ದೂರದ ಬೆಟ್ಟ

ದೂರದ ಬೆಟ್ಟ

ನಿಯತ್ತು ಸತ್ತು ಕಾಲವೇ ಕೆಟ್ಟು ಹೋಯಿತು. ಸತ್ಯ ಪಾತಾಳಕ್ಕೆ ತುಳಿಯಲ್ಪಟ್ಟಿತು. ಸುಳ್ಳು ವಿಜೃಂಭಿಸಿತು. ಬಾಳೆಲ್ಲ ಕಾರೆ ಮುಳ್ಳು ಚುಚ್ಚಿದಂತಾಗಲು ಆರಂಭಿಸಿತು. ಅನ್ಯಾಯ ಅಕ್ರಮಗಳು ತಲೆಯೆತ್ತಿತು. ನ್ಯಾಯ ಮಾರ್ಗದಲಿ ನಡೆದವನಿಗೆ ಮತ್ತೂ ಕಷ್ಟವಾಯಿತು. ಅನ್ಯಾಯ ಅಕ್ರಮಗಳ ಜನರೆಡೆ ಒಳ್ಳೆಯವರಿಗೆ ಹಲವು ಸಂದರ್ಭದಲ್ಲಿ ತಲೆತಗ್ಗಿಸುವಂತಾಯಿತು.

ಹಾಲಿಗೆ ಅಷ್ಟೇ ನೀರು ಸೇರಿಸಿ ಕೊಡುವುದೊಂದೆಡೆಯಾದರೆ, ಸತ್ಯ ನ್ಯಾಯ, ಧರ್ಮದಲ್ಲಿ ನಡೆಯುವವರು ಇನ್ನೊಂದೆಡೆ. ಕಾಲ ಕೆಟ್ಟು ಹೋದದ್ದಲ್ಲ, ಸ್ವಾರ್ಥಿಗಳು ಹೆಚ್ಚಾದದ್ದು. ನಾನು, ನನ್ನದು, ನನ್ನ ಹೆಂಡತಿ ಮಕ್ಕಳು, ನನ್ನ ಗಂಡ, ನನ್ನ ಬದುಕು ಎನ್ನುವುದೇ ಹೆಚ್ಚಾದ್ದು. ತಂದೆ-ತಾಯಿ, ಹೆತ್ತವರ ಪ್ರಸ್ತಾಪವೇ ಇಲ್ಲ. ಅವರು ಬೇಕಾದರೆ ಅವರ ಬದುಕು ನೋಡಿಕೊಳ್ಳಬೇಕು ಎಂಬುದು 80% ಮನೆಯಲ್ಲಿ ಕಾಣಿಸುತ್ತಿದೆ.

ಒಮ್ಮೆ ಓರ್ವ ಮಹಾಶಯರು ಹೀಗೆ ಭೇಟಿಯಾದಾಗ ಹೇಳಿದ ವಿಷಯ 'ಅವರನ್ನು ಹಾಗೂ ಅವರ ಪತ್ನಿಯನ್ನು ಮಗ ಸೊಸೆ ಒತ್ತಾಯ ಮಾಡಿ ಮಗನಿರುವಲ್ಲಿಗೆ ಕರೆದುಕೊಂಡು ಹೋದನಂತೆ. (ದೆಹಲಿಗೆ) ಮೊದಲ ವಿಮಾನ ಪ್ರಯಾಣ. ತಾಯಿಗೆ ಖುಷಿಯೇ ಖುಷಿ. ಹೆಚ್ಚು ಹಾರಾಡಬೇಡ, ದೂರದ ಬೆಟ್ಟ ನುಣ್ಣಗೆ, ಕಣ್ಣಿಗೆ ಮಾತ್ರ ಚಂದ' ಎಂದು ಹೇಳಿದ್ದನ್ನು ಪತ್ನಿ ತಲೆಗೆ ತೆಗೆದುಕೊಳ್ಳಲಿಲ್ಲವಂತೆ. ಹೋಗಿ ಒಂದೆರಡು ದಿನಗಳಾದಾಗ ಸೊಸೆ ಬಸುರಿ ಎಂಬ ವಿಷಯ ಗೊತ್ತಾಯಿತು. ಸಂಪೂರ್ಣ ವಿಶ್ರಾಂತಿ ಬೇಕೆಂಬುದು ತಿಳಿಯಿತು. ನಿಧಾನವಾಗಿ ಒಂದೊಂದೇ ಅನುಭವಕ್ಕೆ ಬರತೊಡಗಿತಂತೆ ಹಿರಿಯರಿಗೆ. ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲವೆಂದು ತೋಟ ಮನೆಯ ನೆಪವೊಡ್ಡಿ ನಾನು ಊರಿಗೆ ಬಂದೆ. ಆದರೆ ನನ್ನ ಹೆಂಡತಿ ಗಾಣದೆತ್ತಿನ ಹಾಗೆ ಮಗನ ಮನೆಯಲ್ಲಿ ದುಡಿಯುತ್ತಿದ್ದಾಳೆಂದು ಕಣ್ಣೀರು ಹಾಕಿದರು. ಮದುವೆಯಾಗಿ 4-5 ವರ್ಷಗಳಲ್ಲಿ ಬಾಯಿ ಮಾತಿಗಾದರೂ ಬನ್ನಿ ಹೇಳದವರು ಈಗ ಒತ್ತಾಯ ಮಾಡಿದ್ದಾರೆ ಅಂದಾಗಲೇ ನನಗೆ ಸಂಶಯ ಆಯಿತು ಹೇಳಿದರು. ಪ್ರೀತಿ, ವಿಶ್ವಾಸ ಹೆತ್ತವರಿಗೆ ನೀಡೋಣ. ಅವರ ಜೀವಕ್ಕೂ ಸ್ವಲ್ಪ ವಿಶ್ರಾಂತಿ ಬೇಡವೇ? ಯಾವುದೇ ಮನೆಯಲ್ಲಿ ವಯಸ್ಸಾದ ಗಂಡಸರಿಗಿರುವ ವಿಶ್ರಾಂತಿ ಹೆಂಗಸರಿಗಿಲ್ಲ. ಆರೋಗ್ಯವಿಲ್ಲದಿದ್ದರೂ, ಮೈಯಲ್ಲಿ ಕಸುವು ಇಲ್ಲದಿದ್ದರೂ ಉಸಿರು ನಿಲ್ಲುವವರೆಗೂ ಆಕೆ ದುಡಿಯಬೇಕು. ಒಂದು ಕ್ಷಣ ಆಕೆ ಕುಳಿತದ್ದು ಕಂಡರೆ ಸಹಿಸದ ಮನೆಮಂದಿ ಬಹಳ ಮನೆಗಳಲ್ಲಿ ಕಾಣಬಹುದು. ಇದು ಕಾಲ ಕೆಟ್ಟು ಹೋದ್ದಲ್ಲ.ಮನುಷ್ಯರೇ ಮಾಡಿಕೊಂಡದ್ದು. ಒಟ್ಟಿನಲ್ಲಿ ಮಾನವನ ಮನಸ್ಸು ಸ್ವಾರ್ಥದೆಡೆಗೆ ವಾಲಿದ್ದೇ ಕಾರಣ. ಹೇಗೆ ಬಾಳೆಎಲೆಯಲ್ಲಿ ಊಟಮಾಡಿ ನಂತರ ಬಿಸಾಡುತ್ತೇವೋ ಹಾಗೆ ಉಪಕಾರಕ್ಕೆ ಬಳಸಿಕೊಂಡು ಮತ್ತೆ ತಾತ್ಸಾರ ಮಾಡುವುದು, ಹೊರದೂಡುವುದು. ಗೌರವ ಎಂಬ ಪದದ ಅರ್ಥವೇ ತಿಳಿಯದು. ಅವರು ಅಳಿದಾಗ ಮೊಸಳೆ ಕಣ್ಣೀರು ಸುರಿಸಿ ಮೆರವಣಿಗೆ ಮಾಡಿದರೆ ಯಾರಿಗೂ ಕನಿಕರ ಬಾರದು. ಮತ್ತೆ ಹಾಡಿಹೊಗಳುವ ಅಗತ್ಯವಿಲ್ಲ. ನನಗೆ ಗೊತ್ತಿರುವ ಒಂದು ಮನೆಯಲ್ಲಿ ಗಂಡನೇ ಹೆತ್ತವರನ್ನು ಮುದುಕ-ಮುದುಕಿ ಎಂದೇ ಎಲ್ಲರ ಹತ್ತಿರ ಮಾತನಾಡುವಾಗ ಹೇಳುವುದು. ಎಷ್ಟೋ ಸಲ ಇನ್ನೂ ಟಿಕೇಟ್ ತೆಗೆದಿಲ್ಲ ಎಂಬ ಮಾತು. ಅಯ್ಯೋ ಯಾರಿಗಾಗಿ ಕಷ್ಟಪಟ್ಟು ದುಡಿದು ಮಾಡಿದ್ದು? ಮಗನಿಗಾಗಿ ಸಂಪಾದಿಸಿ ಇಡುವವರಿಗೆ ಇದೊಂದು ಪಾಠ. ಅವನೇ ಸಂಪಾದನೆ ಮಾಡುವ ಹಾಗೆ ಹೆತ್ತವರು ದಾರಿ ಮಾತ್ರ ತೋರಿಸಿಕೊಡಬೇಕು. ಆಗ ಬದುಕಿನ ಬೆಲೆ ಬಂದವರಿಗೂ ಮಗನಿಗೂ ಗೊತ್ತಾಗುತ್ತಿತ್ತು. ತನ್ನ ಹೆತ್ತವರ ಹಾಗೆಂದು ಈಕೆ, ತಮ್ಮ ಮಗಳಂತೆ ಎಂದು ಹಿರಿಯರು ಕಂಡರೆ ಯಾವ ಸಮಸ್ಯೆಯೂ ಇಲ್ಲದಾಗಬಹುದು ಕಾಡ್ತಿದೆ. ಅತಿಯಾದ ಸಲಿಗೆಯೂ ಒಳ್ಳೆಯದಲ್ಲ. ದುರ್ಬಳಕೆ ಆಗಬಹುದು. ಪರಸ್ಪರ ಕುಳಿತು ಮಾತನಾಡಿ ಬಗೆ ಹರಿಸುವುದು ಚಂದ. ಮೊಂಡು ಹಠ ಬದುಕು ಅಶಾಂತಿಗೆ ಕಾರಣ.ಒಮ್ಮೆ ಕಳಕೊಂಡರೆ ಮತ್ತೆ ಸಿಗದು. ಸಮಯವೂ, ಆಯುಷ್ಯವೂ ಹಾಳು. ಎಲ್ಲರ ಮನೆಯಲ್ಲಿ ಮಾಡುವ ದೋಸೆಯೂ ತೂತೇ. ಕೆಲವು ಹೆಚ್ಚು, ಕೆಲವು ಕಡಿಮೆ ಅಷ್ಟೆ. ಕಾಲ ಕೆಟ್ಟದ್ದಲ್ಲ ನಮ್ಮ ಮನಸ್ಸು ಇಲ್ಲದ್ದನ್ನೆಲ್ಲ ತುಂಬಿಕೊಂಡು ರಾಡಿಯಾದದ್ದು.

ನಿರ್ಮಲ, ಶುದ್ಧಚಿತ್ತದಿಂದ ಹೊಂದಾಣಿಕೆಯೆಂಬ ಅಸ್ತ್ರವನ್ನು ಸದಾ ಬಳಸುತ್ತಾ,ಇರುವಷ್ಟು ದಿವಸ ಚೆನ್ನಾಗಿರೋಣ. ಎರಡೂ ಕೈ ಇಲ್ಲದೆ ಚಪ್ಪಾಳೆ ಇಲ್ಲ. ಒಂದೇ ಕೈಯಲ್ಲಿ ಆಯಾಸ ಆಗುವಲ್ಲಿವರೆಗೆ ಚಪ್ಪಾಳೆ ಹೊಡೆದು ತಣ್ಣಗಾಗಬಹುದು ಅಲ್ಲವೇ? ಮೌನ ಹೆಚ್ಚು ಪ್ರಯೋಜನವಾಗಬಹುದು.

-ರತ್ನಾ ಕೆ. ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ