'ದುಸ್ತರ ಭವಸಾಗರ ತರಣಂ'

'ದುಸ್ತರ ಭವಸಾಗರ ತರಣಂ'

ಭಾರತ ದೇಶವು ಧರ್ಮದಿಂದ ನಡೆಯುವ ಆಧ್ಯಾತ್ಮಿಕ ವಿಚಾರಗಳನ್ನು ಗೌರವಿಸುವ ದೇಶವಾಗಿದೆ. ಭಾರತೀಯ ಜನರೆಲ್ಲಾ ಧರ್ಮಪಾರಾಯಣರಾಗಿದ್ದಾರೆ. ಧಾರ್ಮಿಕತೆಯ ಹೆಣಿಕೆ ನೂರಾರು ಶತಮಾನಗಳಿಂದ ಬಿಗಿದಿಟ್ಟ ಬಂಧನವಾಗಿದೆ. ಧರ್ಮರಕ್ಷಣೆಗೆಂದು ಸಾಕ್ಷಾತ್ ಭಗವಂತನೇ ಅವತಾರವನ್ನು ತಾಳಿ ಬರುತ್ತಾನೆ. ಜನರಲ್ಲಿ ಭಕ್ತಿ, ನೀತಿ ಮತ್ತು ಸದಾಚಾರವೆನ್ನುವ ಬೀಜವನ್ನು ಬಿತ್ತುವ ಕಲೆ ಕಲಿಸಲೆಂದೇ ಶ್ರೀರಾಮಚಂದ್ರನ ಅವತಾರ ಧರೆಗಿಳಿದು ಬಂದಿದೆ. ರಾವಣನಂತೆ ಇರುವ ದುಷ್ಟರನ್ನು ವಧಿಸಿ ಸಜ್ಜನರ ಪರಿತ್ರಾಣಕ್ಕೆಂದು ಪ್ರಭು ರಾಮಚಂದ್ರನ ಅವತಾರವಾಗಿದೆ. ಏಕಪತ್ನಿ, ಏಕವಚನಿ, ಏಕಬಾಣಿಯಾಗಿರುವ ಪ್ರಭು ಶ್ರೀರಾಮಚಂದ್ರನು ಭಾರತೀಯರಲ್ಲಿ ಪ್ರಾತಃ ಸ್ಮರಣಿಯನಾಗಿದ್ದಾನೆ. ಆದರ್ಶ ಪುತ್ರನಾಗಿ, ಆದರ್ಶ ಪತಿಯಾಗಿ, ಆದರ್ಶ ಬಂಧುವಾಗಿ, ಆದರ್ಶ ಸಾಮ್ರಾಟನಾಗಿ ಮತ್ತು ಆದರ್ಶ ಪಿತೃವಾಗಿರುವ ಪ್ರಭು ಶ್ರೀರಾಮಚಂದ್ರನು ಭಾರತೀಯ ಜನರಲ್ಲಿ ಗುಣಗಣಮಂಡಿತ ಪ್ರಭು ರಾಮಚಂದ್ರನಾಗಿದ್ದಾನೆ. ಸಂಪೂರ್ಣ ರಾಮಚರಿತ್ರೆಯೇ ಆದರ್ಶ ಪ್ರಾಯವಾಗಿವೆ. ಈ ತರಹದಲ್ಲಿ ಆದರ್ಶ ಪ್ರಾಯನಾದ ಶ್ರೀರಾಮನ ಗುಣ ಸಂಕಿರ್ತನೆಯನ್ನು ಮಾಡೋಣ. ರಾಮನಾಮದ ಮಹಿಮೆಯನ್ನು ಕೊಂಡಾಡೊಣ .
ರಾಮಾಯ ರಾಮಭದ್ರಾಯ| ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ| ಸಿತಾಯಃ ಪತಯೇ ನಮಃ||
ಜಂತೂನಾಂ ನರಜನ್ಮ ದುರ್ಲಭಂ| ಎಂಬಂತೆ "ನರಜನ್ಮ ಬಂದಾಗ, ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ" ಎಂಬ ಪುರಂದರ ದಾಸರ ರಚನೆ ಯಲ್ಲಿ ಹೇಳಿದಂತೆ ಮಾನವ ಜನ್ಮ ಬಂದಾಗ ಸಾರ್ಥಕ ಪಡಿಸಿಕೊಳ್ಳುವುದು ನಮಗೆ ಸೇರಿದ್ದಾಗಿದೆ. ರಾಮಾವತಾರವು ರಾಜನೀತಿ, ಧರ್ಮ, ಕರ್ಮ ಮತ್ತು ಉಪದೇಶಗಳ ರೂಪಕವಾಗಿದೆ.
ಹರಿದಾಸರು ಹೇಳುವಂತೆ 'ರಾ' ಎಂದರೆ ಅಂತರಂಗದಲ್ಲಿರುವ ಪಾಪವು ಹೊರಗೆ ಹೋಗುತ್ತದೆ. ಹೊರಗೆ ಹೋಗಿರುವ ಪಾಪಗಳು ಪುನಃ ಪ್ರವೇಶಿಸಬಾರದೆಂದೂ 'ಮ' ಎಂದಾಗ ತುಟಿಗಳು ಮುಚ್ಚಿಕೊಳ್ಳುತ್ತವೆ. ರಾಮನಾಮದ ಫಲವು ಅಗಾಧವಾಗಿದೆ.
ಬೇಡರವನಾದರೂ ರತ್ನಾಕರನು ಪೂರ್ವಾರ್ಜಿತವಾಗಿ ದೊರೆತಿರುವ ಸುಕೃತ್ಯದ ಫಲದಿಂದಾಗಿ ಶ್ರೀನಾರದ ಮುನಿಯ ಉಪದೇಶ ಪಡೆದು ಶ್ರೀರಾಮ ಮಂತ್ರವನ್ನು ಜಪಿಸಿದನು. ಶ್ರಿರಾಮಮಂತ್ರದ ಫಲದಿಂದ ಆದಿಕವಿ ಮಹರ್ಷಿ ವಾಲ್ಮೀಕಿ ಎಂದೆನಿಸಿಕೊಂಡನು.
ಶ್ರೀರಾಮನು ಆಜಾನುಬಾಹುವಾಗಿದ್ದಾನೆ. ಧನುಸ್ಸು ಮತ್ತು ಬಾಣವನ್ನು ಕೈಯಲ್ಲಿ ಹಿಡಿದಿದ್ದಾನೆ. ಪದ್ಮಾಸನ ಮಂಡಿತನಾಗಿದ್ದಾನೆ ಪಿತಾಂಬರವನ್ನು ಧರಿಸಿದ್ದಾನೆ. ಪ್ರಫುಲ್ಲಿತವಾಗಿ ಅರಳಿರುವ ತಾವರೆ ದಳದಂತಿರುವ ನೇತ್ರಗಳಿಂದ ವಾಮಾಂಗಿ ಸೀತೆಯಲ್ಲಿ ತನ್ನ ದೃಷ್ಟಿಯನ್ನು ನೆಟ್ಟಿರುವವನಾಗಿದ್ದಾನೆ. ಮೇಘಶ್ಯಾಮಲ ವರ್ಣವಿರುವ ಈತನು ಅತ್ಯಂತ ಕಾಂತಿಯುತನಾಗಿದ್ದಾನೆ. ವಿವಿಧ ಆಭೂಷಣಗಳಿಂದ ಅಲಂಕೃತನಾಗಿದ್ದಾನೆ. ಈ ರೀತಿಯಲ್ಲಿ ಜಟಾಮಂಡಿತನಾಗಿರುವ ಪ್ರಭು ಶ್ರೀರಾಮಚಂದ್ರನ ಧ್ಯಾನವನ್ನು ಸದಾ ಸ್ಮರಿಸುತ್ತಿರಬೇಕೆಂದು ಶ್ರಿರಾಮರಕ್ಷಾ ಸ್ತೋತ್ರ ಪಠನೆಯ ಪ್ರಾರಂಭದಲ್ಲೇ ಹೇಳಲಾಗಿದೆ. ಶ್ರೀರಾಮನ ಚರಿತ್ರೆಯು ಶತಕೋಟಿ ಶ್ಲೋಕಕ್ಕೆ ಸಮನಾಗಿದೆ. ಅದರಲ್ಲಿರುವ ಪ್ರತಿಯೊಂದು ಅಕ್ಷರ ಮಾತ್ರೆಗಳ ಫಲವು ಸಕಲ ಪಾಪವನ್ನು ನಶಿಸುವ ಸಾಮರ್ಥ್ಯವನ್ನು ಪಡೆದಿದೆ. ಶ್ರೀರಾಮನಾಮವೆನ್ನುವ ವಜ್ರಕವಚವನ್ನು ಪಡೆದವರಿಗೆ ತ್ರಿಲೋಕದಲ್ಲಿ ಕಪಟ ಬುಧ್ಧಿಯುಳ್ಳವರು, ದುಷ್ಟರು ಕಣ್ಣೆತ್ತಿಯೂ ಕೂಡ ನೋಡವ ಸಾಹಸವನ್ನು ಮಾಡಲಾರರು.
ಶ್ರಿರಾಮನಾಮವು ವಜ್ರಪಂಜರದಂತಿದೆ. ದುಷ್ಟ ಶಕ್ತಿಗಳಿಂದ ಇದನ್ನು ಬೇಧಿಸಲು ಸಾಧ್ಯವೇ ಇಲ್ಲ. ಶ್ರೀ ರಾಮರಕ್ಷಾ ಸ್ತೋತ್ರವನ್ನು ಸಾಕ್ಷಾತ್ ಶಿವ ಶಂಕರನು ಬುಧ ಕೌಶಿಕ ಋಷಿಯ ಸ್ವಪ್ನದಲ್ಲಿ ಹೇಳಿರುವುದಾಗಿ, ನಿದ್ರೆಯಿಂದ ಎಚ್ಚರವಾದಾಗ ಅದೇ ಸ್ತೋತ್ರವನ್ನು ಯಥಾಸರ್ವಥಾ ಬರೆಯಲ್ಪಟ್ಟಿರುವ, ಮಹಾ ಭಯಂಕರವಾದ ಅಪತ್ತಿನಿಂದ ರಕ್ಷಣೆಯನ್ನು ನೀಡುವ ಮಂತ್ರಸಾಮರ್ಥ್ಯವನ್ನು ಹೊಂದಿರುವ ಸ್ತೋತ್ರವಾಗಿದೆ.
ಶ್ರೀರಾಮನಾಮವು ಕಲ್ಪವೃಕ್ಷದಿಂದ ಕೂಡಿದ ಉಪವನವಾಗಿದೆ. ರಾಮನಾಮವೆನ್ನುವ ನೌಕೆಯಲ್ಲಿ ಆಶ್ರಯವನ್ನು ಪಡೆದ ಪುಣ್ಯಾತ್ಮರ ಕೂದಲೆಳೆಗೂ ಸಹ ಯಾವುದೇ ತರಹದಲ್ಲಿ ಬಾಧೆ ಬರಲಾರದಂತೆ ಕಾಯುವ ಆಶ್ವಾಸನೆಯನ್ನು ತೋರುವ ಭದ್ರವಾದ ಕೋಟೆಯಂತಿದೆ. ಸಕಲ ಐಶ್ವರ್ಯವನ್ನು ನೀಡುವ ಶಾಂತಿಧಾಮವಾಗಿದೆ. ವಿಶ್ರಾಂತಿಯ ತಂಗುದಾಣವಾಗಿದೆ.
ರಾಮ ರಾಮೇತಿ ರಾಮೇತಿ ರಮೆ ರಾಮೇ ಮನೋರಮೆ |
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೆ||
ಜಗದಿಶ್ವರನಾದ ಪರಮೇಶ್ವರನು ಪಾರ್ವತಿಯಲ್ಲಿ ಹೇಳುತ್ತಾನೆ, “ಹೇ ಮನೋರಮೆ! ರಾಮ ರಾಮ ರಾಮ ರಾಮ ಎನ್ನುವ ನಾಮೊಚ್ಛಾರವನ್ನು ಜಪಿಸುತ್ತ ಸದಾ ಶ್ರಿರಾಮನಲ್ಲಿ ನಿರತನಾಗಿರುತ್ತೇನೆ. ಇಂತಹ ಶುಭಾನಾಮವನ್ನು ನಿತ್ಯ ಪಠನೆ ಮಾಡುವುದರಿಂದ ಶ್ರೀವಿಷ್ಣು ಸಹಸ್ರನಾಮವನ್ನು ಪಠಿಸಿದ ಪುಣ್ಯ ಫಲವು ಪ್ರಾಪ್ತಿಯಾಗುತ್ತದೆ.”
ಸಮುದ್ರ ಮಂಥನವನ್ನು ಮಾಡುತ್ತಿರುವ ಸಮಯದಲ್ಲಿ ದೇವಾಧಿ ದೇವನಾದ ಸದಾಶಿವನು ಲೋಕರಕ್ಷಣೆಗೆಂದು ಮಹಾಭಯಂಕರವಾದ ಹಾಲಾಹಲ ವಿಷವನ್ನು ನುಂಗಿ ಜಗತ್ತನ್ನೇ ರಕ್ಷಿಸಿದನು. ನಂಜುಂಡು ಪರಮೇಶ್ವರನು ನೀಲಕಂಠನಾದನು. ವಿಷಬಾಧೆಯ ಪರಿಣಾಮವು ಸಹಿಸಲಸಾಧ್ಯವಾದಾಗ ಜಟೆಯಲ್ಲಿ ಗಂಗೆಯನ್ನು ಧರಿಸಿ ಗಂಗಾಧರನದನು. ಅತ್ಯಂತ ಶೀತಲವಾಗಿರುವ ಚಂದ್ರನನ್ನು ಹಣೆಯಲ್ಲಿ ಧರಿಸಿ ಚಂದ್ರಶೇಖರನಾದನು. ಕತ್ತಿನ ಸುತ್ತಲು ತಂಪು ತಂಪಾಗಿರುವ ಸರ್ಪವನ್ನು ಸುತ್ತಿಕೊಂಡು ನಾಗೆಶನಾದನು. ಹಿಮಗಿರಿಯಲ್ಲಿ ನೆಲೆಸಿ ಗಿರೀಶನಾದನು. ಸಾಕ್ಷಾತ್ ಮನ್ಮಥನನ್ನೇ ಸುಟ್ಟು ಬೂದಿ ಮಾಡಿದ ಗೌರೀಶನಿಗೆ ಹಿಮವತ್ಪರ್ವತದಲ್ಲಿರುವ ಹಿಮದಿಂದ ದಾಹ ಶಮನೆಯಾಗಲಿಲ್ಲ. ಕೊನೆಗೆ ನಾರದರ ಸಲಹೆಯಂತೆ ರಾಮನಾಮ ಮಂತ್ರವನ್ನು ಜಪಿಸಲು ಪ್ರಾರಂಭಿಸಿದಾಗ ವಿಷದಿಂದಾಗುತ್ತಿರುವ ತಾಪ ಶಮನೆಯಾಯಿತು. ಆ ದಿನದಿಂದ ಪರಮೇಶ್ವರನಾಗಿರುವ ಜಗದೀಶ್ವರನು ಅಖಂಡಿತವಾಗಿ ಶ್ರೀರಾಮನಾಮವನ್ನು ಜಪಿಸುವುದರಲ್ಲಿ ತೊಡಗಿದ್ದಾನೆ.
ವಿಶ್ವಕರ್ಮನ ಪುತ್ರನಾಗಿರುವ ನಳನ ನೇತೃತ್ವದಲ್ಲಿ ಸಮುದ್ರ ತೀರವನ್ನು ದಾಟಿ ಲಂಕೆಗೆ ಹೋಗುವುದಕ್ಕೊಸ್ಕರವೆಂದು ಅಸಂಖ್ಯ ವಾನರರು ಸೇತುಬಂಧನದ ಮಹತ್ಕಾರ್ಯದಲ್ಲಿ ಅತಿ ಸಂತೋಷದಿಂದ ಪಾಲ್ಗೊಂಡು ಗಜಾಂಗದಷ್ಟು ಭಾರವಾಗಿರುವ ಕಲ್ಲು ಬಂಡೆಗಳನ್ನು ಎತ್ತಿ ಸಮುದ್ರದಲ್ಲಿ ಸಾಗಿಸತೊಡಗಿದರು. ಆಶ್ಚರ್ಯವೆಂದರೆ ಆ ಎಲ್ಲ ಶಿಲೆಗಳು ಸಲಿಸಾಗಿ ನೀರಿನ ಮೇಲೆ ತೆಲಾಡಲಾರಂಭಿಸಿದವು. ಇದನ್ನು ನೋಡುತ್ತಿದ್ದ ಶ್ರೀರಾಮನು ಹತ್ತಿರವಿದ್ದ ಶಿಲೆಯೊಂದನ್ನು ಎತ್ತಿ ನೀರಿನಲ್ಲಿ ಬಿಟ್ಟಾಗ ಆ ಶಿಲೆ ಕ್ಷಣಾರ್ಧದಲ್ಲಿ ಮುಳುಗಿ ಹೋಯಿತು. ಹೀಗಾಗಲು ಕಾರಣವೇನು ಎಂದು ಹನುಮಂತನಲ್ಲಿ ಕೇಳಿದಾಗ ಮಾರುತಿ ಹೀಗೆಂದು ಹೇಳುತ್ತಾನೆ. "ಪ್ರಭು ವಾನರಸೇನೆ ಬಿಟ್ಟಿರುವ ಪ್ರತಿಯೊಂದು ಬಂಡೆ ಪ್ರತಿಯೊಂದು ಶಿಲೆಯು ರಾಮನಾಮದೊಂದಿಗೆ ಜಡೆದು ಬಿಡಲಾಗಿದೆ. ಅವೆಲ್ಲವೂ ರಾಮನಾಮದ ಮಹಿಮೆಯಿಂದಾಗಿ ಆಚೆಗಿರುವ ತೀರವನ್ನು ಜೋಡಿಸುವುದಕ್ಕೊಸ್ಕರ ಈ ದುಸ್ತರ ಸಾಗರವನ್ನು ಪಾರು ಮಾಡುತ್ತಲಿವೆ. ಪ್ರಭುವೇ ಕೈಬಿಟ್ಟ ಮೇಲೆ ತೇಲಾಡಲು ಸಾಧ್ಯವೇ?" ಈ ರೀತಿಯಲ್ಲಿ 'ದುಸ್ತರ ಭವಸಾಗರ ತರಣಂ' ಆಗಿರುವ ಶ್ರೀರಾಮನಲ್ಲಿ ‘ತೈಲಧಾರೆಯಂತೆ ಮನಸು ಕೊಡು ನಿನ್ನಲ್ಲಿ’ ಎಂದು ಪ್ರಾರ್ಥಿಸೋಣ. ಶ್ರಿರಾಮನಾಮವನ್ನು ಹೃದಯದಲ್ಲಿ ಅಚ್ಚಳಿಯದಂತೆ ಉಳಿಸಿಕೊಳ್ಳೋಣ.
ಜಯ ಜಯ ರಘುವೀರ ಸಮರ್ಥ.