ದೇವರು

ದೇವರು

ಪುಸ್ತಕದ ಲೇಖಕ/ಕವಿಯ ಹೆಸರು
ಡಿ.ವಿ.ಜಿ.
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ -೫೮೦೦೨೦
ಪುಸ್ತಕದ ಬೆಲೆ
ರೂ.೪೦.೦೦, ಮುದ್ರಣ: ೨೦೧೮

೧೯೭೩ರಲ್ಲಿ ಮೊದಲ ಮುದ್ರಣ ಕಂಡ ಡಿ.ವಿ.ಜಿ.ಯವರ ಕೃತಿ ‘ದೇವರು- ಒಂದು ವಿಚಾರ ಲಹರಿ'. ಅಂದಿನಿಂದ ಇಂದಿನವರೆಗೆ ಸುಮಾರು ೧೩ ಮುದ್ರಣಗಳನ್ನು ಕಂಡ ಅಪರೂಪದ ಮಾಹಿತಿಗಳನ್ನು ಒಳಗೊಂಡ ಪುಸ್ತಕವಿದು. ಈ ಪುಸ್ತಕವು “ದೇವರು ಇದ್ದಾನೆಯೇ? ದೇವರು ಎಂಬ ವಸ್ತು ನಿಜವಾಗಿ ಉಂಟೆ? ದೇವರು ಎಂದರೆ ಏನು? ಅದರ ಸ್ವರೂಪ ಎಂಥದು? ಅದರಿಂದ ನಮಗೆ ಆಗಬೇಕಾದ್ದೇನು? ಈ ಜಗತ್ತು ಏಕೆ ಸೃಷ್ಟಿಯಾಯಿತು? ಇದರ ವ್ಯವಸ್ಥೆಯ ತತ್ವವೇನು? ನಾನಾ ಮತಧರ್ಮಗಳ ಮೂಲತತ್ವವೇನು? ಇಂಥ ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ ಒಂದಲ್ಲ ಒಂದು ಕಾಲದಲ್ಲಿ, ಕಾಣಿಸಿಕೊಂಡಿರುತ್ತವೆ. ಆದರೆ ಅವುಗಳಿಗೆ ಸರಿಯಾದ ಉತ್ತರ ಕಾಣದೆ ಹಲುಬುವರು ಬಹುಮಂದಿ. ಹೀಗೆ ಮನುಷ್ಯನ ಮನದಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಈ ಗಹನವಾದ ಪ್ರಶ್ನೆಗಳಿಗೆ ಸಾಧ್ಯವಾದ ಮಟ್ಟಿಗೂ ಸರಳವಾದ ಮಾತುಗಳಲ್ಲಿ ಸಮಾಧಾನ ಹೇಳಲು ಶ್ರೀ ಡಿವಿಜಿ ಪ್ರಯತ್ನ ಪಟ್ಟಿರುತ್ತಾರೆ. ಇಲ್ಲಿನ ಉತ್ತರಗಳಲ್ಲಿ ಎರಡು ಎಳೆಗಳನ್ನು ಕಾಣಬಹುದು ; ಒಂದು ವಿಚಾರಪರವಾದದ್ದು, ತತ್ವಪ್ರಾಯವಾದದ್ದು; ಕೊನೆಯಲ್ಲಿ ಸಿದ್ಧಾಂತ. ಈ ಪುಟ್ಟ ಪುಸ್ತಕವನ್ನು ಓದುವ ವಾಚಕನು ಇಲ್ಲಿನ ಅಲ್ಪಾವಕಾಶದಲ್ಲಿ ಎಷ್ಟು ವಿಷಯಗಳು ಅಡಕವಾಗಿವೆಯೆಂದು ಅಚ್ಚರಿಪಡದಿರಲಾರನು. ಭಾವದ ಸ್ಪಷ್ಟತೆಯೂ ಮಾತಿನ ಸರಳತೆಯೂ ಬೆರಗು ಪಡಿಸುತ್ತವೆ. ಇಲ್ಲಿನ ಬರವಣಿಗೆ ಮುಖ್ಯವಾಗಿ, ಮನಸ್ಸಿಗೆ ಸಮಾಧಾನವನ್ನು ಕೊಡುವಂತಹುದು.” ಎಂದು ಪುಸ್ತಕದ ಬೆನ್ನುಡಿಯಲ್ಲಿ ಅಚ್ಚುಹಾಕಿಸಿದ್ದಾರೆ.

ಪುಸ್ತಕದ ಪ್ರಸ್ತಾವನೆಯಲ್ಲಿ ಡಿವಿಜಿಯವರು ಹೀಗೆ ಬರೆಯುತ್ತಾರೆ “ ನಮಗೆ ತಿಳಿದು ಬಂದಿರುವ ಮಟ್ಟಿಗೆ ಮನುಷ್ಯ ಚರಿತ್ರೆಯಲ್ಲಿ ಎಲ್ಲ ದೇಶಗಳಲ್ಲಿಯೂ, ಎಲ್ಲ ಕಾಲಗಳಲ್ಲಿಯೂ ಮತವೆಂಬುದು ಇದ್ದುಕೊಂಡೇ ಇದೆ. ದೊಡ್ಡ ದೊಡ್ಡ ಅವತಾರಗಳ ಮಾತು ಹಾಗಿರಲಿ. ಮಾರಿಕಾ, ಭೂತ ಪ್ರೇತಗಳು, ಗಿರಿ ವೃಕ್ಷಗಳು, ನದಿ  ಕಾಡುಗಳು- ಇಂಥ ಅನೇಕ ಪದಾರ್ಥಗಳಲ್ಲಿ ಮನುಷ್ಯನು ದೈವಮಹಿಮೆಯನ್ನು -ಎಂದರೆ ದೇವರನ್ನು -ಭಾವಿಸಿ, ಪೂಜಿಸಿಕೊಂಡು ಬಂದಿದ್ದಾನೆ. ಮಾನವ ನಾಗರಿಕತೆಯಲ್ಲಿ ಅತ್ಯಂತ ಪ್ರಭಾವವುಳ್ಳ ಸಂಗತಿಯೆಂದರೆ ಮತ -ದೇವರ ವಿಷಯವಾದ ಮತ. ಮಾನವನನ್ನು ಅತ್ಯಂತ ಪ್ರಾಕೃತದಶೆಯಿಂದ ಸಂಸ್ಕೃತದಶೆಗೆ ತಂದಿರುವುದು ಮತದ ಪ್ರಭಾವ. ಜನರನ್ನು ನೀತಿಮಾರ್ಗದಲ್ಲಿ ಬೆಳೆಸಿ ತಂದಿರುವುದು ಭಗವಂತನ ಬಗೆಗೆ ಭಯ ಮತ್ತು ಪ್ರೀತಿ. ಆದದ್ದರಿಂದ ದೇವರಿಲ್ಲದೆ ಮನುಷ್ಯ ಬದುಕಲಾರನೆನಿಸುತ್ತದೆ. ದೇವರ ಬೆಂಬಲ ಮನುಷ್ಯನಿಗೆ ಯಾವಾಗಲೂ ಬೇಕಾಗಿದೆ.

ಮನುಷ್ಯನ ಬಾಳ್ವಿಕೆಗೂ ನಡವಳಿಕೆಗೂ ಬೆನ್ನುಮೂಳೆಯಂತೆ ಇರುವುದು ಆಸ್ತಿಕತೆ (ಆಸ್ತಿಕತೆ ಎಂಬುದು ‘ಅಸ್ತಿ; ಎಂಬುದರಿಂದ ಬಂದದ್ದು ; ‘ಅಸ್ತಿ’ ಎಂದರೆ ‘ಉಂಟು' ಎಂದರ್ಥ.) ಅದರಿಂದಲೇ ಸೌಜನ್ಯ, ಜನದ ನೆಮ್ಮದಿ.”ಎಂದಿದ್ದಾರೆ.

ಸುಮಾರು ೪೫ ಪುಟಗಳ ಪುಟ್ಟ ಪುಸ್ತಕದಲ್ಲಿ ೧೦ ವಿವಿಧ ಅಧ್ಯಾಯಗಳಿವೆ. ಈ ಪುಸ್ತಕವನ್ನು ಡಿವಿಜಿಯವರು ತಮ್ಮ ಪರಮಾಪ್ತ ಡಾಕ್ಟರ್ ಬಿ ಕೆ ನಾರಾಯಣರಾವ್ ಅವರಿಗೆ ಅರ್ಪಿಸಿದ್ದಾರೆ.