ದೇಗುಲದ ಸಂಪತ್ತು

ದೇಗುಲದ ಸಂಪತ್ತು

Comments

ಬರಹ

ತಿರುವನಂತಪುರದ ಅನಂತಪದ್ಮನಾಭಸ್ವಾಮಿ ದೇವಾಲಯದ ಸಂಪತ್ತು  ನಮ್ಮ ದೇಶದ ಹೆಮ್ಮೆಯಾಗಿದೆ.

ಅಷ್ಟು ಸಂಪತ್ತು ದೇವರಿಗೆ ಯಾಕೆ,ಬಡವರಿಗೆ ಹಂಚಬಹುದು ಎಂದು ಹಲವರ ಅಭಿಪ್ರಾಯ.ಅದನ್ನು ರಾಜರು ಹೇಗೆ ಸಂಪಾದಿಸಿದರು,ಕೊಳ್ಳೆ ಹೊಡೆದರೋ ,ಕಾಣಿಕೆ ಬಂತೋ,ವ್ಯಾಪಾರ ವಹಿವಾಟಿನಿಂದ ಬಂತೋ -ಎಂಬೆಲ್ಲ ವಿಷಯಗಳಲ್ಲಿ  ಊಹಾಪೋಹಗಳಿವೆ.

ಕೆಲವರು ಇದು ಮೀಸೆ  ಬಿಟ್ಟ  ಜನರ ಮೇಲೆ ,ರವಕೆ ತೊಟ್ಟ ಹೆಂಗಸರ ಮೇಲೆ ಹಿಂದಿನ ರಾಜರು ಆಗಿನ ಸಂಪ್ರದಾಯದ ಪ್ರಕಾರ ಹಾಕಿದ ತೆರಿಗೆಯಿಂದ ಸಂಗ್ರಹಿಸಿದ್ದು [ಕೇರಳದಲ್ಲಿ ಹಿಂದುಳಿದವರು ರವಕೆ ತೊಡುವುದಕ್ಕೆ ನಿಷೇಧ ಇತ್ತು -ಅದೇ ರೀತಿ ಮುಂದುವರಿದ ನಂಬೂದಿರಿ ಸ್ತ್ರೀಯರಿಗೂ ಈ ನಿಷೇಧ ಇತ್ತು ಎಂಬುದು ಸತ್ಯ]-ಎಂದು ಬರೆದಿದ್ದಾರೆ.ಇದು ಹಾಸ್ಯಾಸ್ಪದ.ಒಂದು ವೇಳೆ ಹೀಗೆ ಸಂಗ್ರಹಿಸಿದ್ದಾರೆ ಎಂದಾದರೆ ಆಗ ಎಷ್ಟು ತೆರಿಗೆ ಇತ್ತು,ದರ ಎಷ್ಟು, ಆಗ ಜನಸಂಖ್ಯೆ ಎಷ್ಟಿತ್ತು ,ಈ ಬಾಬಿನಿಂದ ಇಷ್ಟು ಸಂಪತ್ತು ಸಿಗುವಷ್ಟು ದುಡ್ಡು ಬಂದಿರಬಹುದೇ -ಎಂಬ ವಿಚಾರದಲ್ಲಿ ಮಾಹಿತಿ  ಯಾರಲ್ಲೂ ಇಲ್ಲ.

ತಿರುವಾಮ್ಕೂರು ರಾಜರು ದೊಡ್ಡ ದಿಗ್ವಿಜಯ ಮಾಡಿದವರಲ್ಲ.ದಚ್ಚರನ್ನು ಮಣಿಸಿದ್ದರು,ಆದರೆ ಬ್ರಿಟಿಷರೊಡನೆ ಒಪ್ಪಂದ ಮಾಡಿ,ತಮ್ಮ ಅರಸೊತ್ತಿಗೆಯನ್ನು ಕಾಪಾಡಿಕೊಂಡಿದ್ದರು.ಹಾಗಾಗಿ ,ಇದು ಕದ್ದದ್ದಲ್ಲ ಎನ್ನಬಹುದು.

ಅವರು ದೈವಭಕ್ತರೂ ಸಂಪ್ರದಾಯ ಪಾಲಕರೂ ಆಗಿದ್ದರು. ತಮಗೆ ಸಿಕ್ಕಿದ ಐಶ್ವರ್ಯವನ್ನು ದೇವರಿಗೆ ಅರ್ಪಿಸಿರಬಹುದು .ಇದು ಹೀಗೆ ಎಂದು ಖಚಿತವಾಗಿ ಹೇಳುವಂತಿಲ್ಲ.ಒಂದಂತೂ ಸ್ಪಷ್ಟ-ಇದು ಒಬ್ಬ ರಾಜನದ್ದಲ್ಲ. ಪರಂಪರೆಯ ಹಲವಾರು ಅರಸರು ಕಾಣಿಕೆಯಾಗಿ ಕೊಟ್ಟ,ನ್ಯಾಸವಾಗಿ ಇಡಲಾದ ಸಂಪತ್ತು.

ತಿರುವಾಂಕೂರಿನ ರಾಜರು ಇಡೀ ರಾಜ್ಯವನ್ನೇ ಅನಂತಪದ್ಮನಾಭ ದೇವರಿಗೆ ತೃಪ್ಪಡಿ ದಾನಂ ಎಂಬ ದಾಖಲೆಯ ಮೂಲಕ ಸಮರ್ಪಿಸಿದವರು.ಅವರನ್ನು ಒಂದು ವಿಷಯದಲ್ಲಿ ಮೆಚ್ಚಬೇಕು-ದೇವರ ಸಂಪತ್ತನ್ನು ರಹಸ್ಯವಾಗಿ ರಕ್ಷಿಸಿ ಈ ಪೀಳಿಗೆಯ ತನಕ ಇಟ್ಟಿದ್ದಾರೆ.ಇಲ್ಲದಿದ್ದರೆ ಟಿಪ್ಪುವಿನ ಸಂಪತ್ತಿನಂತೆ ವಿದೇಶೀಯರ ಪಾಲಾಗುತ್ತಿತ್ತು.ದಿಲ್ಲಿಯ ಮಯೂರ ಸಿಂಹಾಸನದ  ಹಾಗೆ ಪರ್ಶಿಯಾಕ್ಕೋ ಇನ್ನೊಂದೆಡೆಗೋ ಹೋಗುತ್ತಿತ್ತು.ಕೊಹಿನೂರ್ ವಜ್ರದ ಹಾಗೆ ಬ್ರಿಟಿಶ್ ರಾಣಿಯ ಕಿರೀಟ ಅಲಂಕರಿಸುತ್ತಿತ್ತು.

ಸರಕಾರ ಈ ಸಂಪತ್ತಿನ ರಕ್ಷಣೆ ಮಾಡಬೇಕು.ಇದು ನಮ್ಮ ಪರಂಪರೆಯ ನಿಧಿ.ಸಾಂಸ್ಕೃತಿಕ ಆಸ್ತಿ.ಇದು ದೇವರದ್ದೆ ಆಗಿ ಉಳಿಯಬೇಕು.ಆಸಕ್ತರಿಗೆ ಇದನ್ನು ನೋಡುವ ಅವಕಾಶ ಸಿಗಬೇಕು.ದೇವಳದ ಬಳಿ ಇದಕ್ಕೆ ಸುರಕ್ಷಿತ ಕಟ್ಟಡ ನಿರ್ಮಿಸಿ ಪ್ರದರ್ಶನ ಮಾಡಬೇಕು.

ಇದು ಇತ್ತು ಎಂದು ಈ ವರೆಗೆ ಯಾರಿಗೂ ಗೊತ್ತಿರಲಿಲ್ಲವಂತೆ.ಹಾಗಿರುವಾಗ ಈಗ ನಾವು ಯಾಕೆ ಅರಸರ ಕುರಿತು ಲಘುವಾಗಿ ಮಾತನಾಡಬೇಕು? ಈಗ ಆ ಕಾಲದವರಿಲ್ಲ.ಈಗಿನವರಿಗೆ ರಾಜ್ಯಾಧಿಕಾರವಿಲ್ಲ.

ಹೌದು,ದುಡ್ಡಿದ್ದವರೆಲ್ಲಾ ಬಡವರಿಗೆ ಕೊಟ್ಟಿದ್ದರೆ ಚೆನ್ನಾಗಿತ್ತು -ಎಂದು ಎನಿಸುವುದು. ಆದರೆ ಈ ರೀತಿ ವಿಚಾರ ವ್ಯಕ್ತಪಡಿಸುವ ವಿಚಾರಿಗಳು ಬಡವರಿಗೆ ಏನಾದರೂ ಮಾಡಿದ್ದಾರೆಯೇ?ಅವರು ಆತ್ಮಾವಲೋಕನ ಮಾಡಿಕೊಳ್ಳಲಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet