ದೇರಾಜೆ ರಾಮಾಯಣದ ಮರುಹುಟ್ಟು
‘ದೇರಾಜೆ ರಾಮಾಯಣ’ದ ಮೂರನೇ ಮರುಮುದ್ರಣ! ಸಾಹಿತ್ಯ, ಯಕ್ಷಗಾನ ವಲಯದಲ್ಲಿ ನಿರೀಕ್ಷೆಯ, ಕುತೂಹಲ ಮೂಡಿಸಿದ ಸುದ್ದಿ. ಎಂಭತ್ತು ವರುಷಗಳ ಮೊದಲು ಪ್ರಕಟವಾದ ಕೃತಿಯು ವಾಸ್ತವಿಕ ಮತಿಗೆ ಕನ್ನಡಿಯಾಗಿದೆ.
ದೇರಾಜೆ ಸೀತಾರಾಮಯ್ಯವರು ತಾಳಮದ್ದಳೆ ಅರ್ಥಧಾರಿ. ತನ್ನ ಹದಿನೇಳನೇ ವಯಸ್ಸಿನಿಂದ ಮಾತಿಗೆ ಶ್ರೀಕಾರ. ಐದು ದಶಕಗಳಿಗೂ ಮಿಕ್ಕಿ ರಂಗದಲ್ಲಿ ಮಾತನಾಡಿದ್ದಾರೆ. ಎಲ್ಲಾ ಪಾತ್ರಗಳಿಗೂ ‘ದೇರಾಜೆತನ’ದ ಛಾಪನ್ನು ಒತ್ತಿದ್ದಾರೆ. ಪಾತ್ರದೊಳಗೆ ಪರಾಕಾಯ ಪ್ರವೇಶ. ಪಾತ್ರದ ಇತಿಮಿತಿಯೊಳಗೆ ವಿಚಾರ ಸಂಚಾರ. ಉತ್ತರಕುಮಾರ, ಸುಗ್ರೀವ, ಬಲರಾಮ, ರುಕ್ಮ.. ಪಾತ್ರಗಳಿಗೆ ನಗುವಿನ ಸ್ಪರ್ಶ. ಆ ನಗು ದೇರಾಜೆಯವರದ್ದೇ! ಭರತ, ಕರ್ಣ, ಮಯೂರಧ್ವಜಾದಿಗಳಲ್ಲಿ ಕಣ್ಣೀರು!
ಚಿಕ್ಕ ಮಾತುಗಳ ಚತುರ ಸಂಭಾಷಣೆ. ಕಥೆಯ ಓಟವನ್ನು, ವಿಮರ್ಶೆಯನ್ನು ಸರಳ ಮಾತುಗಳಲ್ಲಿ ತುಂಬುವ ಸೂಕ್ಷ್ಮತೆ. ಕಾವ್ಯಮಯ ಶೈಲಿ. ಪಾತ್ರಗಳ ಗುಣಧರ್ಮಗಳ ಔಚಿತ್ಯಪೂರ್ಣ ವಿವೇಚನೆ. ರಸಪರಿಪೋಷಣೆ ಮತ್ತು ಕವಿ ಹೃದಯವನ್ನರಿತ ಸೊಗಸು, ಚುಟುಕು-ಚುರುಕಿನ ವಾಕ್ ಚಾತುರ್ಯ. ಮಾತಿನ ಮಾಲೆಯಲ್ಲಿ ಪ್ರತಿಕಾವ್ಯದ ಸೃಷ್ಟಿ – ದೇರಾಜೆಯವರ ಅರ್ಥಗಾರಿಕೆಯ ವೈಶಿಷ್ಟ್ಯ.
ರಸಋಷಿ ದೇರಾಜೆ ಸೀತಾರಾಮಯ್ಯನವರ ‘ಶ್ರೀರಾಮ ಚರಿತಾಮೃತಂ’ ಕೃತಿಯು ಯಕ್ಷಗಾನದ ವಲಯದಲ್ಲಿ ‘ದೇರಾಜೆ ರಾಮಾಯಣ’; ‘ಶ್ರೀ ಮನ್ಮಹಾಭಾರತ ಕಥಾಮೃತಂ’ ಕೃತಿಯು ‘ದೇರಾಜೆ ಭಾರತ’ ಎಂದು ಪರಿಚಿತ. ಯಕ್ಷಗಾನ ಕಲಾವಿದರಲ್ಲಿರಲೇಬೇಕಾದ, ಓದಲೇ ಬೇಕಾದ ಕೃತಿಗಳು. ವಿದ್ವಜ್ಜನರು ಸ್ವೀಕರಿಸಿದ ಗ್ರಂಥಗಳಿವು. ನಾಡಿನ ಗಣ್ಯಾತಿಗಣ್ಯರು ಒಪ್ಪಿದ ರಚನೆಗಳು.
“ಶ್ರೀ ರಾಮಚಂದ್ರನ ದಿವ್ಯ ಚರಿತೆಯ ಘಟನೆಗಳನ್ನು ವಾಲ್ಮೀಕಿಯ ಹಿಂದೆ ನಿಂತುಕೊಂಡು ಕಣ್ಣಾರೆ ನೋಡಿರುವಂತೆ ನನಗೆ ಭಾಸವಾಗುತ್ತದೆ. ವಾಸ್ತವಿಕವಾಗಿ ಮನಸ್ಸನ್ನು ಸೆರೆ ಹಿಡಿಯುವಂತ ನಿರೂಪಣೆಗಳು.” ಇದು ಹಿರಿಯ ಸಾಹಿತಿ ಡಿ.ವಿ.ಜಿ.ಯವರು ದೇರಾಜೆಯವರಿಗೆ ಬರೆದ ಪತ್ರದಲ್ಲಿನ ಸಾಲುಗಳು.
ವಿದ್ವಾನ್ ರಂಗನಾಥ ಶರ್ಮ ಉಲ್ಲೇಖಿಸುತ್ತಾರೆ. “ಉಪಮಾ, ಉತ್ಪ್ರೇಕ್ಷೆ, ರೂಪಕ ಮೊದಲಾದ ಅಲಂಕಾರಗಳು ಮನೋಹರವಾಗಿದೆ. ದೇರಾಜೆಯವರು ಸಾಕಷ್ಟು ಕನ್ನಡ ಶಬ್ದಗಳನ್ನೇ ಬಳಸಿ, ರಸಭಾವೋಚಿತವಾದ ವಾಕ್ಯಗಳನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದರೆ. ಈ ಬಗೆಯ ವಾಕ್ಯರಚನೆ ಅನ್ಯತ್ರ ದುರ್ಲಭ. ಈ ಶೈಲಿಯನ್ನು ನೋಡಿ ನಾನು ಮುಗ್ಧನಾಗಿದ್ದೇನೆ.”
ಪ್ರಾಧ್ಯಾಪಕ ವಿಜಯಕುಮಾರ್ ಮೊಳೆಯಾರ್ ಅವರ ‘ದೇರಾಜೆ ಸೀತಾರಾಮಯ್ಯ ಜೀವನ-ಸಾಧನೆ’ ಕೃತಿಯು ದೇರಾಜೆಯವರ ಬದುಕಿನ, ರಂಗದ ಅನೇಕ ವಿಷಯಗಳನ್ನು ನಿರೂಪಿಸುತ್ತದೆ : ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಶ್ರೀ ರಾಮ ದೇವಾಲಯದ ನಿರ್ಮಾಣಕ್ಕೆ (1934) ದೇರಾಜೆ ಕಾರಣರು. ಧರ್ಮೋದ್ಧಾರದ ಸಂಕಲ್ಪ. ಸಾಮಾಜಿಕ, ಸಾಂಸ್ಕøತಿಕ ಕೇಂದ್ರವಾಗಬೇಕೆನ್ನುವ ದೂರದೃಷ್ಟಿ. ಹಿರಿಯರ ಆಶಯದ ಸಾಕಾರ. ಆರ್ಥಿಕ ಸಂಕಷ್ಟದ ಕಾಲಘಟ್ಟವದು. ದೇವಳದ ನಿತ್ಯ ನಿರ್ವಹಣೆಗೆ ಶಾಶ್ವತ ವ್ಯವಸ್ಥೆಯೊಂದು ಬೇಕಾಗಿತ್ತು.
‘ಶ್ರೀರಾಮಚರಿತಾಮೃತಂ’ ಕೃತಿಯ ರಚನೆ. ಆಪ್ತ ಸ್ನೇಹಿತರ ಹೆಗಲೆಣೆಯೊಂದಿಗೆ ಪ್ರಕಟಣೆ. ಅದರ ಮಾರಾಟದ ಮೊತ್ತದಿಂದ ದೇವಳಕ್ಕೆ ಆಸ್ತಿ ಖರೀದಿ. ಶ್ರೀರಾಮ ದೇವರಿಗೆ ರಾಮಾಯಣದ ಅನ್ನವೇ ನೈವೇದ್ಯ. ಕೃತಿಕಾರನಿಗೆ ತಾತ್ವಿಕ ಸಂತೃಪ್ತಿ. ಕೃತಿಯಲ್ಲಿ ಚಿಕ್ಕಪುಟ್ಟ ಬದಲಾವಣೆಯಿದ್ದರೂ ವಾಲ್ಮೀಕಿ ರಾಮಾಯಣದ ಚೌಕಟ್ಟಿನೊಳಗಿದೆ. ಬಾಲಕಾಂಡದಿಂದ ಉತ್ತರಕಾಂಡವರೆಗಿದನ ಸಮಗ್ರ ಕಥೆ. ಅರ್ಥಗಾರಿಕೆಯ ಸೊಗಸಿನ ಭಾಷಾಶೈಲಿ.
ದೇರಾಜೆಯವರು ಸ್ವತಂತ್ರ ಪ್ರತಿಭೆಯ ಕವಿ ಹೃದಯಿ. ರಾಮಾಯಣ ಕೃತಿಯಲ್ಲಿ ಪಾತ್ರಗಳ ಮೂಲಕ ತನ್ನ ಚಿಂತನೆಯನ್ನೂ ಬಿಂಬಿಸಿದ್ದಾರೆ. ಪ್ರಸಿದ್ಧ ಕವಿ, ವಿಮರ್ಶಕ ಕೆ.ವಿ.ತಿರುಮಲೇಶ್ ಒಂದೆಡೆ ಹೇಳುತ್ತಾರೆ, “ಇದೆಲ್ಲವೂ ನಮಗೆ ಗೊತ್ತಿರುವ ಕಥೆಯೇ. ದೇರಾಜೆಯವರು ತಮ್ಮ ಕಥಾ ನಿರೂಪಣೆಯಲ್ಲಿ ಯಾವ ಪ್ರಶ್ನೆಗೂ ಎಡೆಯಿಲ್ಲದಂತೆ ಓದುಗ ಸಹಾಯಕವಾದ ಕಾಳಜಿ ವಹಿಸುತ್ತಾರೆ. ಈ ಥರದ ನಿರೂಪಣೆ ಇವರಿಗೆ ಸಾಧ್ಯವಾದುದು ಅಗಾಧವಾದ ಪಾಂಡಿತ್ಯ ಮಾತ್ರದಿಂದಲೇ ಅಲ್ಲ, ಅವರು ದಕ್ಷಿಣ ಕನ್ನಡದ ಯಕ್ಷಗಾನ-ತಾಳಮದ್ದಳೆಯ ಕಲಾವಿದರೂ ಆಗಿದ್ದರು ಎಂಬ ಕಾರಣಕ್ಕೆ.”
ದೇರಾಜೆಯವರ ಚಿರಂಜೀವಿ ಮೂರ್ತಿ ದೇರಾಜೆಯವರ ಪರಿಕಲ್ಪನೆಯಲ್ಲಿ ‘ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ ಸಮಿತಿ’ ರೂಪುಗೊಂಡಿದ್ದು ನಾಡಿನ ಮೂವತ್ತು ಪ್ರದೇಶಗಳಲ್ಲಿ ಕಾರ್ಯಕ್ರಮಗಳು ಸಂಪನ್ನವಾಗಿವೆ. ಈ ಸಂದರ್ಭದಲ್ಲಿ ಸಾಧಕರಿಗೆ ‘ದೇರಾಜೆ ಸ್ಮøತಿ ಗೌರವ’ ಪ್ರದಾನ. ಯಕ್ಷಗಾನ ಮತ್ತು ದೇರಾಜೆಯವರನ್ನು ಗೌರವಿಸುವ ತಂಡವು ಮೂರ್ತಿಯವರ ಹೆಗಲೆಣೆಯಾಗಿ ದುಡಿದಿದೆ.
ಮಾನವ ಧರ್ಮವನ್ನು ಸಾರುವ ರಸಘಟ್ಟಿ ‘ಶ್ರೀರಾಮ ಚರಿತಾಮೃತಂ’ ಇದರ ಮೂರನೇ ಮುದ್ರಣ ಪೂರ್ತಿಗೊಂಡಿದೆ. ಬೆಂಗಳೂರಿನ ಚಾಮರಾಜಪೇಟೆಯ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನವೆಂಬರ್ 12, 2015 ಜನ್ಮಶತಮಾನೋತ್ಸವ ಕಾರ್ಯಕ್ರಮ ಸರಣಿಯ ಸಮಾರೋಪದಂದು ಬಿಡುಗಡೆ. ದಿನಪೂರ್ತಿ ಕಾರ್ಯಕ್ರಮ.
“ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನವು ರಾಮಾಯಣದ ಎರಡನೇ ಪುನರ್ಮುದ್ರಣ ಮಾಡಿತ್ತು. ಕೆಲವೇ ಸಮಯದಲ್ಲಿ ಕೃತಿಗಳು ಪೂರ್ತಿ ಓದುಗರ ಕೈಸೇರಿವೆ. ಪುತ್ತೂರಿನ ಶ್ರೀ ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ ಕುಮಾರ್ ಕೊಡೆಂಕಿರಿಯವರು ಮೂರನೇ ಮುದ್ರಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ,” ಎನ್ನುವ ಮಾಹಿತಿ ನೀಡಿದರು, ಮೂರ್ತಿ ದೇರಾಜೆ.
ಶ್ರೀ ರಾಮ ಚರಿತಾಮೃತಂ, ಶ್ರೀ ಮನ್ಮಹಾಭಾರತ ಕಥಾಮೃತಂ, ಕುರುಕ್ಷೇತ್ರಕ್ಕೊಂದು ಆಯೋಗ, ರಾಮರಾಜ್ಯದ ರೂವಾರಿ, ರಾಮರಾಜ್ಯ ಪೂರ್ವರಂಗ, ಯಕ್ಷಗಾನದ ವಿವೇಚನೆ.... ಹೀಗೆ ಹಲವಾರು ಕೃತಿಗಳನ್ನು ದೇರಾಜೆ ಸೀತಾರಾಮಯ್ಯನವರು ರಚಿಸಿದ್ದಾರೆ. ಅವರ ಶತಮಾನೋತ್ಸವ ಸಂದರ್ಭದಲ್ಲಿ ರಾಮಾಯಣವು ಮುದ್ರಿತವಾಗುವುದು ಆ ಹಿರಿಯ ಚೇತನಕ್ಕೆ ಸಲ್ಲುವ ಗೌರವ. ಈ ಮಹತ್ಕಾರಕ್ಕೆ ಕೈ ಜೋಡಿಸೋಣ ಅಲ್ಲವೇ? (ಸಂಪರ್ಕ : ಪ್ರಕಾಶ್ - 9480451560)