ದೃಗ್ಗೋಚರ ಬೆಳಕು

ಮೊನ್ನೆ ವಿದ್ಯುತ್ಕಾಂತೀಯ ವಿಕಿರಣದ ಕೊನೆಯ ಮತ್ತು ದುರ್ಬಲ ಸದಸ್ಯನಾದ ರೇಡಿಯೋ ಅಲೆಗಳನ್ನು ಮುಗಿಸುತ್ತಾ ಒಂದು ಪ್ರಶ್ನೆ ಕೇಳಿದ್ದೆ. ಇನ್ನು ಯಾರಾದರೂ ಬಿಟ್ಟು ಹೋಗಿದ್ದಾರೆಯೇ ಎಂದು. ನಮ್ಮ ನಡುವೆ ಗುಂಪಿನಲ್ಲಿ ಸಂವಹನಕ್ಕೆ ಅವಕಾಶ ಇಲ್ಲದೇ ಇರುವುದರಿಂದ ಬಹುಶ ಕೆಲವರನ್ನುಳಿದು ಅನೇಕರು ಉತ್ತರಿಸಿಲ್ಲ. ಹೌದು ನಾನು ನಮ್ಮ ಚರ್ಚೆಯ ವಿಷಯವನ್ನು ಬಿಟ್ಟು ಉಳಿದೆಲ್ಲ ಪೂರಕ ಅಂಶಗಳ ಬಗ್ಗೆ ಚರ್ಚಿಸಿದೆವು. ನಮ್ಮ ಚರ್ಚೆಯ ವಿಷಯ ನಿಮಗೂ ಮರೆತು ಹೋಗಿರಬೇಕು. ಮತ್ತೊಮ್ಮೆ ನೆನಪು ಮಾಡುತ್ತೇನೆ. ಎಲೆಗಳು ಏಕೆ ಹಸಿರು ಬಣ್ಣದಲ್ಲಿವೆ. ನಿಮ್ಮ ಉತ್ತರವೂ ಸರಳ ಏಕೆಂದರೆ ಅವುಗಳಲ್ಲಿ ಹಸಿರು ಬಣ್ಣದ ಪತ್ರ ಹರಿತ್ತು ಇದೆ. ಈಗ ನನ್ನ ಮುಂದಿನ ಪ್ರಶ್ನೆ ಪತ್ರ ಹರಿತ್ತು ಏಕೆ ಹಸುರಿದೆ? ಎಂಬುದಾಗಿತ್ತು. ಆದ್ದರಿಂದ ನಾವು ಬೆಳಕಿನ ಬಗೆಗೆ ತಿಳಿದುಕೊಳ್ಳಬೇಕು.
ಅತ್ಯಂತ ಪ್ರಬಲ ಗಾಮಾ ಕಿರಣಗಳಿಂದಾರಂಭಿಸಿ ರೇಡಿಯೋ ತರಂಗಗಳ ವರೆಗೆ ನೋಡಿದ್ದೇವೆ. ಗಾಮಾ ಕಿರಣಗಳ ತರಂಗಾಂತರ ನ್ಯಾನೋ ಮೀಟರ್ ಗಳಲ್ಲಿ ಅಳೆದರೆ ರೇಡಿಯೋ ತರಂಗಗಳು ಹಲವು ಮೀಟರ್‌ಗಳಷ್ಟು ತರಂಗಾಂತರವನ್ನು ಹೊಂದಿವೆ. ಗಾಮಾ ಕಿರಣಗಳಿಗೆ ಪರಮಾಣುವಿನಿಂದ ಎಲೆಕ್ಟ್ರಾನ್ ಗಳನ್ನು ಓಡಿಸಿ ಅಯಾನೀಕರಣ ಸಾಮರ್ಥ್ಯವಿದ್ದರೆ ರೇಡಿಯೋ ತರಂಗಗಳು ಪಾಪ ಅಂಡಲೆಯುವ ಭಿಕಾರಿಗಳ ಹಾಗೆ. ಇವುಗಳ ನಡುವೆ ಇನ್ನೊಂದು ದುರ್ಬಲರ ಪಟ್ಟಿ ಇದೆ. ಅದೇ ದೃಗ್ಗೋಚರ ಬೆಳಕು. ಇದರಲ್ಲಿ ಏಳು ಜನ ಸದಸ್ಯರು ಬೇರೆ ಇದ್ದಾರೆ. ಈ ಏಳು ಜನರ ಅಲೆಯುದ್ದ 380 ನ್ಯಾನೋ ಮೀಟರ್ ನಿಂದ 750 ನ್ಯಾನೋ ಮೀಟರ್ ಗಳು. ಅಂದರೆ ಬರಿಯ 370 ರ ವ್ಯತ್ಯಾಸದಲ್ಲಿ ಏಳು ಜನ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಅತಿ ಪ್ರಬಲ ಎಂದರೆ ನೇರಳೆ. ಈತನ ತರಂಗಾಂತರ
380 - 450 nm
ಊದಾ 420 - 440 nm
ನೀಲಿ 450 - 495 nm
ಹಸಿರು 495 - 570 nm
ಹಳದಿ 570 - 590 nm
ಕಿತ್ತಳೆ 590 - 620 nm
ಕೆಂಪು 620 - 750 nm.
ಈ ವಿದ್ಯುತ್ಕಾಂತೀಯ ತರಂಗಗಳು ಮಾನವನ ಕಣ್ಣಿನಲ್ಲಿ ವಿದ್ಯುತ್ ಸಂವೇದನೆಗಳನ್ನು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿವೆಯೇ ಹೊರತು ಚರ್ಮವನ್ನು ಕಂದಿಸುವ ಅಥವಾ ಬಿಸಿ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಆದ್ದರಿಂದ ಬಿಸಿಲಿಗೆ ಹೋದರೆ ನೀವು ಕಪ್ಪಾಗುತ್ತೀರಿ ಅಥವಾ ಚರ್ಮ ಚುರುಗುಟ್ಟುತ್ತವೆಯೇ ಹೊರತು ಮನೆಯ ದೀಪದ ಬೆಳಕಿನಲ್ಲಿ ರಾತ್ರಿ ಬೆಳದಿಂಗಳಿನಲ್ಲಿ ಹೀಗಾಗುವುದಿಲ್ಲ. ಮಾನವನ ಕಣ್ಣಿಗೆ ಈ ದೃಗ್ಗೋಚರ ಬೆಳಕು (Visible Light) ಮಾತ್ರ ಕಾಣುವುದು. ಅದೇ ಕೆಲವು ಹಕ್ಕಿಗಳು ಮತ್ತು ಕೀಟಗಳು ಅಲ್ಟ್ರಾ ವಯೋಲೆಟ್ ನಿಂದ ಇನ್ಫ್ರಾರೆಡ್ ವರೆಗಿನ ತರಂಗಾಂತರವನ್ನು ಗ್ರಹಿಸಬಲ್ಲ ಸಾಮರ್ಥ್ಯ ಹೊಂದಿವೆ.
ಬೆಳಕಿನಲ್ಲಿ ಬಣ್ಣವನ್ನು ಗುರುತಿಸಿದವರು ಯಾರು? ಈ ಪ್ರಶ್ನೆ ತುಂಬಾ ಬಾಲಿಶ ಅನ್ನಿಸುತ್ತದೆ ಅಲ್ಲವೇ? ನಿಜ. ನಾವು ಹುಟ್ಟುವಾಗಲೇ ಕಾಮನ ಬಿಲ್ಲಿನ ಏಳು ಬಣ್ಣಗಳಿಗೆ ಮಾರು ಹೋಗಿ
ಕಾಮನ ಬಿಲ್ಲು ಕಮಾನು ಕಟ್ಟಿದೆ
ಮೋಡದ ನಾಡಿನ ಬಾಗಿಲಿಗೆ
ಬಣ್ಣಗಳೇಳನು ತೋರಣ ಮಾಡಿದೆ
ಕಂದನ ಕಣ್ಣಿಗೆ ಚಂದನ ಮಾಡಿದೆ
ಎಂದು ಹಾಡಿದವರು. ಅಂದರೆ ಕಾಮನ ಬಿಲ್ಲಿನ ಬಣ್ಣದೊಂದಿಗೆ ಬೆಳೆದ ನಮಗೆ ಈ ಬಣ್ಣಗಳನ್ನು ಸಂಶೋಧಿಸಿ ನೀಡಬೇಕೆ ಎಂದು ಕೇಳಬಹುದು.
ಈ ಬಣ್ಣಗಳ ಕಲ್ಪನೆ ಮತ್ತು ಅವುಗಳ ಬಗೆಗಿನ ಕೌತುಕ ಮನುಕಲದ ಆರಂಭದಿಂದಲೂ ಇತ್ತು. ಅರಿಸ್ಟಾಟಲ್ ಬಣ್ಣಗಳು ಕತ್ತಲು ಮತ್ತು ಬೆಳಕಿನ ಮಿಶ್ರಣ ಎಂದು ಕರೆದ. ಆದರೆ ಈ ಬಗ್ಗೆ ನಿಖರವಾದ ಮಾಹಿತಿ ನೀಡಿದವನು ಸರ್ ಐಸಾಕ್ ನ್ಯೂಟನ್. ಈತ ಬೆಳಕಿನ ಒಂಟಿ ಕಿರಣವನ್ನು ಗಾಜಿನ ಪಟ್ಟಕದ ಮೂಲಕ ಹಾಯಿಸಿದ. ಅದು ಏಳು ಬಣ್ಣಗಳಾಗಿ ಒಡೆಯಿತು. ಈ ಬಣ್ಣಗಳ ಅನುಪಾತದಲ್ಲಿ ಬಣ್ಣದ ಪಟ್ಟಿಗಳನ್ನು ಒಂದು ಚಕ್ರದಲ್ಲಿ ಎಳೆದು ಆ ಚಕ್ರವನ್ನು ವೇಗವಾಗಿ ತಿರುಗಿಸಿದ. ಆಗ ಅದು ಬಿಳಿಗೆ ಹತ್ತಿರದ ಬಣ್ಣದಲ್ಲಿ ಗೋಚರಿಸಿತು. ಆಗ ಮಕ್ಕಳು ಹಾಡಲು ಆರಂಭಿಸಿದರು ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗಿ....
ಆದರೆ ಅದು ನಿಜವಾಗಿ ಬಿಳಿ ಅಲ್ಲ ಬೆಳಕಿನ ಹೀರುವಿಕೆಯಿಂದಾಗಿ ಅದು ಬೂದಿ ಬಣ್ಣದಲ್ಲಿರುತ್ತದೆ. ಆದರೆ ನನ್ನ ಗುರುಗಳು ಅದನ್ನು ನಮಗೆ ಬಿಳಿ ಅಂತಲೇ ಹೇಳಿಕೊಟ್ಟಿದ್ದಾರೆ. ಇರಲಿ ಬಿಡಿ. ಈ ಅಧ್ಯಯನದ ನಂತರ ನ್ಯೂಟನ್ ಬೆಳಕಿನ ವರ್ಣ ಸಿದ್ದಾಂತವನ್ನು (Colour theory of light). ನ್ಯೂಟನ್ ನ ವರ್ಣ ಸಿದ್ಧಾಂತದ ಪ್ರಕಾರ ಕೆಂಪು, ಹಳದಿ ಮತ್ತು ನೀಲಿ ಮೂರು ಮೂಲ ಬಣ್ಣಗಳು ಇದನ್ನು ಕಪ್ಪು ಬಣ್ಣದೊಂದಿಗೆ ಮಿಶ್ರ ಮಾಡುವುದರಿಂದ ಉಳಿದ ಬಣ್ಣಗಳನ್ನು ಪಡೆಯಬಹುದು. ಆದರೆ ಜೋಹಾನ್ ಗೋತೆಯವರ ಪ್ರಕಾರ ಮೂಲ ಬಣ್ಣಗಳು ಹಳದಿ ಮತ್ತು ನೀಲಿ ಮಾತ್ರ. ಆದರೆ ನಾವು ಮುದ್ರಣ ಮಾಡುವಾಗ ಕೆಂಪು, ಹಳದಿ ಮತ್ತು ನೀಲಿ ಮತ್ತು ಕಪ್ಪು ಬಣ್ಣಗಳನ್ನು ಬಳಸುವುದರಿಂದ ನಾವಿದನ್ನು ಚತುರ್ವರ್ಣ ಮುದ್ರಣ (four colour printing) ಎನ್ನುವುದು. ನಾವು ಏಳೇ ಬಣ್ಣಗಳೆಂದರೂ ನಮ್ಮ ಕಣ್ಣು ಬಣ್ಣಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸಬಲ್ಲದು. ಈ ಮಿಶ್ರ ಬಣ್ಣಗಳಿಗೆ ಛಾಯೆಗಳು (shades) ಎನ್ನುತ್ತೇವೆ. ಮಾನವನ ಕಣ್ಣು ಒಂದು ಮಿಲಿಯಕ್ಕೂ ಹೆಚ್ಚು ಛಾಯೆಗಳನ್ನು ಗುರುತಿಸಬಲ್ಲುದು.
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ