ದೀಪಾವಳಿ ಅಮಾವಾಸ್ಯೆ ದಿನ ಕೈಲಾಸವಾಗುವ ಪುಣ್ಯ ಕ್ಷೇತ್ರ !
ಪ್ರತಿ ವರ್ಷದಂತೆ ದೀಪಾವಳಿ ಅಮಾವಾಸ್ಯೆ ದಿನ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಆ ದೇವಾಲಯಕ್ಕೆ ಬರುತ್ತಾರಂತೆ, ನಂಬಲು ಅಸಾಧ್ಯವಾದರೂ ನಂಬಲೇಬೇಕಂತೆ. ಯಾಕೆಂದರೆ ಇಲ್ಲಿರುವ ದೇವಸ್ಥಾನದ ಕೆಲವು ಕಳಸಗಳಿಗೆ ಬಟ್ಟೆಯೊಂದು ಸುತ್ತಿದಂತೆ ಕಾಣುತ್ತದೆ. ಇದನ್ನು ‘ಮುಂಡಾಸ್’ ಅಂತಾರೆ. ಇದನ್ನ ಸುತ್ತುತ್ತಿರುವವರು ಬೇರಾರೂ ಅಲ್ಲ ಸಾಕ್ಷತ್ ಶಿವ ಪಾರ್ವತಿಯರಂತೆ.
ಹೌದು ಸುಳ್ಳಲ್ಲಾ, ಇದು ನಂಬಿಕೆಯ ಸಂಗತಿ. ಅಮಾವಾಸ್ಯೆಯ ನಟ್ಟ ನಡುರಾತ್ರಿ ದಿನ. ಶಿವ-ಪಾರ್ವತಿಯರು ಬಂದು ಈ ದೇವಾಲಯದ ಕಳಸಕ್ಕೆ ಮುಂಡಾಸ್ ಸುತ್ತಿ ಹೋಗುತ್ತಾರಂತೆ, ಹೌದು ವಿಚಿತ್ರವಾದ್ರೂ ಇದು ಸತ್ಯವಂತೆ ಯಾರೊಬ್ಬರೂ ಆ ದೇವಸ್ಥಾನದ ಬಳಿ ಆ ಸಮಯದಲ್ಲಿ ಆ ರಾತ್ರಿಯಂದು ಸುಳಿಬಾರದಂತೆ. ಯಾಕೆಂದರೆ ಅದಕ್ಕೆ ಒಂದು ಕಾರಣವಿದೆ. ಅದಕ್ಕೆ ಆ ದಿನ ದೇವಾಲಯವನ್ನು ಬಿಟ್ಟು ಹೊರಗಡೆ ಭಕ್ತರು ಮಲಗಿರುತ್ತಾರಂತೆ, ಯಾಕೆಂದರೆ ಶಿವ ಪಾರ್ವತಿ ಪ್ರತ್ಯಕ್ಷರಾಗಿ ಆ ದೇವಾಲಯಕ್ಕೆ ಬಂದು ಮುಂಡಾಸವನ್ನು ಸುತ್ತುವುದನ್ನು ಯಾರು ನೋಡಬಾರದಂತೆ, ಒಂದು ವೇಳೆ ಅದನ್ನ ಯಾರಾದ್ರೂ ನೋಡುವ ಸಾಹಸಕ್ಕೆ ಹೋದ್ರೆ ಅವರಿಗೆ ಕಣ್ಣು ಕುರುಡಾಗಿ ಹೋಗುತ್ತದೆ. ಅಂತಹ ನಂಬಿಕೆ ಇಲ್ಲಿನ ಭಕ್ತರದಾಗಿದೆ, ಆದರೂ ಕೆಲವರು ನೋಡಲೇ ಬೇಕು ಎಂದು ಹುಚ್ಚು ಸಾಹಸ ಮಾಡಲು ಹೋಗಿ ಕೆಟ್ಟ ಪರಿಣಾಮ ಎದುರಿಸಿದ್ದಾರಂತೆ, ಇನ್ನು ಕೆಲವರು ತಮ್ಮ ತಮ್ಮ ಕಣ್ಣು ಕಳೆದುಕೊಂಡಿದ್ದಾರಂತೆ..
ಅಸಲಿಗೆ ಸಾಕ್ಷತ್ ಪಾರ್ವತಿ ಪರಮೇಶ್ವರರು ಪ್ರತ್ಯಕ್ಷರಾಗಲು ಕಾರಣವೇನು? ಶಿವ ಪಾರ್ವತಿ ಇಲ್ಲಿಗೆ ಬರುವುದಕ್ಕೆ ಕಾರಣರಾದ ವ್ಯಕ್ತಿ ಯಾರು? ಹುಲಿಜಂತಿ ಮಾಳಿಂಗರಾಯರೆಂಬ ಆ ವ್ಯಕ್ತಿ ಹೇಗೆ ಕಾರಣರಾದರು? ಇಲ್ಲಿದೆ ನೋಡಿ ಅವರ ನಿಜವಾದ ಕಥಾ ಸಾರಾಂಶ.
ಒಮ್ಮೆ ಮಳೆ ಬಂದು ಹೊಳೆಯನ್ನು ದಾಟಲು ಜನರು ಪರದಾಡುತ್ತಿದ್ದರು. ಆಗ ಅವರನ್ನು ನೋಡಿದ ಮಾಳಿಂಗರಾಯರು ಕಂಬಳಿ ಹಾಸಿ ಅದರ ಮೇಲೆ ಜನರನ್ನು ಕೂಡಿಸಿ ಆ ನದಿಯ ಹೊಳೆ ದಡಕ್ಕೆ ಸೇರಿಸಿದ್ದರಂತೆ. ಶ್ರೀಮಾಳಿಂಗರಾಯರು ಒಂಬತ್ತು ಜನ ಗುರುಗಳನ್ನು ಪೂಜಿಸುತ್ತಿದರಂತೆ. ಅದರಲ್ಲಿ ಒಬ್ಬ ಗುರು ಮಾಳಿಂಗರಾಯರ ಭಕ್ತಿ ನೋಡುವ ಸಲುವಾಗಿ ಹುಲಿಯ ಹಾಲಿನಿಂದ ತಯಾರಿಸಿದ ಗಿಣ್ಣನ್ನು ತಂದು ಕೊಡುವಂತೆ ಶ್ರೀಮಾಳಿಂಗರಾಯರನ್ನು ಕೇಳಿದನಂತೆ. ಆಗ ಮಾಳಿಂಗರಾಯ ಆಗಲಿ ಎಂದು ಒಪ್ಪಿಕೊಂಡು ಹುಲಿಯ ಗಿಣ್ಣನ್ನು ತಂದು ಕೊಟ್ಟರಂತೆ. ಆದರೂ ಗುರುಗಳು ಇದನ್ನು ಕಂಡು ಅನುಮಾನಗೊಳ್ಳುತ್ತಾರೆ, ಇದನ್ನರಿತ ಶ್ರೀಮಾಳಿಂಗರಾಯರು ಸೀದಾ ಕಾಡಿನೊಳಗೆ ಹೋಗಿ ಜೀವಂತ ಹುಲಿ ಹಾಗೂ ಮರಿಗಳೊಂದಿಗೆ ಗುರುಗಳ ಮುಂದೆ ಪ್ರತ್ಯಕ್ಷವಾಗಿ ಹುಲಿಯ ಹಾಲು ಕರೆದು ಕೊಡುತ್ತಾರೆ. ಇದನ್ನು ನೋಡಿದ ಶಿವನು ದಿಗ್ಭ್ರಮೆಗೊಂಡು ಇವರ ಭಕ್ತಿಗೆ ಮೆಚ್ಚಿ ಶಿಷ್ಯನನ್ನು ಕೊಂಡಾಡಿ ಶ್ರೀಮಾಳಿಂಗರಾಯ ಬೇಡಿದ ವರವನ್ನು ಕರುಣಿಸಿದನಂತೆ.
ಶ್ರೀ ಮಾಳಿಂಗರಾಯರ ಮುಂಡಾಸದ ಹಿನ್ನಲೆ :
ಶತ ಶತಮಾನದ ಕಾಲದ ಹಿಂದೆ ಶರಣರು ಸತ್ ಪುರುಷರು ಜನ್ಮ ತಾಳಿದ ಈ ಭರತ ಭೂಮಿಯಲ್ಲಿ ಮಹಾ ಮಹಿಮ ಮಾಳಿಂಗರಾಯರು ಕೂಡ ಒಬ್ಬರು ಅಂದ್ರೆ ಅಚ್ಚರಿ ಪಡಬೇಕಾಗಿಲ್ಲ. ಇವರು ಹುಟ್ಟಿ ಐಕ್ಯರಾಗಿದ್ದು ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಮಂಗಳವಾಡಿ ತಾಲೂಕಿನ ಹುಲಿಜಂತಿ ಎಂಬ ಪುಟ್ಟ ಗ್ರಾಮದಲ್ಲಿ ಅಂತ ಹೇಳಬಹುದು. ಮಾಳಿಂಗರಾಯ ಮೂಲತಃ ಕುರುಬ ಜನಾಂಗಕ್ಕೆ ಸೇರಿದವರಾಗಿದ್ದರಿಂದ ಕುರಿ ಕಾಯುವುದು ಅವರ ಮೂಲ ಕಸುಬು ಆಗಿತ್ತು.
ಸುಮಾರು 14ನೇ ಶತಮಾನಕ್ಕಿಂತಲೂ ಹಿಂದೆ ಮಹಾ ತಪಸ್ವಿ, ಗುರು ಭೀರಲಿಂಗೇಶ್ವರರ ಶಿಷ್ಯರಾದ ಮಾಳಿಂಗರಾಯರು ಗುರು ಒಡ್ಡಿದ ಅನೇಕ ಪರೀಕ್ಷೆಗಳನ್ನು ಗೆದ್ದು ಪರಶಿವನೆ ಇವರ ಪರೀಕ್ಷೆಗಾಗಿ ಭೂಮಿಗೆ ಬರುತ್ತಾರಂತೆ. ಒಮ್ಮೆ ಮಾಳಿಂಗರಾಯರು ತನ್ನ ಗುರುವಾದ ಬೀರಣ್ಣ ದೇವರರನ್ನ ಭಕ್ತಿಯಿಂದ ಪೂಜೆ ಮಾಡುತ್ತಿರುವಾಗ ಧೂಪದ (ಲೋಬಾನದ) ಹೊಗೆ ಕೈಲಾಸಕ್ಕೆ ಹೋಗುತ್ತದೆ. ಅಲ್ಲಿ ಶಿವಪಾರ್ವತಿಯರು ಪಗಡೆ ಆಡುತ್ತಿರುತ್ತಾರೆ. ಹೊಗೆಯನ್ನು ನೋಡಿದ ಪಾರ್ವತಿದೇವಿಯು ಶಿವನಿಗೆ ಕೇಳುತ್ತಾರೆ, ಭೂ- ಕೈಲಾಸದಲ್ಲಿ ಈ ರೀತಿಯಾಗಿ ಪೂಜಿಸುವ ಭಕ್ತ ಯಾರಿರಬಹುದು ಅಂದಾಗ, ಶಿವ ಹೇಳುತ್ತಾನಂತೆ - ಇಂತಹವನು ಶ್ರೀಗುರು ಭೀರಣ್ಣ ದೇವರ ಶಿಷ್ಯ ಶ್ರೀಮಾಳಿಂಗರಾಯ. ಆಗ ಪಾರ್ವತಿದೇವಿಯು ಶಿವನಿಗೆ ಹೇಳುತ್ತಾರೆ, ಇವನ ಭಕ್ತಿ ನೋಡಬೇಕು, ಶಿವ ಪಾರ್ವತಿಯರು ಬೇರೆ ರೂಪದಲ್ಲಿ ಜನ್ಮ ತಾಳಿ ಕೈಲಾಸದಿಂದ ಧರೆಗಿಳಿದು ಶ್ರೀಮಾಳಿಂಗರಾಯನಿರುವ ಜಾಗದಲ್ಲಿ ಬಂದು ಇಳಿಯುತ್ತಾರೆ, ಮಹಾ ರೋಗ ಬಂದು ನರಳುವಂತೆ, ಮೈಯಿಂದ ಕೀವು, ರಕ್ತ ಸೋರುವಂತೆ ಮಾಡಿ ನರಳಾಡುತ್ತಿರುತ್ತಾರೆ. ಆಗ ಅಲ್ಲಿಗೆ ಬಂದ ಶ್ರೀಮಾಳಿಂಗರಾಯರು ಇವರನ್ನು ನೋಡಿ ಹಿಂದೆ ಮುಂದೆ ನೋಡದೆ ಅವರನ್ನು ಎತ್ತಿಕೊಂಡು ಬಂದು ಆರೈಕೆ ಮಾಡುತ್ತಾರೆ. ಆಗ ಅವರ ಮೈ ಕೈಯಿಂದ ಸೋರುತ್ತಿರುವ ಕೀವು, ಕೆಟ್ಟ ರಕ್ತವನ್ನು ತನ್ನ ನಾಲಿಗೆಯಿಂದ ನೆಕ್ಕಿ ಅವರನ್ನು ಗುಣಮುಖರನ್ನಾಗಿ ಮಾಡುತ್ತಾರೆ. ಶ್ರೀಮಾಳಿಂಗರಾಯರ ಭಕ್ತಿ ಹಾಗೂ ಅವರ ಸೇವೆಯನ್ನ ಮೆಚ್ಚಿದ ಶಿವ ಪಾರ್ವತಿಯರು ಸಾಕ್ಷತ್ ರೂಪ ತಾಳಿ ಹೇಳುತ್ತಾರಂತೆ. ನಿನ್ನ ಈ ನಿಸ್ವಾರ್ಥ ಸೇವೆಗೆ ಮೆಚ್ಚಿದ್ದೇವೆ, ನಿನಗೆ ಏನು ವರ ಬೇಕು ಕೇಳು ಮಾಳಿಂಗರಾಯ ಎಂದು ಅಂದಾಗ, ಮಾಳಿಂಗರಾಯ ನನಗೆ ಏನು ಬೇಡ ಈ ಧರೆಯ ಮೇಲೆ ಸೂರ್ಯ ಚಂದ್ರರು ಇರುವವರೆಗೂ, ಭೂಮಿಯಲ್ಲಿ ಗಂಗೆ ಹರಿಯುವವರೆಗೂ, ನನಗೆ ಪ್ರತಿ ವರ್ಷ ದೀಪಾವಳಿಯ ಅಮಾವಾಸ್ಯೆಯ ಸುದಿನದಂದು ಕೈಲಾಸದಿಂದ ಧರೆಗಿಳಿದು ನನಗೆ ಮುಂಡಾಸವನ್ನ ಮಾಡಿ (ಕಟ್ಟಿ) ಹೋಗಬೇಕು ಅಂತ ಬೇಡಿಕೆ ಇಡುತ್ತಾರೆ.
ಇವರ ಭಕ್ತಿ ಸೇವೆಯನ್ನು ಮೆಚ್ಚಿ ಇವರಿಗೆ ಅಭಯವಿತ್ತು ಒಪ್ಪಿದ ಶಿವಪಾರ್ವತಿಯರು ಆಗಲಿ, ತಥಾಸ್ತು ಎಂದು ಒಪ್ಪಿಗೆ ಕೊಡುತ್ತಾರಂತೆ. ಮಾಳಿಂಗರಾಯರಿಗೆ ಮಾತು ಕೊಟ್ಟಂತೆ ಅಂದಿನಿಂದ ಇಂದಿನವರೆಗೂ ಈ ಕಲಿಯುಗದಲ್ಲಿ ಇನ್ನೂ ಮುಂಡಾಸ್ ಮಾಡುವುದು ನಡೆದುಕೊಂಡು ಬರುತ್ತಿರುವುದು ಅಚ್ಚರಿಯ ಸಂಗತಿಯೇ ಸರಿ. ದೇವರೇ ಇಲ್ಲವೆನ್ನುವ ಈ ಕಾಲದಲ್ಲಿ ಇದೆಲ್ಲಾ ಜರುಗುತ್ತಿರುವುದು ಶಿವನ ಮಹಿಮೆ ಅಲ್ಲದೆ ಮತ್ತೇನು? ಅಥವಾ ಇವರ ಭಕ್ತಿ ಸೇವೆಗೆ ಶಿವ ನಿಜವಾಗಿಯೂ ಪ್ರತ್ಯಕ್ಷನಾದನಾ? ಅವರವರ ನಂಬಿಕೆಗೆ ಬಿಟ್ಟ ಸಂಗತಿ.
ಶ್ರೀ ಮಾಳಿಂಗರಾಯರು ಭೀರಲಿಂಗನ ಪರಮ ಭಕ್ತರಾಗಿದ್ದು, ಶಿವನೊಂದಿಗೆ ಷರತ್ತು ಕಟ್ಟಿ ಕಂಬಳಿ ಬಿಸಿ ಮಳೆ ತರಿಸಿದು ಪವಾಡ ಅಲ್ವೇ? ಶಿವನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯ ದಿನ ಶಿವ ಪಾರ್ವತಿಯರೇ ಈ ಧರೆಗೆ ಬಂದು ಮುಂಡಾಸ್ ಅರ್ಪಿಸುತ್ತಾರಂತೆ, ನಿಜವಾ? ಹೌದು, ಅಚ್ಚರಿ ಆದ್ರೂ ಇಂದಿಗೂ ಈ ಘೋರ ಕಲಿಯುಗದಲ್ಲಿ ಮುಂಡಾಸ್ ಆಗುತ್ತಿರುವುದು ನಿಜವಾ? ನಂಬಲೇಬೇಕಾದ ಸತ್ಯನಾ?
ಒಮ್ಮೆ ಭಕ್ತರೊಬ್ಬರು ಮಾಳಿಂಗರಾಯರ ಸತ್ಯ ಪವಾಡವನ್ನು ಪರೀಕ್ಷಿಸಲು ಹೋಗಿ ಕಣ್ಣನ್ನು ಕಳೆದುಕೊಂಡರಂತೆ, ಹೌದು, ನಿಜವಾಗಿಯೂ ನಡೆದಂತಹ ಘಟನೆಯಂತೆ. ನಂತರ ತಪ್ಪಾಯ್ತು ತಂದೆ ಇನ್ನು ಮುಂದೆ ನಿನ್ನ ಪೂಜೆಗೆ ನಮ್ಮ ಮನೆತನದಿಂದ ನೈವೇದ್ಯ ತಂದು ಕೋಡುತ್ತೇವೆ, ನನ್ನನ್ನು ಕ್ಷಮಿಸು ಬಿಡು ಎಂದು ಮಾಳಿಂಗರಾಯರಲ್ಲಿ ಬೇಡಿದಾಗ ಅವರಿಗೆ ದೃಷ್ಟಿ ಮರಳಿ ಬಂತಂತೆ. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯಂದು ಶ್ರೀಮಾಳಿಂಗರಾಯರಿಗೆ ಜತ್ತ ಮನೆತನದವರೇ ಮೊದಲ ನೈವೇದ್ಯ ಪೂಜೆ ಮಾಡುತ್ತಾರಂತೆ. ಹೌದು, ಇದಕ್ಕೆಲ್ಲಾ ಉತ್ತರ ಅಲ್ಲಿ ಪ್ರತಿ ವರ್ಷ ಸೇರುವ ಜನರೇ ಸಾಕ್ಷಿ. ಅಲ್ಲಿ ನಡೆಯುವ ಪವಾಡಗಳೇ ಸಾಕ್ಷಿಯಾಗಿದೆ ಎಂದು ಹೇಳಬಹುದಂತೆ.
ಈ ಪವಾಡವನ್ನ ನೋಡಲು ದೂರದ ಊರಿಂದ ಅಂದ್ರೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕದಿಂದ ಸುಮಾರು ಲಕ್ಷಾಂತರ ಭಕ್ತರು ತಮ್ಮ ಪರಿವಾರದೊಂದಿಗೆ ಆಗಮಿಸಿ ದೀಪಾವಳಿ ಅಮಾವಾಸ್ಯೆ ದಿನ ಅಲ್ಲಿ ಸೇರಿರುತ್ತಾರೆ, ಶ್ರೀಮಾಳಿಂಗರಾಯರ ಮುಂಡಾಸದ ಪವಾಡ ನೋಡಿ ಆಶ್ಚರ್ಯ ಚಕಿತರಾಗುತ್ತಾರೆ, ನಂತರ ದೇವರ ದರ್ಶನ ಪಡೆದು ಭಂಡಾರದಲ್ಲಿ ಮಿಂದೆದ್ದು ಪಾವನರಾಗುತ್ತಾರೆ. ಈ ಜಾತ್ರೆಯ ದಿನ ಎಲ್ಲಿ ನೋಡಿದರಲ್ಲಿ ಭಕ್ತ ಜನ ಸಾಗರವೆ ಕಣ್ಣಿಗೆ ಕಾಣುತ್ತದೆ. ಅಬ್ಬಬ್ಬಾ ಭಕ್ತರು ಭಂಡಾರವನ್ನು ಹಾರಿಸುತ್ತಿರುವ ದೃಶ್ಯ ನೋಡಿದ್ರೆ ಮೈ ಜುಮ್ ಎಂದು ರೊಮಾಂಚನವಾಗುತ್ತೆ.. ಜಾತ್ರೆಯ ದಿನ ಈ ದೇವಾಲಯದಲ್ಲಿ ದರ್ಶನ ಪಡೆಯುತ್ತಿರುವ ಶ್ರೀಮಾಳಿಂಗರಾಯನ ಭಕ್ತ ಸಮೂಹವನ್ನು ನೋಡಿ ಒಂದು ಕ್ಷಣ ನಾವಂತೂ ಮೂಕ ವಿಸ್ಮಿತರಾಗುವುದಂತೂ ಖಂಡಿತ. ಶ್ರೀ ಮಾಳಿಂಗರಾಯರ ಜಾತ್ರೆಯನ್ನು ಕಣ್ಣುತುಂಬಿಕೊಳ್ಳಲು ಲಕ್ಷಾಂತರ ಜನ ಭಕ್ತರು ಇಲ್ಲಿಗೆ ಬಂದಿರುತ್ತಾರೆ, ಈ ದೇವಾಲಯಕ್ಕೆ ಮೊದಲು ಭಂಡಾರವನ್ನು ಹಾರಿಸಿ ಮುಂಡಾಸವನ್ನು ನೋಡುತ್ತಾರೆ. ಪಳ ಪಳ ಹೊಳೆಯುತ್ತಿರುವ ಹತ್ತಿಯ ರುಮಾಲು ಬೆಳಗಾಗುತ್ತಿದಂತೆ ತನ್ನ ಮೊದಲಿನ ರೂಪದ ಸ್ಥಿತಿಗೆ ಬಂದಿರುತ್ತದೆ. ಯಾಕೆಂದರೆ ಉಣ್ಣೆ ಭಂಡಾರದಿಂದ ಆ ರುಮಾಲ್ ಮುಚ್ಚಿ ಹೋಗಿರುತ್ತದೆ. ಇದಾದ ನಂತರ ಸಾಯಂಕಾಲ 4-5 ರ ಸಮಯಕ್ಕೆ ಪಲ್ಲಕ್ಕಿಯು ಹಿರೆ ಹಳ್ಳದಲ್ಲಿ ಮೆರವಣಿಗೆ ಹೊರಡುತ್ತದೆ, ಉಣ್ಣೆ ಬಂಡಾರ ಹಾರಿಸಲು ಲಕ್ಷಾಂತ ಭಕ್ತರು ಕಾತರದಿಂದ ಇಲ್ಲಿಗೆ ಬಂದಿರುತ್ತಾರೆ, ಹಿರೆಹಳ್ಳದಲ್ಲಿ (ಹಾಳ ಹಳ್ಳ) ಏಳೂರು ಪಲ್ಲಕ್ಕಿಗಳು ಶ್ರೀ ಮಾಳಿಂಗರಾಯನ ಭಕ್ತಿ ನೋಡುವ ಸಲುವಾಗಿ ಮೆರವಣಿಗೆಯಲ್ಲಿ ಬಂದು ಶ್ರೀಮಾಳಿಂಗರಾಯನ ಪಲ್ಲಕ್ಕಿಗೆ ಡಿಕ್ಕಿ ಹೊಡೆಯುತ್ತವೆ. ಆದರೂ ಸಹ ಆಗ ಶ್ರೀಮಾಳಿಂಗರಾಯನ ಪಲ್ಲಕ್ಕಿ ಜಪ್ಪಯ್ಯ ಅಂದ್ರೂ ಹಿಂದೆ ಮುಂದೆ ಅಲ್ಲಾಡುದಿಲ್ಲವಂತೆ. ಇದನ್ನೇ ಅಲ್ವಾ ನಿಜವಾದ ಪವಾಡ ಅನ್ನುವುದು. ಇಲ್ಲಿಗೆ ಬರುವ ಭಕ್ತರ ಜಯ ಘೋಷವೇ ಬೇರೆ, ಅದಾದ ನಂತರ ಬೇರೆ ಬೇರೆ ದೂರದ ಊರಿಂದ ಬಂದಂತಹ ಭಕ್ತರು ಶ್ರೀಮಾಳಿಂಗರಾಯರನ್ನ ನೆನೆಯುತ್ತಾ ಜೈಕಾರ ಹಾಕುತ್ತಾ ತಮ್ಮ ತಮ್ಮ ಸ್ಥಳಗಳ ಕಡೆಗೆ ಪ್ರಯಾಣ ಹೊರಡುತ್ತಾರೆ.
(ಶ್ರೀ ಮಾಳಿಂಗರಾಯರ ಪವಾಡಗಳು ನೂರಾರು. ಕೆಲವೊಂದನ್ನ ಆಯ್ದು ಬರೆಯಲಾಗಿದೆ.)
-ಚಂದ್ರಕಾಂತ ಪೂಜಾರ ಅಮ್ಮಾಪುರ
ಚಿತ್ರ ಕೃಪೆ: ಇಂಟರ್ನೆಟ್ ತಾಣ