ದುಪ್ಪಟ್ಟು ದರ ವಸೂಲಿ; ಆಟೋಗಳ ಮೇಲೆ ಕ್ರಮ ವಹಿಸಿ

ದುಪ್ಪಟ್ಟು ದರ ವಸೂಲಿ; ಆಟೋಗಳ ಮೇಲೆ ಕ್ರಮ ವಹಿಸಿ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ಸುಗಳು ದುಪ್ಪಟ್ಟು ದರ ವಿಧಿಸುವುದರ ವಿರುದ್ಧ ಆರ್ ಟಿ ಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಹಲವಾರು ಬಸ್ಸುಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ಶ್ಲಾಘನೀಯ. ಆದರೆ ನಗರಗಳಲ್ಲಿ ಓಡಾಡುವ ಆಟೋರಿಕ್ಷಾಗಳಲ್ಲೂ ಪ್ರಯಾಣಿಕರಿಂದ ಆಟೋ ಚಾಲಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಕುರಿತು ಅನೇಕ ದೂರುಗಳು ದಾಖಲಾಗುತ್ತಿವೆ. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ನಗರದೆಲ್ಲೆಡೆ ಸಾರ್ವಜನಿಕರ ಶಾಪಿಂಗ್ ಜೋರಾಗಿದೆ. ಮತ್ತೊಂದೆಡೆ ಹಬ್ಬ ಆಚರಣೆಗಾಗಿ ಹೊರ ಊರುಗಳಿಗೆ ಹೋಗುವ ಜನರ ಸಂಖ್ಯೆ ಹೆಚ್ಚಿದೆ. ಆಟೋ ಚಾಲಕರು ಇದೇ ಪರಿಸ್ಥಿತಿಯ ಲಾಭ ನಿಯಮಬಾಹಿರವಾಗಿ ಹೆಚ್ಚಿನ ದರ ಪಡೆಯುತ್ತಿದ್ದಾರೆ. ಬೇಕಂತಲೇ ಪ್ರಯಾಣಿಕರು ಕರೆದ ಸ್ಥಳಕ್ಕೆ ಬರಲು ನಿರಾಕರಿಸಿ, ದುಪ್ಪಟ್ಟು ದರ ಕೊಟ್ಟರೆ ಮಾತ್ರ ಬರುತ್ತೇವೆ ಎಂದು ಅನಿವಾರ್ಯತೆ ಸೃಷ್ಟಿ ಮಾಡುತ್ತಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ಪೊಲೀಸರಿಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಈ ಕುರಿತು ಅಧಿಕಾರಿಗಳು ಗಮನಹರಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ. ಅಲ್ಲದೆ ಬೆಂಗಳೂರು ನಗರದಲ್ಲಿ ಮೀಟರ್ ಅಳವಡಿಸಬೇಕು, ಆ ಪ್ರಕಾರವೇ ಸಾರ್ವಜನಿಕರಿಂದ ಹಣ ಪಡೆಯಬೇಕು ಎಂದು ಸೂಚನೆ ನೀಡಿದ್ದರೂ ಯಾರೊಬ್ಬರೂ ಮೀಟರ್ ಪ್ರಕಾರ ದುಡ್ಡು ಪಡೆಯುತ್ತಿಲ್ಲ. ಆಟೋ ರಿಕ್ಷಾಗಳಲ್ಲಿ ಚಾಲಕರು ಪಡೆದ ಪರವಾನಗಿ ಪತ್ರಗಳನ್ನು ಪ್ರಯಾಣಿಕರಿಗೆ ಕಾಣಿಸುವಂತೆ ಲಗತ್ತಿಸಬೇಕು ಎಂಬ ನಿಯಮವಿದೆ. ಆದರೆ ಅನೇಕ ಆಟೋಗಳಲ್ಲಿ ಈ ಪರವಾನಗಿ ಪತ್ರಗಳನ್ನು ಲಗತ್ತಿಸಿರುವುದಿಲ್ಲ. ಇನ್ನು ಕೆಲವು ಆಟೋಗಳು ಯಾರದ್ದು ಹೆಸರಿನಲ್ಲಿ ಪರವಾನಗಿ ಪಡೆದಿರುತ್ತವೆ, ಇನ್ಯಾರೋ ಅದರ ಚಾಲಕರಾಗಿರುತ್ತಾರೆ. ಯೂನಿಫಾರ್ಮ್ ಹಾಕಿರುವ ಆಟೋ ಚಾಲಕರು ಸಿಗುವುದು ಅಪರೂಪ ಎಂಬಂತಾಗಿದೆ. ಇನ್ನು ಆನ್ ಲೈನ್ ನಲ್ಲಿ ಒಮ್ಮೆ ಬುಕ್ ಮಾಡಿ ನಂತರ ರದ್ದುಪಡಿಸಿದ್ದಾರೆ ಅದಕ್ಕೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದ್ದರಿಂದ ಆನ್ ಲೈನ್ ನಲ್ಲಿ ದರ ವಿಧಿಸುವ ವಿಚಾರದಲ್ಲಿ ಸೂಕ್ತ ಸೂಚನೆಗಳನ್ನು ನೀಡಬೇಕು. ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆಟೋ ಚಾಲಕರ ವಿರುದ್ಧ ವಹಿಸಬೇಕು. ಆ ಮೂಲಕ ಸಾರ್ವಜನಿಕರಿಗೆ ಬಲಿಯಾಗದಂತೆ ಕೊಳ್ಳಬೇಕಾಗಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೬-೧೦-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ