ದೇವರಿಲ್ಲ ಅಲ್ಲಿ...

ದೇವರಿಲ್ಲ ಅಲ್ಲಿ...

ಕವನ

"ಇಲ್ಲ... ದೇವರಿಲ್ಲ, ಆ ದೇವಾಲಯದಲಿ ದೇವರಿಲ್ಲ ಇನ್ನು"

ಎಂದನೊಬ್ಬ ಸಂತನು.

ಆ ಮಾತ ಕೇಳಿದ ಅರಸ ಸಿಟ್ಟಾದನು,

"ನೀನು ನಾಸ್ತಿಕನೇನು?

ಅದಕೆ ಹೀಗೆ ಒರಲುತಿರುವೆಯೇನು?

ಅನರ್ಘ್ಯ ರತ್ನಗಳಿಂದ,

ಸ್ವರ್ಣಖಚಿತ ವಿಗ್ರಹದಿಂದ 

ಭವ್ಯ ದೇವುಳವ ಕಟ್ಟಿಸಿಹೆನು.

ಆದರೂ ಇದನು ಶೂನ್ಯ ಎನ್ನಬಹುದೇನು?"

 

ಸಂತನಾಗಲೇ ನುಡಿದನು,

"ಶೂನ್ಯವಲ್ಲ, ಅದು ಅರಸನ ಅಹಮ್ಮಿನ ಮೊಟ್ಟೆ,

ಅದರೊಳಗೆ ದೇವರೆಂದು ನಿನ್ನ ವಿಗ್ರಹವೇ ಇಟ್ಟೆ

ಜನರ ಎದೆಯ ಒಳಗಿನ ದೇವನನು ಅಲ್ಲಿಂದ ಓಡಿಸಿಬಿಟ್ಟೆ"

 

ಸಿಂಡರಿಸಿ ಸಿಟ್ಟಲ್ಲಿ ಅರಸ ಅರಚಿದನು,

"ಇಪ್ಪತ್ತು ಲಕ್ಷ ಸುವರ್ಣ ವರಹ ಸುರಿದಿಹೆನು,

ದೇವುಳದ ಕಳಶ ಗಗನ ಚುಂಬಿಸುವುದು ಕಾಣದೇನು?

ಸಂಪ್ರದಾಯದಂತೆ ಎಲ್ಲಾ ಕಾರ್ಯ ಮಾಡಿ ಮುಗಿಸಿಹೆನು.

ಈಗ ದೇವರಿಲ್ಲ ಎನ್ನುವುದು ಸರಿಯೇನು?"

 

ಸಂತ ತಣ್ಣಗೆ ಉತ್ತರಿಸಿದನು,

"ನಾಡಿನವರು ಬರದಲಿ ಬೇಯುವಾಗ,

ನೀರು - ನೆರಳಿಲ್ಲದೆ ನರಳುವಾಗ,

ನಿನ್ನ ಬಾಗಿಲಿಗೆ ಬಂದು ಸಹಾಯಕೆ ಬೇಡಿದಾಗ,

ಅಟ್ಟಿದೆಯಲ್ಲಾ ಎಲ್ಲರನೂ ದೂರಕೆ ನೀನಾಗ,

ಆಗ ಅವರು ಹೊರಟರು ಅಲ್ಲಿಗೆ;

ಗುಹೆಗಳಿಗೆ, ಕಾಡಿಗೆ, ಮರಗಳಡಿಯ ನೆರಳಿಗೆ, ಪಾಳುಬಿದ್ದ ಗುಡಿಗಳಿಗೆ.

ಮತ್ತೆ ನೀನಷ್ಟೈಷರ್ಯ ಸುರಿದು ದೇವುಳವ ನಿಲ್ಲಿಸಿದಾಗ

ಆ ದೇವನು ಹೀಗೆಂದನಲ್ಲ ಆಗ,

'ನನ್ನಿರವು ಅಲ್ಲಿ, 

ಸಾಸಿರ ದೀಪಗಳ ಬೆಳಕಲ್ಲಿ.

ನೀಲ ಗಗನದ ಅಡಿಯಲ್ಲಿ,

ಸತ್ಯ, ಪ್ರೀತಿ, ಕರುಣೆಯ ಕುಟುಂಬ ಇರುವಲ್ಲಿ.

ಇನ್ನು ಬಡವರಿಗೆ ಕರಗದ ಜಿಪುಣನು

ಮನೆ ಕಟ್ಟಿ ನನ್ನ ಬಂಧಿಸುವನೇನು'

ಎಂದು ದೇವನು ಹೊರಟನು,

ಬಡಜನರ ಜೊತೆಗವನು ನೆಲೆಸಿಹನು.

ಈ ನಿನ್ನ ದೇವುಳವು ಇನ್ನು ಖಾಲಿಯಂತೆ

ನಿನ್ನ ಅಹಂಕಾರದಲ್ಲಿ ಉಬ್ಬಿದ ಪುಗ್ಗದಂತೆ" 

 

ಅರಸನ ನೆತ್ತಿ ಸಿಡಿಯಿತು ಸಿಟ್ಟಿಂದಲೇ,

"ಎಲವೋ ಎಲುಬಿನ ಹಂದರವೇ, ತೊಲಗೆಲೆ

ತೊಲಗು ನನ್ನ ಗಡಿಯಿಂದಾಚೆ ಈಗಲೇ"

 

ಸಂತ ನಗುತ್ತಾ ನುಡಿದನು,

"ನಿನ್ನೆ ದೂಡಿದೆ ನಿನ್ನ ದೇವರನು,

ಇಂದು ಹೊರಗಟ್ಟಿದೆ ಆ ದೇವರ ಭಕ್ತನನು,

ಮತ್ತೆ ನಿನ್ನ ಗುಡಿ ಖಾಲಿಯೇ ಅಲ್ಲವೇನು?

ಅಲ್ಲಿ ದೇವರಿಲ್ಲ ಎಂಬುದೇ ಸತ್ಯವಿನ್ನು."

ಮೂಲ: ರವೀಂದ್ರನಾಥ ಠಾಗೋರ್

ಭಾವಾನುವಾದ: ಬಿ. ಸುರೇಶ

ಚಿತ್ರ್