ದೀಪಾವಳಿ... ಒಂದು ಕಿರು ಪರಿಚಯ .....
"ನರಕ ಚತುರ್ದಶಿ" ಈ ಹೆಸರೇ ತಿಳಿಸುವಂತೆ ನರಕಕ್ಕೆ ಹೆದರುವವರು ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯ ದಿನ ಚಂದ್ರೋದಯವಾದ ನಂತರ ತಿಲ ತೈಲಾಭ್ಯಂಗ (ಎಳ್ಳೆಣ್ಣೆ ಯಿಂದ ಅಭ್ಯಂಗ ಸ್ನಾನ) ಮಾಡಬೇಕು. ಈ ಅಭ್ಯಂಗ ಸ್ನಾನಕ್ಕೆ ರಾತ್ರಿ ಚಂದ್ರೋದಯವಾದ ನಂತರ ಹಾಗೂ ಸೂರ್ಯೋದಯಕ್ಕೆ ಮೊದಲು ಅತ್ಯಂತ ಮುಖ್ಯ ಕಾಲವಾಗಿರುತ್ತದೆ. ಈ ಮೇಲೆ ಹೇಳಿದ ದಿನ ಹಾಗೂ ಕಾಲದಲ್ಲಿ ತಿಲ ತೈಲಾಭ್ಯಂಗ ಮಾಡುವುದರಿಂದ ನರಕ ಭಯ ನಿಯಾರಣೆಯಾಗುತ್ತದೆಂದು ಧರ್ಮಸಿಂಧುವಿನಲ್ಲಿ ಹೇಳಲ್ಪಟ್ಟಿದೆ. ತ್ರಯೋದಶಿಯ (ಹಿಂದಿನ ದಿನದ) ದಿನ ರಾತ್ರಿ (ಕೆಲವೆಡೆ ಬೆಳಗಿನ ಜಾವ ನಾಲ್ಕು ಘಂಟೆಗೆ) ಮನೆಯ ಹೊರಭಾಗದಲ್ಲಿ ಅಪಮೃತ್ಯು ನಿವಾರಣೆಗಾಗಿ, ಯಮನ ಪ್ರೀತಿಗಾಗಿ ಎರಡು ದೀಪಗಳನ್ನು ಹೊತ್ತಿಸಿ ನಂತರ ದೇವರಿಗೆ ದೀಪ ಹಚ್ಚಿ ದೇವರ ಮುಂದೆ ಮಕ್ಕಳನ್ನು ಹಾಗೂ ಮನೆಯವರನ್ನು ಕೂರಿಸಿ ಹಣೆಗೆ ಕುಂಕುಮವನ್ನಿರಿಸಿ ತಲೆಗೆ ಎಣ್ಣೆಯನ್ನಿಟ್ಟು ನಂತರ ಅಭ್ಯಂಗ ಮಾಡುವ ಪದ್ಧತಿಯು ನಮ್ಮ ಹಿಂದೂ ಧರ್ಮದ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿದೆ. ಮೇಲೆ ಹೇಳಿದ ಕಾಲದಲ್ಲಿ ಸ್ನಾನ ಮಾಡಲಾಗದಿದ್ದರೆ ಸೂರ್ಯೋದಯದ ನಂತರವಾದರೂ (ಗೌಣ ಕಾಲ) ಅಭ್ಯಂಗ ಸ್ನಾನ ಮಾಡಲೇಬೇಕು. ಈ ನರಕ ಚತುರ್ದಶಿಯಿಂದ ಮೂರು ದಿನಗಳು ಅಂದರೆ ಚತುರ್ದಶಿ, ಅಮಾವಾಸ್ಯೆ ಹಾಗೂ ಪಾಡ್ಯ ಅವಶ್ಯಕವಾಗಿ ಅಭ್ಯಂಗ ಸ್ನಾನವನ್ನು ಮಾಡಬೇಕು ಇಲ್ಲವಾದರೆ ನರಕಪ್ರಾಪ್ತಿ ಮೊದಲಾದ ದೋಷಗಳು ಪ್ರಾಪ್ತವಾಗುತ್ತದೆಂದೂ, ಆಚರಿಸಿದಲ್ಲಿ ಐಶ್ವರ್ಯ ಪ್ರಾಪ್ತಿ, ದಾರಿದ್ರ್ಯ ನಿವಾರಣೆ ಮೊದಲಾದ ಶುಭಫಲಗಳು ಉಂಟಾಗುವುದೆಂದು ಧರ್ಮಸಿಂಧುವಿನಲ್ಲಿ ಹೇಳಿದ್ದಾರೆ.
ಗೋವರ್ಧನ ಪರ್ವತದ ಬಳಿ ಇರುವವರು ಅದನ್ನೇ ಪೂಜಿಸತಕ್ಕದ್ದು. ಬೇರೆ ಕಡೆ ಇರುವವರು ಗೋಮಯ (ಸಗಣಿ) ಅಥವಾ ಅನ್ನದ ರಾಶಿಯಿಂದ ಗೋವರ್ಧನ ಪರ್ವತವನ್ನು ನಿರ್ಮಿಸಿ " ಗೋವರ್ಧನ ಧರಾಧಾರ ಗೋಕುಲ ತ್ರಾಣಕಾರಕ| ವಿಷ್ಣುಬಾಹು ಕೃತಚ್ಛಾಯ ಗವಾಂ ಕೋಟಿ ಪ್ರದೋಭವ|| " ಎಂಬ ಮಂತ್ರದಿಂದ ಶ್ರೀ ಕೃಷ್ಣನ ಪ್ರೀತ್ಯರ್ಥವಾಗಿ ಪೂಜಿಸಿ ನೂತನ ವಸ್ತ್ರಗಳನ್ನು ಧರಿಸಿಕೊಂಡು ಮೃಷ್ಟಾನ್ನ ಭೋಜನ ಮಾಡಬೇಕು.