ದೂರದೇಶವಾಸಿ

ದೂರದೇಶವಾಸಿ

ಪುಸ್ತಕದ ಲೇಖಕ/ಕವಿಯ ಹೆಸರು
ಕಿರಣ್ ಉಪಾಧ್ಯಾಯ
ಪ್ರಕಾಶಕರು
ವಿಶ್ವವಾಣಿ ಪುಸ್ತಕ, ರಾಜರಾಜೇಶ್ವರಿ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೪

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಾಸಿಯಾದ ಕಿರಣ್ ಉಪಾಧ್ಯಾಯರು ಈಗ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಬಹ್ರೈನ್ ನಿವಾಸಿ. ನಾಟಕ, ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರತೀ ಸೋಮವಾರ ‘ವಿಶ್ವವಾಣಿ' ಪತ್ರಿಕೆಯಲ್ಲಿ ‘ವಿದೇಶವಾಸಿ’ ಎಂಬ ಅಂಕಣ ಬರೆಯುತ್ತಾರೆ. ಗಲ್ಭ್ ರಾಷ್ಟ್ರಗಳ ಬಗ್ಗೆ ತಿಳಿಸುತ್ತಾ ನಮ್ಮನ್ನು ಜಗತ್ತಿನಾದ್ಯಂತ ಸುತ್ತಿಸುತ್ತಾರೆ, ಭಾರತಕ್ಕೂ ಕರೆತರುತ್ತಾರೆ, ಕೊನೆಗೆ ಕರ್ನಾಟಕದಲ್ಲೂ ಛಾಪು ಮೂಡಿಸುತ್ತಾರೆ. ಕಿರಣ್ ಅವರ ಅಂಕಣ ಬರಹಗಳ ಪ್ಲಸ್ ಪಾಯಿಂಟ್ ಎಂದರೆ ಅವು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ವಿಷಯ ವಸ್ತು ಎಷ್ಟೇ ಜಟಿಲವಾಗಿದ್ದರೂ ಅದು ಸಾಮಾನ್ಯ ಓದುಗನ ಮನಸ್ಸಿಗೂ ನಾಟುವ ರೀತಿ ಬರೆಯುತ್ತಾರೆ. ಹೀಗೆ ೨೨-೨೩ನೇ ಸಾಲಿನಲ್ಲಿ ಪ್ರಕಟವಾದ ಅಂಕಣಗಳ ಬರಹಗಳನ್ನು ಒಟ್ಟಿಗೆ ಸೇರಿಸಿ ‘ದೂರದೇಶವಾಸಿ' ಎಂಬ ಕೃತಿಯನ್ನಾಗಿಸಿದ್ದಾರೆ.

ಕಿರಣ್ ಉಪಾಧ್ಯಾಯರ ಸನ್ಮಿತ್ರರೂ, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರೂ ಆಗಿರುವ ವಿಶ್ವೇಶ್ವರ ಭಟ್ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ತಮ್ಮ ಬೆನ್ನುಡಿಯಲ್ಲಿ “ ಕಿರಣ್ ಉಪಾಧ್ಯಾಯ ಅವರು ಅನೇಕ ವರ್ಷಗಳಿಂದ ಬೆಹರೈನ್ ವಾಸಿಯಾಗಿರಬಹುದು. ಆದರೆ ಅವರು ಕರ್ನಾಟಕದಲ್ಲಿಯೇ ಹೆಚ್ಚು ಇರುತ್ತಾರೆ ಎಂಬ ‘ಅಪಖ್ಯಾತಿ' ಇದೆ. ಹೀಗಾಗಿ ‘ದೂರದೇಶವಾಸಿ'ಯಾಗಿಯೂ ಅವರು ಹತ್ತಿರದವರು. ಅವರು ಬರೆದ ಅಂಕಣಗಳನ್ನು ಓದುವಾಗ ಎಷ್ಟೋ ಸಲ ಅವರು ದೂರದೇಶವಾಸಿಯಲ್ಲ, ಇಲ್ಲೇ ನಮಗೆ ಹತ್ತಿರದವರು ಎಂದು ಎನಿಸಿದ್ದಿದೆ. ಅವರು ಆಯ್ದುಕೊಳ್ಳುವ ವಸ್ತು ಸೀಮಾತೀತ. ಹೀಗಾಗಿ ಅದು ದೂರದ ವಿಷಯ ಎನಿಸಿದರೂ, ನಿರೂಪಣೆ, ಶೈಲಿ, ಭಾಷೆ ಸೊಗಡು ಮತ್ತು ಪ್ರಸ್ತುತಿಯಲ್ಲಿ ಸನಿಹದ್ದೆನಿಸುತ್ತದೆ. ಯಾವ ವಿಷಯದ ಬಗ್ಗೆಬರೆದರೂ, ನಮಗೆ ಆಪ್ತವಾಗಿಸುವ ಕಲೆ ಅವರಿಗೆ ಸಿದ್ದಿಸಿದೆ. ವಿದೇಶವಾಸಿಯಾಗಿಯೂ ಅವರ ವಿಷಯ ಗ್ರಹಿಕೆ, ಬಿತ್ತರ, ಸಂವೇದನೆ ಮಾತ್ರ ಈ ನೆಲದ್ದು. ಬೊಗಟೆ ಅಲ್ಲಿದ್ದರೂ ತಾಯಿಬೇರು ಮಾತ್ರ ಕಾಲಬುಡದಲ್ಲೇ. ಹೀಗಾಗಿ ಯಾವ ವಿಷಯವನ್ನೇ ಆಗಲಿ, ಅದನ್ನು ದೇಶ-ವಿದೇಶಗಳ ನೆಲೆಯಲ್ಲಿ ನೋಡುವುದು, ವಿಮರ್ಶಿಸುವುದು ಅವರಿಗೆ ಸಾಧ್ಯವಾಗಿದೆ. ಹೀಗಾಗಿ ಅವರ ಅಂಕಣ ಪಿಚ್ ಸಹಜವಾಗಿ ವಿಶಾಲವಾಗಿ ಆವರಿಸಿಕೊಳ್ಳುತ್ತದೆ. ಕಿರಣ್ ಏನೇ ಬರೆದರೂ, ಅದರಲ್ಲಿ ಅಧ್ಯಯನ, ಪ್ರವಾಸ, ಒಡನಾಟ, ತಕ್ಕಮಟ್ಟಿನ ಸಂಶೋಧನೆ, ಅನುಭವದ ಒಳನೋಟ ಇರುವುದನ್ನು ಗ್ರಹಿಸಬಹುದು. ಮಾಹಿತಿಯ ಹೊರೆಯಲ್ಲಿ ಅವರು ಓದುಗನನ್ನು ಮುಳುಗಿಸುವುದಿಲ್ಲ. ಅದನ್ನು ಒಂದು ಆಪ್ತ, ನವಿರಾದ, ಅನುಭವಗಳಿಂದ ಆರ್ದ್ರಗೊಳಿಸುತ್ತಾರೆ. ಈ ತೇವಾಂಶವೇ ಅವರ ಅಂಕಣ ಗುಣ ಎಂದು ನನಗೆ ಮನವರಿಕೆಯಾಗಿದೆ.” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವಿಶ್ವೇಶ್ವರ ಭಟ್ಟರ ಮಾತು ನೂರಕ್ಕೆ ನೂರು ಸತ್ಯ. ಏಕೆಂದರೆ ಕಿರಣ್ ಉಪಾಧ್ಯಾಯರು ಒಂದೇ ವಿಷಯದ ಬಗ್ಗೆ ಬರೆಯುವುದಿಲ್ಲ. ಈ ಕೃತಿಯಲ್ಲಿರುವ ೩೭ ಅಧ್ಯಾಯಗಳನ್ನು ನೀವು ಗಮನಿಸಿದರೆ ಅವರು ಜಗತ್ತಿನ ಎಲ್ಲಾ ಸಂಗತಿಗಳ ಬಗ್ಗೆ ಬರೆದಿದ್ದಾರೆ. ಅವುಗಳನ್ನು ಸುಮ್ಮನೇ ಬರೆದಿಲ್ಲ. ಆಳವಾದ ಅಧ್ಯಯನ ಮಾಡಿ, ಅಂಕಿ ಅಂಶಗಳ ಸಹಿತ ಬರೆದಿದ್ದಾರೆ ಎನ್ನುವುದು ಅವರ ಬರಹಗಳ ಹೆಗ್ಗಳಿಕೆ. ಉದಾಹರಣೆಗೆ ಹೇಳುವುದಾರರೆ ‘ರೈತರ ರಕ್ಷಣೆಗೆ ನಿಂತ ಐಟಿಸಿ' ಎನ್ನುವ ಬರಹದಲ್ಲಿ ಐಟಿಸಿ ಕಂಪೆನಿಯು ರೈತರಿಗೆ ನೀಡುವ ಸಹಕಾರದ ಬಗ್ಗೆ ಮಾಹಿತಿ ನೀಡುತ್ತಾ ಕೃಷಿಯ ಬಗ್ಗೆ ಬರೆದರೆ, ‘ಹೋಯ್ ! ಐಪಿಎಲ್ ಸಿನೆಮಾ ಮುಗಿಯಿತಾ?’ ಎಂದು ಕ್ರಿಕೆಟ್ ಬಗ್ಗೆ ಬರೆಯುತ್ತಾರೆ. ಒಂದು ಅಧ್ಯಾಯದಲ್ಲಿ ಆನೆಗಳ ಬಗ್ಗೆ ಬರೆದರೆ, ಮತ್ತೊಂದರಲ್ಲಿ ಜಪಾನ್ ದೇಶದ ಬಗ್ಗೆ ಬರೆಯುತ್ತಾರೆ. ಓಲಾ, ಜರ್ಮನಿ, ಪಾಸ್ ಪೋರ್ಟ್, ತೈಲ, ತೆರಿಗೆ, ಲಾರ್ಡ್ಸ್ ಕ್ರೀಡಾಂಗಣ, ಕತಾರ್ ನಲ್ಲಿ ಜರುಗಿದ ಫುಟ್ ಬಾಲ್ ವಿಶ್ವಕಪ್, ಫುಟ್ಬಾಲ್ ದಂತಕಥೆ ಪೀಲೆ, ವಿಮಾನ ಯಾನ, ಸೈಕಲ್, ಮೌಂಟ್ ಎವರೆಸ್ಟ್, ಕನ್ನಡ ನುಡಿ ಸಂಭ್ರಮ ಹೀಗೆ ಎಲ್ಲಾ ಸಂಗತಿ ಬಗ್ಗೆ ಬರೆಯುತ್ತಾರೆ. ಇದೇ ಅವರ ಬರವಣಿಗೆಯ ಶಕ್ತಿ ಮತ್ತು ಆಸಕ್ತಿ.

ಕನ್ನಡದ ಖ್ಯಾತ ಅಂಕಣಕಾರ ಜೋಗಿಯವರು ಬರೆದ ಮುನ್ನುಡಿಗೆ ಅವರು ಬಹಳ ಸೊಗಸಾದ ಶೀರ್ಷಿಕೆಯನ್ನೇ ನೀಡಿದ್ದಾರೆ. ‘ಪ್ರಾಮಾಣಿಕತೆ, ಶ್ರದ್ಧೆ ಮತ್ತು ವಿಸ್ತಾರ ಬೆರೆತ ಅಂಕಣ ಬರಹ' ಇದನ್ನು ಓದುವಾಗಲೇ ಕಿರಣ್ ಉಪಾಧ್ಯಾಯರ ಬರಹದ ಆಳ, ಅಗಲ ಎಲ್ಲವೂ ತಿಳಿದು ಬರುತ್ತದೆ, ಮುನ್ನುಡಿಯಲ್ಲಿ ಅವರು ಒಂದೆಡೆ ಬರೆಯುತ್ತಾರೆ ‘ಕಿರಣ್ ಉಪಾಧ್ಯಾಯರ ಬರಹಗಳಲ್ಲಿ ಪ್ರಾಮಾಣಿಕತೆ ಎದ್ದುಕಾಣುತ್ತದೆ. ಅವರು ಓದುಗರನ್ನು ಮೆಚ್ಚಿಸಲಿಕ್ಕೆ ಸುಳ್ಳು ಹೇಳುವುದಿಲ್ಲ. ತಾನು ಇಡಿಯಾಗಿ ಅರ್ಥ ಮಾಡಿಕೊಳ್ಳದ ಸಂಗತಿಗಳ ಬಗ್ಗೆ ಬರೆಯುವುದಿಲ್ಲ. ಅಧ್ಯಯನಶೀಲತೆ, ಶ್ರದ್ಧೆ ಮತ್ತು ವಿಸ್ತಾರಗಳು ಅಂಕಣ ಬರಹಗಳಿಗೆ ಅಗತ್ಯ ಎನ್ನುವುದು ಅವರಿಗೆ ಗೊತ್ತಿದೆ. ಹೀಗಾಗಿಯೇ ಅವರ ಅಂಕಣಗಳು ನಮ್ಮ ಅರಿವನ್ನು ವಿಸ್ತರಿಸುತ್ತವೆ. ನವ್ಯ ಕವನಗಳನ್ನು ನಖಶಿಖಾಂತ ದ್ವೇಷಿಸುವ ಕಿರಣ್ ಅವರ ಅಂಕಣಗಳಲ್ಲಿ ಕೆಲವು ಕಾವ್ಯಮಯವಾಗಿರುವುದನ್ನೂ ನಾನು ಕಂಡಿದ್ದೇನೆ. ಯಕ್ಷಗಾನದ ಮಾತು ಬಂದಾಗ ಅವರು ಕವಿಯಾಗುತ್ತಾರೆ. ಮಿಕ್ಕಂತೆ ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ರಾಜಕೀಯ ತಜ್ಞನಂತೆ ಯೋಚಿಸುತ್ತಾರೆ.” 

‘ದೂರದೇಶವಾಸಿ' ಇದು ವಿದೇಶವಾಸಿ ಮಾಲಿಕೆಯ ನಾಲ್ಕನೆಯ ಪುಸ್ತಕ. ಈ ಕೃತಿಯ ಬಗ್ಗೆ, ಈ ಅಧ್ಯಾಯಗಳ ವಿಷಯ ವಸ್ತುಗಳ ಬಗ್ಗೆ, ಅರ್ಧಕ್ಕೇ ನಿಂತ ಅಂಕಣಗಳ ಬಗ್ಗೆ ಕಿರಣ್ ಉಪಾಧ್ಯಾಯ ಅವರು ತಮ್ಮ ಮಾತಿನಲ್ಲಿ ಬರೆದಿದ್ದಾರೆ. ೨೦೦ ಪುಟಗಳ ಈ ಸುಂದರ ಮಾಹಿತಿ ಪೂರ್ಣ ಪುಸ್ತಕವನ್ನು ಕಿರಣ್ ಅವರು ‘ಚಿರ ಉತ್ಸಾಹದ ಚಿಲುಮೆ ಯುಕೆ ಕನ್ನಡಿಗರ ಒಲುಮೆ ಗಣಪತಿ ಭಟ್’ ಅವರಿಗೆ ಅರ್ಪಣೆ ಮಾಡಿದ್ದಾರೆ. ಈ ಪುಸ್ತಕದ ಅಧ್ಯಾಯಗಳು ಒಂದಕ್ಕಿಂತ ಒಂದು ಮಾಹಿತಿ ಪೂರ್ಣವಾಗಿರುವುದರಿಂದ ಎಲ್ಲರಿಗೂ ಮೆಚ್ಚುಗೆಯಾಗಬಲ್ಲದು.