ದೀಪಾವಳಿ ಮತ್ತೆ ಬಂದಿದೆ. ದೀಪವ ಬೆಳಗೋಣ ಬನ್ನಿ..
ದೀಪಾವಳಿ- ಹೆಸರೇ ಹೇಳುವಂತೆ ದೀಪಗಳ ಹಬ್ಬ. ನಾವು ಸಣ್ಣವರಿರುವಾಗ ಆಚರಣೆಯಲ್ಲಿ ಇದ್ದ ಸಂಭ್ರಮ ಈಗ ದೊಡ್ಡವರಾದ ಮೇಲೆ ಕಮ್ಮಿ ಆಗಿದೆ ಎಂದು ನಮಗೆ ಅನಿಸಿದರೂ ಈಗಿನ ಮಕ್ಕಳಿಗೆ ದೀಪಾವಳಿ ಸಂಭ್ರಮದ ಹಬ್ಬವೇ. ಏಕೆಂದರೆ ದೀಪಾವಳಿ ಸಮಯದ ಹೊಸ ಬಟ್ಟೆಗಳು, ಹೂವು ಹಣ್ಣುಗಳು, ಸಿಹಿ ತಿಂಡಿಗಳು, ಆಕಾಶ ಬುಟ್ಟಿ, ಮನೆಗೆ ಬರುವ ಬಂಧು ಮಿತ್ರರು, ಎಣ್ಣೆ ಸ್ನಾನ, ಗೋಪೂಜೆ ಎಲ್ಲದಕ್ಕಿಂತ ಮಿಗಿಲು ಪಟಾಕಿಗಳು. ಬಾಲ್ಯದಲ್ಲಿ ನಮಗೆ ಪಟಾಕಿ ಹೊಡೆಯುವ ಸಂಭ್ರಮವೇ ಬೇರೆಯಾಗಿತ್ತು. ಪಟಾಕಿಯನ್ನು ಸಿಡಿಸಲು ಈಗಿನಂತೆ ನಿರ್ಭಂಧಗಳಿರಲಿಲ್ಲ. ಹಸಿರು ಪಟಾಕಿ, ಶಬ್ದ ರಹಿತ, ವಾಯು ಮಾಲಿನ್ಯ ರಹಿತ ಪಟಾಕಿಗಳು ಎಂಬ ತಲೆ ಬಿಸಿಯಿರಲಿಲ್ಲ. ಕೇವಲ ಶಬ್ದ ಮಾತ್ರ ಬರುವ ಬಿಡಿ (ಸಿಂಗಲ್) ಪಟಾಕಿಯನ್ನೇ ದಿನವಿಡೀ ಊದುಬತ್ತಿಯ ಸಹಾಯದಿಂದ ಸಿಡಿಸಿ ಸಂಭ್ರಮಿಸುತ್ತಿದ್ದೆವು. ದೀಪಾವಳಿ ಮುಗಿದ ಬಳಿಕವೂ ಅಲ್ಲಲ್ಲಿ ಕಸದ ರಾಶಿಯಲ್ಲಿ ಸಿಡಿಯದೇ ಉಳಿದ ಪಟಾಕಿಯನ್ನು ಆರಿಸಿ ಅವುಗಳ ಮದ್ದನ್ನು ಹೊರತೆಗೆದು, ಅದನ್ನು ಒಂದು ಪೇಪರಿನಲ್ಲಿ ಹಾಕಿ ಅದಕ್ಕೆ ಬೆಂಕಿಕೊಟ್ಟು ಅದರ ಸೊಬಗು ನೋಡುತ್ತಿದ್ದೆವು.
ಇಂದು ದೀಪಾವಳಿ ಬಹುತೇಕ ವ್ಯವಹಾರಿಕವಾಗಿದೆ. ಹೂವಿನ ಬೆಲೆ ಗಗನ ಮುಟ್ಟಿದೆ. ಪಟಾಕಿಗೆ ನಿರ್ಭಂಧವಿದೆ. ಮಕ್ಕಳು ಮೊಬೈಲ್ ನಲ್ಲಿ ಬಿಸಿ. ಹೆತ್ತವರಿಗೆ ತಮ್ಮ ಕಚೇರಿ ಕೆಲಸದಿಂದ ಪುರುಸೊತ್ತಿಲ್ಲ. ಯಾಂತ್ರಿಕ ಬದುಕು ಕಡೇ ಪಕ್ಷ ಮನೆಯ ಎದುರು ಎರಡು ದೀಪವನ್ನೂ ಉರಿಸಲು ಬಿಡುವಿಲ್ಲದ್ದಾಗಿದೆ ಈ ಜೀವನ. ನಗರಗಳಲ್ಲಿ ಬಹುತೇಕ ಈ ವಾತಾವರಣ ಕಂಡು ಬಂದರೂ ಹಳ್ಳಿಗಳಲ್ಲಿ ಇನ್ನೂ ದೀಪಾವಳಿಯ ಸೊಗಡು ಜೋರಾಗಿದೆ.
ದೀಪಾವಳಿಯು ಈಗ ಮೂರು ದಿನಗಳ ಸಂಭ್ರಮಕ್ಕೆ ಸೀಮಿತವಾಗಿದೆ. ಮೊದಲು ಐದು ದಿನವಾಗಿ ಆಚರಿಸುತ್ತಿದ್ದರೆಂದು ಹಿರಿಯರು ಹೇಳುತ್ತಾರೆ. ಮೊದಲ ದಿನ ನರಕ ಚತುರ್ದಶಿ. ಈ ದಿನದ ಆಚರಣೆಯ ಪೌರಾಣಿಕ ಹಿನ್ನಲೆಯನ್ನು ಗಮನಿಸಿದಾಗ, ದ್ವಾಪರಾಯುಗದಲ್ಲಿ ನರಕಾಸುರನೆಂಬ ರಾಕ್ಷಸನು ಬ್ರಹ್ಮದೇವನ ತಪಸ್ಸು ಮಾಡಿ ತಾನು ಭೂದೇವಿಯ ಮಗನಾದುದರಿಂದ ತನಗೆ ತಾಯಿಯಿಂದ ಮಾತ್ರ ಮರಣ ದೊರೆಯಲಿ ಎಂದು ವರ ಬೇಡುತ್ತಾನೆ. ಈ ವರದ ಪ್ರಭಾವದಿಂದ ನರಕಾಸುರನ ಕ್ರೂರ ಕೆಲಸಗಳು ಅಧಿಕವಾಗುತ್ತವೆ. ಹದಿನಾರು ಸಾವಿರ ಸ್ತ್ರೀಯರನ್ನು ನರಕಾಸುರನು ಬಂಧಿಸುತ್ತಾನೆ. ಅವರನ್ನು ಬಿಡಿಸಲು ಶ್ರೀಕೃಷ್ಣನು ಹೊರಟಾಗ ಸತ್ಯಭಾಮಳು ತಾನೂ ಬರುವೆ ಎಂದು ಹಠ ಮಾಡುತ್ತಾಳೆ. ಶ್ರೀಕೃಷ್ಣನಿಗೆ ನರಕಾಸುರನ ವರದ ವಿಷಯವು ಗೊತ್ತಿದ್ದ ಕಾರಣ ಸತ್ಯಭಾಮಳನ್ನು ತನ್ನ ಜೊತೆ ಕರೆದೊಯ್ಯುತ್ತಾನೆ. ಯುದ್ಧದಲ್ಲಿ ನರಕಾಸುರನ ಆಯುಧದ ಹೊಡೆತಕ್ಕೆ ಶ್ರೀಕೃಷ್ಣನು ಪ್ರಜ್ಞೆ ತಪ್ಪುತ್ತಾನೆ. ಇದನ್ನು ಕಂಡ ಸತ್ಯಭಾಮಳು ಕ್ರೋಧಿತಳಾಗಿ ನರಕಾಸುರನ ವಿರುದ್ಧ ಯುದ್ಧ ಮಾಡುತ್ತಾಳೆ. ನರಕಾಸುರನನ್ನು ವಧೆ ಮಾಡುತ್ತಾಳೆ. ಸತ್ಯಭಾಮ ಭೂದೇವಿಯ ಅವತಾರವಾಗಿರುತ್ತಾಳೆ. ನರಕಾಸುರ ವಧೆಯ ನಂತರ ಬಂಧನದಲ್ಲಿದ್ದ ಸ್ತ್ರೀಯರನ್ನು ಶ್ರೀಕೃಷ್ಣ ಬಿಡಿಸುತ್ತಾನೆ. ಆ ಹದಿನಾರು ಸಾವಿರ ಸ್ತ್ರೀಯರು ಶ್ರೀಕೃಷ್ಣನನ್ನೇ ತಮ್ಮ ಪತಿಯನ್ನಾಗಿ ಸ್ವೀಕರಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಶ್ರೀಕೃಷ್ಣ ಸತ್ಯಭಾಮರು ತಮ್ಮ ರಾಜ್ಯಕ್ಕೆ ಮರಳಿ ಅಭ್ಯಂಜನ ಸ್ನಾನ ಮಾಡಿದರಂತೆ. ಆ ಕಾರಣದಿಂದಲೇ ಈಗಲೂ ನರಕ ಚತುರ್ದಶಿಯ ಹಿಂದಿನ ದಿನ (ತ್ರಯೋದಶಿ) ಹಂಡೆಗೆ ನೀರು ತುಂಬಿಸಿ, ಅವುಗಳಿಗೆ ಚಿತ್ತಾರ ಬಿಡಿಸಿ ಮರುದಿನ ಸ್ನಾನ ಮಾಡುತ್ತೇವೆ. ಹಂಡೆಗೆ ಶೀಂಡ್ಲೆ ಕಾಯಿ ಬಳ್ಳಿ (ಒಂದು ರೀತಿಯ ಕಹಿ ಸೌತೇಕಾಯಿಯ ಬಳ್ಳಿ ) ಯಿಂದ ಸುತ್ತಿ, ಆರತಿ ಎತ್ತುತ್ತಾರೆ. ನರಕಾಸುರನನ್ನು ವಧೆ ಮಾಡಿದ ದಿನ ಅಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ. ಇದೇ ನಂತರದ ದಿನಗಳಲ್ಲಿ ನರಕ ಚತುರ್ದಶಿಯಾಯಿತು. ನರಕ ಚತುರ್ದಶಿ ದಿನ ಯಾರೆಲ್ಲಾ ಅಭ್ಯಂಗ ಸ್ನಾನ ಮಾಡುತ್ತಾರೋ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಒಂದು ಮಾತಿದೆ.
ನರಕಾಸುರ ವಧೆ ಮಾಡಿ ಮರಳಿ ಬರುವಾಗ ಶ್ರೀಕೃಷ್ಣ ಸತ್ಯಭಾಮರನ್ನು ಪುರಜನರೆಲ್ಲಾ ಎದುರುಕೊಂಡು ದೀಪ ಬೆಳಗಿಸುತ್ತಾ, ಮತಾಪುಗಳನ್ನು ಸಿಡಿಸುತ್ತಾ ಸಂಭ್ರಮಿಸಿದರಂತೆ. ಅಂದಿನಿಂದ ನಾವು ಈಗಲೂ ದೀಪಾವಳಿಯ ದಿನ ದೀಪಗಳನ್ನು ಬೆಳಗುತ್ತೇವೆ. ಪಟಾಕಿ ಸಿಡಿಸುತ್ತೇವೆ.
ಎರಡನೇ ದಿನ ದೀಪಾವಳಿ ಅಮವಾಸ್ಯೆಯ ದಿನ. ಈ ದಿನ ಕೆಲವು ಭಾಗಗಳಲ್ಲಿ ಅಂಗಡಿ ಪೂಜೆ ನಡೆಸುತ್ತಾರೆ. ಎಲ್ಲಾ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ-ಕುಬೇರ ಪೂಜೆ ನೆರವೇರಿಸುತ್ತಾರೆ. ಕೆಲವು ಕಡೆ ಬಲಿಯೇಂದ್ರ ಪೂಜೆ ಎಂದು ಆಚರಿಸುತ್ತಾರೆ. ಈ ಆಚರಣೆಗೂ ಪೌರಾಣಿಕ ಹಿನ್ನಲೆ ಇದೆ. ಬಲಿ ಚಕ್ರವರ್ತಿಯ ಸಂಹಾರಕ್ಕಾಗಿ ಮಹಾ ವಿಷ್ಣುವು ಭೂಮಿಯಲ್ಲಿ ವಾಮನನಾಗಿ ಹುಟ್ಟುತ್ತಾನೆ. ವಾಮನ ನೋಡಲು ಸಣ್ಣ ಗಾತ್ರದವನಾಗಿರುತ್ತಾನೆ. ಬಲಿ ಚಕ್ರವತಿಯು ಯಾಗ ಮಾಡುವಾಗ ವಾಮನನು ಅಲ್ಲಿಗೆ ಹೋಗಿ ತನಗೆ ದಾನ ಬೇಕೆಂದು ಕೇಳುತ್ತಾನೆ. ಏನು ಬೇಕು ಎಂದು ಬಲಿ ಕೇಳಿದಾಗ, ವಾಮನ ‘ನನ್ನ ಮೂರು ಪಾದ (ಹೆಜ್ಜೆ) ಇಡುವಷ್ಟು ಸ್ಥಳ ನೀಡಿದರೆ ಸಾಕು ಎನ್ನುತ್ತಾನೆ. ವಾಮನನ ಗಾತ್ರ ನೋಡಿದ ಬಲಿ ಅಸಡ್ಡೆಯಿಂದ ತೆಗೆದುಕೋ ಸ್ಥಳವನ್ನು ಎನ್ನುತ್ತಾನೆ. ನೋಡ ನೋಡುತ್ತಿದ್ದಂತೆ ವಾಮನ ತನ್ನ ದೇಹವನ್ನು ಬೃಹತ್ ಆಕಾರಕ್ಕೆ ಬೆಳೆಸುತ್ತಾನೆ. ಒಂದು ಪಾದವನ್ನು ಭೂಲೋಕಕ್ಕೂ, ಇನ್ನೊಂದು ಆಕಾಶಕ್ಕೂ ಇಟ್ಟ ಬಳಿಕ ಮೂರನೇ ಪಾದ ಎಲ್ಲಿಡಲಿ ಎಂದು ಕೇಳುತ್ತಾನೆ. ಬಲಿ ಚಕ್ರವರ್ತಿಗೆ ಆಗ ವಾಮನನ ನಿಜ ರೂಪದ ಅರಿವಾಗುತ್ತದೆ. ಅವನ ಅಹಂಕಾರ ನಾಶವಾಗುತ್ತದೆ. ಸ್ವಾಮೀ, ಮೂರನೇ ಪಾದವನ್ನು ನನ್ನ ತಲೆಯ ಮೇಲೆ ಇಡಿ ಎನ್ನುತ್ತಾನೆ. ಅದರಂತೆ ವಾಮನ ತನ್ನ ಮೂರನೇ ಪಾದವನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳ ಲೋಕಕ್ಕೆ ಕಳುಹಿಸಿಬಿಡುತ್ತಾನೆ. ಆದರೆ ವಿಷ್ಣುವಿಗೆ ಬಲಿಯ ಕೊಟ್ಟ ಮಾತಿಗೆ ತಪ್ಪದ ಗುಣ ಇಷ್ಟವಾಗುತ್ತದೆ. ಅವನಿಗೆ ವರ್ಷದಲ್ಲಿ ಒಂದು ದಿನ ಭೂಲೋಕಕ್ಕೆ ಬಂದು ಹೋಗುವ ವರ ನೀಡುತ್ತಾನೆ.
ಆ ಕಾರಣದಿಂದ ಬಲಿ ಭೂಲೋಕಕ್ಕೆ ಬಂದು ಒಂದು ದಿನ ಇದ್ದು ಪಾಡ್ಯಮಿ ದಿನ ಮರಳಿ ಹೋಗುತ್ತಾನೆ. ಮಲೆನಾಡು ಸುತ್ತ ಮುತ್ತ, ಕರಾವಳಿಯಲ್ಲಿ ಬಲಿಪಾಡ್ಯಮಿ ದಿನದಂದು ಲಕ್ಷ್ಮೀ ಪೂಜೆಯನ್ನು ಆಚರಿಸುತ್ತಾರೆ. ಬಲಿಪಾಡ್ಯಮಿ ದಿನದಂದು ಗೋಪೂಜೆ ಮಾಡುತ್ತಾರೆ. ಈ ಆಚರಣೆ ಅಧಿಕವಾಗಿ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತದೆ. ಏಕೆಂದರೆ ಪೇಟೆಯಲ್ಲಿ ದನಗಳನ್ನು ಸಾಕುವವರು ಬಹಳ ಕಮ್ಮಿ ಜನ. ಮನೆಯ ದನವನ್ನು ಚೆನ್ನಾಗಿ ತಿಕ್ಕಿ ಸ್ನಾನ ಮಾಡಿಸಿ, ಅದಕ್ಕೆ ಸಿಂಗಾರ ಮಾಡಿ, ಅದರ ಮೈಮೇಲೆ ವಿವಿಧ ರೀತಿಯ ಆಕೃತಿಗಳನ್ನು ಮೂಡಿಸುತ್ತಾರೆ. ನಂತರ ಆ ದನಕ್ಕೆ ಹೂವಿನ ಮಾಲೆ ಹಾಕಿ, ಆರತಿ ಎತ್ತಿ ಭಯ ಭಕ್ತಿಯಿಂದ ಪೂಜಿಸುತ್ತಾರೆ. ಪೂಜೆಯ ಬಳಿಕ ಅದಕ್ಕೆ ತಿನ್ನಲು ಕೊಡುತ್ತಾರೆ.
ಭಾರತ ವಿಭಿನ್ನ ಸಂಸ್ಕೃತಿಯ ಆಚರಣೆಯ ದೇಶ. ಒಂದು ಕಡೆ ಆಚರಣೆಯಾಗುವ ಹಬ್ಬ ಇನ್ನೊಂದೆಡೆ ಮತ್ತೊಂದು ದಿನ, ಬೇರೊಂದು ರೀತಿಯಲ್ಲಿ, ಬೇರೊಂದು ಹೆಸರಿನಲ್ಲಿ ಆಚರಿಸುತ್ತಾರೆ. ಆದುದರಿಂದ ಉತ್ತರ ಭಾರತದಲ್ಲಿ ದೀಪಾವಳಿ ಅಮವಾಸ್ಯೆಯಂದು ಲಕ್ಷ್ಮೀ ಪೂಜೆಯನ್ನು ಆಚರಿಸಿದರೆ, ಕರಾವಳಿ, ಮಲೆನಾಡಿನಲ್ಲಿ ಬಲಿ ಪಾಡ್ಯಮಿಯ ದಿನ ಆಚರಿಸುತ್ತಾರೆ. ದೀಪಾಲಳಿಯ ಹನ್ನೆರಡು ದಿನಗಳ ನಂತರ ಬರುವ ಉತ್ಥಾನ ದ್ವಾದಶಿ ದಿನದಂದು ಹಲವೆಡೆ ತುಳಸೀ ಪೂಜೆ ಮಾಡುತ್ತಾರೆ. ಇದು ಕರಾವಳಿ ಜಿಲ್ಲೆಗಳಲ್ಲಿ ಬಹಳ ಪ್ರಚಲಿತವಾಗಿದ್ದು, ಸಂಭ್ರಮದಿಂದ ಆಚರಿಸುತ್ತಾರೆ. ಮನೆಯ ಮುಂದಿನ ತುಳಸೀ ಕಟ್ಟೆಗೆ ಕಬ್ಬಿನ ಜಲ್ಲೆಯನ್ನು ಕಟ್ಟಿ, ತಳಿರು ತೋರಣಗಳಿಂದ ಸಿಂಗರಿಸಿ, ಆರತಿ ಎತ್ತಿ ಪೂಜೆ ಮಾಡುತ್ತಾರೆ.
ದೀಪಾವಳಿಯ ಸಂಭ್ರಮದಲ್ಲಿ ನಾವು ಮೈ ಮರೆಯೋದು ಬೇಡ. ಸ್ನಾನ ಮಾಡುವುದಕೋಸ್ಕರ ಕೆರೆ, ಬಾವಿಗಳಿಗೆ ಇಳಿಯುವಿರಾದರೆ ಜಾಗ್ರತೆ ವಹಿಸಿ. ಪಟಾಕಿ ಸಿಡಿಸುವಾಗ ಮಕ್ಕಳು ಹಿರಿಯರ ನಿರ್ದೇಶನದಂತೆ ಬೆಂಕಿ ಕೊಡಿ. ಪ್ರತೀ ವರ್ಷ ಪಟಾಕಿಯ ಕೆನ್ನಾಲೆಗೆ ಸಿಕ್ಕಿ ಹಲವಾರು ಮಕ್ಕಳು ತಮ್ಮ ಕಣ್ಣನ್ನು ಕಳೆದುಕೊಂಡಿದ್ದಾರೆ. ಪಟಾಕಿಯನ್ನು ಕೈಯಲ್ಲಿ ಹಿಡಿದು ಬೆಂಕಿ ಕೊಡಬೇಡಿ. ಸಿಡಿದು ಕೈಗೆ ಹಾನಿಯಾಗುವ ಸಾಧ್ಯತೆ ಇದೆ. ನೀರು ಮತ್ತು ಪ್ರಥಮ ಚಿಕಿತ್ಸಾ ಸಾಧನಗಳನ್ನು ಹತ್ತಿರದಲ್ಲೇ ಇರಿಸಿಕೊಂಡಿರಿ.
ದೀಪಾವಳಿಯ ಸಂಭ್ರಮ ನಿಮ್ಮದಾಗಲಿ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಸರಳವಾಗಿ, ನಿಮ್ಮ ಮನೆಯಲ್ಲೇ ಸುರಕ್ಷಿತ ಅಂತರದೊಡನೆ ದೀಪಾವಳಿ ಆಚರಿಸಿ. ಈ ವರ್ಷ ಜಾಗ್ರತೆ ಮಾಡಿದರೆ ಮುಂದಿನ ದಿನಗಳಲ್ಲಿ ಖಂಡಿತಾ ಇನ್ನಷ್ಟು ಸಡಗರದ ಹಬ್ಬವನ್ನು ಆಚರಣೆ ಮಾಡಬಹುದು. ‘ಸಂಪದ’ದ ನನ್ನ ಎಲ್ಲಾ ಓದುಗ ಸನ್ಮಿತ್ರರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಚಿತ್ರಗಳ ವಿವರ: ೧. ದೀಪಾವಳಿಯ ದೀಪಗಳು
೨. ವಾಮನಾವತಾರ
೩. ಗೋಪೂಜೆಯ ಸಂಭ್ರಮ
೪. ತುಳಸೀ ಪೂಜೆ
ಚಿತ್ರಗಳು: ಅಂತರ್ಜಾಲದ ಕೃಪೆ