ದೂರದೃಷ್ಟಿಯುಳ್ಳ ಸ್ಪಷ್ಟ ಆರೋಗ್ಯ ನೀತಿ ಇಂದಿನ ಅಗತ್ಯ

ದೂರದೃಷ್ಟಿಯುಳ್ಳ ಸ್ಪಷ್ಟ ಆರೋಗ್ಯ ನೀತಿ ಇಂದಿನ ಅಗತ್ಯ

ಕೊರೋನಾ ಕಾಯಿಲೆಯ ತವರು ಚೀನಾದಲ್ಲಿ ಮತ್ತೆ ಕೊರೋನಾ ವೈರಸ್ ತನ್ನ ರುದ್ರಪ್ರತಾಪವನ್ನು ತೋರಿಸಲಾರಂಭಿಸಿದೆ. ಸರಿಸುಮಾರು ಕಳೆದ ಮೂರು ವರ್ಷಗಳಿಂದ ಈಚೆಗೆ ಇಡೀ ವಿಶ್ವ ಕೊರೋನಾ ಸಾಂಕ್ರಾಮಿಕದ ವಿವಿಧ ಅಲೆಗಳಿಗೆ ತುತ್ತಾಗಿ ನಲುಗಿಹೋಗಿದೆ. ಕಳೆದ ಕೆಲವು ತಿಂಗಳುಗಳಿಂದ ಈಚೆಗೆ ಕೊರೋನಾದ ಕರಿನೆರಳು ದೂರವಾಯಿತು ಎಂದು ಜನರು ನಿಟ್ಟುಸಿರು ಬಿಡುತ್ತಿರುವಾಗ ಚೀನಾದಲ್ಲಿ ಕೊರೋನಾ ವೈರಸ್ ನ ಹೊಸ ರೂಪಾಂತರಿ ದಾಂಗುಡಿ ಇಡಲಾರಂಭಿಸಿದೆ. ಕಳೆದ ಎರಡು ವಾರಗಳಿಂದ ಈಚೆಗೆ ಚೀನಾ ಕೊರೋನಾ ಸೋಂಕಿನಿಂದ ತತ್ತರಿಸಿಹೋಗಿದೆ. ಈಗಾಗಲೇ ದೇಶದ ಬಹುತೇಕ ಎಲ್ಲೆಡೆ ವಿವಿಧ ನಿರ್ಬಂಧಗಳನ್ನು ಹೇರಲಾಗಿದ್ದು ಜನರು ಮತ್ತೆ ದಿಗ್ಭಂಧನಕ್ಕೊಳಗಾಗಿದ್ದಾರೆ. ತಿಂಗಳುಗಳ ಹಿಂದೆಯಷ್ಟೇ ನಿರ್ಬಂಧಗಳಿಂದ ಮುಕ್ತರಾಗಿದ್ದ ಚೀನಿಯರನ್ನು ಕೊರೋನಾ ಸಾಂಕ್ರಾಮಿಕ ಇನ್ನಿಲ್ಲದಂತೆ ಕಾಡುತ್ತಿದೆ. ತತ್ಪರಿಣಾಮವಾಗಿ ವಿದೇಶಗಳು ಕೂಡ ಚೀನಾದ ಮೇಲೆ ಕೆಂಗಣ್ಣು ಬೀರತೊಡಗಿದ್ದು ಆ ದೇಶದೊಂದಿಗಿನ ಸಂಪರ್ಕವನ್ನು ಕಳೆದುಕೊಳ್ಳಲು ಮುಂದಾಗಿವೆ.

ಇನ್ನು ಭಾರತ ಸಹಿತ ವಿಶ್ವದ ಇತರ ರಾಷ್ಟ್ರಗಳಲ್ಲೂ ನಿಧಾನವಾಗಿ ಕೊರೋನಾ ವೈರಸ್ ನ ಹೊಸ ರೂಪಾಂತರಿನ  ಬಿ.ಎಫ್.೭ ಸದ್ದಿಲ್ಲದೆ ಹರಡಲಾರಂಭಿಸಿದೆ. ಭಾರತದಲ್ಲಿ ಈಗಾಗಲೇ ಕೊರೋನಾದ ಪ್ರಕರಣಗಳು ದಿನನಿತ್ಯ ಹೆಚ್ಚಾಗತೊಡಗಿದ್ದು, ಇವುಗಳಲ್ಲಿ ಹೊಸ ರೂಪಾಂತರಿ ವೈರಸ್ ನ ಪ್ರಕರಣಗಳೂ ಸೇರಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಸಂಭಾವ್ಯ ಆರೋಗ್ಯ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಎಲ್ಲಾ ರಾಜ್ಯಗಳಿಗೂ ನಿರ್ದೇಶನ ನೀಡಿದೆ. ದೇಶದಲ್ಲಿ ಕೊರೋನಾದ ಎರಡನೇ ಅಲೆ ವೇಳೆ ಸೃಷ್ಟಿಯಾಗಿದ್ದ ಅವಾಂತರಗಳು, ಮೂಲಸೌಕರ್ಯಗಳು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಈ ಬಾರಿ ಎದುರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ.

ದೇಶದಲ್ಲಿ ಕೊರೋನಾದ ಮೂರನೇ ಅಲೆ ಅಷ್ಟೇನೂ ಪರಿಣಾಮ ಬೀರದಿದ್ದುದರಿಂದ ಜನರು ಇದೀಗ ಈ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮೂರು ವರ್ಷಗಳ ಹಿಂದಿನ ತಮ್ಮ ಜೀವನಶೈಲಿಗೆ ಈಗಾಗಲೇ ಬಹುತೇಕ ಮಂದಿ ಮರಳಿದ್ದು ಮಾಸ್ಕ್ ಧಾರಣೆ, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮೊದಲಾದ ಮುನ್ನೆಚ್ಚರಿಕೆ ಕ್ರಮಗಳೆಲ್ಲವನ್ನೂ ಮರೆತು ಓಡಾಡುತ್ತಿದ್ದಾರೆ. ನಗರ ಮಾರುಕಟ್ಟೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಮಾಲ್ ಮತ್ತಿತರೆಡೆಗಳಲ್ಲಿ ಜನಜಂಗುಳಿ ಸಾಮಾನ್ಯವಾಗಿದ್ದು, ಹೊಸವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.

ಚೀನಾದಲ್ಲಿನ ಬೆಳವಣಿಗೆಯನ್ನು ಗಮನಿಸಿ ಸರಕಾರ ಮತ್ತೆ ಈ ಹಿಂದಿನ ನಿರ್ಬಂಧ, ಜನರು ತಮ್ಮ ಆರೋಗ್ಯ ಸುರಕ್ಷೆಗಾಗಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಆರೋಗ್ಯ ವ್ಯವಸ್ಥೆ ಜಾಗೃತವಾಗಿರಬೇಕು ಎಂಬ ಮಂತ್ರವನ್ನು ಪುನರಪಿ ಜಪಿಸಲು ಆರಂಭಿಸಿದೆ. ಆರೋಗ್ಯರಕ್ಷಣೆ ಎನ್ನುವುದು ಕೇವಲ ಜನರಿಗೆ ಮಾತ್ರವಲ್ಲದೆ ನಮ್ಮನ್ನು ಆಳುವವರಿಗೂ ಸದಾ ಆದ್ಯತೆಯ ವಿಷಯವಾಗಿ ಇರಬೇಕು. ಸದ್ಯಕ್ಕಂತೂ ದೇಶದ ಬಹುತೇಕ ಕಡೆ ಮಲೇರಿಯಾ, ಡೆಂಗ್ಯೂ, ಎಚ್ ೧ ಎನ್ ೧ ನಂಥ ಸಾಂಕ್ರಾಮಿಕ ಕಾಯಿಲೆಗಳು ಜನರನ್ನು ಪದೇಪದೇ ಕಾಡುತ್ತಿವೆ. ನಮ್ಮ ನೆರೆಯ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಸಾಂಕ್ರಾಮಿಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿದೆಯಾದರೂ ಪರಿಸ್ಥಿತಿ ಕೈಮೀರಿದಲ್ಲಿ ಇವೆಲ್ಲವೂ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತವೆ.

ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನಸಮುದಾಯ ಮತ್ತು ಸರಕಾರ ಆರೋಗ್ಯದ ವಿಷಯದಲ್ಲಿ ಒಂದಿಷ್ಟು ವಿವೇಚನಾ ಪೂರ್ವಕವಾಗಿ ನಡೆದುಕೊಳ್ಳಬೇಕಿದೆ. ಸಾಂಕ್ರಾಮಿಕ ಕಾಯಿಲೆಗಳ ಸಂದರ್ಭದಲ್ಲಿ 'ಮಳೆ ಬಂದಾಗ ಕೊಡೆ' ಹಿಡಿಯುವ ಬದಲಾಗಿ ದೂರದೃಷ್ಟಿಯುಳ್ಳ ಸಮಗ್ರ ಮತ್ತು ಸ್ಪಷ್ಟ ಆರೋಗ್ಯ ನೀತಿಯನ್ನು ದೇಶ ಹೊಂದಿರಬೇಕಾಗಿರುವುದು ಅತ್ಯಗತ್ಯ ಮತ್ತು  ಇದು ಇಂದಿನ ಅನಿವಾರ್ಯವೂ ಹೌದು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೬-೧೨.೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ