ದೀಪಗಳ ಹಬ್ಬ : ಬಾಳ್ವೆಯನು ಬೆಳಗಲಿ ಬೆಳಕು

ದೀಪಗಳ ಹಬ್ಬ : ಬಾಳ್ವೆಯನು ಬೆಳಗಲಿ ಬೆಳಕು

ದೀಪಗಳ ಹಬ್ಬ ಮತ್ತೆ ಬಂದಿದೆ. ನಾವು ನೀವೆಲ್ಲ ಅದಕ್ಕಾಗಿ ಸಡಗರ ಸಂಭ್ರಮಗಳಿಂದ ಅಣಿಯಾಗಿದ್ದೇವೆ. ಆದರೆ ಯಾವುದೇ ಹಬ್ಬದ ಆಚರಣೆಯ ಹಿಂದಿರುವ ಅರ್ಥವನ್ನು ಅರಿತು ಆಚರಿಸುವುದಲ್ಲಿ ಅದರದೇ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿಯ ಆಚರಣೆಯ ಉದ್ದೇಶ, ಅದರ ಹಿಂದಿರುವ ಪರಂಪರೆಗಳನ್ನು ತಿಳಿಯುವ ಸಣ್ಣ ಪ್ರಯತ್ನವಿದು. ಬನ್ನಿ ಅರಿವಿನ ದೀವಿಗೆಯ ಬೆಳಗೋಣ….

 

    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ ಕನ್ನಡ ರಾಜ್ಯೋತ್ಸವ ಹಾಗೂ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

    ``ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ

     ಮೃತ್ಯೋರ್ಮಾ ಅಮೃತಂಗಮಯ, ಓಂ ಶಾಂತಿ, ಶಾಂತಿ, ಶಾಂತಿಃ’’

     "ದೀಪಯತಿ ಸ್ವಂ ಪರ ಚ ಇತಿ ದೀಪ:"

    ದೀಪಗಳ ಹಬ್ಬ ಮತ್ತೆ ಬಂದಿದೆ. ನಾವು ನೀವೆಲ್ಲ ಅದಕ್ಕಾಗಿ ಸಡಗರ ಸಂಭ್ರಮಗಳಿಂದ ಅಣಿಯಾಗಿದ್ದೇವೆ. ಮನೆಯಲ್ಲಿ ಅಮ್ಮ ತಮಗಾಗಿ ಸಾಕಷ್ಟು ಸಿಹಿ ಕಜ್ಜಾಯ, ತಿಂಡಿಗಳನ್ನು ತಯಾರಿಸುತ್ತಾಳೆ. ನಾವೆಲ್ಲಾ ಬೆಳೆಗ್ಗೆ ಎದ್ದು ಶುಭ್ರವಾಗಿ ಹೊಸ ಬಟ್ಟೆಗಳಾನ್ನು ತೊಟ್ಟು ಸಂಭ್ರಮಿಸುತೇವೆ. ಸಂಜೆಯಾಯಿತೆಂದರೆ ಮನೆಮುಂದೆ ಹಣತೆಗಳಾನ್ನು ಹಚ್ಚಿ, ಪಟಾಕಿಯನ್ನು ಸಿಡಿಸಿ ಹಬ್ಬವನ್ನು ಸಡಗರದಿಂದ ಆಚರಿಸುತ್ತೇವೆ.

    ಸ್ನೇಹಿತರೆ, ದೀಪಾವಳಿ ಎಂದರೆ ಇಷ್ಟೇ ಅಲ್ಲ. ಇದರ ಆಚರಣೆಯ ಹಿಂದೆ ಅದರದೇ ಆದ ಮಹತ್ವವಿದೆ. ಬನ್ನಿ ಹಾಗಾದರೆ ದೀಪಾವಳಿ ಎಂದರೆ ಏನು? ಅದರ ಆಚರಣೆಯ ಹಿಂದಿರುವ ವಿಶೇಷವೇನು ಎನ್ನುವುದನ್ನು ಸ್ಥೂಲವಾಗಿ ತಿಳಿದುಕೊಳ್ಳಲು ಪ್ರಯತ್ನಿಸೋಣ.

    ದೀಪಗಳ ಹಬ್ಬ, ದೀಪಾವಳಿ ಹಿಂದೂಗಳ ಹಬ್ಬಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿರುವ ಹಬ್ಬ. ಅಜ್ಞಾನದ ತಿಮಿರನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗುವುದೇ ಈ ದೀಪಾವಳಿ. ಕತ್ತಲೆಯಿಂದ ಬೆಳಕಿನಡೆಗೆ ನಡೆಸುವುದೇ ದೀಪಕ್ಕಿರುವ ಶಕ್ತಿ. ನಮ್ಮ ಹಿರಿಯರು ದೀಪಕ್ಕೆ ಬಹಳಷ್ಟು ಅರ್ಥವನ್ನು ಕಂಡುಕೊಂಡಿದ್ದಾರೆ. ಅದರ ಪ್ರಕಾರ ಮನೆಯನ್ನು ಬೆಳಗಲು ಐದು ಬಗೆಯ ದೀಪಗಳು ಅಗತ್ಯ. ಅವುಗಳೆಂದರೆ, ದೇವರ ಎದುರಿನ ನಂದಾದೀಪ, ಮನೆಯ ಯಜಮಾನನಲ್ಲಿನ ದಕ್ಷತೆ, ಮನೆಯ ಗೃಹಿಣಿಯಲ್ಲಿನ ಪ್ರಸನ್ನತೆ, ಮನೆಯಲ್ಲಿ ಆಟವಾಡಿ ನಲಿಯುತ್ತಿರುವ ಮಕ್ಕಳು ಹಾಗೂ ಮನೆಗೆ ಆಗಮಿಸಿದ ಅತಿಥಿ ಅಭ್ಯಾಗತರ ಸಂತೋಷ. ಇದರಲ್ಲಿ ಯಾವೊಂದು ಅಂಶವಿಲ್ಲದಿದ್ದರೂ ಆ ಮನೆ ಮತ್ತು ಮನೆಯಲ್ಲಿನ ಮನಸ್ಸುಗಳು ಮಸುಕಾಗುತ್ತವೆ.

    ಶ್ರೀರಾಮಚಂದ್ರನು ತಾನು ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂತಿರುಗಿದಾಗ ಅಲ್ಲಿನ ಪ್ರಜೆಗಳು ತಾವು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ಊರಿನ ಬೀದಿಗಳನ್ನು ಸುಗಂಧಿತದ್ರವ್ಯಗಳಿಂದ ಯುಕ್ತವನ್ನಾಗಿಸಿ ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವವನ್ನು ಆಚರಿಸಲಾಗುತ್ತದೆ.

ದೀಪಾವಳಿಯನ್ನು ಒಟ್ಟು ನಾಲ್ಕು ದಿನಗಳ ಕಾಲ ಆಚರೊಸಲಾಗುತ್ತದೆ. ಅದೆಂದರೆ, ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ)

    ಧನತ್ರಯೋದಶಿಯಂದು ಚಿನ್ನವನ್ನು ಖರೀದಿಸುವುದರಿಂದ ವರ್ಷವಿಡೀ ಮನೆಯಲ್ಲಿ ಲಕ್ಷ್ಮಿಯು ನೆಲೆಯಾಗುತ್ತಾಳೆ. ವ್ಯವಹಾರಸ್ಥರು ಲಕ್ಷ್ಮಿ ಪೂಜೆಯಂದು ಆಯಾ ವರ್ಷದ ಜಮಾ ಖರ್ಚಿನ ಲೆಖ್ಖವನ್ನು ನೋಡುವುದಿರುತ್ತದೆ. ಹಾಗೆ ಧನತ್ರಯೋದಶಿಯವರೆಗಿನ ಲೆಖ್ಖವನ್ನು ನೋಡಿ ಉಳಿದ ಸಂಪತ್ತನ್ನು ಸತ್ಕಾರ್ಯಗಳಿಗೆ ಬಳಸುವುದರಿಂದ ಲಕ್ಷ್ಮಿಯ ಶಾಶ್ವತ ಕಟಾಕ್ಷವು ಪ್ರಾಪ್ತವಾಗುವುವು. 

    ನರಕ ಚತುರ್ದಶಿಯಂದು ಶ್ರೀ ಕೃಷ್ಣನು ಅಸುರೀ ಶಕ್ತಿಯ ಸಂಕೇತವಾದ ನರಕಾಸುರನನ್ನು ವಧಿಸಿದನು. ಇದೇ ಕಾರಣದಿಂದ ಆ ದಿನವನ್ನು ‘ನರಕ ಚತುರ್ದಶಿ’ ಎನ್ನಲಾಗುತ್ತದೆ.ಯಾವಾಗ ಸಜ್ಜನಶಕ್ತಿಯು ಜಾಗೃತಗೊಂಡು ಸಂಘಟಿತವಾಗಿ ಕಾರ್ಯ ಮಾಡುತ್ತದೆಯೋ ಆಗ ದುರ್ಜನ ಶಕ್ತಿಯ ಪ್ರಭಾವವು ಕಡಿಮೆಯಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿಯ ಅಸುರೀ ಪ್ರವೃತ್ತಿ ಹಾಗೂ ವಿಧ್ವಂಸಕ ಪ್ರವೃತ್ತಿಯನ್ನು ಕಡಿಮೆ ಮಾಡಿ ದೈವೀಪ್ರವೃತ್ತಿಯನ್ನು ಸ್ಥಾಪಿಸಬೇಕು. ಇದರಿಂದ ಮುಂದೆ ಸಮಾಜ ಹಾಗೂ ರಾಷ್ಟ್ರದ ಮೇಲೆ ಪರಿಣಾಮವಾಗುತ್ತದೆ. ಇದುವೇ ನರಕ ಚತುರ್ದಶಿಯ ಸಂದೇಶ.

    ಚತುರ್ದಶಿಯಂದು ಮಾಡುವ ತೈಲಾಭ್ಯಂಜನ ಸ್ನಾನಕ್ಕೂ ಅದರದೇ ಆದ ಮಹತ್ವವಿದೆ. ಅಂದು ತೈಲದಲ್ಲಿ ಲಕ್ಷ್ಮಿ ದೇವಿಯೂ ನೀರಿನಲ್ಲಿ ಗಂಗಾಮಾತೆಯೂ ವಿಶೇಷವಗಿ ಸನ್ನಿಹಿತರಾಗುತ್ತರೆ. ಅಂದು ಬೆಳೆಗ್ಗೆ ಅಭ್ಯಂಗ ಸ್ನಾನವನ್ನು ಮಾಡುವುದರಿಂದ ಪ್ರತಿಯೊಬ್ಬರೂ ಶ್ರೀಲಕ್ಷ್ಮಿ ಹಾಗೂ ಗಂಗಾಮಾತೆಯ ಕೃಪೆಗೆ ಪಾತ್ರರಾಗಬಹುದು.

    ದೀಪಾವಳಿಯ ಅಮಾವಾಸ್ಯೆಯಂದು ಲಕ್ಶ್ಮಿಪೂಜೆಯನ್ನು ಮಾಡುವುದು ವಿಶೇಷ. ಹಿಂದೂ ಶಾಸ್ತ್ರಗಳ ಅನುಸಾರ ನಚಿಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವಿದು. ಅಂತೆಯೇ ಶ್ರೀ ಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ ಹೇಳಲಾಗುತ್ತದೆ. ಅಮಾವಾಸ್ಯೆಯೂ ಸಹ ಶುಭಸೂಚಕವೆನ್ನುವ ಸಂದೇಶ ಇದರ ಹಿಂದಿದ್ದಂತಿದೆ. ಅಮಾವಾಸ್ಯೆಯಂದು ಹೊರಗೆಲ್ಲಾ ಸಂಪೂರ್ಣ ಕತ್ತಲಾವರಿಸಿರುತ್ತದೆ. ಇದರಿಂದ ದೀಪಗಳ ಹೊಳಪು ಎಲ್ಲೆಲ್ಲೂ ಶೋಭಿಸುತ್ತದೆ. ಅಲ್ಲದೆ ಈ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳ ಫಸಲು ಮನೆಗೆ ಬಂದಿರುತ್ತದೆ. ರೈತರ ಕುಟುಂಬಗಳಲ್ಲಿ ಆನಂದ ಮನೆಮಾಡಿರುತ್ತದೆ. ಜನರ ಪರಿಶ್ರಮಕ್ಕೆ ತಕ್ಕ ಫಲ ಶ್ರೀದೇವರ ಕೃಪೆಯಿಂದ ಸಿಕ್ಕಿರುವುದಲ್ಲದೆ ಈ ಧವಸ ಧಾನ್ಯಗಳೇ ನಿಜವಾಗಿಯೂ ಲಕ್ಷ್ಮಿಸ್ವರೂಪವಾಗಿದೆ.

    ದೀಪಾವಳಿಯಂದು ಆಕಾಶ ಬುಟ್ಟಿಯನ್ನು ಮಾಡಿ ಅದರಲ್ಲಿ ದೀಪವಿಟ್ಟು ಆಕಾಶಕ್ಕೆ ಹಾರಿ ಬಿಡುವುದರಿಂದ ಹಿರಿಯರ ಆತ್ಮಗಳಿಗೆ ಶಾಂತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. 

    ಬಲಿಪಾಡ್ಯಮಿಯಂದು ಗೋಪೂಜೆ ಮಾಡುವುದು ಹಿಂದಿನಿಂದ ಬಂದಿರುವ ಪದ್ದತಿಯಾಗಿದ್ದು ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಅದರದೇ ಆದ ಮಹತ್ವವಿದೆ. ಗೋವನ್ನು ‘ಗೋಮಾತೆ’ ಎಂದು ಸಂಬೋಧಿಸಲಾಗುತ್ತದೆ. ಶ್ರೀ ಕೃಷ್ಣನಿಗೆ ಪ್ರಿಯವಾದ ಈ ಗೋಮಾತೆಯಲ್ಲಿ ಸಕಲ ದೇವತೆಗಳೂ ನೆಲೆಸಿದ್ದಾರೆ. ತನ್ನ ಹಾಲಿನಿಂದ ಜನ ಮಾನಸವನ್ನು ಪೋಷಿಸುವ ಗೋವು ತಾನು ಕೃಷಿಗಾಗಿ ಗೊಬ್ಬರ ಹಾಗೂ ಕೃಷಿಗೆ ಉಪಯುಕ್ತವಾಗುವ ಎತ್ತುಗಳಿಗೆ ಜನ್ಮನೀಡುತ್ತದೆ. ಹೀಗೆ ನಮಗಾಗಿ ತನ್ನ ಇಡೀ ಜೀವಮಾನವನ್ನು ತ್ಯಾಗ ಮಾಡುವ ಗೋವನ್ನು ಪೂಜಿಸುವುದರ ಮೂಲಕ ಆಕಳ ಬಗ್ಗೆ ನಮಗಿರುವ ಗೌರವವನ್ನು ತೋರ್ಪಡಿಸಲು ನಮ್ಮ ಹಿರಿಯರು ಈ ದಿನವನ್ನು ಮೀಸಲಿರಿಸಿದ್ದಾರೆ.

    ಇನ್ನು ಬಲಿಪಾಡ್ಯಮಿಯ ದಿನ, ಅದು ಬಲಿಚಕ್ರವರ್ತಿಯ ಜನ್ಮೋದ್ದಾರವಾದ ದಿನ. ಈ ದಿನ ಶ್ರೀ ಮಹಾವಿಷ್ಣುವು ವಾಮನ ಅವತಾರವನ್ನೆತ್ತಿ ಬಲಿಚಕ್ರವರ್ತಿಯಿಂದ ಆತನ ಸರ್ವಸ್ವವನ್ನು ದಾನವಾಗಿ ಪಡೆದ ದಿನ. ವಾಸ್ತವದಲ್ಲಿ ಬಲಿಯು ಒಬ್ಬ ಅಸುರ ಕುಲದವನಾಗಿದ್ದಾನೆ. ಆದರೆ ಅವನು ಉದಾರ ಮನಸ್ಸಿನಿಂದ ಭಗವಂತನಿಗೆ ಶರಣಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಅವನ ಜೀವನಕ್ಕೆ ಹೊಸ ಸ್ವರೂಪವನ್ನು ನೀಡಿ ಅವನನ್ನು ಉದ್ಧರಿಸಿದನು. ಪ್ರತಿಯೊಬ್ಬ ಮಾನವನೂ ಪ್ರಾರಂಭದಲ್ಲಿ ಅಜ್ಞಾನಿಯಾಗಿರುತ್ತಾನೆ. ಆದರೆ ಜ್ಞಾನ ಹಾಗೂ ದೈವೀ ಕೃಪೆಯಿಂದ ದೇವತ್ವಕ್ಕೇರಲು ಪ್ರಯೊಂದು ಆತ್ಮಕ್ಕೂ ಸಾಧ್ಯವೆನ್ನುವುದನ್ನು ನಾವು ಬಲಿಚಕ್ರವರ್ತಿಯ ಕಥೆಯಿಂದ ತಿಳಿಯಬಹುದಾದ ಸಂಗತಿ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮವೆತ್ತಿದರೂ ಅವನ ಪುಣ್ಯದಿಂದಾಗಿ ವಾಮನ ರೂಪದಲ್ಲಿ ಅವತರಿಸಿದ ಭಗವಂತನ ಕೃಪೆಯು ಅವನ ಮೇಲಾಯಿತು. ಅವನು ಸಾತ್ತ್ವಿಕ ಪ್ರವೃತ್ತಿಯುಳ್ಳ ದಾನಿಯಾಗಿದ್ದನು ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಸತ್ಯಮಾರ್ಗವನ್ನು ಬಿಡದೆ ಸಾಧಿಸಿದರೆ ಅಂತಹವರಿಗೆ ದೈವೀ ಕೃಪೆ ಸಿಕ್ಕಿಯೇ ಸಿಗುತ್ತದೆ, ಅಷ್ಟೆ ಅಲ್ಲ ಸಾವು ಸಹ ಅಂತಹವರಿಂದ ದೂರ ಓಡುತ್ತದೆ ಎನ್ನುವುದು ಬಲಿಚಕ್ರವರ್ತಿಯ ಜೀವನ ನಮಗೆ ತಿಳಿಸಿಕೊಡುವ ಪಾಠವಾಗಿದೆ.

    ಇಷ್ಟೇ ಅಲ್ಲದೆ ಆಶ್ವಯುಜ ಶುಕ್ಲ ಬಿದಿಗೆಯಂದು ‘ಯಮ ದ್ವಿತೀಯಾ’ ಅಥವಾ ಎಂದು ಆಚರಿಸಲಾಗುತ್ತದೆ. ಅಂದು ಯಮರಾಜನು ತನ್ನ ತಂಗಿ ಯಮಿಯ ಬಳಿ ತೆರಳಿ ಅವಳಿಗೆ ಶುಭ ಕೋರಿದ್ದ ದಿನವಾಗಿದೆ. ಅಂದು ಎಲ್ಲಾ ಅಣ್ಣಂದಿರೂ ತಮ್ಮ ತ್ಂಗಿಯರ ಮನೆಗೆ ಹೋಗಿ ಅಲ್ಲಿ ತಂಗಿಯ ಕೈಯ್ಯ ಸಿಹಿ ಅಡುಗೆಯನ್ನುಂಡು ಬರುವುದು ಪದ್ದತಿ.

 

ಜನಪದ ದೀವಳಿಗೆ:

    ದೀಪಾವಳಿ, ಇದು ಕೇವಲ ಹಣವಂತರ, ಹಬ್ಬವಲ್ಲ. ಬದಲಾಗಿ ಇದಕ್ಕೆ ಜನಪದ ದೀವಳಿಗೆಯ ಸ್ವರೂಪವೂ ಇದೆ. ಹಳ್ಲಿಗಾಡಿನ ಜನರು ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲಿಯೂ ಮಲೆನಾಡಿನ ಜನರು ಐದು ದಿನದ ಈ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ದೀಪಾವಳಿಯ ಈ ಸಮಯದಲ್ಲಿ ಆಚರಿಸಲ್ಪಡುವ ಅಂಟಿಗೆ ಪಿಂಟಿಗೆ, ಬುರೆ ಹಬ್ಬಗಳು ಮಲೆನಾಡಿನ ಪ್ರಮುಖ ವೈಶಿಷ್ಟ್ಯಪೂರ್ಣ ಆಚರಣೆಯಾಗಿದೆ.

    ಮಲೆನಾಡಿನವರಲ್ಲಿ ಆಚರಣೆಯಲ್ಲಿರುವ ಅಂಟಿಗೆ ಪಿಂಟಿಗೆಗೆ ಅದರದೇ ಆದ ಹಿನ್ನೆಲೆ ಇದೆ. ದೀಪಾವಳಿಯ ಸಮಯದಲ್ಲಿ ಊರಿನ ಕೆಲ ಯುವಕರು ಗುಂಪಾಗಿ ಹಬ್ಬಕ್ಕೆ ಕೆಲದಿನಗಳ ಮೊದಲೇ ತಮ್ಮಲ್ಲಿನ ಜನಪದ ಕಲೆಯ ಪ್ರದರ್ಶನಕ್ಕೆ ಸಜ್ಜಾಗುತ್ತಾರೆ. ಅದಕ್ಕಾಗಿ ಸಾಕಷ್ಟು ಅಭ್ಯಾಸದಲ್ಲಿ ತೊಡಗುವ ಯುವಕರು ದೀಪಗಳ ಹಬ್ಬದ ಹಿಂದಿನ ದಿನ ಅಂಟಿಗೆ ಪಿಂಟಿಗೆಯ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಹೀಗೆ ಒಮ್ಮೆ ಬೆಳಗಿದ ಜ್ಯೋತಿಯು ಮತ್ತೆ ಆರಿಹೋಗುವಂತಿಲ್ಲ. ತಂಡದ ಸದಸ್ಯರುಗಳು ಆ ಜ್ಯೋತಿಗೆ ಸದಾ ತೈಲವನ್ನು ಹಾಕುತ್ತಾ ಜ್ಯೋತಿಯು ಆರಿಹೋಗದಂತೆ ಕಾಪಾಡಿಕೊಳ್ಳಬೇಕೆನ್ನುವುದು ಅಂಟಿಗೆ ಪಿಂಟಿಗೆಯ ಪ್ರಮುಖ ನಿಯಮಗಳಲ್ಲಿ ಒಂದು. ತದನಂತರ ತಂಡದ ನಾಯಕನಾದವನು ಊರಲ್ಲಿನ ಮನೆ ಮನೆಗೂ ಭೇಟಿ ನೀಡಿ ಸುದ್ದಿ ಮುಟ್ಟಿಸಿ ಬರುತ್ತಾನೆ.ಆ ಬಳಿಕ ಸುಮಾರು ಎಂಟರಿಂದ ಹತ್ತು ಮಂದಿಯ ತಂಡ ಅಂಟಿಗೆ ಪಿಂಟಿಗೆ ಪದಗಳನ್ನು ಹೇಳಿಕೊಳ್ಳುತ್ತಾ ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ. ಇವರಿಗೆ ಆಯಾ ಮನೆಯ ಯಜಮಾನರು ತಾವು ಹೊಸ ಬಟ್ಟೆಯನ್ನೋ ಇಲ್ಲವೆ ತಮ್ಮ ಶ್ಕ್ತಿಗನುಸಾರವಾಗಿ ಧಾನ್ಯವನ್ನೋ ನೀಡಿ ಸತ್ಕರಿಸಬೇಕು.

    ದೀಪಾವಳಿಯ ಸಮಯದಲ್ಲಿ ನೀರು ತುಂಬುವ ದಿನದಂದು ಮಲೆನಾಡಿನ ಹಳ್ಳಿಯ ಜನರಾರೂ ರಾತ್ರಿ ಮಲಗಲಾರರು. ಇದಕ್ಕೆ ಕಾರಣವೆಂದರೆ ಅಂದು ಊರಿನ ಕೆಲ ಯುವಕರು ಗುಂಪು ಗುಂಪಾಗಿ ಹಳ್ಳಿಗರ ತೋಟಕ್ಕೆ ಕನ್ನ ಹಾಕುತ್ತಾರೆ. ತೋಟಗಳಲ್ಲಿ ಬೆಳೆದ ಹಣ್ಣು- ತರಕಾರಿಗಳನ್ನು ಕದ್ದು ತರುತ್ತಾರೆ. ಹೀಗೆ ಕದ್ದು ತರುವಾಗ ಸಮಯವಶಾತ್ ಸಿಕ್ಕಿ ಬಿದ್ದರೂ ಯಜಮಾನನು ಅವರಿಗೆ ಬೈಯ್ಯುವಂತಿಲ್ಲ, ಅದು ಆ ದಿನದ ನಿಯಮ! ಹೀಗೆ ಕಳ್ಳತನ ಮಾಡಿ ತಂದ ತರಕಾರಿ, ಹಣ್ಣುಗಳನ್ನು ಭೂಮಿ ಹುಣ್ಣಿಮೆಯಂದು ಭೂಮಿತಾಯಿಗೆ ನೈವೇದ್ಯಕ್ಕಾಗಿ ಮಾಡುವ ಅಡುಗೆಗಳಲ್ಲಿ ಬಳಸಲಾಗುತ್ತದೆ.

    ಇನ್ನು ಜನಪದರ ಪ್ರಕಾರ ದೀಪಾವಳಿ ಹಬ್ಬ ಆಚರಣೆಗೆ ಬರಲು ಕಾರಣವೆಂದು ಹೇಳಲಾಗುವ ವಿಶಿಷ್ಟ ಕಥೆಯೊಂದು ಹೀಗಿದೆ- ‘

    ಒಂದೂರಿನಲ್ಲಿ ಒಬ್ಬರಾಜನಿದ್ದನು. ಅವನಿಗೆ ಎರಡು ಹೆಣ್ಣು ಮಕ್ಕಳಿದ್ದರು. ರಾಜ್ಯವು ಸಮೃದ್ದಿಯಿಂದ ಕೂಡಿದ್ದ ಪ್ರಜೆಗಳೆಲ್ಲಾ ಸುಖ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಹೀಗಿರಲು ಒಮ್ಮೆ ರಾಜನು ತನ್ನೆರಡೂ ಮಕ್ಕಳನ್ನು ಕರೆದು ‘ತನ್ನ ರಾಜ್ಯದ ಸುಭಿಕ್ಷವಾಗಿರಲು ಕಾರಣವನ್ನು ತಿಳಿಸಿ’ ಎನ್ನಲು ಹಿರಿಯ ಮಗಳು ‘ಇದಕ್ಕೆಲ್ಲಾ ನಿನ್ನ ಆಡಳಿತವೇ ಕಾರಣ’ ಎನ್ನುತ್ತಾಳೆ. ಆದರೆ ಕಿರಿಯಳಾದ ದೀಪಾ ಮಾತ್ರವೆ ‘ಇದಕ್ಕೆಲ್ಲಾ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಕೃಪಾಕಟಾಕ್ಷವು ಕಾರಣ’ ಎಂದು ಹೇಳುವಳು. ಇದನ್ನು ಕೇಳಿದ ರಾಜನಿಗೆ ಕೋಪವುಕ್ಕಿ ಕಿರಿ ಮಗಳನ್ನು ರಾಜ್ಯದಿಂದಲೇ ಹೊರಹಾಕುತ್ತಾನೆ.

    ಹೀಗೆ ದೀಪಾ ಗಡಿಪಾರಾದ ಮೇಲೆ ರಾಜ್ಯದಲ್ಲೆಲ್ಲಾ ಕ್ಷಾಮವು ತಲೆದೋರುತ್ತದೆ. ಜನರು ಆಹಾರವಿಲ್ಲದೆ ಕಂಗಾಲಾಗುತ್ತಾರೆ. ಬಡತನವು ತಾಂಡವವಾಡುತ್ತದೆ. ಹೀಗಿರಲು ದೀಪಾಳಿಗೆ ತಾಯಿ ಶ್ರೀಲಕ್ಷ್ಮಿಯು ತಾನು ಪ್ರತ್ಯಕ್ಷವಾಗಿ ‘ನೀನು ನಿನ್ನ ತಂದೆಯ ಬಳಿ ಮರಳಿದೆಯಾದರೆ ನಿಮ್ಮ ರಾಜ್ಯವು ಪುನಃ ಸಂಋದ್ದಿಯನ್ನು ಕಾಣುತ್ತದೆ’ ಎಂದು ಅನುಗ್ರಹಿಸುತ್ತಾಳೆ. ಅದರಂತೆ ದೀಪಾಳು ತನ್ನ ತಂದೆಯ ಬಳಿ ಹಿಂತಿರುಗಿದಾಗ ರಾಜ್ಯದಲ್ಲಿ ಮತ್ತೆ ಮಳೆ-ಬೆಳೆಗಳು ಸಮೃದ್ದವಾಗಿ ಆಗುತ್ತದೆ. ಜನರೆಲ್ಲರೂ ದೀಪಾಳ ಪುನರಾಗಮನವೇ ಇದಕ್ಕೆಲ್ಲಾ ಕಾರಣವೆಂದರಿತು ಅವಳ ಹೆಸರಿನಲ್ಲಿ ‘ದೀಪಾವಳಿ’ ಎನ್ನುವ ಹಬ್ಬವನ್ನಾಚರಿಸಿದರು. ಅಂದಿನಿಂದ ದೀಪಾವಳಿ ಆಚರಣೆಗೆ ಬಂದಿತು ಎನ್ನುವ ಪ್ರತೀತಿ ಜನಪದರಲ್ಲಿದೆ.

     ಸ್ನೇಹಿತರೆ, ಹೀಗೆ ನಮ್ಮ ಪರಂಪರೆಯಲ್ಲಿ ದೀಪಾವಳಿಯ ಪ್ರತಿ ದಿನಕ್ಕೂ ಅದರದೇ ಆದ ಮಹತ್ವವಿದೆ. ನಮ್ಮ ಹಿರಿಯರು, ಜನಪದರು ಪರಂಪರೆಯಿಂದ ಆ ಮಹತ್ವವನ್ನರಿತು ಹಬ್ಬವನ್ನಾಚರಿಸಿಕೊಂಡು ಬಂದಿದ್ದಾರೆ. ಇಂದು ನಾವು ಕೂಡ ನಮ್ಮ ಆಚರಣೆಯ ಹಿಂದಿರುವ ಅರ್ಥವನ್ನು ಅರಿತುಕೊಳ್ಳುವುದರ ಮುಖೇನ ಹಬ್ಬವನ್ನು ಅರ್ಥವತ್ತಾಗಿ ಆಚರಿಸೋಣ.

    ಬನ್ನಿ, ಹಣತೆಯನ್ನು ಬೆಳಗೋಣ

    ಅಂತರಂಗದ ಕತ್ತಲನು ತೊಡೆಯೋಣ

    ಜಗದ ತುಂಬೆಲ್ಲ ಜ್ಞಾನದ ದೀವಿಗೆಯನ್ನು ಹಚ್ಚೋಣ

    ನಮಸ್ಕಾರ.