಕಡೆಯೋ ಎಂದು’. ನಾನದಕ್ಕೆ ಹೇಳಿದೆ ‘ನಾನು ಭಾರತದ ಕಡೆ’ ಎಂದು ಹೇಳಿದ್ದಾಗಿ ನೆನಪು ಮಾಡಿಕೊಂಡರು. ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ಹೊಕ್ಕಿ ಆಗಿದೆ ಎಂದು ದೀಪಕ್ ಶೋಧನ್ ಅವರ ಜೀವನದಿಂದ ತಿಳಿದು ಬರುತ್ತದೆ.

ಭಾರತದ ಪರ ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದವರು ಕೇವಲ ಹದಿನೈದು ಮಂದಿ ಆಟಗಾರರು ಮಾತ್ರ. ಅದರಲ್ಲಿ ಎರಡನೆಯವರು ದೀಪಕ್ ಶೋಧನ್ ಅವರು. ಬಹಳಷ್ಟು ಮಂದಿ ಇವರನ್ನು ಮರೆತೇ ಹೋಗಿರಬಹುದು. ‘ಕ್ರಿಕೆಟ್ ದೇವರು' ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಕೂಡಾ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಹೊಡೆದಿರಲಿಲ್ಲ. ಭಾರತ ತಂಡದ ಪರವಾಗಿ ಇನ್ನಷ್ಟು ಸಾಧನೆಗಳನ್ನು ಮಾಡುವ ಶಕ್ತಿ ಇದ್ದ ಕ್ರೀಡಾ ಪ್ರತಿಭೆ ದೀಪಕ್ ಶೋಧನ್ ಅವರ ಕ್ರೀಡಾ ಬದುಕು ಕೇವಲ ಮೂರು ಟೆಸ್ಟ್ ಪಂದ್ಯಗಳಿಗೇ ಸೀಮಿತವಾದದ್ದು ಮಾತ್ರ ಅತೀ ದೊಡ್ದ ದುರಂತ.

ಶೋಧನ್ ಅವರು ತಮ್ಮ ೮೭ನೇ ವಯಸ್ಸಿನಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ಮೇ ೧೬, ೨೦೧೬ರಲ್ಲಿ ನಿಧನ ಹೊಂದಿದರು. ಅವರು ನಿಧನ ಹೊಂದುವ ಸಮಯದಲ್ಲಿ ಭಾರತದ ಅತೀ ಹಿರಿಯ ಮಾಜಿ ಕ್ರಿಕೆಟಿಗರಾಗಿದ್ದರು. ನಿಧನದ ಸಮಯದಲ್ಲೂ ಅವರ ಸುದ್ದಿ ಪ್ರಕಟಿಸಿದ್ದು ಬೆರಳೆಣಿಕೆಯಷ್ಟು ಪತ್ರಿಕೆಗಳು ಮಾತ್ರ. ದೀಪಕ್ ಶೋಧನ್ ಬದುಕಿದ್ದರೆ ಮೊನ್ನೆ (ಅಕ್ಟೋಬರ್ ೧೮) ತಮ್ಮ ೯೨ನೇ ಜನ್ಮ ದಿನ ಆಚರಿಸುತ್ತಿದ್ದರು. ಅನಿರೀಕ್ಷಿತವಾಗಿ ಅವರ ಬಗ್ಗೆ ಸುಳಿವು ಸಿಕ್ಕಿ ಹುಡುಕಾಡಿದಾಗ ಇಷ್ಟೆಲ್ಲಾ ಮಾಹಿತಿ ಸಿಕ್ಕಿತು. 

ಚಿತ್ರ ಕೃಪೆ: ಅಂತರ್ಜಾಲ ತಾಣ