ದೃಷ್ಟಿಕೋನ

ದೃಷ್ಟಿಕೋನ

                                                              ದೃಷ್ಟಿಕೋನ
                                                   ದೃಶ್ಯ-1

    ಈ ಹಾಳು ಬೆಂಗಳೂರಿನಲ್ಲಂತೂ  ಕೆಲಸಕ್ಕಿಂತ  ಜಾಸ್ತಿ  ಆಯಾಸ traffic ನಿಂದ ಆಗುತ್ತೆ.  ಹಾಗೆ, ಕೆಟ್ಟ ಬಾಸ್‍ನಿಂದ  ಹೇರಲ್ಪಟ್ಟ ಜಾಸ್ತಿ ಕೆಲಸ ಮುಗಿಸಿ, ಹಾಳು  ಟ್ರಾಫಿಕ್‍ನಲ್ಲಿ ಕೊಸರಾಡಿ  ಮನೆಗೆ ಬಂದ್ರೆ, ಮನದನ್ನೆ  ನಗುಮೊಗದಿ, ಅಮೃತಬಿಂದುವಿನಂಥ ಕಾಫಿ ಕೊಟ್ಟಾಳೇ  ಅಂತ ಮನಸ್ಸಿಗೊಂದಾಸೆ.  ಆದರೆ,  ಕಾಫಿ ಮನೆ ಹಾಳಾಗ್ಲಿ, 'ಕಾಫೀ ಸೇವನೆಯ ದುಷ್ಪರಿಣಾಮಗಳು' ಅನ್ನುವ ವಿಷಯದ ಬಗ್ಗೆ ಉದ್ದುದ್ದ ಭಾಷಣ ಮನದನ್ನೆ ಕೊರೆದರೆ ನನ್ನ ಪಾಡೇನಾದೀತು?  ಒಂದು ತೊಟ್ಟು  ಕಾಫೀಗೂ  ಬೇಡಬೇಕಾದಂಥ ಪರಿಸ್ಥಿತಿ  ಯಾವ ಬೇಡನಿಗೂ  ಬೇಡ! (ಬೇಡಿದರೂ ಸಿಕ್ಕೀತೆಂಬ  ಖಾತ್ರಿ ಇಲ್ಲ.  ಆಗ್ಲೂ  ಉತ್ತರ `ಬೇಡ' ಅಂತ್ಲೇ!) ಕಾಫಿ ಬೇಡವೆನಿಸಿಕೊಂಡ ಬಾಡಿ `ಉತ್ಸಾಹಹೀನಃ ಪಶುಭಿಃ ಸಮಾನಃ'  ಅಂತ revised  ಸುಭಾಷಿತವನ್ನು ನೆನೆಸಿಕೊಂಡು ಮರಗಟ್ಟಿ ಬಿಡುತ್ತೆ.  ಆಫೀಸಿನಲ್ಲಿ  ತೋರುವ ಉತ್ಸಾಹ  ಮನೆಯಲ್ಲಿ ತೋರಬಾರ್ದೇ ಅನ್ನುವ ತಿವಿತ ಬೇರೆ! ಅದಕ್ಕೆ  ಕಾರಣಕರ್ತೆ ತಾನೇ ಅನ್ನುವುದನ್ನು ಯಾವತ್ತೂ ಒಪ್ಪುವುದಿಲ್ಲ‌. ಏನ್ಸಾರ್ ಎಲ್ಲ ಹೆಂಡಿರೂ ಹಿಂಗೇನಾ?
                                                                      * * * * * *
ನಮ್ಮವರಂತೂ ದಿನದ ಅರ್ಧಕ್ಕಿಂತ  ಜಾಸ್ತಿ  ಸಮಯ ನಿದ್ರೆಯಲ್ಲಿ  ಕಾಲಕಳೆಯುತ್ತಾರೆ. ಉಳಿದ ಎದ್ದಿರುವ ಸಮಯದಲ್ಲೂ ¾ ಪಾಲು ಆಫೀಸಿನಲ್ಲಿ ಆಗುತ್ತದೆ.  ಉಳಿದ ಸ್ವಲ್ಪ  ಸಮಯದಲ್ಲಾದರೂ ನನ್ನೊಂದಿಗೆ  ಸರಸವಾಗಿ ಮಾತಾಡಿಕೊಂಡಿರಬಹುದೆಂದು ಅದ್ಕೊಂಡ್ರೆ, ಬರುತ್ತಲೇ `ಕಾಫಿ, ಕಾಫಿ', ಅಂತ   ಒಂದೇ ಸಮನೇ ವರಾತ  ಶುರು ಹಚ್ಕೋತಾರೆ! ಆಫೀಸಿನಲ್ಲಿ ಏನಿಲ್ಲಾಂದ್ರೂ  20-25 ಸರ್ತಿ ಕಾಫಿ ಸಮಾರಾಧನೆ ಆಗಿರುತ್ತೆ. ಮತ್ತೆ ಮನೆಯಲ್ಲಿಯೂ  ಒಂದು ಕೊಳಗ  ಕಾಫಿ ಕುಡಿದರೆ, ಅದೇನು ಹೊಟ್ಟೆಯೋ  ಕಸದ ಬುಟ್ಟಿಯೋ? ನಾನವರ ಆರೋಗ್ಯದ ಬಗ್ಗೆ  ಕಾಳಜಿ  ತೊಗೊಳ್ಳೋದು ಹಾಳಾಗ್ಲಿ, ವೈದ್ಯರ ಮಾತಿಗೂ  ಬೆಲೆ ಇಲ್ವೇ?! ಮಕ್ಕಳು ಹಠ ಹಿಡಿಯುತ್ವೇ ಅಂತ ಕೇಳಿದ್ದನ್ನೆಲ್ಲ  ಕೊಡೋಕಾಗುತ್ತಾ?  ಹೀಗೆ ಹಠ ಹಿಡಿದ್ರೆ, ಮಕ್ಕಳಿಗಾದ್ರೂ ಸರಿ, ಗಡವಗಳಿಗಾದ್ರೂ  ಸರಿ, ನಾನಂತೂ  ಕೊಡುವವಳಲ್ಲ! ಆಮೇಲೆ ಇದನ್ನೇ ನೆಪ ಮಾಡಿಕೊಂಡು, ನಮ್ಮವರು ತೊಪ್ಪೆ ತರಾ ಕೂತುಬಿಡ್ತಾರೆ ! ನಾನು  ಅಂದುಕೊಂಡ  ಯಾವ ಕೆಲಸಗಳೂ ಆಗೋಲ್ಲ. ಕೆಸರಲ್ಲಿ ಬಿದ್ಕೊಂಡಿರೋ  ಎಮ್ಮೆಗಳನ್ನು ಎಬ್ಬಿಸಬಹುದು, ಇವರನ್ನಲ್ಲ! ಏನ್ರೀ ನಿಮ್ಮ‌ ಗಂಡಂದ್ರೂ ಹೀಗೇನಾ?
                                                                 * * * * * *
                                                                  ದೃಶ್ಯ – 2
ಎಲ್ಲರ ಮನೆಯಂತೆ, ನಮ್ಮಲ್ಲಿಯೂ ನಮ್ಮೆಲ್ಲರ  ರಿಮೋಟ್  ನಮ್ಮಾಕೆ ಕೈಲಿ. ಹಾಗಂತ T.V. ರಿಮೋಟ್ ಕೂಡಾ ಯಾವಾಗ್ಲೂ ಅವಳ ಕೈಲೇನಾ?  ಮನದನ್ನೆಯ ನಸುನಗುವನ್ನು ಆಶಿಸಿ ಆಫೀಸಿನಿಂದ  ಮನೆಗೆ ಕಾಲಿಟ್ರೆ, ಯಾವ್ದೋ ಸೀರಿಯಲ್ಲಿನ  ಅತ್ತೆಯ ಖಳನಗೆಯ ಸ್ವಾಗತ  ದೊರಕಿದರೆ  ಮನಸ್ಸಿಗೆ ಏನನ್ನಿಸೀತು?  ಆ ಹಾಳು ಸೀರಿಯಲ್ಲುಗಳೋ,  1000 ಎಪಿಸೋಡುಗಳು ಮುಗಿದರೂ  ಒಂದಿನಿತೂ ಕಥೆ ಮುಂದುವರೆದಿರುವುದಿಲ್ಲ – ಅವರುಗಳ ಗೋಳು ತೀರೋದಿಲ್ಲ? ಈ ಗೋಳಿಗಾ ನಾವು ತಿಂಗಳಿಗೆ 500 ರೂ. ಪೀಕೋದು? ಕಥೆ  ಒಂದೇ, (ಅದಿದ್ದದ್ದೇ ಆದ್ರೆ!)  ಪಾತ್ರ ಮಾತ್ರ ಬದಲು  ಆಗಿರುವಂಥ ಎಲ್ಲ ಸೀರಿಯಲ್ಲುಗಳನ್ನೂ ಬೆಳಗ್ಗಿನಿಂದ ಸಂಜೇವರ್ಗೂ ಭಕ್ತಿಯಿಂದ ವೀಕ್ಷಿಸುವ  ನನ್ನಾಕೆ, ನಾನು IPL  ಮ್ಯಾಚ್  ಹಾಕಿದರಂತೂ  ಭದ್ರಕಾಳಿಯಾಗಿಬಿಡ್ತಾಳೆ! ಎಂದೂ ಮುಗಿಯದ `ಗೋಳಾಟ'ದ  ಬದಲು ಅಪರೂಪಕ್ಕಾದರೂ  ನಾನು IPL `ಬಾಲಾಟ' ಹಾಕಿಕೊಳ್ಳುವುದಕ್ಕೂ ರಿಮೋಟಿಗಾಗಿ ಕಾದಾಟವೇ? (ರಿಮೋಟ್ ಸಿಗೋದೂ remote chance ಬಿಡಿ!) ಹೇಳಿ ಸಾರ್,  ನಿಮ್ಹೆಂಡ್ರೂ ಹೀಗೇನಾ?
                                                                 * * * * * *
ಆಫೀಸಿನಲ್ಲಿ ದುಡಿದರೆ ವಾರಕ್ಕೆ ಒಂದು ದಿವಸವಾದ್ರೂ ರಜೆ ಸಿಗುತ್ತೆ.  ಆದರೆ,  ಈ ಮನೆ ಕೆಲಸ ಭಗವಂತನಷ್ಟೇ  ಸಾರ್ವಕಾಲಿಕ ! ನ್ಯೂಸ್  ಚಾನೆಲ್ಲಿನವರು ಹೇಳಿಕೊಳ್ಳುವಂತೆ, ಆದರೆ  ನಿಜವಾಗಿ 24 X 7  ಗಾಣದೆತ್ತಿನಂತೆ  ದುಡಿಯುವ ನಾವು, ಎಲ್ಲೋ  ಸಿಕ್ಕ ಒಂದು ಸಣ್ಣ ಅವಕಾಶವಾದ ಸಂಜೆಯಲ್ಲಿ T.V. ನೋಡೋಕ್ಕೆ ಕೂತ್ರೆ, ಅದೇ ಸಮಯಕ್ಕೆ ವಕ್ಕರಿಸ್ತಾರೆ ನಮ್ಮವರು! ಅವರು ಕ್ರಿಕೆಟ್ಟು ಅಂತ T.V.ಯನ್ನು  ಆಕ್ರಮಿಸಿದರೆ, ನಮಗೇನೂ entertainment ಬೇಡವೇ? ಈ ಕೆಟ್ಟಾಟ ಕ್ರಿಕೆಟ್ಟಾಟವೆಲ್ಲಾ ಮ್ಯಾಚ್ ಫಿಕ್ಸಿಂಗ್‍ನಲ್ಲಿ ಗಬ್ಬೆದ್ದು ನಾಥ ಹೊಡೀತಿದ್ರೂ ಇವರಿಗೆ  ಮಾತ್ರ ಅದೇನು  ಥ್ರಿಲ್ ಸಿಗುತ್ತೋ ಆ ದೇವರೇ ಬಲ್ಲ ! ಈ ಪ್ರಾಣಿಯಂತೂ,  ನನಗೆ ಸೀರಿಯಲ್ಲು ನೋಡಲಿಕ್ಕೆ ಬಿಡಬಾರದೆನ್ನುವ ಏಕೈಕ  ದುರುದ್ದೇಶದಿಂದ, ಕಂಡು ಕೇಳರಿಯದ  ದೇಶಗಳ ನಡುವಿನ ಕ್ರಿಕೆಟ್ ಮ್ಯಾಚನ್ನು ಬಿಟ್ಟ ಕಣ್ಣು ಮುಚ್ಚದಂತೆ ನೋಡ್ತಾರೆ. (ಅಥವಾ ಆ ಥರಾ ನಾಟಕಾ ಆಡ್ತಾರೆ !) ಯಾಕೀ ಸ್ವಾರ್ಥ ಗಂಡು ಪ್ರಾಣಿಗಳಿಗೆ ? ಹೇಳಿ ನಾರೀಮಣಿಗಳೇ, ನಿಮ್ಮ‌ ಗಂಡಂದ್ರೂ ಹೀಗೇನಾ?
                                                                     * * * * * *
                                                                      ದೃಶ್ಯ – 3
ಅಪ್ಪಿತಪ್ಪಿಯೂ ಸೀರೆ ಖರೀದಿಗೆಂದು ಮನೆಯಾಕೆಯ ಜೊತೆ ಹೋಗ್ಬಾರ್ದಪ್ಪಾ. ಅದರಂಥ ಶಿಕ್ಷೆ ಇನ್ನೊಂದಿಲ್ಲ‌. ಜುಜುಬಿ  ರೂ. 100-200 ಬೆಲೆಯ ಒಂದು ಸೀರೆ ಖರೀದಿಗೆ  ಸಾವಿರಾರು ಸೀರೆಗಳನ್ನು ತೆಗಿಸ್ತಾರಲ್ಲಾ, ಅವರಿಗೆ ಏನೂ ಅನ್ನಿಸಲ್ವೆ? Guilty feeling  ಅಥವಾ ಅಪರಾಧೀಭಾವ ಬರೋದಿಲ್ವೇ? ತಮ್ಮ ತಪ್ಪಿನ  ಅರಿವೇ ಅವರಿಗಾಗಲ್ವೇ? ಅವಳ ಈ `ಕುಕೃತ್ಯ' ದಿಂದಾಗಿ ನನಗೇ ನಾಚಿಕೆಯಾಗಿ, ಕಾಲು ಸುಟ್ಟ ಬೆಕ್ಕಿನಂತೆ, ಅಂಗಡಿಯಿಂದ ಹೊರಗೂ ಒಳಗೂ  ಓಡಾಡುತ್ತಿರ್ತೇನೆ.  ಕಾಲ ಕಳೆಯಲಾಗದೇ  whatsapp ಮೆಸೇಜ್ ಓದೋಣಾಂದ್ರೆ ನನ್ನ ಸ್ನೇಹಿತರು ಕಳಿಸುವ ಮೆಸೇಜುಗಳಾವುವೂ ಮುಕ್ತ ವಾತಾವರಣದಲ್ಲಿ ನೋಡಲು `ಯೋಗ್ಯ' ವಾದದ್ದಲ್ಲ !! (ಅಂಥಾ ಸ್ನೇಹಿತರು / groups !)  ತಾಳ್ಮೆ ತಪ್ಪಿ  ಅಂಗಡಿಯಾತ ಎಲ್ಲಿ ಬೈದು,  ನನಗಿರೋ ಅಲ್ಪ ಸ್ವಲ್ಪ ಮಾನವೂ  ಹರಾಜಾಗ್ತದೋ ಅಂತ ಪ್ರತಿ ನಿಮಿಷ ನನ್ನ ಬಿ.ಪಿ.  ಏರ್ತಿರ್ತದೆ.  ಭರ್ಜರಿ 3 ಘಂಟೆ ಜಾಲಾಡಿ,  ಒಂದೂ ಸೀರೆ  ಖರೀದಿಸದೇ  ಬರೋದೂ ಇರ್ತದೇ ! ಆಗ ಮಾತ್ರ  ನನಗೆ, ಸೀತಾಮಾತೆಗಾದಂತೆ ಭೂಮಿ ಬಾಯ್ಬಿಡಬಾರದೇ ಅಂತನ್ನಿಸುವುದು ಸುಳ್ಳಲ್ಲ‌. ಹೇಳಿ ಸಾರ್, ಹೇಳಿ, ನಿಮ್ಮಾಕೆಯೂ ಹೀಗೇನಾ?
                                                                         * * * * * *
ನೀವೇ ಹೇಳಿ, ನಾನು ಸೀರೆ ತೊಗೊಳ್ಳೋಕೆ, ಇವರನ್ನಲ್ಲದೇ ಪಕ್ಕದ್ಮನೆಯವರನ್ನು ಕರ್ಕೊಂಡು ಹೋಗೋಕಾಗುತ್ತಾ? ಅಪರೂಪಕ್ಕೆ ಕರೆದ್ರೂ ದುರ್ದಾನ  ತೆಗೆದುಕೊಂಡಿರುವವರಂತೆ ಬರ್ತಾರೆ ! ಇವರ  ವತಿಯಿಂದ ವರ್ಷಕ್ಕೊಂದು ಸೀರೆ ಸಿಕ್ರೆ ಅದೇ ಭಾಗ್ಯ – ಅದಕ್ಕೇ ಭರ್ಜರಿ  ಬೈಗುಳಗಳ ಬೋನಸ್  ಬೇರೆ! ಏನೋ ತವರಿನವರ ಪ್ರೀತಿ ಇದ್ದಿದ್ದಕ್ಕೆ ಸಾಕೆನ್ನುವಷ್ಟು ಸೀರೆ ಬರ್ತದೆ.  ನೀವೇನೇ ಹೇಳಿ, ಯಾವುದೇ  ವಿಚಾರದಲ್ಲಿ ನಾವು, ಹೆಂಗಸರು,  Perfectionists – dress ವಿಚಾರದಲ್ಲಿಯಂತೂ ಕೇಳೋದೇ ಬೇಡ.  ಈ ಸದ್ಗುಣ ಅವರಲ್ಲಂತೂ ಇಲ್ಲ - ನಮ್ಮಲ್ಲಿರೋದಕ್ಕೆ  ಹೊಗಳಬಾರದೇ! ಬಿಡಿ, ಪುರುಷ ಪ್ರಧಾನ ಶೃಂಖಲೆಯಲ್ಲಿ  ಇದರ ಯೋಚನೆಯೇ ಅಸಾಧ್ಯ.  ಅದಕ್ಕೇ  ನಾನು, ನನಗೊಪ್ಪುವ ಸೀರೆ ಸಿಗೋವರ್ಗೂ   compromise  ಆಗೋ ಮಾತೇ ಇಲ್ಲ! ಅಲ್ಲಾ ರೀ, ಅಂಗಡಿಯವನೇ ಆರಾಮವಾಗಿ ಸೀರೆ ತೋರಿಸುತ್ತಿದ್ದರೂ, ಇವರಿಗ್ಯಾಕೆ B.P. ಏರತ್ತೋ ನಾನಂತೂ ಕಾಣೆ ! ಇವರ ಈ ಪರದಾಟದ `ಪರದೆ ಆಟ' ದಿಂದ ನನ್ನ ಮೂಡೂ ಆಫಾಗಿ ಬಿಡುತ್ತೆ ಎಷ್ಟೋ ಸಲ ! ಅದಕ್ಕೇ ಸೀರೆ ಖರೀದಿಗೆ, ಈ ಗಂಡಸರನ್ನು ಕರ್ಕೊಂಡೇ ಹೋಗ್ಬಾರ್ದು, ನಮ್ಮ ಟೋಳಿಯಲ್ಲೇ ಹೋಗ್ಬೇಕು, ಏನಂತೀರಾ ! ಅಂದ್ಹಾಗೆ, ನಿಮ್ಮ‌ ಗಂಡಂದ್ರೂ ಹೀಗೇನಾ?
                                                                          * * * * * *
                                                                           ದೃಶ್ಯ -4
ದೇವರಿಂದ ಆರೋಗ್ಯ ಭಾಗ್ಯ ವರವನ್ನು ಪಡೆದಂಥ ನನ್ನಾಕೆಗೆ, ನಮ್ಮಣ್ಣ ಅತ್ತಿಗೆ ಬಂದರೆ ಸಾಕು, ಎಲ್ಲಿಂದಲೋ ಬಂದು ಭೀಷಣ ಭೀಕರ `ತಲೆನೋವು' ಪ್ರತ್ಯಕ್ಷವಾಗಿ ಬಿಡುತ್ತೆ ! ಅದೇ ವಾರದ ಹಿಂದೆ  ಅವಳ ಅಣ್ಣ ಬಂದಾಗ ಅವಳ ಸಂಭ್ರಮವೇನು? ಹಾರಾಟವೇನು? ಅವಳ `ತಲೆನೋವು' ಇದ್ದೂ ಇಲ್ಲದಂತಾಗುತ್ತದೆ ! (ಅದು ನನಗೆ ವರ್ಗಾವಣೆಯಾಗಿರುತ್ತಲ್ಲಾ!) ಅವರಿಗೆ ಇಡೀ ಬೆಂಗಳೂರು ದರ್ಶನ  ಮಾಡಿಸಿ, ಮನೆಯಲ್ಲಿ ಮೃಷ್ಟಾನ್ನ ಉಪಚಾರ ಕೂಡಾ.  ನನಗೂ ಆಫೀಸಿನಿಂದ ಬೇಗ ಬರಲು ತಾಕೀತು  ಬೇರೆ!  (ಇವಳ ತಾಕೀತು ನನಗೆಲ್ಲಿ ತಾಕೀತು? !) ಅದೇ ನಮ್ಮಣ್ಣ  ಬಂದಾಗ ಸೀನೇ ಛೇಂಜು ! 'ಮಾಮೂಲಿ  ಅನ್ನ-ಸಾರು  ಮಾಡಿ ಬಡಿಯೋದಕ್ಕೇನೆ, ಒಂದು ಸಿಹಿ ಸೇರಿಸಿ  ಮಾಡೇ'  ಅಂದ್ರೆ ಸಿಡಿಮಿಡಿ. ಅಡಿಗೇನ ಹೇಗೆಲ್ಲ ಕೆಡಿಸಬಹುದು ಅನ್ನೋದರ ಸಾಕ್ಷಾತ್ ಪ್ರಾತ್ಯಕ್ಷಿಕೆ,  ನಮ್ಮ ಅನುಭವಕ್ಕೆ ಬರುತ್ತೆ.  ಇದರ ಬದಲು ಹೋಟೆಲ್‍ಗೆ  ತೆರಳಿ ಊಟ  ಮಾಡೋದೇ ವಾಸಿ  ಅನ್ನುವದರ‌  ಪರೋಕ್ಷ  ಸೂಚನೆ ಅದು. ಅವರು ಏನೆಂದು  ಕೊಂಡಾರೆಂಬ   ಕನಿಷ್ಠ ಯೋಚನೆಯೂ ಇವಳಿಗಿಲ್ವೇ? ಸ್ವಾಮೀ, ನಿಮ್ಮೋರೂ ಹೀಗೇನಾ?
                                                                * * * * * *
`ಇವರ'  ಕಡೇ ನೆಂಟರಿಗೆ  ದೇವರು ಅದೇನು ಸರ್ವದರ್ಶೀ ಅಂತಃಚಕ್ಷುಗಳನ್ನು ಕೊಟ್ಟಿದಾನೋ ತಿಳಿಯದು – ಯಾವಾಗಲೂ ನನಗೆ ಅನಾರೋಗ್ಯ ಇದ್ದಾಗಲೇ  ಇವರು ವಕ್ಕರಿಸೋದು ! ಇವರು ಹಾಳಾಗ್ಲಿ, ನಮ್ಮೋರಿಗೂ ಇದು ಅರ್ಥ ಆಗಲ್ವಲ್ಲ ಅಂತ ನನಗೆ ಬೇಜಾರು. ಆ ಮಕ್ಕಳೋ, ಒಬ್ಬೊಬ್ಬರೂ  ಸೈಂಧವ ಸಂತತಿಯವರು.  ಅವರು ಹೋದ ಮೇಲೆ, ಮನೆಯನ್ನು ಮತ್ತೆ ಮುಂಚಿನ ಸ್ಥಿತಿಗೆ  ತರಲು ನನಗೆ 1 ತಿಂಗಳು ಬೇಕಾಗುತ್ತೆ! (ಅಷ್ಟರಲ್ಲಿ ಅವರು ಮತ್ತೆ  ಬಂದ್ರೂ ಬಂದ್ರೇ !)  ನನಗೋ  ಹುಷಾರಿಲ್ದೇ ಅನ್ನ-ಸಾರು ಮಾಡ್ಲೀಕೇ ತತ್ವಾರ – ಅದರ  ನಡುವೆ,  ಇವರ ದೊಡ್ಡ  ಲಿಸ್ಟ್, ಅಡುಗೇಗಂತ ! ಆ   ಲಿಸ್ಟ್  ನೋಡಿದ್ರೆ  ಇವರು ಯಾವುದೋ ಬಫೆಗೋ  ಸಂತರ್ಪಣೆಗೋ ಒಪ್ಕೊಂಡು ಬಂದ್ಬಿಟ್ಟಿದ್ದಾರಾ  ಅನ್ನೋ  ಅನುಮಾನ ಬಂದ್ಬಿಡುತ್ತೆ ! ಇಷ್ಟೆಲ್ಲಾ  ಬೇಕಾದ್ರೆ  ಎಲ್ಲರೂ ಹೋಟಲಿಗೇ  ಹೋಗ್ಬಹುದಲಾ. ಮನೇನ‌ಲ್ಯಾಕೆ ? ಇವರುಗಳಿಗಂತೂ ಎಷ್ಟು ಮಾಡಿ ಹಾಕಿದ್ರೂ  ತೃಪ್ತಿ ಅನ್ನೋದೇ ಇಲ್ಲ !  ಹೇಳ್ರೀ, ನಿಮ್ಮ ಗಂಡಂದ್ರೂ ಹೀಗಾ?
                                                                        ದೃಶ್ಯ – 5
    ನಾನು ನಲವತ್ತಕ್ಕೆ ಕಾಲಿಟ್ಟಿದ್ದೇ ತಪ್ಪಾಯ್ತು. ಅದಕ್ಕೇ ಕಾಯ್ತಿದ್ದವಳಂತೆ  ನನ್ನಾಕೆ, ಉಪ್ಪು, ಸಕ್ಕರೆ, ಊಟ-ತಿಂಡಿ, ಎಲ್ಲದಕ್ಕೂ  ಭಯಂಕರ ಕಡಿವಾಣ ಹಾಕಿ ಬಿಟ್ಟಿದ್ದಾಳೆ.  ನಂದೋ ಮುಂಚಿಂದ್ಲೂ ಚಾರ್ವಾಕ ಸಿದ್ಧಾಂತ - ಬಿ.ಪಿ. , ಶುಗರ್,  ಬಂದಾಗ  ಪಥ್ಯ ಮಾಡಿದ್ರಾಯ್ತು,  ಈಗಲೇ  ವೈರಾಗ್ಯ ಏಕೆ ಅಂತ. ಆದ್ರೆ  ಯಜಮಾನ್ತಿ  ಕೇಳ್ಬೇಕಲ್ಲ !  ಸಪ್ಪೆ ಊಟವೇ ಗತಿ - ಸರ್ಕಾರ ಪಡಿತರ  ಖೋತಾ ಮಾಡಿದಂತೆ,  ತಿಂಡಿ ಪ್ರಮಾಣದಲ್ಲೂ ಕಡಿತ ! ಜೀವನದ  ನಾಲ್ಕು ಆಶ್ರಮಗಳ  ಬಗ್ಗೆ ನಾನು ತಲೆ ಕೆಡಿಸಿಕೊಳ್ಳದಿದ್ರೂ, ಅನಾಯಾಸವಾಗಿ  ಗೊತ್ತಿಲ್ಲದಂತೆಯೇ ನಾನು ವಾನಪ್ರಸ್ಥಾಶ್ರಮದಿಂದ‌  ಸನ್ಯಾಸಾಶ್ರಮಕ್ಕೆ ಶಿಫ್ಟ್ ಆಗಿ ಬಿಟ್ಟೆ ! ಗಾಯದ ಮೇಲೆ  ಉಪ್ಪು ಸವರಿದಂತೆ, ಇದರ ಜೊತೆ  Exercise  ಕೂಡಾ ಮಾಡ್ಬೇಕಂತೆ !  ನಾನೇನು ಶಾರುಖ್ ಖಾನ್  ಥರಾ ಫಿಲ್ಮ್ ಮಾಡೋದಿದ್ಯಾ ?  ಹೇ ಭಗವಂತ, ನನ್ನ ಮೇಲೆ ಯಾಕಿಷ್ಟು ನಿಷ್ಕರುಣಿಯಾಗಿಬಿಟ್ಟೆ ?! ಹೇಳಿ ಸಾರ್  ಹೇಳಿ, ನಿಜ ಹೇಳಿ, ನಿಮ್ಮಾಕೇನೂ ಹಿಂಗೇನಾ ?
                                                                         * * * * * *
    ಈಗಂತೂ  ಎಲ್ಲೆಲ್ಲೂ  `ಹೃದಯಾಘಾತ'ದ್ದೇ ಸುದ್ದಿಗಳು.  ನನಗೆ ಗೊತ್ತಿರೋ 8-10 ಇಸುಮುಗಳು ಯಾವುದೇ  ದುಶ್ಚಟಗಳಿಲ್ಲದೆಯೇ ನಲವತ್ತೈದರ ಆಜೂಬಾಜೀನಲ್ಲಿ ಶಿವನ ಪಾದ ಸೇರಿವೆ. ನಲವತ್ತರ  ನಂತರ ಬಿ.ಪಿ., ಶುಗರ್ ಸಾಮಾನ್ಯ ಅಂತಾರೆ, ವೈದ್ಯ ಭಾನುಗಳು. ಇವರೋ, ಅಫೀಸಿನಲ್ಲಿ  ಕೆಲಸದೊತ್ತಡ ಭಾರೀ ಜಾಸ್ತಿ  ಅಂತ ಬೇರೆ ಹೇಳ್ತಿರ್ತಾರೆ.  ಪರಿಸ್ಥಿತಿ  ಇಂತಿಪ್ಪರೆ, ಒಂದು ಆನೆಹಿಂಡಿಗೆ ಸಾಲುವಷ್ಟು  ಉಪ್ಪು ಸಕ್ಕರೆಯನ್ನು ಇವರು ಸೇವಿಸುವುದನ್ನು ನಾನು ನೋಡಿ ಸುಮ್ಮನಿರಲಾದೀತೇ ? 'ಉಪ್ಪು ಸ್ವಲ್ಪ ಕಡಿಮೆ ಮಾಡಿ' ಅಂತ ಹೇಳಿದ್ರೇ ರೇಗಾಡೋದನ್ನ ನೋಡಿದ್ರೆ  ಇವರಿಗೆ ಬಿ.ಪಿ. ಇರೋದಂತೂ  ಖಚಿತ !  ನಾನೇನು ಮೃಷ್ಟಾನ್ನ  ಮಾಡಿಕೊಂಡು  ತಿಂದು, ಇವರನ್ನ ಉಪವಾಸ ಕೆಡವ್ತಿದ್ದೀನಾ? ನನ್ನ ಜಿಹ್ವಾಕಾಂಕ್ಷೆಗಳಿಗೆ ಕಡಿವಾಣ ಹಾಕಿ, ನನ್ನ ವಯಸ್ಸು ನಲವತ್ತಕ್ಕೆ ಬಹಳ  ಕಡಿಮೆಯಿದ್ರೂ,  ಇವ್ರಿಗೆ  ಮಾಡಿದ ಅಡಿಗೇನೇ ಊಟ ಮಾಡ್ತಿಲ್ವೇ ?! -  ಮಾಡಿದ್ದುಣ್ಣೋ ಮಹರಾಯ ಅಂತ !  ಆರೋಗ್ಯವಾಗಿ  ಬಹುಕಾಲ  ಬದುಕಲಿ ಅಂತ ಯೋಗ, ವ್ಯಾಯಾಮ  ಮಾಡಿ ಅಂತ  ಹೇಳಿದ್ರೂ ತಪ್ಪಾ? ಕೆಟ್ಟದಾಗಿ  ಹೊಟ್ಟೆ ಬಿಟ್ಕೊಂಡ ನಮ್ಮವರೊಂದಿಗೆ ನಾನು ವಾಕಿಂಗ್  ಹೋಗ್ತಿದ್ರೆ ಜನ ನನಗೆ `ಯಾವಾಗ ಬಂದ್ರು ನಿಮ್ಮ ತಂದೆ' ಅಂತ ಕೇಳಿದಾಗ  ಅವರಿಗೆ ತಾನೇ ಅವಮಾನ ಆಗೋದು ! ಈಗ ಹೇಳ್ರೀ, ನಂದೇನಾದ್ರೂ ತಪ್ಪಿದೆಯಾ ಇದರಲ್ಲಿ. ಹೀಗೇ ಮಾತಿಗೆ  ಕೇಳ್ತೀನಿ, ಮೇಡಂ, ನಿಮ್ಮನೆಯವರೂ ಹೀಗೇನಾ?
                                                                       * * * * * *
ನೋಡಿ,  ಗಂಡ ಹೆಂಡಿರ ದೃಷ್ಟಿಕೋನ  ಹೇಗೆ ಭಿನ್ನ ಭಿನ್ನ ಅಂತ ! ಅದಕ್ಕೇರೀ ಅವರನ್ನ ಗಂಡ-ಹೆಂಡತಿ ಅನ್ನೋದು !     ಈ ಮೇಲಿನ ಐದು ದೃಶ್ಯಗಳಲ್ಲಿ ಕನಿಷ್ಠ‌ ಒಂದಾದರೂ ನಿಮ್ಮಲ್ಲಿ  ಆಗಿರಬಹುದು.  ಒಂದೂ ಆಗಿಲ್ಲವೆಂದರೆ, ನಿಮ್ಮ ದಾಂಪತ್ಯ  `ಆದರ್ಶ ದಾಂಪತ್ಯ (!)' ಕ್ಕೆ ಮೀರಿದ್ದು.  ಇದು ನಾನು  ಹೇಳಿದ್ದಲ್ಲ - `ಅಖಿಲ  ಭಾರತ ಆದರ್ಶ ದಂಪತಿಗಳ ಸಮಾನ ದುಃಖಿಗಳ ಕೂಟ' ದ  ಅಧ್ಯಕ್ಷ / ಅಧ್ಯಕ್ಷಿಣಿ ನುಡಿದದ್ದು !

                                                                         * * * *
 

Comments

Submitted by kavinagaraj Mon, 08/29/2016 - 07:15

ನೀವು ಹೇಳಿದ 5 ಅಲ್ಲದೆ ಇನ್ನೂ ಹಲವಿವೆ. ಅವೂ ಇದ್ದಿದ್ದರೆ ಒಂದನ್ನು ಆರಿಸಿಕೊಳ್ಳಬಹುದಿತ್ತು! :)

Submitted by santhosha shastry Mon, 08/29/2016 - 18:30

In reply to by kavinagaraj

ಕವಿವರ್ಯರಲ್ಲಿ ಧನ್ಯವಾದಗಳು. ಈ ಐದಕ್ಕೇ ನನ್ನ ಅರ್ಧಾಂಗಿ ಭೂಮ್ಯಾಕಾಶ ಒಂದು ಮಾಡಿದಾಳೆ. ಇನ್ನಷ್ಟು ಬರೆದಿದ್ರೆ ನನ್ನ ಗತಿ.......