ದೀಪಾವಳಿ ಹಬ್ಬದ ಜೋಡಣೆಯ ಹಿರಿಯರ ಕ್ರಮ ನಿಜಕ್ಕೂ ಅಚ್ಚರಿದಾಯಕ !
* ಆಶ್ವಿಜಮಾಸದ ಕೊನೆಯಲ್ಲಿ ಶುರುವಾಗುತ್ತದೆ ದೀಪಾವಳಿ ಹಬ್ಬ. ದ್ವಾದಶಿ ಧನ್ವಂತರಿ ಅಪರಾವತಾರ (ಪ್ರಕಟವಾದ ದಿನ). ಅಂದು ಕೆಲವು ಗಿಡಮೂಲಿಕೆಗಳ ಸಂಗ್ರಹದ ಸಂಭ್ರಮ ಮಳೆಗಾಲದಲ್ಲಿ ಅನೇಕ ಗಿಡಮೂಲಿಕೆ ಚಿಗುರಿ ಬೆಳೆದಿರುತ್ತದೆ. ಕಿತ್ತು ಒಣಗಿಸಿ ಶೇಖರಿಸಿ ಇಡುವ ವರ್ಷದ ದಿನ.
* ತುಂಬಿದ ನೀರಿನ ಮೂಲವನ್ನು (ಬಾವಿ) ಪೂಜಿಸಿ ಮಹಾಲಿಂಗದ ಬಳ್ಳಿ ಮತ್ತು ಇಂಡ್ಲಚ್ಚಿ ಬಳ್ಳಿ (ಎಲ್ಲವೂ ಆರೋಗ್ಯಕರ) ಕಟ್ಟಿ ಮನೆಮಂದಿಗೆ ಸ್ನಾನದ ಸಂಭ್ರಮ. ಧನ ತ್ರಯೋದಶಿ ಅಂದ್ರೆ ಸುಮ್ಮನೆನಾ?
* ಅಂದು ರಾತ್ರಿ ಕೆಲವು ನಿರ್ದಿಷ್ಟ ಮೂಲಿಕೆಗಳನ್ನು ಮಾತಾಡದೆ ತಂದು ತಾಯಿತದಲ್ಲಿ ತುಂಬಿ ಮನೆ ಬಾಗಿಲಿಗೆ ಕಟ್ಟುವುದರಿಂದ ಯಾವುದೇ ದುಷ್ಟ ಶಕ್ತಿ ಮನೆಗೆ ಪ್ರವೇಶಿಸುವುದಿಲ್ಲ.
* ಮಾರನೇ ದಿನವೇ ನರಕ ಚತುರ್ದಶಿ. ದನಕರುಗಳಿಗೆ ಮತ್ತು ಮನೆಮಂದಿಗೆ ಎಣ್ಣೆ ಹಚ್ಚಿ ಸ್ನಾನ. ಚಳಿಗಾಲದಲ್ಲಿ ಮೈ ಚರ್ಮದ ಕಾಂತಿ ರಕ್ಷಣಾ ವ್ಯವಸ್ಥೆ.
* ಶುದ್ಧ ತುಪ್ಪದಿಂದ ಹಚ್ಚಿದ ದೀಪದಲ್ಲಿ ತೆಗೆದು ಸಂಗ್ರಹಿದ ಕಪ್ಪಿನಿಂದ ತಿಲಕ ಇಟ್ಟು ಭಯ ಮತ್ತು ದೃಷ್ಟಿ ನಿವಾರಣೆ ಆಗುತ್ತದೆ.
* ಅಂದು ತಯಾರಿಸಿ ನೈವೇದ್ಯ, ಹೊಟ್ಟೆಯಲ್ಲಿ ಬಿದ್ದ ಕಡುಬು ಮೈಯಲ್ಲಿ ಹಚ್ಚಿದ ಎಣ್ಣೆ. ಇದು ಬರುವ ಚಳಿಗಾಲದ ಪೂರ್ವ ಸಿದ್ಧತೆ.
* ಅಂದೇ ಹೊಸ ಫಸಲು ಮನೆ ತುಂಬುತ್ತಿದ್ದಂತೆ ಬಲೀಂದ್ರ ರಾಜ ಮನೆಗೆ ಬಂದು ಪ್ರಭುತ್ವವನ್ನು ವಹಿಸಿಕೊಳ್ಳುತ್ತಾನೆ. ಜಣ ಜಣ ಸದ್ದಿನ ಧನಲಕ್ಷ್ಮೀ ಪ್ರವೇಶ.
* ಕಾರ್ತಿಕ ಮಾಸದಲ್ಲಿ ಪಾಡ್ಯದ ದಿನ ಹಸು ಏಳುವುದಕ್ಕೆ ಮೊದಲು ಏದ್ದು ನೆಲಕ್ಕೆ ಬೀಳದಂತೆ ಸಂಗ್ರಹಿಸಿದ ಸಗಣಿ ತಟ್ಟಿ ಎತ್ತರದಲ್ಲಿ ಒಣಗಿಸಿ ಎತ್ತಿಟ್ಟು ಶಿವರಾತ್ರಿಯಲ್ಲಿ ಶಿವನಿಗೆ ಬೆಳಗಿದ ಧೂಪದಿಂದ ಸುಟ್ಟು ಮಾಡಿದ ಭಸ್ಮದಿಂದ ಅನೇಕ ರೀತಿಯ ಕಾಯಿಲೆಗಳೂ ಗುಣವಾಗುತ್ತದೆ. ಇದು ಸಿದ್ಧ ಔಷಧಿ.
* ಹಬ್ಬಗಳಿಗೆ ದೊಡ್ಡ ಹಬ್ಬಕ್ಕೆ ತಳಿರು ತೋರಣ ರಂಗುರಂಗಿನ ರಂಗೋಲಿ. ಮನೆಯ ಒಳಗೆ ಹೊರಗೆ ಎಲ್ಲಾ ವಸ್ತುಗಳಲ್ಲಿ ದೇವರ ಇರುವಿಕೆಯನ್ನು ಅರಿತು ಎಲ್ಲಾ ಮುಕ್ಕೋಟಿ ದೇವರಿಗೂ ಹಣ್ಣು ಕಾಯಿ ನೈವೇದ್ಯ ಸಮರ್ಪಣೆ.
* ದನಕರುಗಳಿಗೆ ಹೊಸ ಡಾಬು ಕೊರಳಿಗೆ ಅಡಿಕೆ ನೆಕ್ಲೇಸ್ ತೂರುವ ರೊಟ್ಟಿ ಗೋಗ್ರಾಸ ಇನ್ನು ಹಸಿ ಹುಲ್ಲು ಕೊರತೆ ನೀಗಿಸಲು ಪುಟ್ ಪುಟ್ಟ ಕತ್ತಿಯಲಿ ಪುಟ್ ಹುಲ್ಲ ಕೊಯ್ತರುವೆ ಗೋವೆ ನೀ ಚಿಂತೆ ಮಾಡದಿರು ಎಂದು ಹೆಂಗಳೆಯರ ಹಾಡು ಹಸೆ ...ಹೆಣ್ಣುಮಕ್ಕಳ ಹಬ್ಬದ ಪಾಡ್ಯದ ಮನೆಮನೆಗೆ ಬೇಟಿ . ಹೊಸ ಬಟ್ಟೆ ತೊಟ್ಟು ಸಂಭ್ರಮ.
* ಹೊಸ ಬತ್ತದ ಅಕ್ಕಿಯ ಪಾಯಸ ಹೋಳಿಗೆ..... ಮೊಜು ಮಸ್ತಿ ಗಾಗಿ ಗುರಿ ಕಾಯಿ ಒಡೆಯುವುದು. ಪಟಾಕಿ ಹೊಡೆಯುವುದು.
* ಸಂಜೆ ಹೊತ್ತಿಗೆ ದೊಂದಿ ಹಬ್ಬ ಕಳಿಸುವುದು ನಂತರದ ದಿನಗಳಲ್ಲಿ ಹಗಲು ಕಡಿಮೆಯಾಗುತ್ತದೆ. ಇದಕ್ಕಾಗಿ ಇಂದಿನಿಂದಲೇ ಪ್ರಾರಂಭಿಸಿ ದೀಪ ಬೆಳಗಿಸಿ ಸ್ವಾಗತಿಸಿ. ತಿಂಗಳು ಪೂರ್ತಿ ದೇವಸ್ಥಾನದಲ್ಲಿ ಕಾರ್ತೀಕ . ಕ್ರಮವತ್ತಾಗಿ ಜೋಡಿಸಿದ ನಿಯಮಗಳು ಇದರ ಹಿಂದಿರುವ ಧ್ಯೇಯ ಉದ್ದೇಶ ಪ್ರತಿಯೊಂದು ನಿಯಮಕ್ಕೂ ಕಾರಣ ಇದೆ. ನಿಜಕ್ಕೂ ನಾವೇ ಧನ್ಯ.
-ಸುಮನಾ ಮಳಲಗದ್ದೆ