ದೃಷ್ಟಿ ಬದಲಾದರೆ ದೃಶ್ಯವೂ ಬದಲು !

ದೃಷ್ಟಿ ಬದಲಾದರೆ ದೃಶ್ಯವೂ ಬದಲು !

ಬದುಕಿನಲ್ಲಿ ಯಾವಾಗಲೂ ಸಕಾರಾತ್ಮಕ ದೃಷ್ಟಿ ಮುಖ್ಯ. ತಾವರೆ ಅರಳುವುದು ಕೆಸರು ತುಂಬಿದ ಕೆರೆಯಲ್ಲಿಯೇ ಹೊರತು ಸ್ವಚ್ಛವಾದ ಕೊಳದಲ್ಲಿ ಅಲ್ಲ. ನಾವು ಗಮನಿಸಿಸಬೇಕಾದದ್ದು ತಾವರೆಯನ್ನೇ ಹೊರತು, ಅದು ಹುಟ್ಟಿದ ಜಾಗವಲ್ಲ. ಏಕೆಂದರೆ ಪ್ರತಿಭೆಗೆ ಶ್ರೀಮಂತ, ಬಡವ ಎಂಬ ಭೇಧಭಾವವಿಲ್ಲ. ಅದು ಯಾರದ್ದೂ ಸ್ವತ್ತಲ್ಲ. ನಾವು ಹೇಗೆ ಈ ಪ್ರಪಂಚವನ್ನು ನೋಡುತ್ತೇವೆಯೋ ಹಾಗೆಯೇ ಬದುಕುತ್ತೇವೆ. ನಮ್ಮ ದೃಷ್ಟಿಕೋನಗಳು ಸಂಕುಚಿತವಾಗಿದ್ದು, ಯಾವಾಗಲೂ ನಕಾರಾತ್ಮಕ ಯೋಚನೆಗಳಿಂದ ಕೂಡಿದ್ದರೆ ಬದುಕಿನಲ್ಲಿ ಸಫಲತೆ ನಮ್ಮ ಬಳಿಬರುವುದಿಲ್ಲ. ನಮ್ಮ ಯೋಚನೆಗಳು ಸಕಾರಾತ್ಮಕವಾಗಿರಬೇಕು. ಆ ಮೂಲಕ ನಾವು ಯಾವುದೇ ಅಸಾಧ್ಯವೆನಿಸುವ ಕೆಲಸವನ್ನೂ ಮಾಡಿಮುಗಿಸಬಹುದು. ಈ ಕುರಿತಾದ ಒಂದು ಅದ್ಭುತವಾದ ಕಥೆಯೊಂದನ್ನು ಸತ್ಸಂಗದಲ್ಲಿ ಹೇಳಿದ್ದಾರೆ ಯಾರೋ ಮಹಾತ್ಮರು. ಅವರ ಹಿತನುಡಿಗಳಿಗೆ ಜೈ ಹೇಳೋಣ ಮತ್ತು ಯಾವಾಗಲೂ ಸಕಾರಾತ್ಮಕ ದೃಷ್ಟಿಕೋನದಲ್ಲಿ ಆಲೋಚಿಸೋಣ.

ಶಾಲಾ ಶಿಕ್ಷಕರೊಬ್ಬರಿಗೆ ಪ್ರತಿದಿನವೂ ದಿನಚರಿ ಬರೆಯುವ ಅಭ್ಯಾಸವಿತ್ತು. ಅದು ಹೊಸವರ್ಷದ ಮೊದಲ ದಿನ. ಹಿಂದಿನ ದಿನವಷ್ಟೇ ಅವರು ವೃತ್ತಿಯಿಂದ ನಿವೃತ್ತಿ ಹೊಂದಿದ್ದರು. ಹೀಗಾಗಿ, ಏನನ್ನೋ ಕಳಕೊಂಡವರಂತೆ ಮನೆಯ ಕೋಣೆಯಲ್ಲಿ ಬೇಸರದಲ್ಲಿ ಕುಳಿತಿದ್ದರು. ಹಾಗೆಯೇ ಒಂದು ಹಾಳೆಯ ಮೇಲೆ ಹೀಗೆ ಬರೆಯಲಾರಂಭಿಸಿದರು: ‘ಕಳೆದ ವರ್ಷ ನನ್ನ ಪಾಲಿಗೆ ಕೆಟ್ಟವರ್ಷವೆಂದೇ ಹೇಳಬೇಕು. ಕಾರಣ, ಈ ಅವಧಿಯಲ್ಲಿ ನನಗೆ ಶಸ್ತ್ರಚಿಕಿತ್ಸೆಯಾಗಿ ಜಠರದಲ್ಲಿದ್ದ ಹುಣ್ಣನ್ನು ತೆಗೆದರು. ಈ ಶಸ್ತ್ರಚಿಕಿತ್ಸೆಯಿಂದಾಗಿ ನಾನು ಬಹಳ ದಿನ ಹಾಸಿಗೆಯಲ್ಲೇ ಇರುವಂತಾಯಿತು. ೯೫ ವರ್ಷ ವಯಸ್ಸಿನ ನನ್ನ ತಂದೆಯವರು ನಿಧನರಾಗಿದ್ದೂ ಕಳೆದ ವರ್ಷವೇ. ಅಪ್ಪ ನಿಧನರಾದ ಕೆಲವೇ ದಿನಗಳಲ್ಲಿ ನಮ್ಮಮ್ಮ ಕೂಡ ತೀರಿಕೊಂಡರು. ಈ ಮಧ್ಯೆ ಬೈಕ್ ಸವಾರಿ ಮಾಡುತ್ತಿದ್ದ ನನ್ನ ಮಗನಿಗೆ ಅಪಘಾತವಾಗಿ, ಆತ ವಾರ್ಷಿಕ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವಂತಾಯಿತು. ಸಾಲದ್ದಕ್ಕೆ ನನಗೆ ಕೆಲಸದಿಂದ ನಿವೃತ್ತಿಯೂ ಆಯಿತು. ಒಟ್ಟಿನಲ್ಲಿ, ಕಳೆದ ವರ್ಷವಿಡೀ ನನ್ನ ಪಾಲಿಗೆ ಕೆಟ್ಟದಾಗಿತ್ತು…’. ಪತಿಯು ಹೀಗೆ ಕೋಣೆಯಲ್ಲಿ ಒಬ್ಬರೇ ಕಣ್ಣುಮುಚ್ಚಿ ಕುಳಿತು ಚಿಂತಾಕ್ರಾಂತರಾಗಿ ಮನದಲ್ಲೇ ರೋದಿಸುತ್ತಿರುವುದು ಪತ್ನಿಗೆ ಗೋಚರಿಸಿತು. ‘ಇವರೇನು ಮಾಡುತ್ತಿರಬಹುದು?’ ಎಂದುಕೊಂಡು ಸದ್ದಿಲ್ಲದೆ ಪತಿಯ ಕೋಣೆ ಪ್ರವೇಶಿಸಿದ ಆಕೆ, ಹಾಳೆಯ ಮೇಲೆ ಬರೆದಿಟ್ಟಿದ್ದನ್ನು ಸದ್ದಿಲ್ಲದೆ ಓದಿಕೊಂಡರು. ಜತೆಗೆ ಇನ್ನೊಂದು ಹಾಳೆಯಲ್ಲಿ ‘ಒಂದಿಷ್ಟು’ ಬರೆದು ಪತಿಯ ಮುಂದಿಟ್ಟು ಸದ್ದಿಲ್ಲದೆ ಅಡುಗೆ ಕೋಣೆಗೆ ತೆರಳಿದರು.

ಹಾಳೆಯಲ್ಲಿ ಪತ್ನಿ ಬರೆದಿದ್ದು ಹೀಗಿತ್ತು: ‘ಕಳೆದ ವರ್ಷ ಕೊನೆಗೂ ನನ್ನ ಜಠರದ ಹುಣ್ಣಿಗೆ ಶಸ್ತ್ರಚಿಕಿತ್ಸೆ ಆಯಿತು. ಆ ಹುಣ್ಣು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಸಂಭವ ಈ ಮೂಲಕ ತಪ್ಪಿತು ಹಾಗೂ ವರ್ಷಗಳಿಂದ ಅನುಭವಿಸುತ್ತಿದ್ದ ಬೇನೆಗೆ ಅಂತ್ಯ ಹಾಡಿದಂತಾಯಿತು. ಸುದೀರ್ಘ ಬದುಕು ಸಾಗಿಸಿದ, ೯೫ ವರ್ಷ ವಯಸ್ಸಿನ ತಮ್ಮ ತಂದೆ ದೈವಾಧೀನರಾದರು; ಹೆಚ್ಚೇನೂ ನರಳದೆ ಮರೆಯಾದ ಅವರದು ಸುಖಮರಣವೆಂದೇ ಹೇಳಬೇಕು. ಇದಾದ ಕೆಲವೇ ದಿನಗಳಲ್ಲಿ ನಮ್ಮಮ್ಮ ಕೂಡ ತೀರಿಕೊಂಡರು; ಗಂಡನಿಲ್ಲದೆ ಒಂಟಿಯಾಗಿ ಬಾಳುವ ಪ್ರಮೇಯವನ್ನು ಅಮ್ಮ ತಪ್ಪಿಸಿಕೊಂಡರು. ಬೈಕ್ ಸವಾರಿಗೆ ತೆರಳಿದ್ದ ಮಗನಿಗೆ ಅಪಘಾತವೇನೋ ಆಯಿತು, ಆದರೆ ಅವನು ಬದುಕುಳಿದುಕೊಂಡನಲ್ಲ, ಅಂಗವೈಕಲ್ಯ ಬಾಧಿಸಲಿಲ್ಲವಲ್ಲ ಎಂಬುದು ಅದೆಂಥ ಸಮಾಧಾನ! ನನಗೆ ವೃತ್ತಿಯಿಂದ ನಿವೃತ್ತಿಯಾಯಿತು, ಇದರಿಂದಾಗಿ ಇನ್ನೊಬ್ಬರಿಗೆ ಆ ಸ್ಥಾನವನ್ನು ತುಂಬುವ ಅವಕಾಶ ಸಿಕ್ಕಂತಾಯಿತು. ಅಂತೆಯೇ ನಾನು ನಿವೃತ್ತನಾಗಿದ್ದು ವೃತ್ತಿಯಿಂದಲೇ ಹೊರತು, ಪ್ರವೃತ್ತಿಗಳಿಂದ ಅಲ್ಲವಲ್ಲ! ಇನ್ನು ನನ್ನ ಅಭಿರುಚಿಗೊಪ್ಪುವ ಪ್ರವೃತ್ತಿಗಳನ್ನು ಸಂತೋಷದಿಂದ ಪ್ರಾರಂಭಿಸಬಹುದು! ಒಟ್ಟಾರೆ ಹೇಳುವುದಾದರೆ, ಕಳೆದ ವರ್ಷದಲ್ಲಿ ದೇವರ ಅಪಾರ ಕರುಣೆ ನನ್ನ ಮೇಲಿತ್ತು. ವರ್ಷ ಸರಿದಿದ್ದೇ ಗೊತ್ತಾಗಲಿಲ್ಲ ಎನ್ನುವಷ್ಟರ ಮಟ್ಟಿಗೆ ಚೆನ್ನಾಗೇ ಕಳೆಯಿತು ಎನ್ನಬಹುದು',

ಈ ಒಕ್ಕಣೆಯನ್ನು ಓದಿದ ಪತಿ, ಮಡದಿಯಿದ್ದಲ್ಲಿಗೆ ತೆರಳಿ ‘ನಿನ್ನ ಗ್ರಹಿಕೆ ನಿಜ’ ಎನ್ನುವ ಧಾಟಿಯಲ್ಲಿ ಮೌನವಾಗಿ ತಲೆಯಾಡಿಸಿ ಮುಗುಳ್ನಗೆ ಬೀರಿದರು. ತಾತ್ಪರ್ಯ ಇಷ್ಟೆ- ಭರವಸೆಯಿಂದ ಬದುಕನ್ನು ಮುನ್ನಡೆಸುವುದಕ್ಕೆ ಸಕಾರಾತ್ಮಕ ಧೋರಣೆಯೇ ಮೂಲಮಂತ್ರ. ಯಾವುದೇ ಸಮಸ್ಯೆ-ಸಂಕಟಗಳನ್ನು ನಾವು ನೋಡುವ ದೃಷ್ಟಿ ಬದಲಾದಂತೆ, ದೃಶ್ಯವೂ ಬದಲಾಗುತ್ತಿರುತ್ತದೆ. ಸಮಾಧಾನದ ಕಿರಣವೂ ಹೊರಹೊಮ್ಮುತ್ತಿರುತ್ತದೆ.

(ಸತ್ಸಂಗ ಸಂಗ್ರಹ)