ದೇವರು ಅಥವಾ ದೈವಿಕ ಶಕ್ತಿ....! (ಭಾಗ 1)

ಒಂದು ಅಭಿಪ್ರಾಯ. ವಿಶ್ವದ ಜನರು ನಂಬಿರುವ ಪೂಜಿಸುವ ದೇವರು ಇರಬಹುದೇ? ನಾವು ಮುಗ್ದರೇ, ಮೂರ್ಖರೇ, ಬುದ್ದಿವಂತರೇ, ಎಲ್ಲಾ ತಿಳಿದವರೇ,ಅನುಭವಸ್ಥ ನಾಗರೀಕರೇ… ಒಮ್ಮೆ ಯೋಚಿಸಿ. ಕೆತ್ತಿದ ಕಲ್ಲನ್ನೋ, ಮಣ್ಣನ್ನೋ, ವಿಗ್ರಹವನ್ನೋ, ಚರ್ಚನ್ನೋ, ಮಸೀದಿಯನ್ನೋ ದೇವರೆಂದು - ದೇವಸ್ಥಾನವೆಂದೋ ಪೂಜಿಸುವೆವು, ಮಳೆಯನ್ನು ವರುಣನೆಂದು, ಗಾಳಿಯನ್ನು ವಾಯುವೆಂದು, ಬೆಂಕಿಯನ್ನು ಅಗ್ನಿ ದೇವನೆಂದು ಆರಾಧಿಸುವೆವು, ಶಿಲೆಗೆ ವಿವಿಧ ರೂಪದ ಮನುಷ್ಯನ ಆಕಾರ ನೀಡಿ ಸರ್ವಶಕ್ತನೆನ್ನುವೆವು, ಕಲ್ಲಿನ ಮೂರ್ತಿಗೆ ಹಾಲು, ತುಪ್ಪ, ಹಣ್ಣುಗಳ ಅಭಿಷೇಕ ಮಾಡುವೆವು, ಅಭಿನಯಿಸುವ ನಟ ನಟಿಯರನ್ನು ದೇವರೆಂಬತೆ ಪರಿಗಣಿಸುವೆವು, ಖಾವಿ ಬಿಳಿ ಹಸಿರು ಬಟ್ಟೆಯ ಸ್ವಾಮೀಜಿಗಳನ್ನು ದೇವರ ಅವತಾರಗಳೆಂಬಂತೆ ಭಾವಿಸುವೆವು, ಭವಿಷ್ಯ ಹೇಳುವ ಜ್ಯೋತಿಷಿಗಳನ್ನು ದೈವವಾಣಿಯ ವಕ್ತಾರರೆಂದು ನಂಬುವೆವು, ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎನ್ನುವ ರಾಜಕಾರಣಿಗಳಿಗೆ ಜೈಕಾರ ಹಾಕುವೆವು, ಹೆಣ್ಣನ್ನು ಪ್ರಕೃತಿಗೆ ಹೋಲಿಸಿ ಪೂಜನೀಯ ಸ್ಥಾನ ನೀಡುವೆವು. ಹೌದಲ್ಲವೇ ?,
ಹಾಗಾದರೆ.... ಎಷ್ಟೊಂದು ಒಳ್ಳೆಯವರು, ಎಷ್ಟೊಂದು ದೈವಭಕ್ತರು, ಎಷ್ಟೊಂದು ಮುಗ್ಧರು ನಾವುಗಳು, ಆದರೆ, ಅದೇ ಕಲ್ಲಿನ ದೇವರನ್ನು ಅನೇಕರಿಗೆ ಮುಟ್ಟಲೂ ಬಿಡುವುದಿಲ್ಲ, ಅದೇ ದೇವಸ್ಥಾನಕ್ಕೆ, ಮಸೀದಿಗಳಿಗೆ ಕೆಲವು ಕಡೆ ಮಹಿಳೆಯರಿಗೆ ಪ್ರವೇಶ ಕೊಡುವುದಿಲ್ಲ, ಪ್ರಕೃತಿಯನ್ನು ಧಾರಾಳವಾಗಿ ನಾಶಮಾಡುತ್ತಿದ್ದೇವೆ, ವಿಗ್ರಹಗಳಿಗೆ ಸುರಿಯುವ ಹಾಲು ಹಣ್ಣುಗಳನ್ನು ಹಸಿದವರಿಗೆ ನೀಡುವುದಿಲ್ಲ, ಅದೇ ಹೆಣ್ಣನ್ನು ವರದಕ್ಷಿಣೆಗಾಗಿ ಸುಡುತ್ತಿರುವವರು ನಾವೇ, ಅದೇ ಮಹಿಳೆಯರಿಗೆ ವೇಶ್ಯೆ ಪಟ್ಟ ಕಟ್ಟಿರುವವರು ನಾವೇ, ಅದೇ ರಾಜಕಾರಣಿಗಳಿಂದ ಮೋಸ ಹೋಗುತ್ತಿರುವವರು ನಾವೇ, ಜ್ಯೋತಿಷ್ಯ ನಂಬಿ ಸೃಷ್ಟಿಗೇ ಅವಮಾನ ಮಾಡುತ್ತಿರುವವರು ನಾವೇ, ಅಭಿನಯಿಸುವ ನಟ ರಾಜನಂತಾದರೆ ದುಡಿಯುವ ರೈತ ಆಳಾದ, ಸರ್ವಶಕ್ತ, ಜಗದ್ ರಕ್ಷಕ, ಸರ್ವಜನ ಹಿತರಕ್ಷಕ ಭಗವಂತನಾದರೆ, ಈ ಮೇಲು ಜಾತಿ, ಕೀಳು ಜಾತಿ, ಕರಿಯ ಬಿಳಿಯ, ಬಡವ ಶ್ರೀಮಂತ ಸೃಷ್ಟಿಸಿದವರಾರು, ಅದನ್ನೇಕೆ ಆ ಸರ್ವಶಕ್ತ ತಡೆಯಲಿಲ್ಲ. ಈಗ ಆತ್ಮವಿಮರ್ಶೆ ಮಾಡಿಕೊಳ್ಳೋಣ...
ನಾವು ಮುಗ್ಧರೋ, ಜ್ಞಾನಿಗಳೋ, ದೈವಭಕ್ತರೋ, ಅಜ಼್ಞಾನಿಗಳೋ, ಆಷಾಡಭೂತಿಗಳೋ, ಅನುಕೂಲ ಸಿಂಧುಗಳೋ, ಅಥವಾ ಯಾವುದನ್ನೂ ವಿಮರ್ಶಿಸದೆ ಭಯಪಟ್ಟು ಯಥಾಸ್ಥಿತಿ ಒಪ್ಪುವ ಮೂರ್ಖರೋ, ದೇವರ ಮೇಲಿನ ನಂಬಿಕೆಯಿಂದ ಒಂದಷ್ಟು ಲಾಭಗಳು ಇರುವುದು ನಿಜ. ನಮಗಿಂತ ಮೇಲೆ ಯಾರೋ ಒಬ್ಬ ಶಕ್ತಿಯುತ ವ್ಯಕ್ತಿ ಇದ್ದಾನೆ ಎಂಬ ನಂಬಿಕೆ ಒಂದಷ್ಟು ಮಾನಸಿಕ ನೆಮ್ಮದಿ ನೀಡಬಹುದು. ಸಂಕಷ್ಟದ ಸಮಯದಲ್ಲಿ ಮನುಷ್ಯ ಪ್ರಯತ್ನ ವಿಫಲವಾದಾಗ ಅಗೋಚರ ಶಕ್ತಿ ಕಾಪಾಡಬಹುದು ಎಂಬ ದೂರದ ಆಸೆ ಸ್ವಲ್ಪ ಸಮಾಧಾನ ನೀಡಬಹುದು. ದೇವಸ್ಥಾನದ ಪ್ರಯಾಣ ಮತ್ತು ದೇವ ಮಂದಿರದ ಪ್ರಶಾಂತತೆ ಒಂದಷ್ಟು ಭರವಸೆ ಕೊಡಬಹುದು. ದೇವರ ಬಗೆಗಿನ ಹಾಡುಗಳು ಭಜನೆಗಳು ಕಥೆಗಳು ಪುಸ್ತಕಗಳು ಮನಸ್ಸಿನ ಆತ್ಮವಿಶ್ವಾಸ ಹೆಚ್ಚಿಸಬಹುದು.
ದೇವರ ಬಗೆಗಿನ ಭಯ, ವ್ಯಕ್ತಿಗಳು ತಪ್ಪು ಮಾಡುವುದನ್ನು ಕಡಿಮೆ ಮಾಡಿ ಸಮಾಜದ ಶಾಂತಿಗೆ ಒಂದಷ್ಟು ಕೊಡುಗೆ ನೀಡಬಹುದು. ಮಂದಿರ ಮಸೀದಿ ಚರ್ಚು ಗುರುದ್ವಾರಗಳು ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳು ಹಲವು ಜನರಿಗೆ ಉದ್ಯೋಗ ನೀಡಬಹುದು. ದೇವರ ನಂಬಿಕೆ ಹಬ್ಬದ ಸಂಭ್ರಮ ಆಚರಿಸಲು ಸಹಕಾರಿಯಾಗಬಹುದು. ಕೆಲವು ಆಕಸ್ಮಿಕಗಳು ಕೆಲವರಿಗೆ ಅದೃಷ್ಟವಾಗಿಯೂ ಕೆಲವರಿಗೆ ದುರಾದೃಷ್ಟವಾಗಿಯೂ ಕಾಡಬಹುದು. ಅದನ್ನು ದೇವರ ಕೃಪೆಯೆಂದು ಭಾವಿಸಲಾಗುತ್ತದೆ. ಹೀಗೆ ಕೆಲವು ನಂಬಿಕೆ ಆಧಾರಿತ ಗಾಳಿ ಗೋಪುರವು ದೇವರ ಅಸ್ತಿತ್ವವನ್ನು ಸಮರ್ಥಿಸಬಹುದು. ಆದರೆ ಈ ಎಲ್ಲವೂ ನಂಬಿಕೆಯೇ ಹೊರತು ವಾಸ್ತವವಲ್ಲ. ನೀವು ಅನಾದಿ ಕಾಲದಿಂದ ಈ ಕ್ಷಣದವರೆಗೆ ಆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ.
(ಇನ್ನೂ ಇದೆ)
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ