ದೀಪಾವಳಿಯ ಹಾರ್ದಿಕ ಶುಭಾಶಯಗಳು !

ದೀಪಾವಳಿಯ ಹಾರ್ದಿಕ ಶುಭಾಶಯಗಳು !

ಬರಹ

ನಮ್ಮೆಲ್ಲ ಸಂಪದೀಯರಿಗೂ ಹಾಗೂ ನಮ್ಮ ಕನ್ನಡನಾಡಿನಒಳಗೆ, ಹಾಗೂ ಹೊರದೇಶಗಳಲ್ಲಿ ದುಡಿಯುತ್ತಿರುವ ಕನ್ನಡ ಮಿತ್ರರಿಗೆಲ್ಲಾ ದೀಪಾವಳಿಯ ಶುಭ ಹಾರೈಕೆಗಳು. ಅಜ್ಞಾನದ ಕತ್ತಲಿನಿಂದ ಹೊರಬಂದು, ನಮ್ಮ ಜೀವನದ ಸುಖ-ದುಖಃಗಳನ್ನು ನಮ್ಮ ಮಿತ್ರರೊಡನೆ ಹಂಚಿಕೊಳ್ಳೋಣ. ಒಬ್ಬರಿಗೊಬ್ಬರಿಗೆ ನೆರವಾಗಿ ಬಾಳೋಣ. ಜೀವನಕ್ಕೆ ಒಂದು ಹೊಸ ಅರ್ಥವನ್ನು ತರೋಣ.

ದೀಪಾವಳಿಯು ನಮ್ಮೆಲ್ಲರಲ್ಲಿ ಮಾನವಸಹಜವಾಗಿ ಅಡಗಿರುವ, ಅಜ್ಞಾನ, ಅಸೂಯೆ, ಅಂಧಕಾರಗಳನ್ನೆಲ್ಲಾ ಹೊಡೆದೋಡಿಸಿ, ನಿರ್ಮಲ ಜ್ಞಾನದ ಅರಿವನ್ನು ತರಲಿ. ಎಷ್ಟೇಹೇಳಿದರೂ ನಾನು ನನ್ನದು ಎನ್ನುವ ಮಮಕಾರಗಳು ನಮ್ಮ ಮನವನ್ನಾವರಿಸಿದಾಗ, ನಮಗೆ ಗೊತ್ತಿಲ್ಲದಂತೆ ನಾವು ಇಂಗ್ಲೀಷ್ ಭಾಷೆಯಲ್ಲಿ ಹೇಳುವ, ' ಇಗೋ,' ಗೆ ತುತ್ತಾಗಿರುವುದನ್ನು ಪ್ರತಿಕ್ಷಣ ನೋಡುತ್ತೇವೆ. ’ ಇದು ಇಷ್ಟೇನೆ,’ ಎಂಬ ಅರಿವು ಬಂದಾಗ,' ’ಅಯ್ಯೋ ನಾವು ಎಂಥಾ ತಪ್ಪುಮಾಡಿದೆವು', ’ಎಂತಹ ಸುಂದರ ಕ್ಷಣಗಳನ್ನು ನಮ್ಮ ಕೈಯಾರ ಬಿಟ್ಟುಕೊಟ್ಟೆವಲ್ಲಾ, ” ಎಂದು ನಮಗೆ ಕೆಲವೊಮ್ಮೆ ಅನ್ನಿಸುವುದು ಸಹಜ. ಆಗ, ಈ ತರಹದ ಸಂದೇಶಗಳು, ಹಿರಿಯರ ಹಿತವಚನಗಳು, ದಾರಿತಪ್ಪಿದ ನಮ್ಮನ್ನು ಮತ್ತೆ ಸರಿಯಾದ ದಾರಿಗೆ ಕರೆದೊಯ್ಯುತ್ತವೆ.

ಇದೇನು ಮಹಾ, ಪ್ರತಿವರ್ಷವೂ ಹಬ್ಬ ಬರುತ್ತೆ, ಹೋಗುತ್ತೆ, ಎನ್ನುವ ಮಾತು ನಮಗರಿವಿಲ್ಲದೇ ನಮ್ಮ ಬಾಯಿನಲ್ಲಿ ಬರುತ್ತದೆ. ಇದು ಸಹಜವೂ ಕೂಡ. ಆದರೆ, ಪ್ರತಿವರ್ಷವೂ ನಮ್ಮ ಜೀವನ ವಾಹಿನಿಯಲ್ಲಿ ಒಂದು ಹೊಸ ಅಲೆ, ಹೊಸ ದಿಶೆಯನ್ನು ಆ ಭಗವಂತ ಕೊಡುತ್ತಾಬಂದಿರುವುದನ್ನು ನಾವು ಗಮನಿಸಬೇಕು. ಕೆಲವುವೇಳೆ ಈ ಹೊಸ ಅಲೆಗಳ ವೇಗ ತೀವ್ರವಾಗಿರಬಹುದು. ಇಲ್ಲವೇ ತಿಳಿಯಾದ ನೀರಿನಂತೆ ಶುಭ್ರವಾಗಿ ಸಿಹಿಯಾಗಿ ನಿಧಾನವಾದ ಗತಿಯಲ್ಲಿ ಪ್ರವಹಿಸಲೂಬಹುದು. ಇವೆಲ್ಲವೂ ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಹಾಸುಹೊಕ್ಕಾಗಿ ಬರುವ ವಿಧಿಗಳು. ಎಲ್ಲಕ್ಕೂ ನಮ್ಮ ಮನಸ್ಸನ್ನು ಹದವಾಗಿ, ನಿರ್ಮಲವಾಗಿ, ಯಾವ ವಿಕಾರಗಳಿಗೂ ತುತ್ತಾಗದಂತೆ ಇಟ್ಟುಕೊಳ್ಳುವ ದಿಶೆಯಲ್ಲಿ ಕೆಲವು ಎಚ್ಚರಿಕೆಯ ಸಂದೇಶಗಳನ್ನು ನಾವು ಇಂತಹ ಹಬ್ಬ ಹರಿದಿನಗಳಲ್ಲಿ ಹಂಚಿಕೊಂಡು, ಜೀವನದ ಗಾಡಿಯನ್ನು ಮತ್ತೆ ದಾರಿಗೆ ತರುವ ಸಫಲತೆಯನ್ನು ಕಂಡುಕೊಳ್ಳುವ ಮಾರ್ಗವೇ, ಈ ದೀಪಾವಳಿಯ ಪರಸ್ಪರ ಸಂದೇಶ ವಿನಿಮಯದ ವಿಧಿಗಳು. ಎಲ್ಲರಿಗೂ ಮಂಗಳವಾಗಲಿ.