ದುಂಡಾವರ್ತಿ ರಾಜಕೀಯದಿಂದ ಬೆಲೆಗಳ ಏರಿಕೆ

ದುಂಡಾವರ್ತಿ ರಾಜಕೀಯದಿಂದ ಬೆಲೆಗಳ ಏರಿಕೆ

ಈಗಿನ ರಾಜಕೀಯ ಬೆಳವಣಿಗೆಗಳಿಂದ ಜನಸಾಮಾನ್ಯರ ದಿನಸಿ ಪದಾರ್ಥಗಳು ಹಾಗು ತರಕಾರಿಗಳು ಗಗನಕ್ಕೇರಿವೆ. ಎಲ್ಲ ಮಧ್ಯಮ ವರ್ಗದವರಿಗೂ ಹಾಗು ಕೆಳವರ್ಗದ ಜನರಿಗೂ ಬೆಲೆಯೂ ಎಟುಕದಂತಾಗಿದೆ. ರಾಜಕೀಯ ಮುಖಂಡರಿಗೆ ಅಧಿಕಾರದ ರುಚಿಯು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ, ಬೆಲೆ ಏರಿಕೆಯ ಬಿಸಿಯು ಅವರುಗಳಿಗೆ ನಾಟಿದಂತಿಲ್ಲ.



ಬೆಲೆ ಏರಿಕೆಯಿಂದಾಗಿ ಮಧ್ಯವರ್ತಿಗಳಿಗೆ ಭಾರಿ ಲಾಭವಾಗುತ್ತಿದೆ ವಿನಃ ಕೆಳ ಹಾಗು ಮಧ್ಯಮವರ್ಗದ ಜನರಿಗೆ ಕಿಂಚಿತ್ತು ಲಾಭವಾಗುತ್ತಿಲ್ಲ,  ಬೆಳೆಗಾರರಿಗು ಹಾಗು ಗ್ರಾಹಕರಿಗು ಭಾರಿ ನಷ್ಟವನ್ನು ಅನುಭವಿಸುತ್ತಿದ್ದಾರೆ, ಕಾರಣ ಈಗಿನ ರಾಜಕೀಯ ವಿದ್ಯಮಾನಗಳಿಂದ ಹಾಗು ಅದರಿಂದ ಆಗುತ್ತಿರುವ ದುಷ್ಪರಿಣಾಮಗಳಿಂದ. ಜನಸಾಮಾನ್ಯರ ಬೇಕು ಬೇಡಗಳನ್ನು ಈಡೇರಿಸಲು ಈಗಿನ ಆಡಳಿತ ಪಕ್ಷದವರು  ತಮ್ಮ ಕುರ್ಚಿಗಳನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದರೆ ಪ್ರತಿಪಕ್ಷದವರು ಅವರ ಕುರ್ಚಿಗಳನ್ನು ಉರುಳಿಸಲು ಸತತ ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ನೆಪವೆಂಬಂತೆ ಕಳೆದ ಎರಡು ತಿಂಗಳಿನಿಂದ  ಆಡಳಿತ ಪಕ್ಷದವರನ್ನು ಒಂದಿಲ್ಲೊಂದು ಹಗರಣಗಳಿಗೆ ಸಿಲುಕಿಸಿ ಅಭಿವೃದ್ಧಿಕಾರ್ಯಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಪ್ರತಿಪಕ್ಷದವರಿಗೆ ಆಡಳಿತ ಪಕ್ಷದವರ ಸರಕಾರವನ್ನು ಹೇಗಾದರು ಸರಿ ಉರುಳಿಸಬೇಕೆಂಬ ವಿಕೃತ ಧೋರಣೆಯಲ್ಲಿ ನಿರತರಾಗಿದ್ದಾರೆ.



ರಾಜ್ಯದ ಜನರು ಸಂವಿಧಾನ ಸೂಚಿಸುವಂತೆ ಚುನಾಯಿತ ಸರಕಾರವನ್ನು ಐದು ವರ್ಷದವರೆಗೆ ಚುನಾಯಿಸಿ ರಾಜ್ಯವು ಅಭಿವೃದ್ಧಿಗೊಳ್ಳಲಿ ಎಂದು ಚುನಾಯಿಸಿರುತ್ತಾರೆ. ಪ್ರತಿಪಕ್ಷದವರು ಪ್ರತಿ ಕೆಲಸಗಳಲ್ಲಿ ಅಡ್ಡಗಾಲು ಹಾಕಿಕೊಂಡು ರಾಜ್ಯದ ಜನರನ್ನು ಸಂಕಷ್ಟದೆಡೆಗೆ ಕೊಂಡೊಯ್ಯುತ್ತಿದ್ದಾರೆ. ಜನಪರ ಕಾರ್ಯಗಳು, ಅಭಿವೃಧಿ ಯೋಜನೆ ಕುಂಠಿತವಾದುದರಿಂದಲೇ ಬೆಲೆಗಳು ನಿರುಮ್ಮಳವಾಗಿ ಏರತೊಡಗಿವೆ. ಆಡಳಿತ ಪಕ್ಷದವರು ತಾವು ಯಾರಿಗು ಮಿಗಿಲಿಲ್ಲವೆಂಬಂತೆ ತಮ್ಮ ತಮ್ಮಲೇ ಭಿನ್ನಮತೀಯವನ್ನು ಬೆಳೆಸಿಕೊಂಡು ಬೇಳೆಗಳನ್ನು ಬೇಯಿಸಿಕೊಂಡು ಇತರ ವಿಧೇಯಕ ಕಾರ್ಯಕ್ರಮಗಳನ್ನು ವಿಳಂಬಗತಿಯಲ್ಲಿ ಸಾಗಲು ತಮ್ಮ ಬಲಾ ಬಲವನ್ನು ಪ್ರದರ್ಶಿಸುತ್ತಿದ್ದಾರೆ. ಇವರುಗಳ ಕಾರ್ಯವೈಖರಿಯಿಂದಲು ಜನರ ಹಿಡಿ ಶಾಪಕ್ಕೆ ಪಾತ್ರರಾಗಿದ್ದಾರೆ. ಆಡಳಿತ ಪಕ್ಷದವರ ರಾಜಕಾರಣದಿಂದಲು ಕೂಡ ಬೆಲೆ ಏರಿಕೆಗೆ ಮಹತ್ವದ ಕಾಣಿಕೆ ನೀಡಿರುತ್ತಾರೆ. ಅನ್ಯ ದಾರಿಯಿಲ್ಲದೆ ಸಂಕಷ್ಟಗಳನ್ನು ರಾಜ್ಯದ ಜನರು ಅನುಭವಿಸಬೇಕಾಗಿದೆ.



ಸಮಾಜದ ಆಧಾರ ಸ್ತಂಭವೆನಿಸಿಕೊಂಡಿರುವ ದೃಶ್ಯಮಾಧ್ಯಮದವರು ಕೂಡ ರಾಜಕೀಯ ಮುಖಂಡರ ತಾಳಕ್ಕೆ ಕುಣಿಯುತ್ತಿದ್ದಾರೆ. ದೃಶ್ಯ ಮಾಧ್ಯಮದವರ ಕಾರ್ಯವೈಖರಿಯನ್ನು ಗಮನಿಸಿದರೆ ಅವರೂ ಕೂಡ ಸಂದರ್ಭವೊದಗಿದಂತೆ ಉಡದಂತೆ ಬಣ್ಣ ಬದಲಿಸುತ್ತಿದ್ದಾರೆ. ರಾಜ್ಯದ ಹಿತಾಸಕ್ತಿಯಿಂದಲಾದರು ಸಮಾಜ ಕಲ್ಯಾಣ, ಜನಪರ ಅಭಿವೃದ್ಧಿಯೋಜನೆಗಳಿಗೆ ರಾಜಕೀಯ ಮುಖಂಡಮಿತ್ರರಿಗೆ ಕಾರ್ಯಗಳ ಪ್ರಾಶಸ್ತ್ಯವನ್ನು ಮನವರಿಕೆ ಮಾಡಲು ಸಹಾಯ ಮಾಡಬೇಕೆ ವಿನಃ ದಿನವೂ ನಡೆಯುವ ರಾಜಕೀಯ ದೊಂಬರಾಟವನ್ನು ಬಿತ್ತರಿಸುವುದು ಎಷ್ಟು ಸಮಂಜಸ? ನೋಡಲು ಕೂಡ ಅಸಹ್ಯವೆನಿಸುತ್ತದೆ. ಆಧುನಿಕ ತಂತ್ರ ಜ್ಞಾನದಿಂದ ಸದುಪಯೋಗವನ್ನು ಪಡೆದುಕೊಳ್ಳುವುದನ್ನು ಬಿಟ್ಟು ವೃಥಾ ಕಾಲಹರಣ ಮಾಡುತ್ತಿದ್ದಾರೆ. ಮಾಧ್ಯಮದವರು ಕೂಡ ಬೆಲೆ ಏರಿಕೆಗೆ ಅಲ್ಪ ಕಾಣಿಕೆಯನ್ನು ಈ ಮೂಲಕ ನೀಡುತ್ತಿದ್ದಾರೆ.
 
ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಂದ ರಾಜಕೀಯ ಧುರೀಣರಿಗೆ ಲಾಭವೇ ವಿನಃ ಜನಪರ ಕಾಳಜಿ ಹಾಗು ಸಮಾಜ ಕಲ್ಯಾಣಕ್ಕೆ ಲವಲೇಶವು ಆಸಕ್ತಿ ಕಂಡು ಬರುವುದಿಲ್ಲ. ಇನ್ನಾದರು ರಾಜಕೀಯ ಪಕ್ಷಗಳು ಎಚ್ಚೆತ್ತು ರಾಜ್ಯದ ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನ ಹರಿಸಿ ಮಾದರಿ ರಾಜ್ಯವನ್ನಾಗಿಸಲು ಪ್ರವೃತ್ತರಾಗಬೇಕು. ಮಾಧ್ಯಮದವರು ಕೂಡ ಸಹಕರಿಸಬೇಕು