ದೀಪದ ನೆರಳ ಬೆಳಕು
ಕವನ
ಕತ್ತಲು ಹರಿಯಲು
ಉರಿವ ಹಣತೆಯೇ ಬೇಕಿಲ್ಲ
ಬೆಳಕು ಸೃಜಿಸುವುದು
ಮನದ ಅಂತರ್ ದೃಷ್ಟಿಯಲ್ಲಿ
ಸಾಲು ದೀಪಗಳ ನಡುವೆಯೂ
ಕತ್ತಲ ತುಣುಕುಗಳಿರುತ್ತವೆ
ಬೆಳಗಲಿಚ್ಚಿಸುವ ಎದೆಯೊಳಗೆ
ಕಂದೀಲು ಅವಿತಿರುತ್ತದೆ ;
ಶತ್ರು ಕತ್ತಲಲೂ ಕಾಣಬಹುದು
ವಿದ್ವೇಷಕೆ ಬೆಳಕಿನ ಹಂಗಿಲ್ಲ
ಅಂತ್ಯವೇ ಅಂತಿಮ ಗುರಿಯಾದರೆ
ದೀವಿಗೆಯ ಗೊಡವೆಯೇಕೆ
ಪ್ರೀತಿ ಸೃಜಿಸುವ ಎದೆಯಲ್ಲಿ
ಮುಳ್ಳೂ ಕುಸುಮಿಸಬಹುದು
ತೆರೆದ ಬಾಹುಗಳ ನಡುವೆ
ಸಂಕೋಲೆಗೆ ಎಡೆಯಿರದು ;
ಕಾರ್ಗತ್ತಲಿನ ನಡಿಗೆಯಲೂ
ಹೆಜ್ಜೆ ಗುರುತಿಸಬಹುದು
ವಿಸ್ಮೃತಿಯ ಚಾದರಗಳಲಿ
ನೆನಪು ಮೊಳೆಯಬಹುದು
ಹಾಲು ಬೆಳಕಿನ ಚಪ್ಪರದಡಿ
ಉರಿವ ಕೆಂಡ ಕಪ್ಪಾಗುತ್ತದೆ
ಸಂವೇದನೆಯ ಹಂದರದಲಿ
ಜಾಲಿಯೂ ನೆರಳಾಗುತ್ತದೆ ;
ಕಳೆದು ಹೋದ ಬೆಳಕಿಗೆ
ಹಣತೆಯೊಂದೇ ಸಾಕ್ಷಿ
ಕಾರ್ಗತ್ತಲ ನಿಗೂಢತೆಗೆ
ಕತ್ತಲೆಯೊಂದೇ ಸಾಕ್ಷಿ
ನೀರಲೆಯ ಮೇಲಿನ ಪ್ರಣತಿಗೆ
ಜಲಚರಗಳಷ್ಟೇ ಸಾಕ್ಷಿ
ಕತ್ತಲೆಯಿಂದ ಬೆಳಕಿನೆಡೆಗೆ
ಮಾನವತೆಯೇ ಅಂತ್ಯಸಾಕ್ಷಿ ;
-ನಾ ದಿವಾಕರ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್