ದುರವಸ್ಥೆಯ ಪರಮಾವಧಿ

ದುರವಸ್ಥೆಯ ಪರಮಾವಧಿ

ಬರಹ

ಎಂದಿನಂತೆ ಕಛೇರಿಯಿಂದ ಸರಿಯಾಗಿ 6:೦೦ ಗಂಟೆಗೆ ಹೊರಟೆ ಮಾರನೆದಿನ ಗೌರಿ ಹಬ್ಬವಾದ ಕಾರಣದಿಂದ ಎಲ್ಲರು ಬೇಗ ಹೊರಡಲು ಅನುವುಮಾಡಿಕೊಳ್ಳುತ್ತಿದ್ದರು. ಗೌರಿ ಹಾಗು ಗಣೇಶ ಹಬ್ಬವು ಶುಕ್ರವಾರ ಹಾಗು ಶನಿವಾರ ದಿನಗಳಂದು ಬಂದಿರುವುದರಿಂದ ಸಹೋದ್ಯೋಗಿಗಳೆಲ್ಲರು ಹಾರೈಸಿಕೊಳ್ಳುತ್ತಿದ್ದರು ಭಾನುವಾರವು ಸೇರಿಸಿ ಮೂರು ದಿವಸಗಳ ರಜೆ ಸಿಕ್ಕಿರುವುದರಿಂದ ಎಲ್ಲರು ಊರಿಗೆ ತೆರಳಲು ಕಾತುರರಾಗಿದ್ದರು.ಕಛೇರಿಯಿಂದ ಹೊರಬಿದ್ದ ಕೂಡಲೇ ಮುಖ್ಯ ರಸ್ತೆಗೆ ಬಂದೆ, ಕಛೇರಿಯು ಎಂ.ಜಿ.ರಸ್ತೆ ಹತ್ತಿರದ ಡಿಕೆನ್ಸ್ ನ್ ರಸ್ತೆಯ ಮಣಿಪಾಲ್ ಸೆಂಟರಿನ ಪಕ್ಕದಲ್ಲೆ ಇದೆ. ಬೆಂಗಳೂರಿನ ರಸ್ತೆಗಳನ್ನು ನಮ್ಮ ಆಡು ಭಾಷೆಯಲ್ಲಿಯೆ ಹೇಳುವುದೆ ಸೂಕ್ತವೆಂದು ನನ್ನ ಅನಿಸಿಕೆಯಾದರು ಓದುಗರಿಗೆ ಕಷ್ಟವಾಗಲಾರದು.
ಮೆಟ್ರೊ ರೈಲಿನ ಕಾಮಗಾರಿಯು ಎಂ.ಜಿ.ರಸ್ತೆಯಲ್ಲಿ ಭರದಿಂದ ಸಾಗುತ್ತಿದ್ದರು ವಾಹನಗಳ ದಟ್ಟಣೆಯು ಕೂಡ ಅತಿಯಾಗಿಯೆ ಇತ್ತು. ಏಕ ಮುಖ ಸಂಚಾರವಾದ್ದರಿಂದ ಬಸ್ಸುಗಳೆಲ್ಲ ಎಂ.ಜಿ.ರಸ್ತೆಯ ಮೇಯೋ ಹಾಲ್ ನಿಂದ ಟ್ರಿನಿಟಿ ಸರ್ಕಲ್ ಮುಖಾಂತರ ಹೋಗುತ್ತಿತ್ತು ವಾಹನಗಳ ಹಾಗು ಸಂಚಾರಿಗಳ ದಟ್ಟಣೆಯನ್ನು ನೋಡಿಯೆ ತಿಳಿಯಿತು ಎಲ್ಲರು ಅವಸರದಲ್ಲಿಯೆ ಮನೆಯನ್ನು ತಲುಪಲು ಹವಣಿಸುತ್ತಿದ್ದರು.ಅಲಸೂರುನಿಂದ ಬರುವ ಬಸ್ಸುಗಳೆಲ್ಲವು ಟ್ರಿನಿಟಿ ಸರ್ಕಲ್ ಎಡಕ್ಕೆ ತಿರುಗಿ ರಿಚ್ಮಂಡ್ ರಸ್ತೆಯ ಲೈಫ್ ಸ್ಟೈಲ್ ಮಳಿಗೆಯ ಹತ್ತಿರ ಸೇರಿಕೊಳ್ಳುತ್ತಿತ್ತು. ಈ ಏಕಮುಖ ಸಂಚಾರದಿಂದ ಮೆಜೆಸ್ಟಿಕ್(ಕೆಂಪೇಗೌಡ ಬಸ್ಸು ನಿಲ್ದಾಣ) ಬಸ್ಸುಗಳನ್ನು ಹಿಡಿಯಲು ಲೈಫ್ ಸ್ಟೈಲ್ ಮಳಿಗೆಯ ಹತ್ತಿರವೆ ಇರುವ ಸ್ಟಾಪಿಗೆ ಹೋಗಬೇಕು.
ಬಿ.ಎಂ.ಟಿ.ಸಿ ಬಸ್ಸಿನ ಮಾಸಿಕ ಪಾಸ್ ನ ಸದಸ್ಯನಾದ್ದರಿಂದ ಎಲ್ಲರಂತೆ ನಾನು ಕೂಡ ಲೈಫ್ ಸ್ಟೈಲ್ ಮಳಿಗೆಯ ಹತ್ತಿರ ಸ್ಟಾಪಿಗೆ ನಡೆಯಲು ಶುರುಮಾಡಿದೆ. ನಮ್ಮ ಕಛೇರಿಯಿಂದ ಲೈಫ್ ಸ್ಟೈಲ್ ಮಳಿಗೆಯ ಹತ್ತಿರ ಸ್ಟಾಪಿಗೆ ಅಂದಾಜಾಗಿ ಮುಕ್ಕಾಲು ಕಿ.ಮಿ.ಆಗಬಹುದು. ಎಂ.ಜಿ.ರಸ್ತೆಯನ್ನು ದಾಟಿ ಮೇಯೋ ಹಾಲ್ ತಲುಪುವ ಹೊತ್ತಿಗೆ ಹತ್ತು ನಿಮಿಷ ಕಳೆಯಿತು.ಮೇಯೋ ಹಾಲ್ ಎದುರುಗಡೆಯ ಇಳಿ ಮುಖ ರಸ್ತೆಯನ್ನು ನೋಡುವಾಗಲೆ ದಂಗಾಗಿಹೋಯಿತು ಅಷ್ಟು ಜನಸಂದಣಿ ಹಾಗು ವಾಹನಗಳ ಅರಚಾಟ.ಲೈಫ್ ಸ್ಟೈಲ್ ಮಳಿಗೆಯ ಹತ್ತಿರವೆ ಇರುವ ಸ್ಟಾಪನ್ನು ತಲುಪುವಾಗಲೆ ಸುಮಾರು 20-25 ನಿಮಿಷಗಳಾಯಿತು. ಗಡಿಯಾರ ನೋಡಿದಾಗ 8:25 ಕಳೆದಿತ್ತು ವಾಹನಗಳು ನಾಲ್ಕು ದಿಕ್ಕುಗಳಿಂದ ಹೆಚ್ಚಾಗ ತೊಡಗಿತು.

ಮನೆಯಿರುವುದು ರಾಜಾಜಿನಗರದ ರಾಮಮಂದಿರ ಹತ್ತಿರವಿರುವುದರಿಂದ ಮೆಜೆಸ್ಟಿಕ್ ಬಸ್ಸ್ ಹಿಡಿದು ಅಲ್ಲಿಂದ ಪುನಃ ಇನ್ನೊಂದು ಬಸ್ಸನ್ನು ಹಿಡಿದು ಮನೆಯನ್ನು ತಲುಪಬೇಕು ಇದು ನನ್ನ ಕೆಲಸದ ದಿನಿಚರಿಗಳಲ್ಲೊಂದು.ಮೆಜೆಸ್ಟಿಕ್ ಬಸ್ಸಿಗೆ ಕಾಯುತ್ತಿದ್ದಂತೆ ಸ್ಟಾಪಿನಲ್ಲಿ ಕೂಡ ಜನರು ಹೆಚ್ಚಾಗತೊಡಗಿದರು. ಬಸ್ಸಿನಲ್ಲಿ ಜನಸಂದಣಿ ಜಾಸ್ತಿಯಾದುದರಿಂದ 2-3 ಬಸ್ಸುಗಳನ್ನು ಹಾಗೆಯೆ ಬಿಡಬೇಕಾಯಿತು. ಆಗಲೆ 6:45 ಕಳೆದಿತ್ತು, ಮತ್ತೊಂದು ಮೆಜೆಸ್ಟಿಕ್ ಬಸ್ಸ್ ಬಂದ ಕೂಡಲೆ ಸಂಭಾಳಿಸಿ ಹತ್ತಿಕೊಂಡೆ.ಹೇಗೋ ಜನಗಳ ಮಧ್ಯ ನುಗ್ಗಿ ಬಸ್ಸಿನ ಮಧ್ಯೆ ನಿಂತುಕೊಂಡು ಸದ್ಯ ಉಸಿರಾಡಲಾದರು ಜಾಗ ಸಿಕ್ಕಿತ್ತ್ತಲ್ಲ ಎಂದು ಸಮಾಧಾನ ಪಟ್ಟುಕೊಂಡೆ.

ಕಂಡಕ್ಟರ್ ಕಿರುಚಿಕೊಂಡೆ ಎಲ್ಲರನ್ನು ನೂಕಿ ಮಧ್ಯಕ್ಕೆ ಕಳಿಸುತ್ತಿದ್ದ. ನಿಧಾನವಾಗಿ ರಿಚ್ಮಂಡ್ ರಸ್ತೆಯ ವೆಲ್ಲಾರ ಜಂಕ್ಷನ್ ಹತ್ತಿರ ತಲುಪಿತು. ಮೊದಲೆ ತಿಳಿದಂತೆ ಜಂಕ್ಷನ್ ಮುಕ್ತಗೊಳ್ಳಲು ಮೂರು ನಿಮಿಷವಾದರು ಬೇಕು ಎಂದು ತಿಳಿದು ಹಾಗೆ ನಿಂತುಕೊಂಡೆ.15 ನಿಮಿಷ ಕಳೆದರೂ ಮುಕ್ತಗೊಳ್ಳಲಿಲ್ಲ,ಇದೇನಪ್ಪ ರಗಳೆ ಎಂದು ಮತ್ತೊಮ್ಮೆ ಜನರ ಮಧ್ಯೆ ನುಗ್ಗಿ ನುಸುಳಿ ಬಸ್ಸನ್ನಿಳಿದು ಜಂಕ್ಷನ್ ಹತ್ತಿರ ಬಂದು ನೋಡಿದರೆ ಹಾದಿಕಟ್ಟಿತ್ತು.ಸರಿ,ರಿಚ್ಮಂಡ್ ರಸ್ತೆಯ ಹಜ್ ಪ್ರಾಧಿಕಾರದ ಕಛೇರಿಯ ಹತ್ತಿರ ಸ್ಟಾಪಿಗೆ ನಡೆಯುವುದೆ ಸೂಕ್ತವೆಂದು ನಡೆಯತೊಡಗಿದೆ ನೋಡ ನೋಡತ್ತಿದ್ದಂತೆ ವಾಹನಗಳು ದ್ವಿಗುಣದಷ್ಟು ಹೆಚ್ಚಾಯಿತು ಆದಾಗಲೇ 7:15 ಕಳೆದಿತ್ತು. ಕೇವಲ 2 - 2.50 ಕಿ.ಮಿ.ಕ್ರಮಿಸುವಾಗಲೆ 1:15 ಗಂಟೆ ಬೇಕಾಯಿತಲ್ಲ ಎಂದು ಲೆಕ್ಕ ಹಾಕುತ್ತಿರುವಾಗಲೆ ರಿಚ್ಮಂಡ್ ಸರ್ಕಲ್ ಹತ್ತಿರ ಮುಖಮಾಡಿ ನೋಡಿದರೆ ಇರುವೆಗಳಂತೆ ಸಾಲಾಗಿ ಅರ್ಧ ಕಿ.ಮಿ.ಗಟ್ಟಲೆ ವಾಹನಗಳೆಲ್ಲವು ನಿಂತಿವೆ. ಬೇರೆ ವಿಧಿಯಿಲ್ಲದೆ ರಿಚ್ಮಂಡ್ ಸರ್ಕಲ್ ಗೆ ಮುಖಮಾಡಿ ನಡೆಯತೊಡಗಿದೆ ಇದರ ಜೊತೆಗೆ ವಾಹನಗಳ ಸದ್ದು ಹಾಗು ಹೊಗೆ ಉಗುಳುವಿಕೆಯು ಹೆಚ್ಚಾಗ ತೊಡಗಿತು.ರಿಚ್ಮಂಡ್ ಸರ್ಕಲ್ ತಲುಪುವಾಗ ಸುಮಾರು 7:30ಆಗಿತ್ತು ಈ ಜಂಕ್ಷನ್ ನಲ್ಲಾದರು ಬಸ್ಸನ್ನು ಹತ್ತಿಕೊಳ್ಳೋಣ ಎಂದೆನಿಸಿದರು ಆ ಯೋಚನೆಯು ಕೈ ಬಿಡಬೇಕಾಯಿತು ಏಕೆಂದರೆ ಸರ್ಕಲ್ ಆಚೆಯ ಭಾಗ ಕಾರ್ಪೊರೇಷನ್ ಗೆ ಹೋಗುವ ದಾರಿಯು ಕೂಡ ವಾಹನಗಳಿಂದ ತುಂಬಿಹೋಗಿತ್ತು.ದಾರಿಯುದ್ದಕ್ಕೂ ಶಪಿಸಿಕೊಂಡು ನಡೆದುಕೊಂಡೆ ಹೊರಟೆ ಯಾರಿಗೆ ಶಪಿಸಿದರೆ ಪ್ರಯೋಜನವೇನು ಎಂದುಕೊಂಡರು ಶಪಿಸುವುದನ್ನು ನಿಲ್ಲಿಸಲಿಲ್ಲ. ಶಪಿಸಿಕೊಂಡೆ ಕಾರ್ಪೊರೇಷನ್ ತಲುಪಿದೆ.ಗಡಿಯಾರ 7:50ತೋರಿಸುತ್ತಿತ್ತು.

ಕಾರ್ಪೊರೇಷನ್ ಸರ್ಕಲ್ ನ ನಾಲ್ಕು ಇಕ್ಕೆಲಗಳನ್ನು ನೋಡಿದರೆ ರಸ್ತೆಯಲ್ಲಿ ನುಸುಳುವುದಕ್ಕು ಜಾಗವಿಲ್ಲದಷ್ಟು ವಾಹನಗಳೇ. ಈ ಸರ್ಕಲ್ ನಲ್ಲಿ ರಸ್ತೆ ದಾಟುವುದೆ ಒಂದು ದೊಡ್ಡ ಸಾಹಸ ಸ್ವಲ್ಪ ಅಜಾಗರೂಕರಾದೆವೊ ಜೀವವೆ ಹಾರಿ ಹೋಗುವಂತಹ ಪ್ರಸಂಗ ಬಂದೀತು,ಆ ಪರಿಯ ವಾಹನಗಳ ವೇಗ ಹಾಗು ಚಲಾವಣೆ.ಸರಿಯಾಗಿ 8:05ರ ಹೊತ್ತಿಗೆ ಬನ್ನಪ್ಪ ಪಾರ್ಕ್ ಗೆ ಆತುಕೊಂಡಿರುವ ಕೆ.ಜಿ.ರಸ್ತೆಯನ್ನು ದಾಟಿದೆ.ಹಸಿವು ಮನಸ್ಸಿನಲ್ಲಿ ಮೂಲವಾಗಿ ಆವರಿಸಿ ಹೇಗೋ ಹಸಿವನ್ನು ತಡೆದುಕೊಂಡು ಹೆಜ್ಜೆ ಹಾಕುತ್ತ ನಡೆದೆ.ಕೆ.ಜಿ.ರಸ್ತೆಯಲ್ಲಿ ಮೈಸೂರು ಬ್ಯಾಂಕಿನವರೆಗು ಹಾದಿಕಟ್ಟಿತ್ತು.

ಮೆಜೆಸ್ಟಿಕ್ ನಿಂದಾದರು ಬಸ್ಸನ್ನು ಹಿಡಿಯುವ ಎಂದು ಯೋಚಿಸಿಕೊಂಡು ಸಂಚಾರದ ದುರವಸ್ಥೆಯನ್ನು ವೀಕ್ಷಿಸುತ್ತ ನಡೆದೆ ಮೈಸೂರು ಬ್ಯಾಂಕಿನ ಹತ್ತಿರ ಬರುತ್ತಿದ್ದಂತೆ ಕಾಲುದಾರಿಯಲ್ಲಿ ಜನರ ನಡಿಗೆ ಗಂಗೆಯ ಹುಳುವಿನಂತೆ ಮಂದವಾಗಿ ಮುಂದೆ ಸಾಗುತ್ತಿತ್ತು ಅವರ ನಡುವೆಯೇ ನಾನು ಸೇರಿಕೊಂಡು ಕೋಪವನ್ನು ನಿಯಂತ್ರಿಸಿ ಸಾಗಿದೆ.ಕೆ.ಜಿ.ರಸ್ತೆಯಲ್ಲಿನ ಅಂಗಡಿ ಮುಗ್ಗಟ್ಟುಗಳಿಂದ ಬರುವ ಜನರನ್ನು ಭೇದಿಸಿ ಬೇಗ ಹೆಜ್ಜೆ ಹಾಕುತ್ತ ಮೆಜೆಸ್ಟಿಕ್ ಪಾದಚಾರಿ ಸುರಂಗ ಮಾರ್ಗವನ್ನು ತಲುಪಿದಾಗ ಸುಮಾರು 8:30. ಅದೇ ಮಾರ್ಗದಿಂದ ಮೇಲ್ಸೇತುವೆಯನ್ನು ಕ್ರಮಿಸುವಾಗ ಎಡಬದಿಯಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣವನ್ನು ನೋಡಿ ಬೆರಗಾದೆ. ಆ ಜನರ ಗಡಿಬಿಡಿ,ಎಲ್ಲೆಂದರಲ್ಲಿ ನಿಲ್ಲಿಸಿರುವ ಬಸ್ಸುಗಳ್ಳನ್ನು ನೋಡಿ ಕೋಪವು ನೆತ್ತಿಗೇರಿತ್ತು.ಪಾದಚಾರಿ ಮೇಲ್ಸೇತುವೆಯ ಬಲಬದಿಯ ಬಿ.ಎಂ.ಟಿ.ಸಿ ನಿಲ್ದಾಣವು ಇದೇ ಪರಿಸ್ಥಿತಿ, ಜನರು ಊರಿಗೆ ತೆರಳಲು ಬಿ.ಎಂ.ಟಿ.ಸಿ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ ಹಾಗು ರೈಲ್ವೆನಿಲ್ದಾಣಕ್ಕೆ ಓಡುತ್ತಿರುವುದನ್ನು ನೋಡಿಕೊಂಡೆ ನಿಂತೆ. ಈ ನಿಲ್ದಾಣದಲ್ಲಿ ಬಸ್ಸುಗಳನ್ನು ನಿಲ್ಲಿಸಿರುವುದನ್ನು ನೋಡಿ ದುರವಸ್ಥೆಯ ಪರಮಾವಧಿಯನ್ನು ಕೂಡ ಮೀರಿತ್ತು. ಇಡೀ ನಿಲ್ದಾಣವೇ ಸ್ಥಗಿತ, ಕೇಳಲಾರದಷ್ಟು ಜನರ ಗಿಜಿ ಗಿಜಿ. ಈ ಗಲಾಟೆಯಲ್ಲಿಯೆ ಓಕಳಿಪುರಂ ಗೆ ಮುಖಮಾಡಿ ಸಹನೆ ತಂದುಕೊಂಡು ಪುನಃ ನಡೆಯಲು ತೀರ್ಮಾನಿಸಿದೆ.ಮನೆಯವರೆಗು ನಡೆಯುವುದೆ ಸೂಕ್ತವೆಂದು ತೀರ್ಮಾನಿಸಿ ಓಕಳಿಪುರಂ ಸ್ಟಾಪನ್ನು ತಲುಪುವ ಹೊತ್ತಿಗೆ 8:55.

ಸಂಚಾರದ ದುರವಸ್ಥೆಯಿಂದ ನನ್ನ ನಡಿಗೆಯ ಸಮರ್ಥತೆಯು ಕೂಡ ಮುಕ್ಕಾಲು ಭಾಗ ಕ್ಷೀಣಿಸಿತ್ತು, ವಿಪರ್ಯಾಸವೆಂದರೆ ಓಕಳಿಪುರಂ ದಾಟಿ ಸ್ಟಾಪನ್ನು ತಲುಪುತ್ತಿರುವಾಗಲೆ ವಾಹನಗಳ ದಟ್ಟಣೆಯು ಸಹಜ ಸ್ಥಿತಿಯತ್ತ ಮರಳಿತು. ಎಲ್ಲಿಯು ಅಡಚಣೆಯಿಲ್ಲದೆ ಸುಗಮವಾಗಿ ಸಾಗುತ್ತಿತ್ತು.ಮುಂದಿನ ಸ್ಟಾಪ್ ರಾಮಮಂದಿರವಾದ್ದರಿಂದ ಇನ್ನಷ್ಟು ವೇಗವಾಗಿ ನಡೆದು ಮನೆ ತಲುಪುವಾಗ ಸರಿಯಾಗಿ 9:20.

ಹಳ್ಳಿಯಲ್ಲಿನ 8 - 9 ಕಿ.ಮಿ. ಕ್ರಮಿಸಿದರು ಸುಸ್ತಾಗದೆ ಇದ್ದರೂ ನಗರದ ರಸ್ತೆಯಲ್ಲಿ ಅದು ಈಗಿನ ಪರಿಸ್ಥಿತಿಯಲ್ಲಿ ಅದೇ 8 - 9 ಕಿ.ಮಿ. ಕ್ರಮಿಸಲು ಹರ ಸಾಹಸ ಮಾಡಬೇಕಲ್ಲ ಎಂದು ಗೊಣಗಿಕೊಂಡು ಕೈ, ಕಾಲು, ಮುಖವನ್ನು ತೊಳೆದು ಹಜಾರದ ಕೋಣೆಯ ನೆಲದಲ್ಲಿ ಕಾಲನ್ನು ನೀಡಿ ಕುಳಿತೆ. ಯಾರಿಗು ಶಪಿಸಿ ಪ್ರಯೋಜನವಿಲ್ಲವೆಂದು ಅರಿತು ನಗರದ ಎಲ್ಲಾ ರೀತಿಯ ಸುವ್ಯವಸ್ಥೆಗೆ ಸ್ವಗತದಿಂದ ಎಲ್ಲರೂ ಆಲೋಚನೆ ಮಾಡಿದರೆ ಕಾರ್ಯಗತವಾಗುವುದೆಂದು ಅರಿತೆನಾದರು ಇದು ಕೂಡ ನಡೆಯುವುದಿಲ್ಲವೆಂದು ತಿಳಿದು ನನ್ನ ಮಿಕ್ಕ ಕೆಲಸಗಳಲ್ಲಿ ತಲ್ಲೀನನಾದೆ.