ದೀಪದಿಂದ ದೀಪವ ಹಚ್ಚಬೇಕು ಮಾನವ… (ಭಾಗ 1)

ದೀಪದಿಂದ ದೀಪವ ಹಚ್ಚಬೇಕು ಮಾನವ… (ಭಾಗ 1)

"ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ......." - ದತ್ತಾತ್ರೇಯ ರಾಮಚಂದ್ರ ಬೇಂದ್ರೆ. 21ನೆಯ ಶತಮಾನದಲ್ಲಿ ಕಾಲು ಶತಮಾನ ಮುಗಿದಿದೆ. ಅಂದರೆ 2025 ಪ್ರಾರಂಭವಾಗಿದೆ. ಅದಕ್ಕೆ ಸ್ವಾಗತ ಕೋರುತ್ತಾ, ಎಲ್ಲರಿಗೂ ಇಂಗ್ಲಿಷ್ ಕ್ಯಾಲೆಂಡರ್ ನ ಹೊಸ ವರ್ಷದ ಶುಭಾಶಯಗಳನ್ನು ಹೇಳುತ್ತಾ....

1969 ರಲ್ಲಿ ಹುಟ್ಟಿದ ನಾನು, 20 ನೆಯ ಶತಮಾನದ 31 ವರ್ಷಗಳು, 21 ನೆಯ ಶತಮಾನದ 24 ವರ್ಷಗಳನ್ನು ಈ ನೆಲದಲ್ಲಿ ಭಾರತೀಯ ಕನ್ನಡಿಗನಾಗಿ ಅನುಭವಿಸಿದ್ದೇನೆ.  ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೋಮೋ, ಚಲನಚಿತ್ರ ಅಭಿನಯದಲ್ಲಿ ಡಿಪ್ಲೋಮೋ ಮಾಡಿದ್ದೇನೆ. ಸುಮಾರು 50 ವರ್ಷಗಳಷ್ಟು ದೀರ್ಘಕಾಲದಿಂದ ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು ಹಾಗೂ ರಾಷ್ಟ್ರೀಯ ಮಟ್ಟದ ಕೆಲವು ಪತ್ರಿಕೆಗಳನ್ನು ಸತತವಾಗಿ ಓದುತ್ತಾ ಬಂದಿದ್ದೇನೆ.

ಅಲ್ಲಲ್ಲಿ ಹರಿದ ಚಡ್ಡಿಯಿಂದ ಸೂಟು ಬೂಟಿನವರೆಗೆ, ಕಿತ್ತುಹೋದ ಹವಾಯಿ ಚಪ್ಪಲಿಯಿಂದ ಅತ್ಯುತ್ತಮ ದರ್ಜೆಯ ಶೂಗಳನ್ನು ಧರಿಸಿದ್ದೇನೆ. ರಸ್ತೆಯೇ ಇಲ್ಲದ ಸಣ್ಣ ಊರಿನಿಂದ ಸ್ವಿಟ್ಜರ್ಲ್ಯಾಂಡ್ ನ ಆಲ್ಪ್ಸ್ ಪರ್ವತದ  ತುದಿಯವರೆಗೆ ಸಾಕಷ್ಟು ಭೂ ಭಾಗವನ್ನು ಸುತ್ತಿದ್ದೇನೆ. ಕನ್ಯಾಕುಮಾರಿಯ ಆ ತುತ್ತ ತುದಿಯಿಂದ, ಕಾಶ್ಮೀರದ ಲೇಹ್ ಲಡಾಕ್ ಬಳಿಯ ಅತಿ ಎತ್ತರದ ಪ್ಯಾಂಗಾಂಗ್ ಸರೋವರದವರೆಗೆ, ಬೀದರ್ ನ ವನಮಾರ್ಪಳ್ಳಿಯಿಂದ ಚಾಮರಾಜನಗರದ ಕೊನೆಯವರೆಗೆ, ಅನೇಕ ಭೂಪ್ರದೇಶಗಳನ್ನು ನೋಡಿದ್ದೇನೆ. ಚಿಕ್ಕ ಮಳೆನೀರು ಸೋರುವ ಗುಡಿಸಲಿನಿಂದ ಶ್ರೀಮಂತ ತ್ರಿಪ್ಲೆಕ್ಸ್ ಮನೆಯಲ್ಲಿ, ಕೊನೆಗೆ ಈಗ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಬಡತನ, ಕೆಳ ಮಧ್ಯಮ ವರ್ಗ, ಸಿರಿತನ, ಮತ್ತೆ ಬಡತನ ಹೀಗೆ ಬದುಕಿನ ಹಲವು ಮುಖಗಳನ್ನು ನೋಡಿದ್ದೇನೆ. ಹಸಿವಿನಿಂದ ಬಳಲುತ್ತಾ ರಾಗಿ ಮುದ್ದೆಗಾಗಿ ಪರಿತಪಿಸುತ್ತಾ, ವಿಶ್ವದ ಶ್ರೀಮಂತ ಕ್ರೂಸ್ ನಲ್ಲಿ ಪ್ರಯಾಣಿಸಿ ಸೆವೆನ್ ಸ್ಟಾರ್ ಹೋಟೆಲ್ ಶೈಲಿಯ ಭಕ್ಷ್ಯ ಭೋಜನ ಸವಿದಿದ್ದೇನೆ. ಎತ್ತಿನಗಾಡಿ, ಕುದುರೆ ಟಾಂಗಾ ದಿಂದ ಹಿಡಿದು ವಿಮಾನದವರೆಗೆ ಪ್ರಯಾಣ ಮಾಡಿದ್ದೇನೆ. ಸಮುದ್ರದೊಳಗೆ ಪ್ಯಾರಿಸ್ ನಿಂದ ಲಂಡನ್ನಿನವರೆಗೆ ಪ್ರತಿಷ್ಠಿತ ಯೂರೋ ಟ್ರೈನಿನಲ್ಲಿ ಪ್ರಯಾಣಿಸಿದ್ದೇನೆ. ಮಗನ ಹುಟ್ಟು, ತಂದೆಯ ಸಾವನ್ನು ತದೇಕಚಿತ್ತದಿಂದ ಗಮನಿಸಿದ್ದೇನೆ. ಜೀವ ಕೊಟ್ಟ ಗೆಳೆಯರು ಉಂಟು, ಬೆನ್ನಿಗೆ ಇರಿದು ಹಿತೈಷಿಗಳು ಉಂಟು. ಪ್ರೀತಿ ಪ್ರೇಮ ಪ್ರಣಯದ ಉತ್ತುಂಗ ತಲುಪಿದ್ದು ಉಂಟು, ದ್ವೇಷ ಅಸೂಯೆ ವಿರಹಗಳಿಂದ ನರಳಿದ್ದೂ ಉಂಟು.

ಸ್ಫಟಿಕದಂತ ಶುದ್ಧ ನೀರನ್ನು ಕುಡಿದು ದಣಿವಾರಿಸಿಕೊಂಡಿದ್ದೇನೆ, ಹಾಗೆಯೇ ಮಲಿನ ಯುಕ್ತ ಅತ್ಯಂತ ಕೊಳಚೆ ನೀರನ್ನು ಸೇವಿಸಿ ಸತ್ತವರ ಸುದ್ದಿಗಳನ್ನು ಗಮನಿಸುತ್ತಿದ್ದೇನೆ. ಶುದ್ಧ ಆಮ್ಲಜನಕದ ಗಾಳಿಯ ಆಹ್ಲಾದಕರ ಅನುಭವದೊಂದಿಗೆ ಅಶುದ್ಧ, ಅಪಾಯಕಾರಿ, ಧೂಳಿನ ಕಣಗಳ ಗಾಳಿ ಸೇವಿಸಿ  ರೋಗಗ್ರಸ್ಥನೂ ಆಗಿದ್ದೇನೆ. ಆಹಾರದ ಅಮೃತತ್ವವನ್ನು ಸವಿದಿದ್ದೇನೆ, ಜೊತೆಗೆ ವಿಷಯುಕ್ತ, ರಾಸಾಯನಿಕ ಆಹಾರವನ್ನೂ ಸೇವಿಸಿ ಅನಾರೋಗ್ಯಕ್ಕೂ ಒಳಗಾಗಿದ್ದೇನೆ. ಎಣ್ಣೆಯ ಬುಡ್ಡಿ ದೀಪವನ್ನು ಉಪಯೋಗಿಸಿಕೊಂಡು ಓದಿದ್ದೇನೆ, ಈಗ ಜಗಮಗಿಸುವ ಲೇಸರ್ ಬೆಳಕಿನ ಕಿರಣಗಳನ್ನು ನೋಡುತ್ತಿದ್ದೇನೆ.

ಮೂಕಿ ಚಿತ್ರಗಳಿಂದ 70 ಎಂಎಂ ಸಿನಿಮಾಗಳವರೆಗೆ, ರಾತ್ರಿ ನೋಡುತ್ತಿದ್ದ ನಾಟಕಗಳಿಂದ, ಯೂಟ್ಯೂಬ್ ಡಿಜಿಟಲ್ ಸಿನಿಮಾಗಳವರೆಗೆ ಮನರಂಜನೆಯ ವಿವಿಧ ಮಜಲುಗಳನ್ನು ವೀಕ್ಷಿಸಿದ್ದೇನೆ. ಸಾಂಪ್ರದಾಯಿಕ ಹಾರ್ಮೋನಿಯಂ, ಶಹನಾಯಿಗಳಿಂದ ಅತ್ಯಾಧುನಿಕ ಡಿಜಿಟಲ್ ವಾದ್ಯಗಳನ್ನು, ಅದರ ಸಂಗೀತವನ್ನು ಆಲಿಸಿದ್ದೇನೆ. ರಾಜಕೀಯದ ಅನೇಕ ಏಳುಬೀಳುಗಳನ್ನು ನೋಡುತ್ತಾ ಬೆಳೆದಿದ್ದೇನೆ. ಅತ್ಯಂತ ತ್ಯಾಗಮಯಿ ಮೌಲ್ಯಗಳನ್ನು, ಅತ್ಯಂತ ವಿಶ್ವಾಸ ದ್ರೋಹಿ ಕ್ರೂರ ರಾಜಕೀಯ ನಡೆಗಳನ್ನು ನೋಡಿದ್ದೇನೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಗಳನ್ನೇ ನಡುಗಿಸಿದ ಬೃಹತ್ ಚಳುವಳಿಗಳನ್ನು, ಎಷ್ಟೇ ಅನ್ಯಾಯವಾದರೂ ಪ್ರತಿಭಟಿಸದ ನರಸತ್ತ, ನಿರ್ವೀಯ ಯುವ ಜನಾಂಗವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.

ಕಣ್ಣಿಗೆ ಕಾಣುವ ಅಂತರದಲ್ಲಿ ಭೀಕರ ಅಪಘಾತಗಳನ್ನು, ಕೊಲೆಗಳನ್ನು, ಅತ್ಯಾಚಾರದ ಘಟನೆಗಳನ್ನು, ಮನುಷ್ಯ ಜನಾಂಗ ಸಹಿಸಲು ಸಾಧ್ಯವಾಗದ ನೋವುಗಳನ್ನು  ಕಾಣುತ್ತಲೇ ಬಂದಿದ್ದೇನೆ. ಚಿಲ್ಲರೆ ಕಾಸಿಗೆ ಸಿಗುತ್ತಿದ್ದ ಕಳ್ಳಬಟ್ಟಿ ಸಾರಾಯಿಯಿಂದ ಲೀಟರ್ಗೆ 50 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಿದೇಶಿ ಮದ್ಯದವರೆಗೆ ನೋಡಿದ್ದೇನೆ. ಚಿಕ್ಕ ಗೂಡಂಗಡಿಯಿಂದ ಮಲೇಷಿಯಾದ ಟೈಮ್ ಸ್ಕ್ವೇರ್ ನಂತಹ ಬೃಹತ್ ಮಾಲ್ ಅನ್ನು ನೋಡಿಕೊಂಡು ಬಂದಿದ್ದೇನೆ. ಪ್ರತಿ ಹೆಣ್ಣು ತಾಯಿ ಸಮಾನ ಎನ್ನುವ ಮನಸ್ಥಿತಿಯಿಂದ, ಥೈಲ್ಯಾಂಡಿನಲ್ಲಿ ಹೆಣ್ಣನ್ನೇ ಭೋಗಿಸಲು ನೇರವಾಗಿ ದುಡ್ಡು ಕೊಟ್ಟು ಕೊಳ್ಳುವ ಮಾರಾಟಕ್ಕೆ ಲಭ್ಯವಿರುವ ಹಂತದ ಪರಿಸ್ಥಿತಿಯನ್ನು ಗಮನಿಸಿದ್ದೇನೆ. ಉಚಿತವಾಗಿಯೇ ಜಮೀನು ದಾನ ಮಾಡುತ್ತಿದ್ದ ಕಾಲದಿಂದ ಒಂದು ಸ್ಕ್ವೇರ್ ಫೀಟ್ಗೆ ಒಂದು ಲಕ್ಷದವರೆಗೂ ಬೆಲೆ ಬಾಳುವ ಭೂಮಿಯ ವ್ಯಾಪಾರವನ್ನು ನೋಡಿದ್ದೇನೆ‌.

ಉಚಿತ ಊಟದಿಂದ, ಸಾವಿರಾರು ರೂಪಾಯಿ ಬೆಲೆ ಬಾಳುವ ಬಫೆಟ್ ಊಟದವರೆಗೂ ಇರಬಹುದಾದ ಅಜಗಜಾಂತರ ವ್ಯತ್ಯಾಸವನ್ನು ಗಮನಿಸಿದ್ದೇನೆ. ಉಚಿತ ವಿಶ್ರಾಂತಿ ಗೃಹದಿಂದ, ದಿನಕ್ಕೆ ಲಕ್ಷಾಂತರ ಬೆಲೆಬಾಳುವ ವಸತಿಗೃಹಗಳನ್ನು ನೋಡಿದ್ದೇನೆ. ಮೌಂಟ್ ಎವರೆಸ್ಟ್ ಏರಲು ತೇನ್ಸಿಂಗ್ ನೋರ್ಗೆ 29 ಸಲ ಪ್ರಯತ್ನಿಸಿದ್ದು, ಎಡ್ಮಂಡ್ 

ಹಿಲರಿ ಅವರ ಜೊತೆ ಯಶಸ್ವಿಯಾಗಿದ್ದು, ಇದೀಗ ಮೌಂಟ್ ಎವೆರೆಸ್ಟ್ ನ ತುತ್ತ ತುದಿಯಲ್ಲಿ ಅದನ್ನು ತಲುಪಲು ಸರತಿಯಲ್ಲಿ ಸಾಗುತ್ತಿರುವ ದೃಶ್ಯಗಳು ಇನ್ನೂ ಕಣ್ಣಮುಂದಿದೆ. ಗರ್ಭಾವಸ್ಥೆಯಲ್ಲಿಯೇ ತೀರಿಕೊಂಡ ಮಗುವಿನಿಂದ, 110 ವರ್ಷಕ್ಕೂ ಹೆಚ್ಚು ಕಾಲ ಬದುಕಿದ ವ್ಯಕ್ತಿಗಳನ್ನು ನೋಡಿದ್ದೇನೆ. ಎಲ್ಲಾ ದುಶ್ಚಟಗಳ ದಾಸರಾಗಿಯೂ  90 ವರ್ಷಕ್ಕೂ ಹೆಚ್ಚು ಬದುಕಿದವರು, ಯಾವುದೇ ದುರಭ್ಯಾಸಗಳಿಲ್ಲದೆ ಅತ್ಯಂತ ಸಂಭಾವಿತ ವ್ಯಕ್ತಿಗಳು 30-40 ವರ್ಷಕ್ಕೇ ತೀರಿಕೊಂಡಿದ್ದನ್ನು ನೋಡಿದ್ದೇನೆ.

ಹೊಸವರ್ಷವೆಂದರೆ ಮಂದಿರ, ಮಸೀದಿ, ಚರ್ಚುಗಳಲ್ಲಿ ಪ್ರಾರ್ಥನೆ, ಹೊಸ ಬಟ್ಟೆ, ಒಳ್ಳೆಯ ಸಂಕಲ್ಪಗಳ ಯೋಚನೆ, ಕೆಟ್ಟ ಅಭ್ಯಾಸಗಳಿಂದ ಬಿಡುಗಡೆ ಎಂಬ ಮನಸ್ಥಿತಿಯಿಂದ, ಹೊಸ ವರ್ಷವೆಂದರೆ ಕುಡಿದು ತೂರಾಡಿ ಅಸಭ್ಯ ವರ್ತನೆ ಎನ್ನುವ ಮನಸ್ಥಿತಿಗೆ ತಲುಪಿರುವುದನ್ನು ನೋಡಿದ್ದೇನೆ. ಹಸಿವಿನಿಂದ ಸಾಯುವವರನ್ನು ನೋಡಿದ್ದೇನೆ, ಇತ್ತೀಚಿಗೆ ಅತಿಯಾದ ಆಹಾರ ಸೇವನೆಯಿಂದ ಸಾಯುತ್ತಿರುವವರನ್ನು ನೋಡುತ್ತಿದ್ದೇನೆ. ಹೋಟೆಲುಗಳಲ್ಲಿ ಹಿರಿಯರ ಮುಂದೆ ಕಾಫಿ ಕುಡಿಯಲೂ ಸಂಕೋಚ ಪಡುತ್ತಾ ಕುಡಿಯುತ್ತಿದ್ದ ಯುವಕರನ್ನು ನೋಡಿದ್ದೇನೆ, ಇತ್ತೀಚೆಗೆ ಬಾರ್ ಗಳಲ್ಲಿ ಮಹಿಳೆಯರು ಸಹ ಬಹಿರಂಗವಾಗಿ ಸಿಗರೇಟ್ ಸೇದುತ್ತಾ ಮದ್ಯಪಾನ ಮಾಡುವುದನ್ನು ನೋಡುತ್ತಿದ್ದೇನೆ. ನಡೆದು ಹೋಗಿ ಸುದ್ದಿ ಮುಟ್ಟುಸುತ್ತಿದ್ದ ಕಾಲದಿಂದ, ಇಂಟರ್ನೆಟ್  ಬೆಳವಣಿಗೆಯೊಂದಿಗೆ ಒಂದೇ ಕ್ಷಣದಲ್ಲಿ ಇಡೀ ಜಗತ್ತಿಗೆ ತಲುಪಬಹುದಾದ ಇ-ಮೇಲ್ ಸೌಕರ್ಯವನ್ನು ನೋಡುತ್ತಿದ್ದೇವೆ.

ಹಣವಿಲ್ಲದೇ ಎಲ್ಲವೂ ನಡೆಯುತ್ತಿದ್ದ ಸಮಯವನ್ನೂ, ಹಣದಿಂದಲೇ ಎಲ್ಲವೂ ನಡೆಯುತ್ತಿರುವ ಕಾಲವನ್ನೂ ಗಮನಿಸುತ್ತಿದ್ದೇನೆ. ಹೀಗೆ ದಿನಗಳು, ತಿಂಗಳಗಳು, ವರ್ಷಗಳು ಉರಳುತ್ತಾ ಸಾಗುತ್ತಿದೆ. ಪರಿವರ್ತನೆ ಜಗದ ನಿಯಮ. ಈ ಪರಿವರ್ತನೆಯ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ. ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ.... ತೃಪ್ತಿಯೇ ನಿತ್ಯ ಹಬ್ಬ.

(ಇನ್ನೂ ಇದೆ)

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ