ದುಷ್ಟರ ಸಹವಾಸ... ಒಂದು ನೀತಿ ಕಥೆ

ದುಷ್ಟರ ಸಹವಾಸ... ಒಂದು ನೀತಿ ಕಥೆ

ಒಂದು ಪ್ರದೇಶದ ರಾಜನು ಕಾಡಿಗೆ ವಿಹಾರಕ್ಕೆಂದು ತೆರಳಿದ್ದನು. ಅಲ್ಲಿ ರಾಜನಿಗೆ ತುಂಬಾ ದಣಿವಾಯಿತು. ಆಗ ರಾಜನು ಒಂದು ಮರದ ಕೆಳಗೆ ಬಂದು ನಿಂತುಕೊಂಡ. ರಾಜನನ್ನು ಗಮನಿಸಿದ ಒಂದು ಕೋಗಿಲೆಯು ಆತನಿಗೆ ನೀರಿರುವ ಸ್ಥಳವನ್ನು ತೋರಿಸಿ ಒಂದು ಹಣ್ಣನ್ನು ಕೂಡ ತಂದುಕೊಟ್ಟಿತು. ರಾಜನು ಹಣ್ಣು ತಿಂದು ಸಂತೃಪ್ತನಾದ. ಕೋಗಿಲೆಯು ತನ್ನ ಇಂಪಾದ ಕಂಠದಿಂದ ಹಾಡಲಾರಂಭಿಸಿತು. ಹಾಡನ್ನು ಕೇಳುತ್ತಾ ರಾಜನು ನಿದ್ರೆಗೆ ಜಾರಿದ. ಕೆಲವು ಕ್ಷಣಗಳ ನಂತರ ಅಲ್ಲೇ ಇದ್ದ ಒಂದು ಕಾಗೆಯು ತನ್ನ ಕರ್ಕಶ ಧ್ವನಿಯಿಂದ ಕೂಗಲು ಆರಂಭಿಸಿತು. ಸುಂದರ ನಿದ್ರೆಯಲ್ಲಿದ್ದ ಮಹಾರಾಜನು ಈ ಕರ್ಕಶ ಧ್ವನಿಯಿಂದ ಎಚ್ಚರಗೊಂಡ ಹಾಗೂ ಕುಪಿತನಾಗಿ ಕಾಗೆಯನ್ನು ಕೊಂದು ಹಾಕಲು ತನ್ನ ಬಿಲ್ಲನ್ನು ತೆಗೆದು ಕೊಂಡ. ಬಾಣವನ್ನು ಬಿಟ್ಟೇಬಿಟ್ಟ. ತಕ್ಷಣ ಕಾಗೆಯು ಹಾರಿಹೋಯಿತು. ಕಾಗೆಗೆ ಬೀಳಬೇಕಾಗಿದ್ದ ಬಾಣವು ಪಕ್ಕದಲ್ಲೇ ಇದ್ದ ಕೋಗಿಲೆಗೆ ತಾಗಿತು. ಆಗ ಕೋಗಿಲೆ ಮಹಾರಾಜನಿಗೆ ಪ್ರಶ್ನಿಸಿತು ‘ ಪ್ರಭುವೇ ತಾವು ದಣಿದು ಬಂದಾಗ ತಮಗೆ ನೀರಿರುವ ಜಾಗವನ್ನು ತೋರಿಸಿದೆ, ಹಣ್ಣನ್ನು ತಂದು ಕೊಟ್ಟೆ. ತಾವು ಮಲಗಲು ಇಂಪಾದ ಸಂಗೀತವನ್ನು ಹಾಡಿದೆ. ಆದರೂ ಕೂಡ ನನ್ನನ್ನು ಕೊಂದು ಹಾಕುತ್ತಿದ್ದೀರಲ್ಲಾ.’ ಆಗ ತಕ್ಷಣ ಮಹಾರಾಜ ‘ಅಯ್ಯೋ ನಾನು ಕಾಗೆಯನ್ನು ಹೊಡೆಯಲು ಬಾಣ ಹೂಡಿದ್ದೆ ಅದು ನಿನಗೆ ತಗುಲಿದೆ.’ ಆಗ ಕೋಗಿಲೆ ತಡವರಿಸುತ್ತಾ ಹೇಳಿತು ‘ಮಹಾರಾಜರೇ, ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ ನಾನು ಕಾಗೆಯ ಸಂಗವನ್ನು ಮಾಡಿ ಕೆಟ್ಟೆ. ಹಾಗಾಗಿ ನಾನು ಇವತ್ತು ಸಾವಿನಂಚಿಗೆ ತಲುಪಿದ್ದೇನೆ. ನಾನು ಸತ್ತರೂ ಪರವಾಗಿಲ್ಲ. ನಾನು ಹಿಡಿದಿರುವ  ಕಾರ್ಯ ಯಶಸ್ವಿಯಾದರೆ ನನ್ನ ಸಾವು ಸಾರ್ಥಕ ಎಂದು ಕೋಗಿಲೆಯು ಹೇಳಿ ಪ್ರಾಣಬಿಟ್ಟಿತು. ಕೋಗಿಲೆಯ ಪ್ರಾಣ ಹೋದರೂ ಕೂಡ ಕೆಲಸವು ಯಶಸ್ವಿಯಾದರೆ ಪ್ರಾಣವು ಸಾರ್ಥಕತೆಗೆ ಸಮನಾಗಿರುತ್ತದೆ. ಇನ್ನೊಬ್ಬರ ಒಳಿತಿಗಾಗಿ ಪ್ರಾಣ ತೆತ್ತರೆ ಅದಕ್ಕೊಂದು ಅರ್ಥವಿರುತ್ತದೆ. ಕಥೆಯ ಸಾರಾಂಶ ದುಷ್ಟರಿಂದ ದೂರವಿರಿ.

(ಸಾಮಾಜಿಕ ಜಾಲತಾಣದಿಂದ ಸಂಗ್ರಹಿತ)

ಚಿತ್ರ: ಇಂಟರ್ನೆಟ್ ತಾಣ