ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ
ಎಲ್ಲ ರಾಷ್ಟ್ರಗಳು ಅಭಿವೃದ್ಧಿಯ ಮತ್ತೊಂದು ಮಜಲನ್ನು ಏರಲು ಸತತವಾಗಿ ಪ್ರಯತ್ನಿಸುತ್ತಿವೆ ಮತ್ತು ಇದರಲ್ಲಿ ಯಶಸ್ವಿಯಾದಾಗ ಸಾಧನೆಯನ್ನು ಸಂಭ್ರಮಿಸುತ್ತವೆ. ಇದು ಸ್ವಾಭಾವಿಕವೂ ಹೌದು. ಭಾರತದಲ್ಲೂ ಕಳೆದ ಕೆಲ ವರ್ಷಗಳಿಂದ ಮೂಲ ಸೌಕರ್ಯ ವಿಸ್ತರಣೆಯಲ್ಲಿ ಮಹತ್ವದ ಬೆಳವಣಿಗೆ ಆಗಿರುವುದನ್ನು ಅಂತಾರಾಷ್ಟ್ರೀಯ ವಲಯವೇ ಒಪ್ಪಿಕೊಂಡಿದೆ. ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ಹೆಗ್ಗಳಿಕೆ ಭಾರತದ್ದು. ಇತ್ತೀಚಿನ ವರ್ಷಗಳಲ್ಲಂತೂ ರೈಲ್ವೆಗೆ ಸುಧಾರಣೆಯ ಹೊಸ ಸ್ಪರ್ಶ ಸಿಕ್ಕಿದ್ದು,ಸೇವೆಯ ವ್ಯಾಪ್ತಿ ಮತ್ತು ಗುಣಮಟ್ಟ ಎರಡೂ ಹೆಚ್ಚಿದೆ. ‘ವಂದೇ ಭಾರತ' ನಂಥ ರೈಲುಗಳು ಪ್ರಯಾಣವನ್ನು ಆರಾಮದಾಯಕವಾಗಿಸಿವೆ. ಆದರೆ, ದೇಶದೊಳಗಿನ ಕೆಲ ಪಟ್ಟಭದ್ರ ಶಕ್ತಿಗಳೇ ಈ ಸುಧಾರಣೆಯನ್ನು ಸಹಿಸುತ್ತಿಲ್ಲ ಎಂಬುದು ಕಹಿ ವಾಸ್ತವ. ವಂದೇ ಭಾರತ ರೈಲುಗಳ ಮೇಲೆ ಕಲ್ಲು ತೂರಾಟ, ಕಿಟಕಿಗಳ ಗಾಜು ಒಡೆಯುವಂಥ ದುಷ್ಕೃತ್ಯಗಳ ಜತೆಗೆ ರೈಲುಗಳನ್ನು ಹಳಿ ತಪ್ಪಿಸಲು ಸಿಮೆಂಟ್ ಬ್ಲಾಕ್ಸ್, ಕಲ್ಲು, ಸಿಲಿಂಡರ್ ಮುಂತಾದುವುಗಳನ್ನು ಇಡುವ ಮೂಲಕ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳು ಆತಂಕಕ್ಕೆ ಕಾರಣವಾಗಿವೆ. ಈ ಬಗೆಯ ಷಡ್ಯಂತ್ರ, ಪಿತೂರಿ ಪ್ರಯಾಣಿಕರ ಸುರಕ್ಷೆ ಬಗ್ಗೆ ಕಳವಳ ಸೃಷ್ಟಿಸಿರುವುದಂತೂ ಹೌದು.
ಈ ನಿಟ್ಟಿನಲ್ಲಿ ಮಂಗಳವಾರ ಮಹತ್ವದ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ದೇಶದಲ್ಲಿ ಹೆಚ್ಚುತ್ತಿರುವ ರೈಲು ಅಪಘಾತಗಳ ಕುರಿತು ತನಿಖೆ ನಡೆಸಲಾಗುವುದು. ರೈಲು ಅಪಘಾತ ಸಂಭವಿಸುವಂತೆ ಮಾಡುವ ಯಾವುದೇ ಪಿತೂರಿ ಹೆಚ್ಚು ದಿನ ನಡೆಯಲ್ಲ. ದೇಶದ ೧.೧೦ ಲಕ್ಷ ಕಿ.ಮೀ. ರೈಲುಜಾಲದ ರಕ್ಷಣೆಗೆ ಉಪಕ್ರಮವೊಂದನ್ನು ಕೇಂದ್ರ ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ’ ಎಂದು ಭರವಸೆ ನೀಡಿರುವುದು ಸ್ವಾಗತಾರ್ಹ. ರೈಲ್ವೆ ಜಾಲದಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳು ನಡೆಯುವುದನ್ನು ತಡೆಯಲು ಸಿಬಿಐ, ಎನ್ ಐ ಎ, ರೈಲೆ ಪೋಲೀಸರು ಮತ್ತು ಗೃಹ ಸಚಿವಾಲಯ ಜಂಟಿಯಾಗಿ ಯೋಜನೆ ರೂಪಿಸುತ್ತಿರುವುದು ಸಕಾಲಿಕ ಕ್ರಮವಾಗಿದೆ. ಜಂಟಿ ಪ್ರಯತ್ನಗಳ ಮುಖೇನವೇ ಇಂಥ ಕೃತ್ಯಗಳನ್ನು ತಡೆಯಬಹುದಾಗಿದೆ.
ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ರೈಲು ಅಪಘಾತಗಳಿಗೆ ಯತ್ನ ನಡೆದಿದ್ದು, ಅದರಲ್ಲಿ ತಪ್ಪಿತಸ್ಥರು ಯಾರು ಎಂಬುದನ್ನು ಪತ್ತೆ ಮಾಡುವುದು ಮತ್ತು ಅವರಿಗೆ ಶಿಕ್ಷೆ ವಿಧಿಸುವುದು ಅತ್ಯಂತ ಅವಶ್ಯವಾಗಿದೆ. ಈ ಕೃತ್ಯ ನಡೆಸುವವರ ಹಿಂದೆ ಇರುವ ದುಷ್ಟಶಕ್ತಿಗಳನ್ನೂ ಸದೆಬಡಿಯುವುದು ಅಗತ್ಯ. ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿಯಾದ ೧೦೦ ದಿನಗಳಲ್ಲೇ ದೇಶದಲ್ಲಿ ೩೮ ರೈಲು ಅಪಘಾತಗಳು ಸಂಭವಿಸಿವೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಬೊಟ್ಟು ಮಾಡಿದೆ. ಹೀಗಾಗಿ, ರೈಲೆ ಇಲಾಖೆಗಳಲ್ಲಿನ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿಯೂ ಸರ್ಕಾರ ಗಮನ ಹರಿಸಬೇಕಿದೆ. ಹಳಿಗಳ ದುರಸ್ತಿ, ಹಳಿಗಳ ಬದಲಾವಣೆ, ಸೇತುವೆಗಳ ರಿಪೇರಿ ಸೇರಿದಂತೆ ಪ್ರಯಾಣಿಕರ ಸುರಕ್ಷತೆ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಒಟ್ಟಾರೆ ಸುಧಾರಣೆಯ ಹೊಸ್ತಿಲಿನಲ್ಲಿ ಇರುವ ರೈಲ್ವೆ ಇಲಾಖೆ ಅಪಘಾತ ಅಥವಾ ಇತರ ಅಪಸವ್ಯಗಳಿಂದ ಮುಕ್ತವಾಗಬೇಕಿದೆ. ಈ ವಿಷಯದಲ್ಲಿ ರಾಜಕೀಯ ಆರೋಪ - ಪ್ರತ್ಯಾರೋಪ ಬದಿಗಿರಿಸಿ, ರಚನಾತ್ಮಕ ಸಲಹೆಗಳು ಬರಲಿ. ಅವುಗಳ ಅನುಷ್ಟಾನದ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಳಂಬವಿಲ್ಲದೆ ಪ್ರಾಮಾಣಿಕ ಕ್ರಮಗಳನ್ನು ಕೈಗೊಳ್ಳಲಿ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೮-೦೯-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ