ದು:ಖಕ್ಕೆ ಮೂಲ ಆಸೆಯಲ್ಲ, ಅಹಂಕಾರ !

ದು:ಖಕ್ಕೆ ಮೂಲ ಆಸೆಯಲ್ಲ, ಅಹಂಕಾರ !

ನಮಗೆ ವ್ಯರ್ಥವೆನಿಸಿದ ವಸ್ತುವೊಂದನ್ನು ಮಗು ಆಸ್ಥೆಯಿಂದ ಕೇಳುತ್ತದೆ, ನಾವದನ್ನು ತಿರಸ್ಕರಿಸುತ್ತೇವೆ. ಮಗು ಅಳುತ್ತದೆ! 'ಜನ ನೋಡುತ್ತಿದ್ದಾರೆ ಸುಮ್ಮನಿರು' ಎನ್ನುತ್ತೇವೆ. ಮಗು ರಚ್ಚೆ ಹಿಡಿಯುತ್ತದೆ. ನಮಗೆ ಕೋಪ ಬರುತ್ತದೆ. ಕೆನ್ನೆಗೆರಡು ಬಾರಿಸುತ್ತೇವೆ ಕಣ್ಣುಗಳನ್ನು ದೊಡ್ಡದಾಗಿ ಮಾಡಿ ಗದರಿಸುತ್ತೇವೆ. ಮಗು ಮತ್ತೂ ಜೋರಾಗಿ ಅಳುತ್ತದೆ. ನಮ್ಮ ಅಹಂಕಾರ ಜಾಗೃತವಾಗುತ್ತದೆ. ಮುಖ ಮೂತಿ ನೋಡದೆ ಬೀಸಿ ಬಾರಿಸುತ್ತೇವೆ. ಹಾಗೆ ಕಠೋರವಾಗಿ ನಡೆದುಕೊಳ್ಳುವಷ್ಟು ಅಗತ್ಯವಿಲ್ಲದಿದ್ದರೂ ಸುತ್ತ ಮುತ್ತ ನೋಡುತ್ತಿರುವವರ ಮುಂದೆ ಮಗುವನ್ನು ಹಿಡಿತಕ್ಕೆ ತೆಗೆಕೊಳ್ಳಲಾಗದ ಅಸಮರ್ಥತೆಯ ಬಗ್ಗೆ ಯೋಚಿಸಿ ವ್ಯಗ್ರರಾಗುತ್ತೇವೆ!  ಈ ಕೋಪ ತಣ್ಣಗಾದ ಮೇಲೆ, ನಮ್ಮ ನಡವಳಿಕೆಗೆ ನಾವೇ ನಾಚುತ್ತೇವೆ. ಮುಗ್ಧವಾಗಿ ನಮ್ಮನ್ನು ನೋಡಿ ನಗುವ ಮಗುವನ್ನು ಬಿಗಿದಪ್ಪಿ ಕಣ್ಣೀರಿಡುತ್ತೇವೆ...
ಹೀಗೇ ಅದೆಷ್ಟೋ ಬಾರಿ ವಿನಾಕಾರಣ ಕೋಪಗೊಳ್ಳುತ್ತೇವೆ, ಆ ಕ್ಷಣ ಕಳೆದ ಬಳಿಕ, ಮೌನವಾಗಿ ಕಣ್ಣೀರಿಡುತ್ತೇವೆ! ಅದಕ್ಕೆ ಕಾಣ ನಮ್ಮೊಳಗೆ ಹುದುಗಿರುವ ನಾನತ್ವ!
ಕಛೇರಿಯಲ್ಲಿ ನಮ್ಮ ಕಿರಿಯರು ನಮ್ಮನ್ನು ಧಿಕ್ಕರಿಸಿದಾಗ,ನಮ್ಮ ಮಕ್ಕಳು ನಮ್ಮ ತಪ್ಪುಗಳನ್ನು ಬೆಟ್ಟು ಮಾಡಿ ತೋರಿಸಿದಾಗ, ನಮ್ಮ ವಿಚಾರಗಳನ್ನು ಮತ್ತೊಬ್ಬರು ಒಪ್ಪದಿದ್ದಾಗ, ಸ್ಪರ್ಧೆಯಲ್ಲಿ ಸೋತಾಗ, ಇಂಥ ಸಂದರ್ಭಗಳಲ್ಲೆಲ್ಲಾ ಹತಾಶರಾಗುತ್ತೇವೆ. ಕೋಪಗೊಳ್ಳುತ್ತೇವೆ,  ದು:ಖಿತರಾಗುತ್ತೇವೆ.
ನಾನು ಸರಿ, ನಾನು ತಿಳಿದುಕೊಂಡಿದ್ದೇನೆ, ನಾನೇ ಮಾಡಲು ಸಾಧ್ಯ, ನನ್ನಿಂದಲೇ ಆದದ್ದು, ನಾನಿರದೆ ಹೇಗಾದೀತು, ಇತ್ಯಾದಿ ನಾ, ನಾನೆಂಬ ಅಹಂಕಾರ ನಮ್ಮನ್ನು ವಿವೇಕ ಶೂನ್ಯರನ್ನಾಗಿಸುತ್ತದೆ! ತನ್ಮೂಲಕ ದು:ಖಿಗಳನ್ನಾಗಿಸುತ್ತದೆ.
 
        ಬದಲಾಗಿ ನಮ್ಮ ಮಕ್ಕಳ ಮಾತಿಗೂ ಕಿವಿಯಾಗೋಣ, ಸ್ನೇಹಿತರ ವಿಚಾರಕ್ಕೂ ದನಿಯಾಗೋಣ, ಮತ್ತೊಬ್ಬರ ಅಭಿಪ್ರಾಯಗಳನ್ನೂ ಗೌರವಿಸೋಣ, ಎಲ್ಲರೂ ಸಾಗುವಂತೆ ಸರಿದು ನಿಲ್ಲೋಣ, ಮನಸ್ಸು ಪ್ರಶಾಂತವಾಗುತ್ತದೆ. ಹೊಸ ಆಲೋಚನೆಗಳು ಮನಸ್ಸಿಗೆ ಮುದನೀಡುತ್ತವೆ. ವ್ಯಗ್ರತೆ ನಾಶವಾಗಿ ಸಹಬಾಳ್ವೆಯ ತಂಗಾಳಿ ಬೀಸುತ್ತದೆ. ಹೀಗೆ ನಾವೆಲ್ಲ ಒಂದು ಕ್ಷಣ ಯೋಚಿಸಬಹುದಲ್ಲವೆ. 
 
              

Comments