ದುಡ್ಡು ನಿಮ್ಮದಿರಬಹುದು, ಆಹಾರ ಸಮಾಜದ್ದು!

ದುಡ್ಡು ನಿಮ್ಮದಿರಬಹುದು, ಆಹಾರ ಸಮಾಜದ್ದು!

     ನನ್ನ ತಮ್ಮ ತನಗೆ ಬರುವ ಉತ್ತಮ ಸಂದೇಶವಿರುವ ಮಿಂಚಂಚೆಗಳನ್ನು ಹಂಚಿಕೊಳ್ಳುತ್ತಿರುತ್ತಾನೆ. ಅಂತಹ ಒಂದು ಮಿಂಚಂಚೆಯ ವಿಷಯ ಈ ಲೇಖನಕ್ಕೆ ಪ್ರೇರಿಸಿದೆ. ಆ ಮಿಂಚಂಚೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಜರ್ಮನಿಗೆ ಹೋಗಿದ್ದವರೊಬ್ಬರು ತಮ್ಮ ಅನಿಸಿಕೆಯನ್ನು ಹೀಗೆ ಹಂಚಿಕೊಂಡಿದ್ದರು: "ಜರ್ಮನಿ ಒಂದು ಅತ್ಯಂತ ಪ್ರತಿಷ್ಠಿತ ಕೈಗಾರಿಕಾ ದೇಶ. ಅಲ್ಲಿ ಪ್ರಪಂಚದ ಅತ್ಯುತ್ತಮ ವಾಹನಗಳೆನಿಸಿದ ಬೆಂಜ್, ಸೀಮನ್ಸ್, ಬಿಎಂಡಬ್ಲ್ಯು, ಇತ್ಯಾದಿ ತಯಾರಾಗುತ್ತವೆ. ಆ ದೇಶದ ಒಂದು ಸಣ್ಣ ಹಳ್ಳಿಯಲ್ಲಿ ಅಣು ರಿಯಾಕ್ಟರ್ ಪಂಪು ಸಿದ್ಧವಾಗುತ್ತದೆ. ಅಂತಹ ಒಂದು ದೇಶದ ಜನರು ವೈಭವೋಪೇತವಾಗಿ ಜೀವಿಸುತ್ತಾರೆಂದು ಹೆಚ್ಚಿನವರು ಭಾವಿಸುತ್ತಾರೆ. ಪ್ರವಾಸದ ಮುನ್ನ ನಾನೂ ಹಾಗೆಯೇ ಭಾವಿಸಿದ್ದೆ. ನಾನು ಹ್ಯಾಂಬರ್ಗಿಗೆ ಬಂದಿಳಿದಾಗ ನನ್ನ ಅಲ್ಲಿನ ಸಹೋದ್ಯೋಗಿಗಳು ಒಂದು ರೆಸ್ಟೋರೆಂಟಿನಲ್ಲಿ ನಮಗೆ ಸ್ವಾಗತಕ್ಕೆ ಏರ್ಪಡಿಸಿದ್ದರು. ಹೋಟೆಲ್ಲಿನ ಬಹಳಷ್ಟು ಟೇಬಲ್ಲುಗಳು ಖಾಲಿಯಿದ್ದವು. ಒಂದು ಟೇಬಲ್ಲಿನಲ್ಲಿ ಯುವಜೋಡಿ ಊಟ ಮಾಡುತ್ತಿದ್ದರು. ಆ ಟೇಬಲ್ಲಿನ ಮೇಲೆ ಕೇವಲ ಎರಡು ಆಹಾರ ಖಾದ್ಯಗಳು ಮತ್ತು ಎರಡು ಕ್ಯಾನುಗಳು ಬೀರು ಮಾತ್ರ ಇತ್ತು. ನನಗೆ ಆ ಸರಳ ಆಹಾರ ರೋಚಕವಾಗಿರುತ್ತದೆಯೇ ಮತ್ತು ಆ ಹುಡುಗಿ ಆ ಜಿಪುಣನನ್ನು ಬಿಟ್ಟು ಹೋಗದಿರುತ್ತಾಳೆಯೇ ಎಂಬ ಅನುಮಾನವಾಯಿತು. ಇನ್ನೊಂದು ಟೇಬಲ್ಲಿನಲ್ಲಿ ಕೆಲವು ಮುದುಕಿಯರು ಊಟ ಮಾಡುತ್ತಿದ್ದರು. ಮಾಣಿ ಆಹಾರ ಪದಾರ್ಥ ತಂದು ಅವರಿಗೆ ಹಂಚಿಹಾಕಿದರೆ ಅವರು ಅವರ ತಟ್ಟೆಗಳಲ್ಲಿನ ಒಂದು ಅಗುಳನ್ನೂ ಬಿಡದಂತೆ ಮುಗಿಸುತ್ತಿದ್ದರು. ನಮಗೆ ಹಸಿವಾಗಿದ್ದರಿಂದ ನಮಗಾಗಿ ಹೆಚ್ಚಿನ ಆಹಾರಕ್ಕೆ ಬೇಡಿಕೆ ಇಡಲಾಗಿತ್ತು. ಬಹುಬೇಗನೇ ನಮಗೆ ಊಟ ಸರಬರಾಜಾಯಿತು. ನಮಗೆ ಬೇರೆ ಚಟುವಟಿಕೆಗಳಿದ್ದುದರಿಂದ ಊಟದಲ್ಲಿ ಹೆಚ್ಚು ಸಮಯ ಕಳೆಯದೆ ಮುಗಿಸಿ ಎದ್ದಾಗ ನಮ್ಮ ಟೇಬಲ್ಲಿನಲ್ಲಿ ಸುಮಾರು ಮೂರನೆ ಒಂದು ಭಾಗದಷ್ಟು ಆಹಾರ ಉಳಿದಿತ್ತು. ನಾವು ಹೋಟೆಲಿನಿಂದ ಹೊರಡುತ್ತಿದ್ದಾಗ ಯಾರೋ ನಮ್ಮನ್ನು ಕರೆದಂತಾಯಿತು. ಮುದುಕಿಯರು ನಮ್ಮ ಬಗ್ಗೆ ರೆಸ್ಟೋರೆಂಟಿನ ಮಾಲಿಕನಿಗೆ ದೂರುತ್ತಿದ್ದರು. ಅವರಿಗೆ ನಾವು ಆಹಾರವನ್ನು ಪೋಲು ಮಾಡಿದ್ದಕ್ಕೆ ಅಸಮಾಧಾನವಿತ್ತು. 'ನಮ್ಮ ಊಟಕ್ಕೆ ನಾವು ದುಡ್ಡು ಕೊಟ್ಟಿದ್ದೇವೆ. ನಾವು ಎಷ್ಟು ಉಳಿಸಿದೆವು ಅನ್ನುವ ವಿಷಯ ನಿಮಗೆ ಸಂಬಂಧಿಸಿದ್ದಲ್ಲ' ಎಂಬ ನನ್ನ ಸಹೋದ್ಯೋಗಿಯ ಮಾತಿನಿಂದ ಅವರಿಗೆ ಬಹಳ ಸಿಟ್ಟು ಬಂತು. ಒಬ್ಬಾಕೆ ಕೂಡಲೇ ತನ್ನ ಫೋನಿನಿಂದ ಯಾರಿಗೋ ಕರೆ ಮಾಡಿದಳು. ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಭದ್ರತಾ ಸಂಸ್ಥೆಯ ಯೂನಿಫಾರಂ ಧರಿಸಿದ್ದ ಒಬ್ಬ ಅಧಿಕಾರಿ ಹಾಜರಾಗಿ ವಿಷಯ ತಿಳಿದುಕೊಂಡು ನಮಗೆ ೫೦ ಮಾರ್ಕುಗಳ ದಂಡ ವಿಧಿಸಿದ. ನಾವು ಸುಮ್ಮನಿದ್ದೆವು. ಸ್ಥಳೀಯ ಸಹೋದ್ಯೋಗಿ ದಂಡ ಕಟ್ಟಿ, ಪದೇ ಪದೇ ಕ್ಷಮಾಪಣೆ ಕೋರಿದ. ಆ ಅಧಿಕಾರಿ ನಮಗೆ ಗಂಭೀರ ಧ್ವನಿಯಲ್ಲಿ ಹೇಳಿದ: 'ನೀವು ಎಷ್ಟು ತಿನ್ನುತ್ತೀರೋ ಅಷ್ಟು ಮಾತ್ರ ತರಿಸಿಕೊಳ್ಳಿ. ಹಣ ನಿಮ್ಮದು, ಆದರೆ ಸಂಪನ್ಮೂಲಗಳು ಸಮಾಜದ್ದು. ಪ್ರಪಂಚದಲ್ಲಿ ಆಹಾರ ಸಿಗದ ಎಷ್ಟೋ ಜನರಿದ್ದಾರೆ. ಅದನ್ನು ವ್ಯರ್ಥಗೊಳಿಸಲು ನಿಮಗೆ ಕಾರಣಗಳಿಲ್ಲ.'  ನಮ್ಮ ಮುಖಗಳು ಕೆಂಪಾದವು. ಈ ಶ್ರೀಮಂತ ದೇಶದ ಜನರ ಮನೋಭಾವ ನಮ್ಮನ್ನು ನಾಚಿಕೆಗೀಡುಮಾಡಿತು. ನಾವು ಅಷ್ಟೇನೂ ಶ್ರೀಮಂತವಲ್ಲದ ದೇಶದಿಂದ ಬಂದವರಾದರೂ ನಾವು ಇತರರನ್ನು ತೃಪ್ತಿಪಡಿಸಲು ಬಹಳಷ್ಟು ಆಹಾರವನ್ನು ಬಡಿಸಿ ವ್ಯರ್ಥ ಮಾಡುತ್ತಿದ್ದುದು ನೆನಪಾಯಿತು. ಈ ಘಟನೆ ನಮ್ಮ ಕೆಟ್ಟ ಅಭ್ಯಾಸಗಳನ್ನು ತಿದ್ದಿಕೊಳ್ಳಲು ಒಂದು ಪಾಠವಾಯಿತು."

     ಅಧ್ಯಯನ ಪ್ರವಾಸಕ್ಕೆ ಹೋಗಿದ್ದವರಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ಇದು ಪಾಠವಾಗಬೇಕು. ಯಾವುದಾದರೂ ಮದುವೆಯೋ, ಸಮಾರಂಭವೋ ನಡೆದರೆ ಅಲ್ಲಿ ಊಟ ಮಾಡಿದ ನಂತರ ಉಂಡವರು ಎಲೆಯಲ್ಲಿ ಉಳಿಸಿಹೋದ ಆಹಾರದ ಪ್ರಮಾಣ ನೂರಾರು ಜನರ ಹಸಿವನ್ನು ಇಂಗಿಸುವಷ್ಟು ಇರುತ್ತದೆ. ಮೇಲ್ಪಂಕ್ತಿ ಹಾಕಬೇಕಾದ ಸರ್ಕಾರದ ವತಿಯಿಂದ ನಡೆಯುವ ಸಮಾರಂಭಗಳಲ್ಲೇ, ಗಣ್ಯಾತಿಗಣ್ಯರುಗಳು ಭಾಗವಹಿಸುವ ಮೇಜುವಾನಿಗಳಲ್ಲೂ ಸಹ ಈ ರೀತಿ ಆಹಾರವನ್ನು ವ್ಯರ್ಥ ಮಾಡಲಾಗುತ್ತದೆ. ಹಸಿವಿನಿಂದ ಸುಮಾರು ೫ ಮಿಲಿಯನ್ ಮಕ್ಕಳು ಪ್ರಪಂಚದಲ್ಲಿ ಪ್ರತಿವರ್ಷ ಹಸಿವಿನಿಂದ ಸಾಯುತ್ತಾರೆಂದು ಒಂದು ಅಂದಾಜಿದೆ. ಆಫ್ರಿಕಾ, ಭಾರತ, ಪಾಕಿಸ್ತಾನದಂತಹ ದೇಶಗಳ ಮಕ್ಕಳೂ ಇದರಲ್ಲಿ ಸೇರಿದ್ದಾರೆ. ಪೂರ್ಣ ತಿನ್ನದೆ ಎಂಜಲು ಮಾಡಿ ತಿಪ್ಪೆಗೆ ಚೆಲ್ಲುವ ಹೆಚ್ಚಿನ ಪದಾರ್ಥಗಳು ಉಪಯೋಗಿಸಲು ಯೋಗ್ಯವಾದ ಪದಾರ್ಥಗಳೇ ಆಗಿರುತ್ತದೆ ಎಂಬುದು ಕಠಿಣ ಸತ್ಯವಾಗಿದೆ. ಹೋಟೆಲ್ಲಿನಲ್ಲಿ ತರಿಸಿಕೊಳ್ಳುವ ತಿಂಡಿಯನ್ನು ಪೂರ್ಣ ತಿನ್ನುವವರನ್ನು ಜುಗ್ಗ, ಕಂಜೂಸ್ ಎಂಬಂತೆ ನೋಡುವುದಲ್ಲದೆ, ಶಾಸ್ತ್ರಕ್ಕೆ ತಿಂದಂತೆ ಮಾಡಿ ಉಳಿಸುವುದನ್ನೇ ದೊಡ್ಡಸ್ತಿಕೆ ಎಂದು ಭಾವಿಸುವವರ ಸಂಖ್ಯೆಗೆ ಕಡಿಮೆಯೇನಿಲ್ಲ. ಪ್ರಾಣಿಗಳು ಹಸಿವಾದಾಗ ಮಾತ್ರ ತಿನ್ನುತ್ತವೆ, ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನುತ್ತವೆ. ಮನುಷ್ಯರೆನಿಸಿಕೊಂಡವರು ಪ್ರಾಣಿಗಳಿಗಿಂತ ಕಡೆಯಾಗಬಾರದಲ್ಲವೇ? ಉಳಿಸಿ ಚೆಲ್ಲುವುದಕ್ಕಿಂತ ಎಷ್ಟು ಬೇಕೋ ಅಷ್ಟು ಪಡೆದು ತಿನ್ನುವುದು ಒಳ್ಳೆಯದು. ಹಣ ಗಳಿಸಬಹುದು, ಆದರೆ ಪೋಲಾದ ಆಹಾರವನ್ನು ಮತ್ತೆ ತಯಾರಿಸಲು ಸಾಧ್ಯವೇ? ಒಂದು ಅನ್ನದ ಅಗುಳಿನಲ್ಲಿ ಎಷ್ಟು ಜನರ ಶ್ರಮ ಇರುತ್ತದೆ, ಅದು ಅಕ್ಕಿಯಾಗಲು, ಅನ್ನವಾಗಲು ಎಷ್ಟು ಸಮಯ ಬೇಕು ಎಂಬುದನ್ನು ನಾವು ಯಾರಾದರೂ ಚಿಂತಿಸುತ್ತೇವೆಯೇ? ಆದರೆ ಅದನ್ನು ವ್ಯರ್ಥ ಮಾಡಲು ಸಮಯವೇ ಬೇಕಿಲ್ಲ. ಇದು ತುತ್ತು ಅನ್ನಕ್ಕೂ ಪರದಾಡುವ ಲಕ್ಷಾಂತರ ಜನರಿಗೆ ಬಗೆಯುವ ದ್ರೋಹವಲ್ಲದೆ ಮತ್ತೇನು? ಈ ರೀತಿ ವ್ಯರ್ಥವಾಗುವ ಆಹಾರದಿಂದ ಪ್ರತಿವರ್ಷ ಸುಮಾರು ೫೦೦ ಮಿಲಿಯನ್ ಜನರ ಹಸಿವನ್ನು ಇಂಗಿಸಲು ಶಕ್ಯವಿದೆ!

     ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು ೫೮೦೦೦ ಕೋಟಿ ರೂಗಳಷ್ಟು ಆಹಾರ ಪದಾರ್ಥಗಳು ಮತ್ತು ಸುಮಾರು ೪೪೦೦೦ ಕೋಟಿ ರೂ.ಗಳಷ್ಟು ತರಕಾರಿ ಮತ್ತು ಹಣ್ಣುಗಳು ಹಾಳಾಗುತ್ತಿವೆ. ಆಸ್ಟ್ರೇಲಿಯಾದಲ್ಲಿ ಬೆಳೆಯುವ ಪ್ರಮಾಣದಷ್ಟು ಗೋಧಿ ಭಾರತದಲ್ಲಿ ಹಾಳಾಗುತ್ತಿದೆಯಂತೆ! ಅವೈಜ್ಞಾನಿಕ ವ್ಯವಸಾಯ ಕ್ರಮ, ಹವಾಮಾನ ವೈಪರೀತ್ಯ, ಸಾಗಾಣಿಕೆ, ದಾಸ್ತಾನು ಮಾಡುವ ರೀತಿಗಳಿಂದ ದವಸಗಳು ಹಾಳಾಗುತ್ತಿವೆ. ಅದರ ಜೊತೆಗೆ ಮೇಲೆ ತಿಳಿಸಿದ ಅಪೂರ್ಣ ಬಳಕೆಯ ಕಾರಣದಿಂದಲೂ ಅಪಾರ ಹಾನಿಯಾಗುತ್ತಿದೆ. ಖಾಸಗಿ ಗೋಡೌನುಗಳಿರಲಿ, ಸರ್ಕಾರದ ಗೋಡೌನುಗಳಲ್ಲಿಯೇ ಲಕ್ಷಾಂತರ ಟನ್ನುಗಳಷ್ಟು ದವಸ ಧಾನ್ಯಗಳು ಕೊಳೆತುಹೋಗುತ್ತವೆ. ಲಾಭ ಪಡೆಯುವ ಸಲುವಾಗಿ ದವಸ ಧಾನ್ಯಗಳನ್ನು ಅಕ್ರಮವಾಗಿ ಕಳ್ಳ ದಾಸ್ತಾನು ಶೇಖರಿಸಿಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಅನುಸರಿಸಬೇಕಿದೆ. ಇನ್ನೇನು ಹಾಳಾಗುತ್ತದೆ ಎಂಬ ಹಂತದಲ್ಲಿ ಮಾತ್ರ ಅವು ಹೊರಗೆ ಬರುತ್ತವೆ. ಆಹಾರ ಪದಾರ್ಥಗಳ ನಷ್ಟದ ಕಾರಣದಿಂದಲೇ ದೇಶ ಮತ್ತು ಸಮಾಜ ದೊಡ್ಡ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಆಹಾರ ಪದಾರ್ಥಗಳ ನಷ್ಟ ತಡೆಯುವಲ್ಲಿ ಜಪಾನ್ ಉತ್ತಮ ಆಡಳಿತಾತ್ಮಕ ಕ್ರಮ ಕೈಗೊಂಡಿದೆಯೆನ್ನಬಹುದು. ಕಂಟೈನರುಗಳು, ಪ್ಯಾಕೇಜುಗಳ ಬಗ್ಗೆ, ಆಹಾರದ ತ್ಯಾಜ್ಯದ ಮರುಬಳಕೆ ಬಗ್ಗೆ, ಆಹಾರದ ನಷ್ಟ ತಡೆಯವ ದಿಸೆಯಲ್ಲಿನ ಹಲವಾರು ಸಂಗತಿಗಳ ಬಗ್ಗೆ ಅಲ್ಲಿ ಕಾಯದೆ, ಕಾನೂನುಗಳು ಇವೆ. ಜೊತೆಗೆ ಅಲ್ಲಿನ ನಾಗರಿಕರೂ ತಮ್ಮ ನಾಗರಿಕ ಪ್ರಜ್ಞೆಯಿಂದ ಈ ದಿಸೆಯಲ್ಲಿ ನೆರವಾಗಿದ್ದಾರೆ. ನಮ್ಮಲ್ಲೂ ಈ ಬಗ್ಗೆ ಜನಜಾಗೃತಿ ಮೂಡಿಸಬೇಕು. ನಷ್ಟ ತಡೆಯುವುದರೊಂದಿಗೆ ಮರುಬಳಕೆಗೆ ಮತ್ತು ಪರಿಸರ ಸ್ನೇಹಿ ಬಳಕೆಗೆ ತ್ಯಾಜ್ಯಗಳನ್ನು ಬಳಸುವ ಬಗ್ಗೆ ಕಾನೂನು-ಕಟ್ಟಳೆಗಳನ್ನು ಮಾಡಿ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳು, ತರಕಾರಿಗಳು ಕೆಡದಂತೆ ದಾಸ್ತಾನು ಇಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆಹಾರದ ಸದ್ಬಳಕೆ ಮತ್ತು ಪೋಲು ಮಾಡದಿರುವ ಕುರಿತು ಶಾಲಾ ಪಠ್ಯಪುಸ್ತಕಗಳಲ್ಲಿ ಮಕ್ಕಳಿಗೆ ತಿಳುವಳಿಕೆ ನೀಡುವ ವಿಷಯ ಅಳವಡಿಸಬೇಕು.

     ಆಹಾರವನ್ನು ವ್ಯರ್ಥ ಮಾಡುವುದು ತರವಲ್ಲ. ವ್ಯರ್ಥ ಮಾಡುವುದು ಒತ್ತಟ್ಟಿಗಿರಲಿ, ಆಹಾರವನ್ನು ಪಡೆಯಲೂ ಅರ್ಹತೆ ಇರಬೇಕು. ಈ ವೇದಮಂತ್ರ ಹೇಳುತ್ತದೆ:

ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |

ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)

     'ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ' ಎಂಬುದು ಈ ಮಂತ್ರ ಅರ್ಥ. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದರು: "ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ." ಎಂತಹ ದಿವ್ಯ ಸಂದೇಶ. ಊಟ ಮಾಡುವುದಕ್ಕೂ ಅರ್ಹತೆ ಇರಬೇಕು. ಅಂತಹುದರಲ್ಲಿ ತಿನ್ನುವ ಆಹಾರವನ್ನೇ ವ್ಯರ್ಥ ಮಾಡುವುದು ಮಹಾಪಾಪ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಇದೇ ಸಾಮಾಜಿಕ ಪ್ರಜ್ಞೆ.

      ಮದುವೆ ಮೊದಲಾದ ಸಂದರ್ಭಗಳಲ್ಲಿ ಆಹ್ವಾನಿಸಿದಷ್ಟು ಸಂಖ್ಯೆಯಲ್ಲಿ ಜನರು ಬರದಿದ್ದಾಗ ತಯಾರಾದ ಆಹಾರ ಪದಾರ್ಥಗಳು ಉಳಿದುಬಿಡುತ್ತವೆ. ಇಂತಹ ಸಂದರ್ಭಗಳಲ್ಲಿ ಅದು ವ್ಯರ್ಥವಾಗದಂತೆ ನೋಡಿಕೊಂಡಲ್ಲಿ ಅದು ಸಾಧನೆಯೇ ಸರಿ. ಅದನ್ನು ತ್ವರಿತವಾಗಿ ಅಂದೇ ವಿಲೇವಾರಿ ಮಾಡದಿದ್ದಲ್ಲಿ ತಿಪ್ಪೆಗೆ ಸೇರಿ ಸಾಮಾಜಿಕ ನಷ್ಟವಾಗುತ್ತದೆ. ನಗರಗಳಲ್ಲಿ ಸ್ವಯಂಸೇವಾಸಂಸ್ಥೆಗಳು ಕಲ್ಯಾಣ ಮಂಟಪಗಳು, ಪಾರ್ಟಿ ಹಾಲುಗಳಲ್ಲಿ ಉಳಿಯುವ ಇಂತಹ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸ ಮಾಡಬಹುದು, ಅರ್ಥಾತ್ ಬಡವರು ಮತ್ತು ಅಗತ್ಯವಿರುವವರಿಗಾಗಿ ಒಂದು ಆಹಾರ ಬ್ಯಾಂಕ್ ಸ್ಥಾಪಿಸುವ ಯೋಜನೆ ಮಾಡಬಹುದು. ಕನಿಷ್ಠ ಪಕ್ಷ ಒಂದು ಸಂಚಾರಿ ಕ್ಯಾಂಟೀನ್ ಇಟ್ಟು ರಿಯಾಯಿತಿ ದರಗಳಲ್ಲಿ ಮಾರಿದರೂ ತಪ್ಪಾಗುವುದಿಲ್ಲ. ಸೌದಿಯಲ್ಲಿ ಒಬ್ಬ ಸಹೃದಯಿ ತನ್ನ ಮನೆ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಒಂದು ದೊಡ್ಡ ರೆಫ್ರಿಜರೇಟರ್ ಇಟ್ಟು ಅದರಲ್ಲಿ ಉಪಯೋಗಿಸಿ ಉಳಿದ ಆಹಾರ ಪದಾರ್ಥಗಳನ್ನು ಆತ ಮತ್ತು ಆತನ ಸ್ನೇಹಿತರು ಇಡುತ್ತಾರಂತೆ. ಅಗತ್ಯವಿರುವವರು ಯಾರು ಬೇಕಾದರೂ ನೇರವಾಗಿ ಇದನ್ನು ತೆಗೆದುಕೊಳ್ಳಬಹುದಂತೆ. ಭಿಕ್ಷೆ ಬೇಡುವ ಹೀನಾಯ ಸ್ಥಿತಿಯಿಂದ ತಪ್ಪಿಸುವ ಈ ಕೆಲಸ ಅಭಿನಂದನೀಯವಾಗಿದೆ ಮತ್ತು ಅನುಕರಣೀಯವಾಗಿದೆ. ಸಮಾರಂಭಗಳಲ್ಲಿ ಊಟಕ್ಕೆ ಹಾಕಿಸಿಕೊಂಡು ಉಳಿಸುವ ಆಹಾರ ಪದಾರ್ಥಗಳನ್ನು ತಿಪ್ಪೆಗೆ ಸುರಿದಾಗ ಭಿಕ್ಷುಕರು, ನಾಯಿಗಳು ಅದಕ್ಕಾಗಿ ಕಿತ್ತಾಡುವ ದೃಷ್ಯ ನೋಡಿಯಾದರೂ ನಾವು ಬದಲಾಗಬೇಕು. ತಿನ್ನೋಣ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಾಕಿಸಿಕೊಂಡು ತಿನ್ನೋಣ. ಉಳಿದರೆ ಅದು ಇನ್ನೊಬ್ಬರ ಹಸಿವು ಹಿಂಗಿಸಲು ಸಹಕಾರಿ ಆಗುತ್ತದೆ ಎಂಬುದನ್ನು ಮರೆಯದಿರೋಣ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ ಎಂದು ಬೊಬ್ಬಿರಿಯುವ ನಾವು ಅದೇ ಆಹಾರ ಪದಾರ್ಥಗಳನ್ನು ಹೀಗೆ ಬೇಕಾಬಿಟ್ಟಿ ವ್ಯರ್ಥ ಮಾಡದಿದ್ದರೆ ಸಹಜವಾಗಿ ಅದು ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಬೆಲೆ ಏರಿಕೆ ಮತ್ತಷ್ಟು ಜನರನ್ನು ಬಡತನಕ್ಕೆ ದೂಡುತ್ತದೆ ಎಂಬುದನ್ನು ಮರೆಯದಿರೋಣ. ನೆರೆಯ ಚೀನಾದಲ್ಲಿ ಅಂತರ್ಜಾಲಿಗರು ಒಂದು ಆಂದೋಳನ ಪ್ರಾರಂಭಿಸಿದ್ದಾರೆ, ಅದೆಂದರೆ ಸಮಾರಂಭಗಳಲ್ಲಿ, ಹೋಟೆಲುಗಳಲ್ಲಿ ತಿನ್ನದೆ ಉಳಿಸುವ ಆಹಾರವನ್ನು ಮನೆಗೆ ಕೊಂಡೊಯ್ದು ಉಪಯೋಗಿಸಲು ಪ್ರೇರಿಸುವುದು. ಇಲ್ಲೂ ಸಹ ಇಂತಹ ಆಂದೋಳನದ ಅಗತ್ಯವಿದೆ.

     ೧೯೭೩ರಲ್ಲಿ ಬರ ಪರಿಸ್ಥಿತಿ ಎದುರಾದಾಗ ಕರ್ನಾಟಕದ ಹಲವೆಡೆ ಜನರು ಆಹಾರಕ್ಕಾಗಿ ಹಪಹಪಿಸಿ ಅಂಗಡಿ, ಸೊಸೈಟಿಗಳನ್ನು ಲೂಟಿ ಮಾಡಿ ದವಸ ಧಾನ್ಯಗಳನ್ನು ಹೊತ್ತೊಯ್ದಿದ್ದರು. ದೇಶದ ಜನಸಂಖ್ಯೆ ಏರುತ್ತಲೇ ಇದೆ. ಆಹಾರದ ಅಗತ್ಯತೆ ಕೂಡಾ ಹೆಚ್ಚುತ್ತಿದೆ. ಆದರೆ ಆಹಾರ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ಜಮೀನುಗಳಲ್ಲಿ ಕಟ್ಟಡಗಳು ತಲೆಯೆತ್ತುತ್ತಿವೆ. ಈ ಅಸಮತೋಲನದಿಂದ ಮುಂದೊಮ್ಮೆ ವಿಪ್ಲವ ಜರುಗಿದರೂ ಆಶ್ಚರ್ಯವಿಲ್ಲ. ಇದರ ಮುನ್ನರಿವಿನಿಂದ ಸರ್ಕಾರ ಮತ್ತು ಜನಗಳು ಎಚ್ಚೆತ್ತುಕೊಂಡು ಸಮತೋಲನ ಕಾಯ್ದುಕೊಳ್ಳಲಾದರೂ ಆಹಾರದ ದುರ್ಬಳಕೆ, ದುರ್ವಿನಿಯೋಗ ಮತ್ತು ಹಾಳಾಗುವುದನ್ನು ತಡೆಯಲು ಮನಸ್ಸು ಮಾಡಬೇಕಿದೆ. ಅದೃಷ್ಟವಶಾತ್ ಭಾರತದಲ್ಲಿ ಕೆಲವು ಯೂರೋಪಿಯನ್ ಮತ್ತು ಅಮೆರಿಕಾ ದೇಶಗಳಲ್ಲಿಯಷ್ಟು ಪ್ರಮಾಣದಲ್ಲಿ ಹಾಳು ಮಾಡುತ್ತಿಲ್ಲ. ಆ ದೇಶಗಳಲ್ಲಿ ತರಕಾರಿ ಅಥವ ಹಣ್ಣು ಸರಿಯಾದ ಆಕಾರ ಅಥವ ಬಣ್ಣ ಇಲ್ಲವೆಂದು ಕಂಡರೆ ಎಸೆದುಬಿಡುತ್ತಾರಂತೆ. ಅಲ್ಲಿ ಹಾಳಾದ ಆಹಾರಪದಾರ್ಥಗಳ ಬೆಟ್ಟವೇ ಕಾಣಸಿಗುತ್ತದೆ.

     ಭೂಮಿಯನ್ನು ಜೀವಿಸಲು ಉತ್ತಮ ಸ್ಥಳವೆಂದು ಅನ್ನಿಸಲು ಆಹಾರದ ಸದ್ಬಳಕೆ ಅನಿವಾರ್ಯವಾಗಿದೆ. ಹೆಚ್ಚು ವಿಸ್ತರಿಸದೆ ಮುಗಿಸಿಬಿಡೋಣ. ಏಕೆಂದರೆ ಅಹಾರ ವ್ಯರ್ಥ ಮಾಡುವುದರಿಂದ ಆಗುವ ಕೆಡುಕುಗಳ ಬಗ್ಗೆ ಹೇಳಿಯಾಗಿದೆ. ಬೇರೆಯವರು ಏನು ಮಾಡುತ್ತಾರೆ, ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳದೆ ಉತ್ತಮ ನಾಗರಿಕರಾಗಿ ವೈಯುಕ್ತಿಕವಾಗಿ ನಾವು ಮೊದಲು ಈ ದಿಸೆಯಲ್ಲಿ ಮುಂದುವರೆಯಬೇಕಿದೆ. 'ಕೊಳ್ಳೋಣ, ತಿನ್ನೋಣ ಮತ್ತು ವ್ಯರ್ಥ ಮಾಡೋಣ' ಎಂಬ ನಮ್ಮ ರೂಢಿಗತ ಪ್ರವೃತ್ತಿಯನ್ನು  'ಅಗತ್ಯವಿರುವಷ್ಟು ಮಾತ್ರ ಕೊಳ್ಳೋಣ ಮತ್ತು ಅಗತ್ಯವಿರುವಷ್ಟೇ ತಿನ್ನೋಣ' ಎಂಬುದಕ್ಕೆ ಬದಲಾಯಿಸಿಕೊಳ್ಳಬೇಕಿದೆ.

-ಕ.ವೆಂ.ನಾಗರಾಜ್.

***************

ಪೂರಕ ವಿಶೇಷ ಮಾಹಿತಿ:  'ಅನ್ನಭಾಗ್ಯ' ಯೋಜನೆಗಾಗಿ ಕರ್ನಾಟಕ ಸರ್ಕಾರ ನವೆಂಬರ್, 2013ರಿಂದ ಫೆಬ್ರವರಿ, 2014ರವರೆಗಿನ 4 ತಿಂಗಳ ಅವಧಿಯಲ್ಲಿ ಮಿಲ್ಲುಗಳ ಮಾಲಿಕರಿಂದ ಒತ್ತಾಯವಾಗಿ 1.61 ಲಕ್ಷ ಟನ್ ಅಕ್ಕಿಯನ್ನು ಸಂಗ್ರಹಿಸಿತು. ಇದರಲ್ಲಿ ಬಹುತೇಕ ಅಕ್ಕಿ ಹಾಳಾದ ಸ್ಥಿತಿಯಲ್ಲಿತ್ತು. ಅದರಲ್ಲೇ 93000 ಟನ್ ಅಕ್ಕಿಯನ್ನು ಜನರಿಗೆ ವಿತರಣೆ ಮಾಡಲಾಯಿತು. ವಿತರಿಸಲು ಸಾಧ್ಯವೇ ಇಲ್ಲದಷ್ಟು ಹಾಳಾದ 63000 ಟನ್ ಅಕ್ಕಿಯನ್ನು ವಿತರಿಸಲಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ, ಅಂದರೆ ಸಾರ್ವಜನಿಕರಿಗೆ ಸೇರಿದ, ಸುಮಾರು 200 ಕೋಟಿ ರೂ. ಹಣ ನಷ್ಟವಾಯಿತು. ವಿಪರ್ಯಾಸವೆಂದರೆ ಸರ್ಕಾರ ಮಿಲ್ ಮಾಲಿಕರಿಗೆ ಪೂರ್ಣ ಹಣ ಪಾವತಿಸಿತು. ಈ ನಷ್ಟದ ವಿರುದ್ಧ ಸರ್ಕಾರವಾಗಲೀ, ವಿರೋಧ ಪಕ್ಷವಾಗಲೀ, ಮಾಧ್ಯಮಗಳಾಗಲೀ ತಲೆ ಕೆಡಿಸಿಕೊಳ್ಳಲಿಲ್ಲ.  ಮಾಧ್ಯಮಗಳಂತೂ ಮೈತ್ರೇಯಿಗೌಡ, ಕಾರ್ತಿಕ್ ಗೌಡ, ನಯನಕೃಷ್ಣ, ಬಿಗ್ ಬಾಸುಗಳ ವಿಷಯಗಳೇ ಮಹತ್ವದ ವಿಷಯಗಳೆಂಬಂತೆ ದಿನಗಟ್ಟಲೆ, ವಾರಗಟ್ಟಲೆ ಸುದ್ದಿ, ಚರ್ಚೆಗಳನ್ನು ಬಿತ್ತರಿಸುತ್ತಲೇ ಇವೆ. ಇದು ಅವುಗಳಿಗೆ ಮಹತ್ವದ ಸಂಗತಿಯೇ ಆಗಲಿಲ್ಲ. -ಕ.ವೆಂ.ನಾ.

*********

ಚಿತ್ರಕೃಪೆ: http://www.eco-business.com/news/save-food-campaign-asia-pacific-kicked/

ಆತ್ಮೀಯರೇ, 

ಇದು ಸಂದದಲ್ಲಿನ ನನ್ನ 500ನೆಯ ಬರಹ. ಈ ಸಂದರ್ಭದಲ್ಲಿ ಮೆಚ್ಚಿನ ಸಂಪದದ ನಿರ್ವಾಹಕರುಗಳಿಗೂ, ಎಲ್ಲಾ ಸಂಪದಿಗರುಗಳಿಗೂ, ಓದುಗರಿಗೂ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.

-ಕ.ವೆಂ.ನಾ.

 

Comments

Submitted by kavinagaraj Thu, 09/04/2014 - 15:54

ಕೊನೆಯಲ್ಲಿ 'ಸಂಪದದಲ್ಲಿನ' ಅನ್ನುವುದರಲ್ಲಿ 'ಪ' ಬಿಟ್ಟುಹೋಗಿ ಸಂದದಲ್ಲಿನ ಎಂದಾಗಿದೆ. ಉಳಿಸಿದ ನಂತರ ಗಮನಿಸಿದ್ದರಿಂದ ತಿದ್ದಪಡಿ ಮಾಡಲಾಗಲಿಲ್ಲ. ಕ್ಷಮಿಸಿ.

Submitted by swara kamath Fri, 09/05/2014 - 11:34

ಕವಿ ನಾಗರಾಜರಿಗೆ ನಮಸ್ಕಾರ,
ಪ್ರಪ್ರಥಮವಾಗಿ ತಮ್ಮ 500 ನೇ ಲೇಖನ ಸಂಪದದಲ್ಲಿ ಪ್ರಕಟ ಗೊಂಡಿರುವುದಕ್ಕೆ ಮನಸ್ಸು ಪ್ರಫುಲ್ಲವಾಯಿತು.ಅದಕ್ಕಾಗಿ ನನ್ನ ಹಾರ್ದಿಕ ಶುಭಾಶಯಗಳು.
ತುಂಬಾ ಗಹನವಾದ ,ವಿಚಾರಮಾಡತಕ್ಕ ಮತ್ತು ನಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳ ಬೇಕಾದ ವಿಶಯವನ್ನ ವಿವರ ವಾಗಿ ತಿಳಿಸಿದ್ದೀರಿ...ವಂದನೆಗಳು.........ರಮೇಶ ಕಾಮತ್

Submitted by nageshamysore Fri, 09/05/2014 - 18:45

ಐನೂರಕ್ಕೊಂದು ಸಾರಿ ಕಾಲೆಳೆಯುತ್ತ..
________________________
.
'I' ನೂರು
ಮುಗಿಸೆಬಿಟ್ಟರಲ್ಲ 'High'ನೋರು
ಎಕ್ಸ್ ರೆ 'Eye'ನೋರು
ಐನೂರರ ನೋಟಿಗು
ಕಿಮ್ಮತ್ತಿಲ್ಲದ ಊರಲ್ಲಿ ಮೇಟಿ
ಕಾವಲು ಕಾದಂಗೆ ನಿಧಿಯ
ಭಟ್ಟಿ ಇಳಿಸೆಬಿಟ್ಟರಲ್ಲಾ ನಿಕ್ಷೇಪ..
'ಹಾಯ್'ನೂರರ ಪುಣ್ಯ ಕಾಲಕ್ಷೇಪ..! ||
.
ಐನೂರೇನು ಬಿಡಿ ಲೆಕ್ಕ
ಸೊನ್ನೆಗಳು ಸೇರುತ್ತವೆ ಪಕ್ಕ ಪಕ್ಕ
ಎಕ್ಕಾ ಎಲೆಯೆತ್ತಿದಂಗೆ ಸೂಪರ್
ಅತಿಥಿ ನಟರ ತರ ಜೋಕರ್
ಎಲ್ಲಾ ಸಾಲು ಸಾಲಾಗಿ ಬಂದು
ಕೊಟ್ಟು ಹೋದರಲ್ಲಾ ಜ್ಞಾನದ ಸಾಲ
ಉಭಯ ಕುಶಲೋಪರಿ ಸಕಲ
ಹೀಗೆ ನಡೆದಿರಲಿ ಕುಸುರಿ ಕುಶಲ ||
.
'ಐ'ನೀರೊ, ಪನ್ನೀರೊ, ಎಳ್ನೀರೊ
ಕೂಗ್ದಂಗೆ ಯಾರೊ 'ಎಳ್ಕೊಂಡ್ ಬನ್ರೊ'
ಎಳೆದೆಳೆದು ಬಿಚ್ಚಿದ ದ್ರೌಪತಿ ಸೀರೆ ಪಕ್ಕಾ
ಇಟ್ಟೋನ್ಯಾವನೊ ಲೆಕ್ಕ ಜೀಣ ಗಿರಾಕಿ ?
ಬಿಚ್ಚಿದ್ದಲ್ಲಾ ಮಾನ ಪುಗಸಟ್ಟೆ ಜ್ಞಾನ
ಹಂಚಿದ್ದಲ್ವ ಎಲ್ಲಾ ಕೇಳ್ಲಿ ಬಿಡ್ಲಿ ಗೌಣ
'ಗೌನ್' ಹಿಂದೆ ನಡೆಯೊದೆಲ್ಲಾ ಚಿತ್ರ
ಜನರ ಮುಂದೆ ಬಯಲಾಗಿಸಿ ಬಿಟ್ರಾ..! ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by kavinagaraj Fri, 09/05/2014 - 20:14

In reply to by nageshamysore

ಆತ್ಮೀಯ ನಾಗೇಶರೇ,
ಜಾರಿಕೆಯ ನೆಲವಿದು, ಜಾರಿಬಿಡಬೇಡವೆಂದು ಮೂಢ ಹೇಳುತ್ತಿದ್ದಾನೆ:
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು |
ಮಾಡಿದೆನೆನಬೇಡ ನಿನ್ನದೆನಬೇಡ
ಜಗವೃಕ್ಷರಸ ಹರಿವ ಕೊಂಬೆ ನೀ ಮೂಢ !!
ವಂದನೆಗಳು.
-ನಾಗರಾಜ್.

Submitted by ananthesha nempu Sat, 09/06/2014 - 19:34

ಕವಿನಾಗರಾಜರೆ, ನಿಮ್ಮ ಎಲ್ಲ ಬರಹಗಳನ್ನೂ ಆಸಕ್ತಿಯಿಂದ ಓದುವೆ. ಲೋಕಾನುಭವದಿಂದ ಪಕ್ವವಾದ, ವೇದಜ್ಞಾನದಿಂದ ಪುಷ್ಟವಾದ ನಿಮ್ಮ ವಸ್ತುನಿಷ್ಠಲೇಖನಗಳು ಸಹೃದಯರಿಗೆ ಸದಾ ಆಪ್ಯಾಯಮಾನವಾಗಿರುತ್ತವೆ. ತಾಳ್ಮೆಯಿಂದ ಪ್ರತಿಕ್ರಿಯಿಸುವ ನಿಮ್ಮ ಸಜ್ಜನಿಕೆ, ಎಂದೂ ಕೋಪಿಸಿಕೊಳ್ಳದ ಸಂಯಮ ಮೆಚ್ಚತಕ್ಕದ್ದು. ನಿಮ್ಮಂತವರ ಮಾರ್ಗದರ್ಶನ ಸದಾಕಾಲ ಇರಲಿ....
ಐನೂರು ಲೇಖನಗಳು ಐದು ಸಾವಿರವಾಗಲಿ..ಅಸಂಖ್ಯವಾಗಲಿ ಎಂದು ಹಾರೈಸುವೆ....

Submitted by kavinagaraj Sun, 09/07/2014 - 08:49

In reply to by ananthesha nempu

ಸಹೃದಯಿ ಅನಂತೇಶ ನೆಂಪುರವರಿಗೆ ವಂದನೆಗಳು. ಸಹಜವಾಗಿ ನಿಮ್ಮ ಪ್ರತಿಕ್ರಿಯೆ ಮುದ ನೀಡಿದೆ.