ದುರಾಶೆಯ ಟೆಡ್ದಿ ಕರಡಿ

ದುರಾಶೆಯ ಟೆಡ್ದಿ ಕರಡಿ

ಕಂದು ಟೆಡ್ಡಿ ಕರಡಿಗೆ ಈ ಜಗತ್ತಿನಲ್ಲಿ ಅತ್ಯಂತ ಇಷ್ಟದ ತಿನಿಸು ಎಂದರೆ ಬನ್. ಅದರೆ ಮೇಲೆ ಸಕ್ಕರೆಯ ಪಾಕ ಇದ್ದರಂತೂ ಕಂದು ಟೆಡ್ದಿ ಕರಡಿ ಅದನ್ನು ಚಪ್ಪರಿಸಿ ಚಪ್ಪರಿಸಿ ತಿನ್ನುತ್ತಿತ್ತು. ಅಂತಹ ಬನ್ ಎಷ್ಟು ಕೊಟ್ಟರೂ ಅದು ದುರಾಶೆಯಿಂದ ತಿನ್ನುತ್ತಿತ್ತು.

ಪುಟ್ಟಿ ಗೊಂಬೆ ಬಹಳ ರುಚಿಯಾದ ಬನ್ನುಗಳನ್ನು ಪುಟ್ಟ ಆಟಿಕೆ ಕುಕ್ಕರಿನಲ್ಲಿ ಬೇಯಿಸುತ್ತಿತ್ತು. ದೊಡ್ಡ ಬನ್, ಸಣ್ಣ ಬನ್, ಕ್ರೀಮ್ ಬನ್, ಹಾಟ್-ಕ್ರಾಸ್ ಬನ್ - ಇಂತಹ ಹಲವಾರು ವಿಧದ ಬನ್ನುಗಳನ್ನು ಅದು ಬೇಯಿಸುತ್ತಿತ್ತು. ಅವನ್ನು ಆಟದ ಕೋಣೆಯ ಎಲ್ಲ ಗೊಂಬೆಗಳಿಗೆ ಅದು ಹಂಚುತ್ತಿತ್ತು. ಉಳಿದ ಎಲ್ಲರಿಗಿಂತ ಜಾಸ್ತಿ ಇವನ್ನು ಇಷ್ಟ ಪಡುತ್ತಿದ್ದದ್ದು ಕಂದು ಟೆಡ್ಡಿ ಕರಡಿ.

 ಇತರ ಗೊಂಬೆಗಳಿಗೆ ಏನಾದರೂ ಸಹಾಯ ಮಾಡುತ್ತೇನೆ ಎಂದು ಹೇಳಿ, ಅದಕ್ಕೆ ಬದಲಾಗಿ ಕಂದು ಟೆಡ್ಡಿ ಕರಡಿ ಅವುಗಳ ಬನ್ ಕೇಳುತ್ತಿತ್ತು. ಕೆಲವೊಮ್ಮೆ ಇತರ ಗೊಂಬೆಗಳು ತಮ್ಮ ಬನ್ನನ್ನು ಇದಕ್ಕೆ ಕೊಡುತ್ತಿದ್ದವು. ಈ ರೀತಿಯಲ್ಲಿ ಕೆಲವು ಬಾರಿ ಒಂದೇ ದಿನದಲ್ಲಿ  ಐದಾರು ಬನ್ನುಗಳನ್ನು ಕಂದು ಟೆಡ್ದಿ ಕರಡಿ ತಿನ್ನುತ್ತಿತ್ತು!

ಅನಂತರ, ಗೊಂಬೆಗಳ ಉಡುಪು ತೊಳೆಯುವ, ನಾಯಿ ಗೊಂಬೆಯ ರೋಮ ಬಾಚುವ, ಪೊಲೀಸ್ ಗೊಂಬೆಯ ಕಾರನ್ನು ಸ್ವಚ್ಚ ಮಾಡುವ ಕೆಲಸಗಳಲ್ಲಿ ಕಂದು ಟೆಡ್ಡಿ ಕರಡಿ ಮುಳುಗಿ ಹೋಗುತ್ತಿತ್ತು. ಕೆಲವೊಮ್ಮೆ ಜೋಕರ್ ಗೊಂಬೆ ಕಾಗದದ ಬಾಣಗಳನ್ನು ಎಸೆದು ಅಭ್ಯಾಸ ಮಾಡಲಿಕ್ಕಾಗಿ ಕಂದು ಟೆಡ್ಡಿ ಕರಡಿ ನಿಶ್ಚಲವಾಗಿ ನಿಂತು ಸಹಕರಿಸುತ್ತಿತ್ತು.

ಒಟ್ಟಾರೆಯಾಗಿ ಕಂದು ಟೆಡ್ದಿ ಕರಡಿ ಸೋಮಾರಿಯಲ್ಲ, ಆದರೆ ದುರಾಶೆಯ ಕರಡಿ. ಅಷ್ಟೆಲ್ಲ ಕೆಲಸ ಮಾಡಿದರೂ, ದಿನದಿಂದ ದಿನಕ್ಕೆ ಅದು ದಪ್ಪಗಾಗುತ್ತಿತ್ತು. ಯಾಕೆಂದರೆ, ಅದು ತಿಂದ ಬನ್ನುಗಳೆಲ್ಲ ಅದರೆ ಹೊಟ್ಟೆಯನ್ನು ದಪ್ಪಗಾಗಿಸುತ್ತಿದ್ದವು!

ಅದನ್ನು ಕಂಡು ಮೊಲ ಗೊಂಬೆ ಹೇಳಿತು, "ಕಂದು ಟೆಡ್ದಿ ಕರಡಿಯೆ, ಸದ್ಯದಲ್ಲೇ ಒಂದಿನ ನಿನ್ನ ಹೊಟ್ಟೆ ಬಿರಿಯುತ್ತದೆ.” ಆದರೆ, ಕಂದು ಟೆಡ್ಡಿ ಕರಡಿ ಅದಕ್ಕೆಲ್ಲ ಕಿವಿಗೊಡಲಿಲ್ಲ. ಯಾಕೆಂದರೆ, ಅದರೆ ಒಡತಿ ಅದನ್ನು ಒಂದು ಪ್ರವಾಸಕ್ಕೆ ಕರೆದೊಯ್ಯುತ್ತೇನೆ ಎಂದು ಹೇಳಿದ್ದಳು. ಅಲ್ಲಿ ತಿನ್ನಲು ವಿಧವಿಧದ ಬನ್ನುಗಳು ಇರುತ್ತವೆ ಎಂದೂ ಹೇಳಿದ್ದಳು.

ಕಂದು ಟೆಡ್ಡಿ ಕರಡಿ ಆ ಪ್ರವಾಸದ ದಿನವನ್ನೇ ಎದುರು ನೋಡುತ್ತಿತ್ತು. ಆ ದಿನ ಬಂದೇ ಬಂತು. ಅವತ್ತು ಬೆಳಗ್ಗೆ ಕಂದು ಟೆಡ್ಡಿ ಕರಡಿ ಹಾಸಿಗೆಯಲ್ಲಿ ತನ್ನ ಕೈಗಳನ್ನು ಅಗಲವಾಗಿ ಚಾಚಿ ಆಕಳಿಸಿತು. ಆಗ ಅದಕ್ಕೆ ತನ್ನ ಹೊಟ್ಟೆಯಲ್ಲಿ ಏನೋ ಬಿರಿದಂತೆ ಅನಿಸಿತು. ಅದು ಹಾಸಿಗೆಯಿಂದ ಏಳಲು ಪ್ರಯತ್ನಿಸಿತು. ಆದರೆ ಅದಕ್ಕೆ ಏಳಲಾಗಲೇ ಇಲ್ಲ. ಏನಾಯಿತೆಂದು ಅದು ತಲೆಯೆತ್ತಿ ನೋಡಿದಾಗ, ಅದರೆ ಹೊಟ್ಟೆಯ ಹೊಲಿಗೆ ಬಿಚ್ಚಿತ್ತು ಮತ್ತು ಅದರೊಳಗಿನಿಂದ ಹತ್ತಿ ಹೊರಗೆ ಬರುತ್ತಿತ್ತು!

“ಸಹಾಯ ಮಾಡಿ" ಎಂದು ಕೂಗಿತು ಕಂದು ಟೆಡ್ದಿ ಕರಡಿ. ಆಗಲೇ ಒಡತಿಗೆ ಎಚ್ಚರವಾಯಿತು. ಇದನ್ನು ನೋಡಿದ ಒಡತಿ ಹೇಳಿದಳು, “ಇದೇನಿದು ನಿನ್ನ ಅವಸ್ಥೆ? ನೀನು ಹೀಗಿದ್ದರೆ ನಾನು ನಿನ್ನನ್ನು ಪ್ರವಾಸಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ.”

ಅದರ ಒಡತಿ ತನ್ನ ತಾಯಿಗೆ ಕಂದು ಟೆಡ್ದಿ ಕರಡಿಯನ್ನು ತೋರಿಸಿದಾಗ, ಅದನ್ನು ಚಿಕಿತ್ಸೆಗಾಗಿ ಗೊಂಬೆಗಳ ಆಸ್ಪತ್ರೆಗೆ ಒಯ್ಯಬೇಕೆಂದು ತಿಳಿಸಿದಳು. ಒಡತಿ ಹಾಗೆಯೇ ಮಾಡಿದಳು. ಕಂದು ಕರಡಿ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಅಲ್ಲಿಂದ ಹಿಂತಿರುಗಿ ಮನೆಗೆ ಬಂದಾಗ, ಕಂದು ಟೆಡ್ಡಿ ಕರಡಿ ಚಂದವಾಗಿತ್ತು. ಅದರ ಹೊಟ್ಟೆಯಿಂದ ಜಾಸ್ತಿಯಾಗಿದ್ದ ಹತ್ತಿ ತೆಗೆದು, ಸ್ವಲ್ಪ ಹೊಸ ಹತ್ತಿ ಹಾಕಿ, ಹೊಲಿಗೆ ಹಾಕಲಾಗಿತ್ತು.

ಆಸ್ಪತ್ರೆಯಲ್ಲಿ ಕಂದು ಟೆಡ್ಡಿ ಕರಡಿಗೆ ಸಾಕಷ್ಟು ಪುರುಸೊತ್ತು ಇತ್ತು. ತಾನೆಂತಹ ದುರಾಶೆಯ ಕರಡಿಯಾಗಿದ್ದೆ ಎಂದು ಅದು ಅಲ್ಲಿ ಯೋಚಿಸಿತು. ಇನ್ನು ಅಂತಹ ತಪ್ಪು ಮಾಡಬಾರದೆಂದು ನಿರ್ಧರಿಸಿತು.

ಅದೇನಿದ್ದರೂ, ಒಡತಿಯೊಂದಿಗೆ ಪ್ರವಾಸ ಹೋಗಲಾಗದ್ದಕ್ಕೆ ಕಂದು ಟೆಡ್ದಿ ಕರಡಿಗೆ ಬಹಳ ನಿರಾಶೆಯಾಗಿತ್ತು. ಅದರ ಒಡತಿ ಪ್ರವಾಸಕ್ಕೆ ಮೊಲ ಗೊಂಬೆಯನ್ನು ಒಯ್ದಿದ್ದಳು. ಕಂದು ಟೆಡ್ಡಿ ಕರಡಿಗೆ ಮೊಲ ಹೇಳಿತು, “ನನಗಂತೂ ಅಲ್ಲಿ ಬಹಳ ನಿರಾಶೆಯಾಯಿತು. ಯಾಕೆಂದರೆ ಅಲ್ಲಿ ತಿನ್ನಲು ಒಂದೇ ಒಂದು ಕ್ಯಾರೆಟ್ ಇರಲಿಲ್ಲ. ಆದರೆ ಅಲ್ಲಿ ರಾಶಿರಾಶಿ ಬನ್ನುಗಳಿದ್ದವು. ನಿನಗಾಗಿ ಒಂದು ಬನ್ ತಂದಿದ್ದೇನೆ.”

ಹೀಗೆಂದು ಅದು ತಾನು ತೆಗೆದಿಟ್ಟಿದ್ದ ಬನ್ನನ್ನು ಕಂದು ಟೆಡ್ಡಿ ಕರಡಿಗೆ ಕೊಟ್ಟಿತು. "ಬೇಡ, ಬೇಡ. ನನಗೆ ಬನ್ ಬೇಡವೇ  ಬೇಡ" ಎಂದು ಕಂದು ಟೆಡ್ಡಿ ಕರಡಿ ಹೇಳಿದಾಗ ಇತರ ಎಲ್ಲ ಗೊಂಬೆಗಳಿಗೆ ಅಚ್ಚರಿಯೋ ಅಚ್ಚರಿ.

ಅನಂತರ ಕಂದು ಟೆಡ್ದಿ ಕರಡಿ ಬನ್ ತಿನ್ನುವುದನ್ನು ನಿಲ್ಲಿಸಲಿಲ್ಲ. ಆದರೆ ಈಗ ಅದು ಮುಂಚಿನಂತೆ ದುರಾಶೆಯಿಂದ ಬನ್ ತಿನ್ನುವುದಿಲ್ಲ. ದಿನಕ್ಕೆ ಒಂದೇ ಒಂದು ಬನ್ ತಿನ್ನುತ್ತದೆ. ಇತರ ಗೊಂಬೆಗಳಿಗೆ ಸಹಾಯ ಮಾಡುವುದನ್ನೂ ಕಂದು ಟೆಡ್ಡಿ ಕರಡಿ ನಿಲ್ಲಿಸಲಿಲ್ಲ. ಮುಂಚೆ ತಾನು ಮಾಡಿದ ಸಹಾಯಕ್ಕಾಗಿ ಅದು ಬನ್ ಕೇಳುತ್ತಿದ್ದರೆ, ಈಗ ಇತರ ಗೊಂಬೆಗಳಿಗೆ ಪ್ರೀತಿಯಿಂದ ಪುಕ್ಕಟೆಯಾಗಿ ಸಹಾಯ ಮಾಡುತ್ತಿದೆ.

ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ