ದೇವತೆಗಳ ವ್ಯಾಲಂಟೈನ್ಸ್ ದಿನ !
ಜನವರಿ ಒಂದು, ಹೊಸ ವರ್ಷ ಬಂತೆಂದರೆ, ಇದು ನಮ್ಮ ಹಬ್ಬವಲ್ಲ ನನಗ್ಯಾರೂ ಶುಭಾಶಯ ಹೇಳದಿರಿ ಎಂಬ ಸೊಲ್ಲು. ವ್ಯಾಲಂಟೈನ್ ಬಂತೆಂದರೆ ಇದು ಪಾಶ್ಚಾತ್ಯ, ನಮಗೆ ಬೇಡ ಎಂದು ನೈಕಿ ಶೂ ಹಾಕಿಕೊಂಡೇ ಗುಲ್ಲೋಗುಲ್ಲು. ನಮ್ಮದೇ ಹಬ್ಬ ಹೋಳಿ’ಗೂ ಇದೇ ಗತಿ. ಇದನ್ನೆಲ್ಲ ನೋಡಿದಾಗ ಅನ್ನಿಸುವುದು ಜನ ರೋಸಿ ಹೋಗಿ ’ಬೇಡ’ ಎನ್ನುತ್ತಿದ್ದಾರೆ ಅಂತ. ಯಾಕೆಂದರೆ ಇದು ಹಬ್ಬ ಅನ್ನುವುದಕ್ಕಿಂತ ಅದನ್ನು ಹಲವರು ಆಚರಿಸುವ ರೀತಿ ಇದೆಯಲ್ಲ, ಅದು ಸರಿಯಿಲ್ಲ.
ಹೊಸ ವರ್ಷ ಮೂಡಿತು ಎಂದ ಮಾತ್ರಕ್ಕೆ ಹಿಂದಿನ ದಿನವೆಲ್ಲ ಕುಡಿದು ಕುಪ್ಪಳಿಸೋದ್ಯಾಕ? ’ನಮ್ ದುಡ್ಡು, ನಮ್ ಕಾಸು ನಾವೇನು ನಿನ್ನನ್ನು ಕೇಳಿದ್ವಾ’ ಅಂದ್ರಲ್ಲಾ ಗುರೂ ಅಂತೀರ? ಸಂತೋಷ ಕುಡೀರಿ, ಕುಣೀರಿ ಯಾರು ಬೇಡ ಅಂದೋರು? ಆದರೆ ನಿಮ್ಮಿಂದ ಇನ್ನೊಬ್ಬರ ಜೀವನ, ಇನ್ನೊಬ್ಬರ ನೆಮ್ಮದಿ ಹಾಳಾಗುತ್ತಿದೆಯಲ್ಲ ಅದು ತಪ್ಪು. ಅದಕ್ಕೆ ನೀವು ಹೊಣೆಗಾರರು ಎಂದು ಅರಿತರೆ ನಮ್ಮ ಜನ್ಮ ಸಾರ್ಥಕ. ಹೋಗಲಿ ಬಿಡಿ ಈಗ ವ್ಯಾಲಂಟೈನ್ ದಿನದ ಆಚರಣೆಗೆ ಬರೋಣ !
ವ್ಯಾಲಂಟೈನ್ಸ್ ದಿನ ಅನ್ನೋದು ಇಂದು ನೆನ್ನೆಯ ಹಬ್ಬವಲ್ಲ. ವ್ಯಾಲಂಟೈನ್ಸ್ ದಿನ ಅರ್ಥಾತ್ ಸಂಗಾತಿಯ ದಿನ ಬಹಳ ಹಳತು ಮತ್ತು ಕೇವಲ ಪಾಶ್ಚಾತ್ಯವಲ್ಲ ಎಂದು ನನಗೆ ಅನ್ನಿಸಿದೆ. ಅದೇ ಹೆಸರಲ್ಲಿ ಕರೆಯದೆ ಇರಬಹುದು ಆದರೆ ವಿಚಾರ ಮಾತ್ರ ಹಳತು. ಹಾಗೆಂದೇ ಹೊರಗೆ ಹೆಜ್ಜೆ ಹಾಕಿದೆ. ವಿಷಯ ಸಂಗ್ರಹಣೆ ಮಾಡಿ ಎಲ್ಲರಿಗೂ ತಿಳಿಸೋಣ ಅಂತ. ಹೊರಗೆ ಹೋದವ ಹೋಗ್ತಾ ಹೋಗ್ತಾ ಮೇಲಿನ ಲೋಕಕ್ಕೇ ಸೇರಿಬಿಟ್ಟೆ ಕಣ್ರೀ ... ಬಿಲೀವ್ ಇಟ್ ಆರ್ ನಾಟ್ !! ಸಜೀವ ... ಫುಲ್ ಬಾಡಿ, ಯು ನೋ !!
ಸ್ಪೋರ್ಟ್ಸ್ ಶೂ, ನೀಲಿ ಜೀನ್ಸ್ ಬಿಳೀ ನಿಲುವಂಗಿ ಧರಿಸಿ ಐ-ಪ್ಯಾಡ್ ಪಿಡಿದ ನಾನು ನೀಲಾಕಾಶದ ಬಿಳಿ ಮೋಡಗಳ ನಡುವೆ ಹೂವಿನಂತೆ ಹಾರಿ ಹೋಗುತ್ತಿದ್ದೆ. ಜೋಳಿಗೆಯ ಚೀಲ, ಕುರುಚಲು ಗಡ್ಡ-ಮೀಸೆ, ಲೆದರ್ ಚಪ್ಪಲಿ ಜೊತೆಗೆ ಅಗಾಧ ಬುದ್ದಿಜೀವಿಯ ಲುಕ್ಕಿಗೂ ನನಗೂ ಬಹಳಾ ದೂರವಾಗಿದ್ದರೂ ಅಲ್ಲಿನ ಪುಡಿದೇವತೆಗಳು ನನ್ನನ್ನು ಪತ್ರಕರ್ತ ಎಂದೇ ಭಾವಿಸಿದರು. ಅಲ್ಲಿನ ಅಪ್ಸರೆಯರು, ಕಿನ್ನರಿಯರು ಇತ್ಯಾದಿ ಲೇಡಿಮಣಿಗಳನ್ನು ನೋಡಿದಾಗ ನಾನೇನಾದರೂ ಬಾಲಿವುಡ್ / ಹಾಲಿವುಡ್ ಅವಾರ್ಡ್ ಸಮಾರಂಭಕ್ಕೆ ಬಂದುಬಿಟ್ಟೆನಾ ಅನ್ನಿಸಿತು. ಆದರೂ ನನ್ನ ಕರ್ತವ್ಯ ನಾನು ಮರೆಯಲಿಲ್ಲ.
ನಾನು ಅವರದೇ ಗೋತ್ರ ಇರಬೇಕು ಅನ್ನಿಸುತ್ತೆ, ನನಗೆ ಮೊದಲು ಸಿಕ್ಕವರೇ ’ವಿಶ್ವಾಮಿತ್ರ’ ಮಹರ್ಷಿ. ಅಲ್ಲಾ ವಿಶ್ವಾಮಿತ್ರರಿಗೂ ವ್ಯಾಲೆಂಟೈನ್’ಗೂ ಏನು ಸಂಬಂಧ ಎಂದುಕೊಂಡು ಮುಂದೆ ಹೋಗಲು ಹೋದೆ. ಅವರೇ ಮಾತನಾಡಿಸಿದರು. ಲಾಯರ್, ಡಾಕ್ಟರ್ ಮತ್ತು ಮಹರ್ಷಿಗಳ ಮುಂದೆ ಇದ್ದ ವಿಷಯ ಹೇಳಬೇಕಂತೆ. "ವ್ಯಾಲಂಟೈನ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?" ಎಂದು ಸೀದ ಕೇಳಿಬಿಟ್ಟೆ. ಅವರಿಗೆ ವ್ಯಾಲಂಟೈನ್ ಬಗ್ಗೆ ಗೊತ್ತಿದೆಯೇ ಇಲ್ಲವೇ ಎಂದೂ ಕೇಳುವ ಸೈಜನ್ಯತೆ ತೋರಲಿಲ್ಲ. ಸರಿ, ರೆಡಿ ಆದೆ .... ಈಗ ಶಾಪ ಬರಲಿದೆ ಅಂತ. ಆಶ್ಚರ್ಯ, ಅವರಿಗೆ ವ್ಯಾಲಂಟೈನ್ ಬಗ್ಗೆ ಗೊತ್ತಿತ್ತು. ಅವರೆಂದದ್ದು "ಅಪ್ಸರೆಯಾದ ಮೇನಕೆ ನಮ್ಮ ತಪೋಭಂಗ ಮಾಡಿದ ದಿನವನ್ನು ಹೇಗೆ ಮರೆಯಲಿ. ಅಂದು ನೆಡೆದ ಅವಗಢದಲ್ಲಿ ಮೇನಕೆ ನನಗೆ ನೀಡಿದ ವ್ಯಾಲಂಟೈನ್ ಕೊಡುಗೆಯೆ ಶಕುಂತಲೆ. ಭರತ ವಂಶದವರೇ ಈ ವಿಷಯ ಮರೆತರೆ ಹೇಗೆ" ಅನ್ನೋದೇ?
ಯಾವ ಹುತ್ತದಲ್ಲಿ ಯಾವ ಹಾವು ಅಡಗಿದೆಯೋ ಬಲ್ಲವರಾರು? ಹಾಗೇ ಮುಂದೆ ಹೋದೆ. ದುಷ್ಯಂತ ನನ್ನ ಹಾದಿಗೆ ಬರುತ್ತಿದ್ದ. ನನ್ನ ಕಂಡ ಕೂಡಲೇ "ನಿಮ್ಮನ್ನು ಎಲ್ಲೋ ನೋಡಿದ್ದೀನಲ್ಲ" ಎಂದು ನೆನಪಿಸಿಕೊಳ್ಳಲು ತೊಡಗಿದ. ದೂರ್ವಾಸರ ಶಾಪದ ಮಹಿಮೆ. ದುಷ್ಯಂತನ ನೆನಪಲ್ಲಿ ಮಹರ್ಷಿಗಳು ಬಂದದ್ದು ಅರಿವಾಗದೆ ಶಕುಂತಲೆ ಶಾಪ ಉಂಡ ದಿನ. ಆದರೂ ಸನ್ಯಾಸಿಗಳು ವ್ಯಾಲಂಟೈನ್ ದಿನ ಶಾಪ ಕೊಡಬಾರದಿತ್ತು. ಆ ನಂತರ ದುಷ್ಯಂತನಿಗೆ ವಿಮೋಚನೆ ಆದರೂ ವರ್ಷಕ್ಕೊಮ್ಮೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಂತೆ. ಪಾಪ !
ಅವನನ್ನು ಹಾಗೇ ಯೋಚಿಸಿಕೊಳ್ಳಲು ಬಿಟ್ಟು ಮುನ್ನೆಡೆದ ನನಗೆ ಗಕ್ಕನೆ ಎದುರಾದದ್ದು ಬಲಭೀಮ. ಓ! ಸ್ವಲ್ಪ ಹುಷಾರಾಗಿರಬೇಕು. ಈತನ ಬಾಹುಬಲದ ಆಟದ ಮಧ್ಯೆ ಪ್ರೀತಿಗೆ ಸಮಯ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ. ಆ ಅಳುಕಿನಲ್ಲೇ ನಾನು ಆತನನ್ನು ವ್ಯಾಲಂಟೈನ್ ಬಗ್ಗೆ ವಿಚಾರಿಸಿದೆ "ಇಂದಿನ ವ್ಯಾಲಂಟೈನ್ ಬಗ್ಗೆ ನನಗೆ ಅರಿವಿದೆ. ಇದೇ ದಿನ ಅಲ್ಲವೇ ನನ್ನಣ್ಣ ಹನುಮನಿಂದ ಬುದ್ದಿ ಕಲಿತಿದ್ದು?" "ಬಲಭೀಮ, ನನಗೆ ಅರ್ಥವಾಗಲಿಲ್ಲ" ಎಂದೆ. "ಅಂದು ವ್ಯಾಲಂಟೈನ್ ದಿನ. ಸೌಗಂಧಿಕಾ ಪುಷ್ಪದ ಪರಿಮಳಕ್ಕೆ ಸೋತ ಆಕೆ ನನಗೆ ಹೂವನ್ನು ತಂದುಕೊಡಲು ಕೇಳಿದಳು. ನಾನೂ ಹೊರಟೆ. ಪ್ರೇಯಸಿ ಕೇಳಿದಳು ಅಂತ ಉತ್ಸಾಹದಿಂದ ಹೋದವನಿಗೆ ಹನುಮ ಬಾಲ ಎತ್ತಲು ಆಗಲಿಲ್ಲ. ಹೋಗಲಿ ಬಿಡು, ಆಮೇಲೆ ಹನ್ನೆರಡು ಹೂವಗಳನ್ನು ತಂದುಕೊಟ್ಟದ್ದು ಹಳೇ ಕಥೆ. ನನಗೆ ಅಂದು ಬಾಲ ಎತ್ತಲು ಆಗಲಿಲ್ಲ, ಇಂದಿನ ಭೂಲೋಕದ ಜನರಿಗೆ ಪ್ರೇಯಸಿ ಖರ್ಚು ಮಾಡಿದ ಬಿಲ್ ಎತ್ತಲು ಆಗೋಲ್ಲ ... ಹ ಹ ಹ" ಎಂದು ಜೋರಾಗಿ ನಕ್ಕು ಹೋದ.
ಮುಂದೆ ಸಾಗಿದವಗೆ ಸಿಕ್ಕಿದ್ದು ಅರ್ಜುನ. ಇವರುಗಳು ಇಲ್ಲೂ ಒಬ್ಬರ ಹಿಂದೆ ಮತ್ತೊಬ್ಬರು ಓಡಾಡುತ್ತಾರಾ ಹೇಗೆ? ವ್ಯಾಲಂಟೈನ್ ಬಗ್ಗೆ ವಿಷಯ ಕೇಳಲು ಈತನೇ ಸರಿ ಎಂದು ವಿಷಯ ಅರುಹಿದೆ "ನನಗೆ ವ್ಯಾಲಂಟೈನ್ ಬಗ್ಗೆ ಗೊತ್ತು. ಅಂದು ವ್ಯಾಲಂಟೈನ್ ದಿನ, ಅಣ್ಣ ಯುಧಿಷ್ಟಿರ ನಮ್ಮ ಪತ್ನಿಯೊಡನೆ ಆನಂದದಿಂದ ಇದ್ದಾಗ, ನಾನು ಅಲ್ಲಿಗೆ ಹೋಗಿ ಅವರ ಏಕಾಂತ ಭಂಗ ಮಾಡಿ ತೀರ್ಥಯಾತ್ರೆಗೆ ತೆರಳಿದ್ದೆ. ತೀರ್ಥಯಾತ್ರೆಯಲ್ಲಿ ಹಲವಾರು ವ್ಯಾಲಂಟೈನ್’ಗಳು ಸಿಕ್ಕರು ಅನ್ನೋದು ಬೇರೆ ವಿಷಯ" ಎಂದು ನಕ್ಕು ಮುಂದೆ ಹೋದ. ಛೀ! ಕಳ್ಳ !!
ನಾನೂ ಕಿರುನಗೆ ಸೂಸುತ್ತ ಮುಂದೆ ಸಾಗಿದೆ. ಎದುರಿಗೆ ಸಿಕ್ಕವನು ಮರ್ಯಾದ ಪುರುಷೋತ್ತಮ ಶ್ರೀ ರಾಮಚಂದ್ರ ಅಲಿಯಾಸ್ ಏಕ ಪತ್ನೀವ್ರತಸ್ತ. ಕೆಲವರನ್ನು ಕಂಡಾಗ ನಮ್ಮಲ್ಲೂ ಅರಿವಿಲ್ಲದೆ ಶ್ರೀಮದ್ಗಾಂಭೀರ್ಯ ಮೂಡುತ್ತದೆ. ಹೀಗಿರುವಾಗ ವ್ಯಾಲಂಟೈನ್ ಬಗ್ಗೆ ಹೇಗೆ ಕೇಳಲಿ? ನಾ ಬಂದಿರುವ ಮೊದಲೇ ಅರಿತವನಂತೆ ನುಡಿದ ಶ್ರೀರಾಮ "ನಾನು ವ್ಯಾಲಂಟೈನ್ ಬಗ್ಗೆ ಬಲ್ಲೆ. ಇದೇ ವ್ಯಾಲಂಟೈನ್ ದಿನದಂದು ಅಲ್ಲವೇ ಸೀತೆಯ ಕಣ್ಣಿಗೆ ಮಾಯಾಮೃಗ ಕಣ್ಣಿಗೆ ಬಿದ್ದಿದ್ದು? ಆಕೆಗೆ ವ್ಯಾಲಂಟೈನ್ ಕೊಡುಗೆ ಕೊಡಲೆಂದೇ ತಾನೇ ನಾನು ಮೃಗವಲ್ಲದ ಮೃಗವನ್ನು ಬೆಂಬೆತ್ತಿ ಹೋಗಿದ್ದು? ನನ್ನ ವ್ಯಾಲಂಟೈನ್’ನಿಂದ ಅಷ್ಟು ಕಾಲ ದೂರಾಗಿದ್ದು?" ... ರಾಮನು ಹೋದರೂ ನಾನು ಸ್ವಲ್ಪ ಹೊತ್ತು ಹಾಗೇ ನಿಂತಿದ್ದೆ.
ನಾನೆಂದುಕೊಂಡಂತೆ ನನಗೆ ಎದುರಾಗಿದ್ದು ಸುಗ್ರೀವ. ಆತನನ್ನು ವ್ಯಾಲಂಟೈನ್ ದಿನದ ಬಗ್ಗೆ ಕೇಳಿದೆ. ಆತನೂ ಖಿನ್ನನಾಗಿ ನುಡಿಯಬೇಕೇ? "ನನಗೆ ವ್ಯಾಲಂಟೈನ್ ದಿನದ ಬಗ್ಗೆ ಅಚ್ಚಳಿಯದ ನೆನಪಿದೆ. ಒಂದೆಡೆ ಅಣ್ಣ ವಾಲಿಯನ್ನು ಕಳೆದುಕೊಂಡ ದು:ಖ ಇದ್ದರೂ ನನ್ನ ವ್ಯಾಲಂಟೈನ್’ಗೇಕೆ ಬೇಸರವಾಗಬೇಕೆಂದು ಅದೇ ಆಚರಣೆಯಲ್ಲಿದ್ದೆ. ಆದರೆ ನನಗೇನು ಗೊತ್ತು ವಾಲಿ ಸತ್ತಿರಲಿಲ್ಲ ಎಂದು? ಆಗ ಬಂದ ಉಗ್ರರೂಪಿ ವಾಲಿ ನನ್ನಿಂದ ನನ್ನ ವ್ಯಾಲಂಟೈನನ್ನು ಕಿತ್ತುಕೊಂಡು, ಸಿಂಹಾಸನವನ್ನೂ ಕಿತ್ತುಕೊಂಡು ಅರಣ್ಯದ ಪಾಲು ಮಾಡಿದ. ಹೇಗೆ ಮರೆಯಲಿ ಆ ದಿನ? ಹೇಗೆ ಮರೆಯಲಿ?"
ಹೋಗಲಿ ಬಿಡಪ್ಪ, ಈಗ ನೆಮ್ಮದಿ ಇದೆಯಲ್ಲ ಎಂದು ಸಮಾಧಾನ ಮಾಡಿ ಮುಂದೆ ಹೋಗಲು ಕಂಡಿದ್ದು ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ. ಆತನಿಗೆ ಹೇಳೋದೇನು ಸುಮ್ಮನೆ ಮುಂದೆ ನಿಂತರೆ ಸಾಕು, ಮನಸನ್ನೆಲ್ಲ ಸ್ಕ್ಯಾನ್ ಮಾಡಿ ನಮ್ಮ ವಿಷಯ ನಮಗೇ ಹೇಳುವನು ಮನೋಹರ. "ವ್ಯಾಲಂಟೈನ್ ಕೊಡುಗೆ ಅಂತ ನನ್ನ ವ್ಯಾಲಂಟೈನ್’ಗೆ ಆ ದಿನ ಪಾರಿಜಾತ ವೃಕ್ಷ ತಂದುಕೊಟ್ಟೆ. ಶುರುವಾಯ್ತು ನೋಡು ಪೆಂಗಳ ಯುದ್ದ. ವಿಷಯ ಎಲ್ಲೆಲ್ಲೋ ಹೋಗಿ ಕೊನೆಗೆ ನನ್ನನ್ನು ತೂಕ ಹಾಕಿದ ಮೇಲೆ ತುಳಸೀದಳದಿಂದ ಉಳಿದುಕೊಂಡೆ. ವ್ಯಾಲಂಟೈನ್ ದಿನದ ಬಗ್ಗೆ ಇನ್ನು ಮಾತು ಬೇಡ" ಎಂದವನೇ ಅಲ್ಲಿಂದ ಹೋರಟೇ ಹೋದ.
ಮುಕ್ಕಣ್ಣನನ್ನು ಕೇಳಲು ದಕ್ಷಯಜ್ಞ್ನದ ದಿನವನ್ನು ನೆನಪಿಸಿಕೊಂಡ. ಇಬ್ಬರು ವ್ಯಾಲಂಟೈನ್’ಗಳನ್ನು ಪಡೆದ ವೆಂಕಟರಮಣ ಇಡೀ ದಿನ ಭಕುತರ ಕಾಟದಲ್ಲೇ ಬ್ಯುಸಿ. ನನಗೇನು ಸಮಯ ಕೊಟ್ಟಾನು ಪಾಪ. ಇನ್ನೂ ಹಲವಾರು ದೇವಾನುದೇವತೆಗಳಿದ್ದರೂ ನನಗೇಕೋ ಯಮಧರ್ಮನನ್ನು ಮಾತನಾಡಿಸಬೇಕೆಂದು ಮನಸ್ಸಾಯಿತು. ಅಂದುಕೊಂಡದ್ದೇ ತಡ, ನನ್ನ ಹಿಂದೆಯೇ ಗುಟುರು ಹಾಕಿದ ಸದ್ದು. ಯಮನೇ ಇರಬೇಕು ಎಂದು ದೊಡ್ಡ ಕಣ್ಣು ಮಾಡಿಕೊಂಡು "ಯಮ! ಯಮಾ" ಎಂದು ಕೂಗಿದೆ.
ಆ ಯಮ್ಮ ಅಲ್ಲಿಂದ ಓಡೀ ಹೋದಳು. ಆ ಯಮ್ಮ ಓಡಿ ಹೋಗಿ ನನ್ನ ಧರ್ಮ ಒಳಗೆ ಬಂದಳು. ಒಂದು ನಿಮಿಷ ಯೋಚನೆ ಮಾಡಿದ ಮೇಲೆ ತಿಳಿಯಿತು. ನಾನು ಕಂಡಿದ್ದು ಕನಸು. ಗುಟುರು ಹಾಕಿದ್ದು ಮನೆ ಕೆಲಸದವಳು "ಸ್ವಲ್ಪ ಆ ಕಡೆ ಓಗಿ .. ಕಸ ಬಳೀಬೇಕು" ಅಂತ ಹೇಳಿದಳಂತೆ. ಅವಳನ್ನು ಕಂಡು ’ಯಮ’ ಎಂದುಕೊಂಡದ್ದಕ್ಕೆ ಆಕೆ ಹೆದರಿ ನನ್ನ ಧರ್ಮ ಅರ್ಥಾತ್ ವ್ಯಾಲಂಟೈನನ್ನು ಕರೆತಂದಿದ್ದಳು.
ಎನಿವೇ, ಹ್ಯಾಪಿ ವ್ಯಾಲಂಟೈನ್’ಸ್ ಡೇ !!!
Comments
ಉ: ದೇವತೆಗಳ ವ್ಯಾಲಂಟೈನ್ಸ್ ದಿನ !
:) ನಿಜ, ವ್ಯಾಲೆಂಟೈನರು ಎಲ್ಲಾ ಕಾಲದಲ್ಲೂ ಇದ್ದರು, ಇರುತ್ತಾರೆ. ಆದರೆ ಅದರ ದಿನದ ಹೆಸರಿನಲ್ಲಿ ಮೋಜು, ಮಸ್ತಿ ಮಾಡುವ ಪರಿಯಿಂದ ಅದನ್ನು ವಿರೋಧಿಸುವವರೂ ಇರುತ್ತಾರೆ.
In reply to ಉ: ದೇವತೆಗಳ ವ್ಯಾಲಂಟೈನ್ಸ್ ದಿನ ! by kavinagaraj
ಉ: ದೇವತೆಗಳ ವ್ಯಾಲಂಟೈನ್ಸ್ ದಿನ !
:-) ಯುಗಾದಿಯನ್ನು ಶ್ರದ್ದೆಯಿಂದ ಆಚರಿಸಿದಂತೆ, ವಿದೇಶೀ ಹಬ್ಬಗಳನ್ನು ಆಚರಿಸಲೇಬೇಕೆ೦ದರೆ, ಶ್ರದ್ದೆಯಿಂದ ಮಾಡಲಿ, ತಪ್ಪೇನಿಲ್ಲ. ಆಚರಣೆ ವಿಧಾನವೇ ಬಂದಿರುವ ಸಮಸ್ಯೆ
ಇರಲಿ, ವ್ಯಾಲಂಟೈನ್ ಅನ್ನು ಹಬ್ಬ ಅನ್ನೋದಕ್ಕಿಂತ ದೇಶದಲ್ಲಿನ 'ಎಕಾನಮಿ' ದೃಷ್ಟಿಯಿಂದ ಜನತೆ ಒಂದಲ್ಲ ಒಂದು ಕಾರಣಕ್ಕೆ ಖರ್ಚು ಮಾಡಲಿ ಎಂಬ ಉದ್ದೇಶಕ್ಕಾಗಿ ಮಾಡಿರುವುದು