ದೇವನೆಲ್ಲಿ?

ದೇವನೆಲ್ಲಿ?

ಬರಹ

ದೇವನಿಹನು ಎಲ್ಲಿ?
ನನ್ನಲ್ಲಿ ನಿನ್ನಲ್ಲಿ ದೇಗುಲದಲ್ಲಿ?

ಅವನಿಗೆಂದು ಹುಡುಕಿದರು ವಾಸ್ತುಪ್ರಕಾರದ ತಾಣ
ಮಕ್ಕಳ ಆಟದ ಮೈದಾನಕೆ ಬಿದ್ದಿತ್ತು ಕಡಿವಾಣ
ಪಾದಚಾರಿಗಳ ತಳ್ಳಿದರು ರಸ್ತೆಗೆ
ಪಾರ್ಕಿಗೆಂದು ಬಿಟ್ಟಿದ್ದ ಸಾರ್ವತ್ರಿಕ ಜಾಗ
ಮನೆ ಕಟ್ಟದೇ ಬಿಟ್ಟ ಪಾಳು ನಿವೇಶನ
ಯಾರೂ ಸೊಲ್ಲೆತ್ತದಂತೆ ನಿರ್ವಿಣ್ಣ ಮಾಡಿಹ ಪಾಲಕರು
ರಾತ್ರೋ ರಾತ್ರಿ ಎಬ್ಬಿಸಿದರಲ್ಲೇ ಗರ್ಭಗುಡಿ

ಗೋರ್ಕಲ್ಲ ದೇವರೂಪಕೆ ಮಾಡಿಹರು
ನೀರು ಪಂಚಾಮೃತದಭಿಷೇಕ
ಪಠಿಸಿಹರು ಅರ್ಥ ತಿಳಿಯದಾ ಮಂತ್ರ
ಕಣ್ಣೊಂದು ಕಡೆ ಮನ ಇನ್ನೊಂದೆಡೆ
ಉಳ್ಳವರಿಗೊಂದು ಮರ್ಯಾದೆ
ಯಾಚಿಸುವರಿರಿಗೆ ಅವಮರ್ಯಾದೆ
ದೇವ ತಿಳಿಸಿಕೊಟ್ಟಿದ್ದನೇ ಈ ತಂತ್ರ

ಅವನಿಗಾಗಿ ಮಡಿಯಲಿ ಮಾಡಿಡುವರು
ಷಡ್ರಸೋಪೇತ ಭಕ್ಷ್ಯ ಭೋಜ್ಯಗಳ ನೈವೇದ್ಯ
ಹತ್ತು ಹಲವಾರು ರಸಭರಿತ ಹಣ್ಣುಗಳ ತೋರಿಕೆ
ಏನೂ ತಿಳಿಯದ ಮುಗ್ಧ ಮಕ್ಕಳಿಗೂ
ಮುಟ್ಟಲು ಬಿಡದ ಗೋಮುಖದ ಆರಾಧಕರು
ಅವರಿಗೂ ತಿಳಿದಿಹುದು ಕಾಣದ ದೈವ ಬರನು
ದೇವ ನೈವೇದ್ಯಕೆ ಕೈ ಹಾಕಲು ಸುಮ್ಮನಿದ್ದಾರೇ
ಆಗ ದೇವನಾಗುವ ಇವರ ಪಾಲಿಗೆ ದೆವ್ವ

ಕಾಣುವೆ ನಾ ಆ ದೇವನ ದೇಗುಲದ ಮುಂದೆ
ಕೊಚ್ಚೆಯಲಿ
ಕೊಚ್ಚೆಯಲಿ ಬಿದ್ದಿಹ ಕೊಳೆತ ಬಾಳೆಯ ನಾರು
ಕೊಳೆಯುತಿಹ ಹಣ್ಣಿನ ಸಿಪ್ಪೆ
ಅಬ್ಬೇಪಾರಿ ಮಾವಿನೆಲೆಯಲಿ ಹರಿಯುತಿಹ ಸರಿಯುತಿಹ ಜಂತು
ಇದರ ಮೇಲೆ ಹಾರುತಿಹ ನೊಣಗಳ ಸಂತೆ
ಬದಿಯಲಿ ಆಡುತಿಹ ಭಿಕಾರೀ ಪಾಪು
ಆ ದೇವಗೀವ ಪಾಲಿನ ಒಂದಂಶದಲೂ ತೃಪ್ತಿ
ಹೊಂದುವ ಹಸುಳೆ ಕಂದಮ್ಮ
ಇವೆಲ್ಲದರಲಿ ಕಾಣುವೆ ನಾ ದೈವ

ನೀವೆಲ್ಲಿ ಕಾಣುವಿರಿ ಬರಿಗಣ್ಣಿಗೆ ಕಾಣದಾ ದೈವ