ದೀಪದ ಹಬ್ಬ ಮತ್ತು ಬಲಿಪಾಡ್ಯ
ಮಣ್ಣಿನ ಹಣತೆಲಿ ಬತ್ತಿಯ ಜೋಡಿಸಿ
ಎಣ್ಣೆಯ ಎರೆಯುತ ಪ್ರೀತಿಲಿ ಉರಿಸಿ/
ಸಣ್ಣ ಮಕ್ಕಳು ಕೂಡುತ ಆಡುತ
ಬಣ್ಣಬಣ್ಣದ ದಿರಿಸನು ಧರಿಸುತ//
ಮನದ ತಮವನು ಕಳೆದು ಹೊಳೆಯುತ
ತನುವ ಕೊಳೆಯನು ತೊಳೆದು ಬೆಳಗುತ/
ಕತ್ತಲ ರಾಶಿಯ ಹೊಡೆದು ಓಡಿಸುತ
ಸುತ್ತಲು ಎಲ್ಲರೂ ಒಂದಾಗಿ ಸೇರುತ//
ದುಷ್ಟ ನರಕಗೆ ಮೋಕ್ಷ ಕರುಣಿಸಿದ
ಕೆಟ್ಟ ಹುಳವನು ಕುಟ್ಟಿ ಕೆಡಹಿದ/
ದಿಟ್ಟ ನಿಲುವಿನ ಗೋವಿಂದ ಮುರಾರಿ
ಪಟ್ಟ ಭದ್ರೆಯರ ಹೃದಯ ಕಿಶೋರ//
ಬಲಿಯ ಯಜ್ಞದಲಿ ವಿಘ್ನ ತಂದನು
ಮಹಾವಿಷ್ಣು ವಟು ವಾಮನನಾದನು/
ಅಹಮಿಕೆ ಗರ್ವವ ತುಳಿದು ಹಾಕಿದನು
ಮೂರು ಹೆಜ್ಜೆಯಲಿ ಪಾತಾಳಕೆ ತಳ್ಳಿದನು//
ನರಕ ಚತುರ್ದಶಿ ದಿನ ವಿಶೇಷವು
ಗೋವಿನ ಪೂಜೆ ಮಹಾಪುಣ್ಯವು/
ಲಕ್ಷ್ಮೀ ಕಟಾಕ್ಷ ಒಲಿದು ಬರುವುದು
ಬಲೀಂದ್ರ ಸೇವೆ ಮಾಡುತ ನಲಿವುದು//
ಮೂರು ದಿನಗಳ ಹಬ್ಬದ ಸಂಭ್ರಮ
ಎಲ್ಲೆಲ್ಲು ನಗುವಿನ ಒಲವಿನ ತೋರಣ/
ಜಗದ ತಮ ಅಳಿಯಲಿ ಎನ್ನುತ
ದೇವನ ಪಾದಕೆ ಎರಗುತ ನಮಿಸುತ//
***
ಬಲಿಪಾಡ್ಯ
ಕಾರ್ತಿಕ ಮಾಸದ ಪಾಡ್ಯದ ದಿನವು
ಬೆಳಕಿನ ಹಬ್ಬ ದೀಪಾವಳಿ ಸಡಗರವು|
ಬಲಿಪಾಡ್ಯಮಿ ಪೌರಾಣಿಕ ಹಿನ್ನೆಲೆಯು
ಗುಣಗಳ ಗಣಿ ಬಲಿರಾಜನ ಕಥೆಯು||
ಸುರಪೀಠಕೆ ಲಗ್ಗೆಯಿಡುವ ಆಸೆಯು
ದಿಗ್ವಿಜಯ ಸಾಧಿಸಿ ಕೈಗೊಂಡನು ವಿಶ್ವಜಿತ್ ಯಜ್ಞವ |
ದಾನಧರ್ಮಗಳ ಕೊಡುವ ಅರಸನು
ವೀರೋಚನ ಸುತ ಅಗಣಿತ ಘನ ಮಹಿಮನು||
ಕೈಯಲಿ ಕಮಂಡಲ ಶಿರದ ಮೇಲೆ ಛತ್ರಿಯು
ವಟು ರೂಪಧಾರಿ ವೈಕುಂಠ ವಾಸಿ |
ವಾಮನನಾಗಿ ಬೆಳೆದು ದಾನ ಬೇಡಿದನು
ಮೂರು ಹೆಜ್ಜೆಗಳ ಸ್ಥಳ ಬೇಡಿಕೆಯಿಟ್ಟನು||
ಒಂದನೇ ಪಾದವ ಭುವಿಗೂರಿದ
ಎರಡನೇ ಪಾದವ ಆಗಸಕೂರಿದ|
ಭೂಮ್ಯಾಕಾಶ ಗಾತ್ರ ಪಾದವ ಬೆಳೆಸಿದ
ಮೂರನೇ ಹೆಜ್ಜೆಯ ಎಲ್ಲಿಡಲೆಂದ||
ಶಿರದ ಮೇಲೆ ಹೆಜ್ಜೆಯನೂರಿದ ದೇವ
ಬಲಿಯ ಪಾತಾಳಕೆ ತಳ್ಳಿದ ಜಗದ್ರಕ್ಷಕ ಕಾವ|
ಗೋಧೂಳಿ ಲಗ್ನದಿ ಪೂಜೆಯು ಸಂದಿತು
ನೆನೆಯೋಣ ಕಥಾಸಾರದ ತಿರುಳ ಧನ್ಯರಾಗುತ||
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ