ದೀಪಾವಳಿಯ ಹಬ್ಬದಂದು ನರಕ ಚತುರ್ದಶಿಯ ಮಹತ್ವ

ದೀಪಾವಳಿಯ ಹಬ್ಬದಂದು ನರಕ ಚತುರ್ದಶಿಯ ಮಹತ್ವ

ದೀಪಾವಳಿ ಹಬ್ಬದ ನರಕ ಚತುರ್ದಶಿ ಮುಗಿಸಿ ನಾವು ಲಕ್ಷ್ಮೀಪೂಜೆಗೆ ಅಣಿಯಾಗುತ್ತಿದ್ದೇವೆ. ಆದರೂ ನರಕ ಚತುರ್ದಶಿಯನ್ನು ನಾವು ಆಚರಿಸುವ ಪೌರಾಣಿಕ ಹಿನ್ನಲೆಯನ್ನು ಬ್ರಹ್ಮಾವರದ ಶ್ರೀ ಹರಿಕೃಷ್ಣ ಹೊಳ್ಳ ಇವರು ಸುಂದರವಾಗಿ ಕಥಾ ರೂಪದಲ್ಲಿ ಬರೆದಿದ್ದಾರೆ. ಬನ್ನಿ ಓದೋಣ...

ಮಹಾವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿಯರೆಂಬ ಇಬ್ಬರು ರಾಣಿಯರು. ದೇವತೆಗಳನ್ನು ಯುದ್ಧದಲ್ಲಿ ಸೋಲಿಸಿ ನಂತರ ಭೂದೇವಿಯನ್ನು ಹಿಂಸಿಸಿದ ಹಿರಣ್ಯಾಕ್ಷನನ್ನು ಮಹಾವಿಷ್ಣುವು ವರಾಹಾವತಾರ ತಳೆದು ಬಂದು ವಧಿಸುತ್ತಾನೆ. ಅನಂತರ ವರಾಹ ಮತ್ತು ಭೂದೇವಿಯರ ಸಮಾಗಮದಿಂದ ಜನಿಸಿದವನೇ ನರಕಾಸುರ ಅಥವಾ ಭೌಮಾಸುರ. ದೇವಾಂಶ ಸಂಜನಿತನಾಗಿದ್ದರೂ ತಮೋಗುಣವು ವರ್ಧಿಸಿದ್ದ ಸಮಯದಲ್ಲಿ ಭೂದೇವಿಯು ವರಾಹನನ್ನು ಕೂಡಿದ್ದರಿಂದ ಆತ ರಕ್ಕಸನಾಗುತ್ತಾನೆ. ಹೀಗಾಗಿ ಭೂದೇವಿಯು ಆತನನ್ನು ಬಿಟ್ಟು ತೆರಳುತ್ತಾಳೆ. ತಂದೆ ತಾಯಿಯರ ಅಕ್ಕರೆ ಸಿಗದೇ ಅನಾಥನಾಗಿ ಬೆಳೆದವನಾದ್ದರಿಂದಲೋ ಏನೋ ನರಕಾಸುರನು ಚಿಕ್ಕಂದಿನಲ್ಲಿಯೇ ಪುಂಡನಾಗಿ ಬೆಳೆದು, ದೊಡ್ಡವನಾದ ಮೇಲೆ ಲೋಕಕ್ಕೇ ಕಂಟಕನಾಗುತ್ತಾನೆ.

ನರಕಾಸುರನು ಬೆಳೆದು ದೊಡ್ಡವನಾದ ಮೇಲೆ ಪ್ರಾಗ್ಜೋತಿಷಪುರದ ಅರಸನಾಗುತ್ತಾನೆ. ತಂದೆ-ತಾಯಿಯರನ್ನು ಕಾಣುವ ತವಕದಲ್ಲಿದ್ದ ನರಕಾಸುರನು, ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ “ತಾಯಿಯಿಂದಲ್ಲದೇ ಅನ್ಯರಿಂದ ತನಗೆ ಮರಣ ಇಲ್ಲ” ಎಂಬ ವರವನ್ನು ಪಡೆಯುತ್ತಾನೆ. ವರದ ಬಲದಿಂದಾಗಿ ಭೂಲೋಕದ ಅರಸರನ್ನೆಲ್ಲ ಸೋಲಿಸಿ, ಹದಿನಾರು ಸಾವಿರ ಕನ್ಯೆಯರನ್ನು ತಂದು ಸೆರೆಯಲ್ಲಿರಿಸುತ್ತಾನೆ. ಸ್ವರ್ಗದ ಮೇಲೆ ದಾಳಿಮಾಡಿ ಇಂದ್ರನನ್ನು ಸೋಲಿಸಿ ಅಲ್ಲಿನ ಸುವಸ್ತುಗಳನ್ನೆಲ್ಲ ತನ್ನ ಪುರಕ್ಕೆ ಕೊಂಡೊಯ್ಯುತ್ತಾನೆ. ಆ ಸಮಯದಲ್ಲಿ ಮಹಾವಿಷ್ಣುವು ಕೃಷ್ಣಾವತಾರದಲ್ಲಿ ಇದ್ದುದರಿಂದ, ದೇವತೆಗಳೆಲ್ಲ ಶ್ರೀಕೃಷ್ಣನಲ್ಲಿಗೆ ಬಂದು ದೂರುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ಕೊಲ್ಲಲು ಹೊರಡುವಾಗ ಆತನ ಜೊತೆಯಲ್ಲಿ ಸತ್ಯಭಾಮೆಯೂ ಹೊರಡುತ್ತಾಳೆ. ಆಕೆಯೇ ಭೂದೇವಿಯಾಗಿರುವುದರಿಂದ ನರಕಾಸುರನನ್ನು ಆತ ಪಡೆದ ವರಕ್ಕೆ ಅನುಸಾರವಾಗಿ ಕೊಲ್ಲಲು ಅನುಕೂಲವಾಗುತ್ತದೆ ಎಂದು ಶ್ರೀಕೃಷ್ಣನು ಆಕೆಯನ್ನು ಸಂಗಡ ಕರೆದೊಯ್ಯುತ್ತಾನೆ. 

ಶ್ರೀಕೃಷ್ಣನಿಗೂ ನರಕಾಸುರನಿಗೂ ಯುದ್ಧವಾಗುತ್ತದೆ. ಸತ್ಯಭಾಮೆಯು ಯುದ್ಧದಲ್ಲಿ ಕೃಷ್ಣನಿಗೆ ನೆರವಾಗುತ್ತಾಳೆ. ನರಕಾಸುರನ ಬಾಣದ ಏಟಿಗೆ ಕೃಷ್ಣ ಅಸ್ವಸ್ಥನಾದಾಗ ಸತ್ಯಭಾಮೆ ಯುಧ್ಧ ಮಾಡುತ್ತಾಳೆ. ಸತ್ಯಭಾಮೆಯ ಜೊತೆಗಿನ ಯುದ್ಧದಲ್ಲಿ ತನಗೆ ಸೋಲು ನಿಕಟವಾದಾಗ ನರಕಾಸುರನಿಗೆ ತಾನು ಪಡೆದ ವರದ ನೆನಪಾಗುತ್ತದೆ. ಸತ್ಯಭಾಮೆಯು ನರಕಾಸುರನನ್ನು ತನ್ನ ಬಾಣದಿಂದ ಧರೆಗುರುಳುವಂತೆ ಮಾಡುತ್ತಾಳೆ. ಆಗ ಅವನಿಗೆ ಇವರೇ ತನ್ನ ತಂದೆ-ತಾಯಿಗಳು ಎಂಬ ಅರಿವಾಗುತ್ತದೆ. ತಂದೆ-ತಾಯಿಯರ ಪಾದಕ್ಕೆ ಬಿದ್ದು ತನ್ನ ಹೆಸರು ಚಿರಸ್ಥಾಯಿಯಾಗುವಂತೆ ಮಾಡು ಹಾಗೂ ತನಗೆ ಮೋಕ್ಷವನ್ನು ಕರುಣಿಸು ಎಂದು ಬೇಡುತ್ತಾನೆ. ಅವನ ಕೋರಿಕೆಯನ್ನು ಮನ್ನಿಸಿದ ಶ್ರೀಕೃಷ್ಣನು “ತಥಾಸ್ತು” ಎನ್ನುತ್ತಾ ಆತನಿಗೆ ಮೋಕ್ಷವನ್ನು ಕರುಣಿಸುತ್ತಾನೆ. 

ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನವೇ ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಾಗಿರುತ್ತದೆ. ಹೀಗಾಗಿ ಆ ದಿನವನ್ನು ನರಕಚತುರ್ದಶಿ ಎಂಬುದಾಗಿ ಆಚರಿಸುತ್ತೇವೆ. ಚತುರ್ದಶಿಯ ಬೆಳಗಿನ ಜಾವದಲ್ಲಿಯೇ ಶ್ರೀಕೃಷ್ಣನು ನರಕಾಸುರನನ್ನು ಕೊಂದು , ಬೆಳಗಾಗುವುದರೊಳಗೆ ಅಭ್ಯಂಗ ಸ್ನಾನವನ್ನು ಮಾಡಿ ಮೈಗೆ ಅಂಟಿದ್ದ ರಕ್ತವನ್ನೆಲ್ಲ ತೊಳೆದುಕೊಂಡಿದ್ದನು. ಹೀಗಾಗಿ ನರಕಾಸುರನ ಹೆಸರನ್ನು ಚಿರಸ್ಥಾಯಿಯಾಗಿ ಮಾಡಲು ಇದೇ ಸೂಕ್ತ ಎಂದು ಆಲೋಚಿಸಿದ ಶ್ರೀಕೃಷ್ಣನು “ಈ ನರಕ ಚತುರ್ದಶಿಯ ದಿನದಂದು ಯಾರು ಅಭ್ಯಂಗ ಸ್ನಾನವನ್ನು ಮಾಡುವರೋ, ಅವರಿಗೆ ನರಕ ಪ್ರಾಪ್ತಿಯಾಗದಿರಲಿ” ಎಂಬ ವರವನ್ನು ಪಾಲಿಸುತ್ತಾನೆ. ಈ ಪದ್ಧತಿಯನ್ನು ಅನುಸರಿಸದೇ ಇರುವವರು ಸತ್ತ ಮೇಲೆ ನರಕಕ್ಕೆ ಹೋಗುತ್ತಾರೆ ಎಂಬ ಪ್ರತೀತಿ ಇದೆ. 

ಹಬ್ಬದ ಆಚರಣೆ ಹೇಗೆ ? 

ತ್ರಯೋದಶಿಯ ದಿನ ನೀರು ತುಂಬುವ ಹಬ್ಬ. ಹಳ್ಳಿಗಳಲ್ಲಿ ಬೇಸಾಯಗಾರರು ಅಂದು ಮನೆಯನ್ನು ಸ್ವಚ್ಛಗೊಳಿಸಿ, ಮನೆಯ ಮುಂದೆ ಸೆಗಣಿಯಿಂದ ನೆಲವನ್ನು ಸಾರಿಸಿ, ರಂಗೋಲಿ ಹಾಕುತ್ತಾರೆ. ಮನೆಯನ್ನು ಮಾವು ಮತ್ತು ಹೂವಿನ ತೋರಣಗಳಿಂದ ಶೃಂಗರಿಸುತ್ತಾರೆ. ಹಳ್ಳಿಗರ ಬಚ್ಚಲ ಮನೆಯಲ್ಲಿ ಕಟ್ಟಿಗೆ ಒಲೆಯಿಂದ ನೀರು ಕಾಯಿಸಲು ದೊಡ್ಡ ಹಂಡೆ(ಹರಿ)ಗಳಿರುತ್ತವೆ. ಆ ದೊಡ್ಡ ಹಂಡೆಗಳನ್ನು ಹುಣಿಸೆ ಹಣ್ಣಿನಲ್ಲಿ ತೊಳೆದು, ಅದಕ್ಕೆ ಶೇಡಿ ಮಣ್ಣಿನ ಮುದ್ರೆಗಳಿಂದ ಅಲಂಕಾರ ಮಾಡುವರು. ಕೆಲವರು ಒಲೆಯ ಬೂದಿಯಿಂದ ಅದಕ್ಕೆ ಬರೆ ಎಳೆಯುವರು. ಅದರಲ್ಲಿ ನೀರನ್ನು ತುಂಬಿ , ಹಂಡೆಯ ಕಂಠದ ಬಳಿ ಯಾವುದಾದರೂ ಹೂವಿನ ಮಾಲೆ (ಹೆಚ್ಚಾಗಿ ಚೆಂಡು ಹೂವು) ಯನ್ನು ಸುತ್ತುವರು. ಅದಕ್ಕೆ ನೀರು ತುಂಬಿಸಿ ಇಡುವರು. 

ಮರುದಿನ ನರಕಚತುರ್ದಶಿ. ಆ ದಿನಕ್ಕೆ ನಮ್ಮ ಕಡೆ ಹಳ್ಳಿಗರು ಬೂದ್ನೀರ್ (ಬೂದಿನೀರು) ಹಬ್ಬ ಎನ್ನುತ್ತಾರೆ. ಅಂದು ಚಂದ್ರೋದಯ ಕಾಲದಲ್ಲಿಯೇ ಎದ್ದು ಅಂದರೆ ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನವೇ ಎದ್ದು , ಹಂಡೆಯಲ್ಲಿನ ನೀರನ್ನು ಕಾಯಿಸುವುದು. ನಂತರ ಅಭ್ಯಂಗ ಸ್ನಾನವನ್ನು ಮಾಡಬೇಕು. ಅಭ್ಯಂಗ ಸ್ನಾನ ಅಂದರೆ ಸಂಪೂರ್ಣ ದೇಹಕ್ಕೆ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಹಚ್ಚಿ, ತಿಕ್ಕಿ (ಮಸಾಜ್ ಮಾಡಿ) , ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದು ಎಂದರ್ಥ. ಸ್ನಾನದ ನಂತರ ದೇವರನ್ನು ಪೂಜಿಸುತ್ತಾರೆ. ನಂತರ ಅಮ್ಮ ಮಾಡಿ ಇಟ್ಟ ವಿಶೇಷವಾದ ಉದ್ದಿನ ದೋಸೆಗಳನ್ನು ಹೊಟ್ಟೆ ಬಿರಿಯುವಷ್ಟು ತಿನ್ನುತ್ತಾರೆ. ಅದಕ್ಕೆ ಬೂದ್ನೀರ್ (ಬೂದಿನೀರು) ದೋಸೆ ಎಂದೇ ಕರೆಯುತ್ತಾರೆ. ಆಮೇಲೆ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. 

- ಹರಿಕೃಷ್ಣ ಹೊಳ್ಳ , ಬ್ರಹ್ಮಾವರ

ಚಿತ್ರ ಕೃಪೆ: ಇಂಟರ್ನೆಟ್ ತಾಣ