ದೇವರಿಂದ ಪಡೆಯುವುದೇಕೇ? ಹೇಗೆ...?

ದೇವರಿಂದ ಪಡೆಯುವುದೇಕೇ? ಹೇಗೆ...?

ಬರಹ

ಈ ಪ್ರಶ್ನೆಗೆ ತಟ್ಟನೆ ಉತ್ತರ ಹೇಳುವುದು ಕಷ್ಟ. ಆದರೂ ದೇವರಿಂದ ಪಡೆಯ ಬೇಕೆಂದೇ ಪೂಜೆ ಪುನಸ್ಕಾರಗಳನ್ನು ಮಾಡುವವರೂ ತತ್ ಕ್ಷಣ ಏನೊಂದನ್ನೂ ಸ್ಪಷ್ಟವಾಗಿ ಹೇಳಲಾರರು. ನಮ್ಮ ನಮ್ಮ ನಂಬಿಕೆ ಎಂದಾರಷ್ಟೇ.

ಪಂಚಭೂತಗಳಿಂದ ಸೃಷ್ಟಿಯಾದ ಈ ದೇಹ ಆ ದೇವರ ಕೊಡುಗೆ. ಬಂದದ್ದು ಬೆತ್ತಲೆ. ಉಟ್ಟದ್ದು ಭವದ ಬಟ್ಟೆ. ಬಿಟ್ಟು ಹೋಗುವಾಗ ತಟ್ಟನೆ ಕಣ್ಣಿಗೆ ಕಾಣದ ಅರಿವಿಗೆ ಬಾರದ ಕತ್ತಲೆ! ಬರಿ ಮೈ ತಣ್ಣಗೆ ಉರಿದು ಹೋದ ಮೇಲೆ ಮತ್ತದೆ ಪಂಚಭೂತಗಳಲ್ಲಿ ಲೀನ. ಈ ಜೀವ ಕೊಂಡು ಹೋಗುವುದೇನು? ಕತ್ತಲೆಯಿಂದ ಆ ಬೆಳಕಿನೆಡೆಗೆ? ಪೂರ್ಣತ್ವದಿಂದ ಪರಿಪೂರ್ಣದೆಡೆಗೆ. ನಶ್ವರತೆಯಿಂದ ಅಮರತ್ವದೆಡೆಗೆ...

ಈ ಭೌತಿಕ ಶರೀರದಲ್ಲಿ ಪಡೆದದ್ದೆಲ್ಲವೂ ಪೂರ್ವಾರ್ಜಿತವೆಂಬ ನಂಬಿಕೆ. ಸುಖಭೋಗಗಳು ಪುರುಷಾರ್ಥವೆಂಬುದು ವಾಡಿಕೆ. ಆದರೆ,ಪರಾರ್ಥ ಇಲ್ಲದ ಸಾಧಕ-ಬಾಧಕಗಳು ಪೌರುಷೇಯವಾಗಲಾರವು. ಹಾಗೆ ಆಗುವುದಿದ್ದರೆ, ಬಲಾಢ್ಯರಾದವರೆಲ್ಲ ಅಂದರೆ, ಹಣವಂತರೂ ಸಹ ತಾವು ಬಯಸಿದ್ದೆಲ್ಲವನ್ನೂ ಪಡೆಯುತ್ತಿದ್ದರು. ಜೀವನ ಪರ್ಯಂತ ನೋವು ನಷ್ಟಗಳಿಲ್ಲದೇ, ದೇವರಿಗೆ ಕೈ ಮುಗಿಯದೇನೆ ಸುಖಿಗಳಾಗಿಯೆ ಕಳೆಯುತ್ತಿದ್ದರು. ಯಾವ ಕಾರಣಕ್ಕೂ ಕಣ್ಣೀರು ತುಂಬಿ ಬರುತ್ತಿರಲಿಲ್ಲ; ಅವರ ಕೆನ್ನೆಯ ಮೇಲೆ ಇಳಿಯುತ್ತಿರಲಿಲ್ಲ. ದಯೆಯೇ ನ್ಯಾಯದ ಊರುಗೋಲಾಗುತ್ತಿರಲಿಲ್ಲ. ದೇವರಲ್ಲಿ ನಂಬಿಕೆ ಎಂಬುದೇ ಉಳಿಯುತ್ತಿರಲಿಲ್ಲ. ದೀನ ದಲಿತರಿಗೆ ಅಲ್ಪ ಸ್ವಲ್ಪ ಕೊಡುವ ಮನಸ್ಸೂ ಇರುತ್ತಿರಲಿಲ್ಲ. ಸಮಾಜ ಸುಧಾರಣೆ ಎಂಬ ಸೊಲ್ಲೂ ಕೇಳುತ್ತಿರಲಿಲ್ಲ. ಪ್ರಪಂಚದೆಲ್ಲೆಡೆ ಸರ್ವಾಧಿಕಾರವೇ ವಿಜೃಂಭಿಸಿರುತ್ತಿತ್ತು.

ಅಪ್ರಾಪ್ತ ಪ್ರಾಸ್ಯಂ ಯೋಗಃ

ಪ್ರಾಪ್ತಸ್ಯ ಸಂರಕ್ಷಣಂ ಕ್ಷೇಮಃ

ಪೆಡಯದ್ದನ್ನು ಪಡೆಯುವುದು ಯೋಗ. ಮತ್ತು ಪಡೆದುದನ್ನು ರಕ್ಷಿಸುವುದು ಕ್ಷೇಮ. ಯೋಗ ಎಲ್ಲ ತತ್ವ ಜ್ಞಾನಗಳ ಮೂಲ. ಮಾನವನ ಮಾನಸಿಕ ಸ್ಥಿರತೆಗೆ ಸಾಧನ. ಅವನ ಎಲ್ಲ ನೋವುಗಳಿಗೆ ಅಂತ್ಯ. ಯೋಗ ಸಾಧನೆ ಮಾಡುವುದರಿಂದ ಸಿದ್ಧಿ, ಸ್ಥಿತ ಪ್ರಜ್ಞೆ. ಯೋಗಾಯೋಗ ಒದಗಿ ಬರುವುದೂ ನೈಪುಣ್ಯತೆ ಮಾತ್ರದಿಂದಲ್ಲ; ದೈವಿಕತೆಯ ಮಹತ್ವದಿಂದ. ಪಡೆದದ್ದೆಷ್ಟೆಂದು ಕೇಳಿದರೆ, ನಿಜಕ್ಕೂ ಸಾತ್ವಿಕವೆನಿಸುವ ಮಾರ್ಗದಲ್ಲಿ ಮತ್ತು ಯೋಗ ಸಾಧನೆಯಿಂದ ಪಡೆದದ್ದಷ್ಟೇ. ಅದೇ ಬದುಕಿನ ಭಾಗ್ಯ ಪುರುಷ ಪುರುಷೋತ್ತಮ ನಾಗುವುದು, ಸ್ತ್ರೀ ದೇವತೆಯೆನಿಸುವುದು ಪಾರಮಾರ್ಥಿಕ ಚಿಂತನೆಯ ತಳಹದಿಯಿಂದಲೇ; ಯೋಗ ಸಿದ್ದಿಯ ಬಲದಿಂದಲೇ.

ಪಡೆಯುವುದೆಂದರೆ ಹೀಗೆ. ಇನ್ನು ಮರಳಿಸುವುದೆಂದರೆ ಹೇಗೆ?

ಕೆರೆಯ ನೀರನು ಕೆರೆಗೆ ಚೆಲ್ಲಿ

ವರವ ಪಡೆದವರಂತೆ ಕಾಣಿರೊ

ಹರಿಯ ಕರುಣದೊಳಾದ ಭಾಗ್ಯವ

ಹರಿ ಸಮರ್ಪಣೆ ಮಾಡಿ ಬದುಕಿರೋ

-ಎಂದರು ಪುರಂದರ ದಾಸರು.

ಈ ನೆಲದ ಋಣ. ಜಲದ ಋಣ ಮತ್ತು ಮಾತಾ ಪಿತೃಗಳ ಋಣ ಮರಳಿಸುವ ಮನಸ್ಸು ಈ ಕಾಲದಲ್ಲಿ ಎಲ್ಲರಿಗೂ ಬರುವುದುಂಟೇ...? ಬದುಕಲು ಕಿಂಚಿತ್ ಸ್ವಾರ್ಥ ಬೇಕು ನಿಜ. ಆದರೆ, ಧನ, ಕೀರ್ತಿ ಶನಿ ಪದೋನ್ನತಿ ಹಾಗೂ ಅಧಿಕಾರ ಲಾಲಸೆಗಳು ಹಾಗೆ ಮಾಡಗೊಡುತ್ತವೆಯೆ..

-ಶಿವರಾಂ ಎಚ್

ತಾತ್ವಿಕತೆಯ ಆಳ-ಅಗಲ ತಿಳಿದವರಿಲ್ಲ;ತಿಳಿದವರಿಗೆ ಶರಣು ಶರಣೆಂಬೆ. ಅಂಥ ಮಹಾನ್ ದಾರ್ಶನಿಕರ ವಿಚಾರ ಧಾರೆಗಳು ಅಂದಿಗೂ ಇಂದಿಗೂ ಅದೆಷ್ಟು ಪ್ರಸ್ತುತ ಎಂಬುದರ ಬಗ್ಗೆ ಒಂದು ಅವಲೋಕನ. ಹಾಗೂ ಅವುಗಳನ್ನು ಒಳಗೊಂಡಿರುವ ನನ್ನ ವಿಚಾರಧಾರೆಗಳಿವು. ನೀವೂ ಒಳಗೊಂಡು ನೋಡ ಬನ್ನಿ...[http://shuunyasannidha.blogspot.com|ಶೂನ್ಯ ಸಾನ್ನಿಧ್ಯ]