ದುಡಿದು ತಿನ್ನಲು ನಾಚಿಕೆ ಏಕೆ?

ದುಡಿದು ತಿನ್ನಲು ನಾಚಿಕೆ ಏಕೆ?

ಕೆಲವು ದಿನಗಳ ಹಿಂದೆ ನನ್ನ ಪತ್ನಿಯ ಚಪ್ಪಲಿ ತುಂಡಾಗಿ, ಅದನ್ನು ಸರಿ ಪಡಿಸಲು ಮನೆಯ ಹತ್ತಿರವೇ ಇದ್ದರ ಚಮ್ಮಾರ ಕುಟೀರಕ್ಕೆ ಹೋಗಿದ್ದೆ. ಅಲ್ಲಿದ್ದ ವ್ಯಕ್ತಿ ಚಪ್ಪಲಿ ನೋಡಿದ ಕೂಡಲೇ ‘ಎಲ್ಲಾ ಬದಿ ಹೊಲಿಗೆ ಹಾಕಬೇಕು. ನೂರು ರೂಪಾಯಿ ಆಗುತ್ತದೆ' ಎಂದು ಮುಖಕ್ಕೆ ಹೊಡೆದಂತೆ ಹೇಳಿದ. ನನಗೆ ಒಂದು ಕ್ಷಣ ಪಿಚ್ಚೆನಿಸಿದರೂ ಸಾವರಿಸಿ ‘ ಕೆಲಸ ಮಾಡಿದ ಬಳಿಕ ಹಣ ಕೊಡದೇ ಇರುತ್ತೇನಾ? ಹೊಲಿದು ಕೊಡಪ್ಪಾ’ ಎಂದು ನಗುತ್ತಾ ಹೇಳಿದೆ. ನನ್ನ ನಗುಭರಿತ ಮಾತಿನಿಂದ ಅವನ ಮೂಡ್ ಸ್ವಲ್ಪ ಬದಲಾದಂತೆ ತೋರಿತು. ಮುಖದ ಗಂಟುಗಳು ಸಡಿಲವಾಯಿತು.

'ಸರ್, ಬೇಸರ ಮಾಡಿಕೊಳ್ಳಬೇಡಿ. ಎಲ್ಲರೂ ಚಪ್ಪಲಿ ರಿಪೇರಿ ಮಾಡಿ ಆದ ನಂತರ ಹಣ ಹೇಳಿದಾಗ ಜಾಸ್ತಿ ಆಯಿತು ಅಂತ ಚೌಕಾಸಿಗೆ ಇಳಿಯುತ್ತಾರೆ. ಕೊನೆಗೆ ನಾನು ಸೋತು ಅವರಿಂದ ಕಡಿಮೆ ಹಣವನ್ನೇ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೇ ನಿಮಗೆ ಮೊದಲೇ ಹಣ ಹೇಳಿದೆ.’ ಎಂದ.

ನನಗೇನೂ ಈ ಘಟನೆಯಿಂದ ಬೇಸರವಾಗಿಲ್ಲ. ಹೊರ ಊರಿಗೆ ಹೋದಾಗ ರಿಕ್ಷಾ ಪ್ರಯಾಣ ಮಾಡುವ ಸಂದರ್ಭದಲ್ಲಿ ನಾವು ಮೊದಲೇ ಬಾಡಿಗೆಯನ್ನು ನಿರ್ಧರಿಸುತ್ತೇವಲ್ಲಾ? ಹಾಗೇ ಇದೂ ಸಹ ಎಂದು ಅನಿಸಿತು. ನಾವು ರಿಕ್ಷಾದವನ ಬಳಿ ಮೊದಲೇ ಬಾಡಿಗೆ ಎಷ್ಟಾಗುತ್ತೆ ಅಂತ ಕೇಳಿದರೆ, ಒಂದು ದರ (ಜಾಸ್ತಿಯೇ) ಅವನು ಹೇಳುತ್ತಾನೆ. ನಮಗೆ ಅದು ಸಮ್ಮತಿಯಾದರೆ (ಚರ್ಚೆಯ ಬಳಿಕ), ನಂತರ ನಮಗೆ ಗೊತ್ತಿಲ್ಲದ ಊರಿನಲ್ಲಿ ಅವನೆಷ್ಟೇ ತಿರುಗಾಡಿಸಿ, ಬೇರೆ ಬೇರೆ ದಾರಿಯಲ್ಲಿ ಕರೆದುಕೊಂಡು ಹೋದರೂ ನಷ್ಟ ಅವನಿಗೇ ಆಗುವುದರಿಂದ ನೇರವಾಗಿ ನಮಗೆ ಹೋಗಬೇಕಾದ ವಿಳಾಸಕ್ಕೇ ಕರೆದುಕೊಂಡು ಹೋಗುತ್ತಾನೆ ಎಂಬ ಒಂದು ತರ್ಕದ ವಿಚಾರವೂ ಇಲ್ಲದ್ದಿಲ್ಲ.

ಇರಲಿ, ‘ಚಪ್ಪಲಿ ರಿಪೇರಿ ಮಾಡಲು ಸ್ವಲ್ಪ ಸಮಯ ಬೇಕು. ಕುಳಿತಿರಿ’ ಎಂದು ಹೇಳಿದ. ನನಗೂ ಬೇರೆ ಕೆಲಸವಿಲ್ಲದ ಕಾರಣ ನಾನೂ ಕುಳಿತು ಅವನು ಮಾಡುವ ಕೆಲಸವನ್ನೇ ಗಮನಿಸತೊಡಗಿದೆ. ಅವನೊಬ್ಬ ಉತ್ತಮ ಮಾತುಗಾರ. ತಾನು ಮೊದಲು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವಾಚ್ ಮೆನ್ ಆಗಿದ್ದೆ. ಸುಮಾರು ವರ್ಷ ಕೆಲಸ ಮಾಡಿದೆ. ನಂತರ ನನ್ನ ಕಾಲು ನೋವಿನ ಕಾರಣ ಹೆಚ್ಚಿಗೆ ನಿಲ್ಲಲು ಆಗದೆ ಈ ಕುಲಕಸುಬಿಗೆ ಮರಳಿದೆ. ಎಂದು ಹೇಳಿದ. ನಾನಂದೆ. ‘ ನಿಮಗೆ ಎಲ್ಲರ ಚಪ್ಪಲಿ ಕೈಯಲ್ಲಿ ಹಿಡಿಕೊಂಡು ಹೊಲಿಯಲು ಒಂಥರಾ ಅನಿಸುವುದಿಲ್ಲವಾ?’. ಅದಕ್ಕೆ ಅವನು ಹೇಳಿದ ‘ ಸರ್, ದುಡಿದು ತಿನ್ನುವವನಿಗೆ ನಾಚಿಕೆ, ಅಸಹ್ಯ ಯಾಕೆ?’ ನಾನು ಕದಿಯುತ್ತಿಲ್ಲ, ಭಿಕ್ಷೆ ಬೇಡುತ್ತಿಲ್ಲ. ನನಗೆ ಗೊತ್ತಿರುವ ಕೆಲಸ ಮಾಡುತ್ತಿರುವೆ. ಅದಕ್ಕೆ ನಿಮ್ಮಿಂದ ಕೂಲಿ ತೆಗೆದುಕೊಳ್ಳುವೆ. ಇದರಲ್ಲಿ ಯಾವುದೇ ನೋವು, ಬೇಸರ ನನಗಿಲ್ಲ. ‘

ಹೀಗೇ ಮಾತನಾಡುತ್ತಾ ಅವನ ಮನೆಯ ಬಗ್ಗೆ, ಊರಾದ ಚಿಕ್ಕಮಗಳೂರಿನ ಒಂದು ಗ್ರಾಮದ ಬಗ್ಗೆ, ಮಗನ ಬಗ್ಗೆ ಎಲ್ಲಾ ಹೇಳುತ್ತಾ ಹೋದ. ಅವನ ಮೇಲೆ ಮತ್ತು ಅವನಂತೇ ದುಡಿಯುವ ಶ್ರಮಿಕ ವರ್ಗದ ಮೇಲೆ ನನಗಿದ್ದ ಅಭಿಮಾನ ಇನ್ನಷ್ಟು ಅಧಿಕವಾಗುತ್ತಾ ಹೋಯಿತು. ಚಪ್ಪಲಿ ಹೊಲಿದಾದ ಬಳಿಕ ನಾನು ಮೊದಲೇ ನಿರ್ಧಾರವಾದ ಹಣ ನೂರು ರೂಪಾಯಿ ತೆಗೆದು ಕೊಟ್ಟೆ. ೨೦ ರೂಪಾಯಿ ಚಿಲ್ಲರೆ ಹಿಂದೆ ಕೊಟ್ಟ.

‘ಯಾಕಯ್ಯಾ? ಮೊದಲೇ ನೂರು ರೂಪಾಯಿ ಹೇಳಿದೆಯಲ್ಲಾ, ಈಗ ಮತ್ತೆ ಯಾಕೆ ಚಿಲ್ಲರೆ ಹಣ ಹಿಂದೆ ಕೊಡುತ್ತೀಯಲ್ಲಾ?’ 

‘ಸರ್, ನಾನು ಮೊದಲು ಹೇಳಿದ್ದು ಎಸ್ಟಿಮೇಸನ್ (Estimation), ಈಗ ಹೇಳಿದ್ದು ಬಿಲ್'. ಎಂದ ನಗುತ್ತಾ.

ನನಗೆ ಅವನ ಪ್ರಾಮಾಣಿಕ ಮಾತು ಕೇಳಿ ನಗು ಬಂತು. ‘ಬೇಡಯ್ಯಾ, ನೀನೇ ಇಟ್ಟುಕೋ’ ನಿನ್ನ ಕೆಲಸ ಮತ್ತು ಮಾತು ಎರಡೂ ನನಗೆ ಖುಷಿ ಆಗಿದೆ.’ ಎಂದು ಬಲವಂತದಿಂದ ಚಿಲ್ಲರೆ ಹಣವನ್ನು ಅವನಿಗೇ ಕೊಟ್ಟು ಬಂದೆ. 

ಬರುತ್ತಾ ನಾನು ಯೋಚನೆ ಮಾಡಿದೆ. ಪ್ರಾಮಾಣಿಕವಾಗಿ ದುಡಿದು ಬದುಕುವವರು ಎಷ್ಟು ಮಂದಿ ಪ್ರಪಂಚದಲ್ಲಿ ಇದ್ದಾರೆ. ಯಾವುದೇ ಕೆಲಸ ಕೀಳಲ್ಲ. ಬೇರೆಯವರನ್ನು ಸುಲಿಗೆ ಮಾಡಿ, ಭಿಕ್ಷೆ ಬೇಡಿ ತಿನ್ನುವುದು ಮಾತ್ರ ತಪ್ಪು. ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಲೇ ತಮ್ಮ ಹಾಗೂ ಪರಿವಾರದ ಹೊಟ್ಟೆ ತುಂಬಿಸುವವರು ಬಹಳಷ್ಟು ಜನ ಇದ್ದಾರೆ. ಅವರಾಯಿತು, ಅವರ ಕೆಲಸವಾಯಿತು ಎಂದೇ ಜೀವನ ಪೂರ್ತಿ ಬದುಕಿದ್ದಾರೆ. ಈ ವಿಷಯವನ್ನು ಆಲೋಚಿಸುವಾಗ ಸ್ವಲ್ಪ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಬಂದ ಒಂದು ಮಾಹಿತಿ ಪೂರ್ಣ ಕಿರು ಪ್ರಸಂಗದ ನೆನಪಾಯಿತು. ಆ ಪ್ರಸಂಗದೊಂದಿಗೆ ಈ ಬರಹ ಮುಗಿಸುವೆ. 

ನಾನು ಒಂದು ಚಪ್ಪಲಿ ಅಂಗಡಿಗೆ ಹೋದಾಗ ಅಂಗಡಿಯಲ್ಲಿನ ವ್ಯಕ್ತಿ ನನ್ನನ್ನು ಅತ್ಯಂತ ಗೌರವವಾಗಿ ಒಳಗೆ ಆಹ್ವಾನಿಸಿದ. ಕುಳಿತು ಕೊಳ್ಳಲು ಹೇಳಿ ವಿವಿಧ ರೀತಿಯ ಚಪ್ಪಲಿಗಳನ್ನು ತೋರಿಸತೊಡಗಿದ. ಪ್ರತಿಯೊಂದು ಚಪ್ಪಲಿಯನ್ನು ಆತನೇ ಸ್ವತಃ ನನ್ನ ಕಾಲುಗಳಿಗೆ ತೊಡಿಸುತ್ತಿದ್ದ. ನನಗೆ ಯಾಕೋ ಹೀಗೆ ಮಾಡುವುದು ಸರಿ ಅನಿಸಲಿಲ್ಲ.

"ನೀವು ಹಾಗೆ ನನ್ನ ಕಾಲುಗಳನ್ನು ಮುಟ್ಟಿ ಚಪ್ಪಲಿ ತೊಡಿಸುವುದು ನನಗೆ ತುಂಬಾ ಮುಜುಗರವಾಗುತ್ತಿದೆ. ನೀವು ಕೊಡಿ ನಾನೇ ಹಾಕಿಕೊಳ್ಳುತ್ತೇನೆ" ಎಂದು ಹೇಳಿದೆ.

ಅದಕ್ಕೆ ಆತ "ಪರವಾಗಿಲ್ಲ ಬಿಡಿ ಸರ್! ನಿಮಗೆ ಇಷ್ಟವಾದ ಚಪ್ಪಲಿಯನ್ನು ಹಾಕಿಕೊಂಡು ನೋಡಿ. ನಿಮಗೆ ನಮ್ಮ ಅಂಗಡಿಯ ಚಪ್ಪಲಿ ಇಷ್ಟವಾದರೆ ಸಾಕು" ಎಂದು ಹೇಳಿದ.

"ನೀವೂ ಮನುಷ್ಯರೆ.. ನಾವು ಮನುಷ್ಯರೇ. ನೀವು ಹೀಗೆ ನಮ್ಮ ಕಾಲು ಹಿಡಿದು ಚಪ್ಪಲಿ ತೊಡಿಸುತ್ತಿರುವುದು ನನ್ನ ಮನಸ್ಸಿಗೆ ನೋವಾಗುತ್ತಿದೆ." ಎಂದು ಹೇಳಿದೆ.

ಅದಕ್ಕೆ ಅವರು ಹೇಳಿದ ಮಾತು ಕೇಳಿ ನಿಜಕ್ಕೂ ತುಂಬಾ ಆಶ್ಚರ್ಯವಾಯಿತು.

"ಈ ಅಂಗಡಿಯಲ್ಲಿ ಅದು ನನ್ನ ಕರ್ತವ್ಯ. ಅಂಗಡಿಯ ಹೊರಗೆ ನೀವು ಲಕ್ಷ ಕೊಟ್ಟರೂ ನಿಮ್ಮ ಕಾಲು ಮುಟ್ಟಲಾರೆ. ಆದರೆ ಅಂಗಡಿಯಲ್ಲಿ ನೀವು ಒಂದು ರೂ. ವ್ಯಾಪಾರ ಮಾಡದಿದ್ದರೂ ನಿಮ್ಮ ಕಾಲು ಮುಟ್ಟದೇ ಇರಲಾರೆ." ಎಂದು ಹೇಳಿದ ಆ ವ್ಯಕ್ತಿ.

ಇದರಿಂದ ಆತನಿಗೆ ತಾನು ಮಾಡುವ ಕೆಲಸದ ಬಗ್ಗೆ ಇರುವ ಭಕ್ತಿ, ಗೌರವ ಗೊತ್ತಾಗುತ್ತದೆ. ಪ್ರತಿಯೊಬ್ಬರೂ ತಾವು ಮಾಡುವ ಕೆಲಸ ಚಿಕ್ಕದಾದರೂ, ದೊಡ್ಡದಾದರೂ ಇಂತಹ ಭಾವನೆಯನ್ನು ಹೊಂದಿದ್ದರೆ ಅವರು ಖಂಡಿತಾ ತಾವು ಅಂದುಕೊಂಡಿರುವುದು ಸಾಧಿಸಬಲ್ಲರು.

ಸ್ನೇಹಿತರೇ,

ಇದುವರೆಗೆ ಕೆಲಸ ಯಾರ ಗೌರವವನ್ನೂ ತಗ್ಗಿಸಿಲ್ಲ.!!

ವಿಪರ್ಯಾಸವೆಂದರೆ,

ಹಲವರು ಕೆಲಸದ ಗೌರವವನ್ನೇ ತಗ್ಗಿಸಿದ್ದಾರೆ.!

ವೃತ್ತಿಯೇ ಪ್ರವೃತ್ತಿಯಾಗಲಿ.

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ