ದುಪ್ಪಟ್ಟು (ಸೂಟು ಬೂಟಿನ ರೈತನ ಪರಿಚಯ)

ದುಪ್ಪಟ್ಟು (ಸೂಟು ಬೂಟಿನ ರೈತನ ಪರಿಚಯ)

ಪುಸ್ತಕದ ಲೇಖಕ/ಕವಿಯ ಹೆಸರು
ರಾಜಾರಾಂ ತಲ್ಲೂರು
ಪ್ರಕಾಶಕರು
ಬಹುರೂಪಿ ಬೆಂಗಳೂರು
ಪುಸ್ತಕದ ಬೆಲೆ
೧೩೦.೦೦ ಮುದ್ರಣ ೨೦೨೦

ಹಿರಿಯ ಲೇಖಕರಾದ ರಾಜಾರಾಂ ತಲ್ಲೂರು ಅವರ ನಾಲ್ಕನೇ ಕೃತಿ ಇದು. ನುಣ್ಣನ್ನ ಬೆಟ್ಟ (೨೦೧೭), ತಲ್ಲೂರು ಎಲ್ ಎನ್ (೨೦೧೮) ಮತ್ತು ಏನಿದು ಪೌರತ್ವ ತಿದ್ದುಪಡಿ ಕಾಯಿದೆ (೨೦೧೯) ರಾಜಾರಾಂ ತಲ್ಲೂರು ಅವರ ಪ್ರಕಟಿತ ಕೃತಿಗಳು. ಇವರಿಗೆ, ಇವರ ಕೃತಿಗಳಿಗೆ ೨೦೧೭ರಲ್ಲಿ ಅಮ್ಮ ಪ್ರಶಸ್ತಿ ಮತ್ತು ೨೦೨೦ರಲ್ಲಿ ಶಿವರಾಮ ಕಾರಂತ ಪುರಸ್ಕಾರ ಸಂದಿದೆ.

ದುಪ್ಪಟ್ಟು ಆಕರ್ಷಕ ಮತ್ತು ಕುತೂಹಲ ಮೂಡಿಸುವ ಮುಖಪುಟ ಚಿತ್ರದೊಂದಿಗೆ ಗಮನಸೆಳೆಯುತ್ತದೆ. ತಲ್ಲೂರು ಅವರ ಕೃತಿ ಎಂದರೆ ಸಹಜವಾಗಿಯೇ ಅದು ಅಚ್ಚುಕಟ್ಟಾಗಿ ಕಟ್ಟಿದ ಕೃತಿಯಾಗಿರುತ್ತದೆ. ಮಾತ್ರವಲ್ಲ ಅವರ ಸಹಜ ವ್ಯಕ್ತಿತ್ವದ ಹಾಗೆ ಕೃತಿಯೊಳಗಡೆಯೂ ಅಷ್ಟೇ ಘನ ಗಂಭೀರ ವಿಚಾರದ ಮಂಡನೆ ಇರುತ್ತದೆ. ಪುಟ ಪುಟಗಳಲ್ಲೂ ಜನಪರ ಕಾಳಜಿ, ಆಳವಾದ ಚಿಂತನೆಯೊಡನೆ, ಪರ್ಯಾಯ ಚಿಂತನೆಗಳೂ ಇರುತ್ತವೆ. ಇಲ್ಲೂ ಅದನ್ನು ನಾವು ಕಾಣ ಬಹುದು. 

ದುಪ್ಪಟ್ಟು, ರೈತ ಪರವಾದ, ವಿಶ್ಲೇಷಣಾತ್ಮಕ ಕೃತಿ. ಬೆಂಗಳೂರಿನ ಬಹುರೂಪಿ ಇದನ್ನು ಪ್ರಕಟಿಸಿದೆ. ತಲ್ಲೂರು ಕುಟುಂಬದ ಕೃಷಿಭೂಮಿಯಾದ ಕಳಿಮನೆಗೆ ಅರ್ಪಿಸಲ್ಪಟ್ಟ ೯೬ ಪುಟಗಳ ಪುಟ್ಟ ಪುಸ್ತಕ ಇದು. ತಲ್ಲೂರು ಅವರದ್ದು ಬಹುಮುಖ ವ್ಯಕ್ತಿತ್ವ. ಸದಾ ಹೊಸದನ್ನು ಯೋಚಿಸುವ, ಯೋಜಿಸುವ ಅವರ ಕನಸುಗಳು ಹಲವಾರು. ಕನಸುಗಳನ್ನು ಯೋಜಿತವಾಗಿ ಸಾಕಾರಗೊಳಿಸುವಲ್ಲಿಯೂ ಅವರದ್ದು ವಿಶೇಷವಾದ ನೈಪುಣ್ಯತೆ. ಇದು ಅವರ ಕೃತಿಗಳಲ್ಲೂ ಬಿಂಬಿತವಾಗಿದೆ.

ಬೆನ್ನುಡಿಯಲ್ಲಿ ಎಂ.ಎಸ್. ಶ್ರೀರಾಮ್ ಬರೆಯುತ್ತಾರೆ ‘ರಾಜಾರಾಂ ತಲ್ಲೂರು ಅವರ ದುಪ್ಪಟ್ಟು' ಪುಸ್ತಕ ಅತ್ಯಂತ ಸಾಂದರ್ಭಿಕವಾದ ಪುಸ್ತಕ. ಒಂದು ರೀತಿಯಲ್ಲಿ ಇದನ್ನು ಯಾವಾಗ ಬರೆದಿದ್ದರೂ ಸಾಂದರ್ಭಿಕ ಎಂದು ಕರೆಯಬಹುದಿತ್ತೇನೋ? ಯಾಕೆಂದರೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನಮ್ಮ ಸಮಸ್ಯೆಗಳು ಒಂದೆರಡು ವರ್ಷದವು ಅಲ್ಲ. ಅದಕ್ಕೆ ನಾವು ಒಂದು ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಬಿಟ್ಟುಕೊಟ್ಟೂ ಇಲ್ಲ. ಆದರೆ ಈಗ ಸರಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡಹೊರಟಿರುವ ಸ್ಪಷ್ಟ ಗುರಿಯ ಸಂದರ್ಭದಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ’. ಈ ಪುಸ್ತಕದ ಮೂಲಕ ಹೊಸದಾದ ಅರ್ಥಪೂರ್ಣ ಚರ್ಚೆ ಪ್ರಾರಂಭವಾಗಲಿ ಎಂಬುದೇ ಆಶಯ.

ಬರಹ: ಶ್ರೀರಾಮ ದಿವಾಣ, ಉಡುಪಿ