ದೇವರು ಅಥವಾ ದೈವಿಕ ಶಕ್ತಿ....! (ಭಾಗ 2)

ದೇವರು ಅಥವಾ ದೈವಿಕ ಶಕ್ತಿ....! (ಭಾಗ 2)

ಬೆತ್ತಲೆಯಿಂದ ಜೀನ್ಸ್ ವರೆಗೆ, ಕಾಲ್ನಡಿಗೆಯಿಂದ ವಿಮಾನದವರೆಗೆ, ಗೆಡ್ಡೆ ಗೆಣಸುಗಳಿಂದ ಕಬಾಬ್ ವರೆಗೆ, ಔಷಧೀಯ ಸಸ್ಯಗಳಿಂದ ಆಸ್ಪತ್ರೆಯ ವೆಂಟಿಲೇಟರ್ ವರೆಗೆ, ಗುಂಪು ಆಡಳಿತದಿಂದ ಪ್ರಜಾಪ್ರಭುತ್ವದವರಗೆ, ಪಾರಿವಾಳಗಳಿಂದ ಇಂಟರ್ ನೆಟ್ ವರೆಗೆ ಎಲ್ಲವೂ ಸೃಷ್ಟಿಯ ಪ್ರಾರಂಭದಲ್ಲೇ ಆಗದೆ ಮನುಷ್ಯನ ಅಗಾಧ ಅನುಭವದಿಂದ ಹಂತ ಹಂತವಾಗಿ ಬೆಳವಣಿಗೆ ಹೊಂದಿದೆ. ದೇವರ ಸೃಷ್ಟಿಯೇ ಆಗಿದ್ದರೆ ಎಲ್ಲವನ್ನೂ ಸ್ಮಾರ್ಟ್ ಆಗಿ ಮೊದಲೇ ಪ್ಲಾನ್ ಮಾಡಬೇಕಿತ್ತು. ಅನಾದಿ ಕಾಲದಲ್ಲಿ ಒಬ್ಬರಿಗೊಬ್ಬರು ಕೊಂದು ಬಲಿಷ್ಠರು ಮಾತ್ರ ಬದುಕುವ ವ್ಯವಸ್ಥೆಯಿಂದ ಅನೇಕ ಯುದ್ಧಗಳನ್ನು ಮಾಡಿ ಕೋಟಿ ಕೋಟಿ ಜನರ ಹತ್ಯೆಗಳು ನಡೆದು ಈಗ ಒಂದಷ್ಟು ರಕ್ಷಣೆಯ ವ್ಯವಸ್ಥೆಯಲ್ಲಿ ನಾವಿದ್ದೇವೆ.

ಇಲ್ಲಿಯೂ ದೇವರ ಪಾತ್ರ ಕಾಣುವುದಿಲ್ಲ. ದೇವರ ಶಕ್ತಿಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಚಲಿಸುವುದಿಲ್ಲ ಎಂದು ಭಕ್ತರು ಹೇಳಿದರೆ, ದೇವರಿಗೆ ಒಂದು ಹುಲ್ಲು ಕಡ್ಡಿಯನ್ನು ಕದಲಿಸುವ ಶಕ್ತಿ ಇಲ್ಲ ಎಂದು ಕೆಲವರು ಹೇಳುತ್ತಾರೆ. ಜ್ಞಾನದಿಂದ ಕುತೂಹಲಕ್ಕಾಗಿ ಹುಡುಕಾಟ ನಡೆಸಿದಾಗ ಬೇರೆ ಬೇರೆ ರೂಪದ ಶಕ್ತಿಗಳು ಸಿಗುತ್ತವೆಯೇ ಹೊರತು ಸಾಮಾನ್ಯ ಜನ ನಂಬಿರುವ ಕೇಂದ್ರೀಕೃತ ಮತ್ತು ಸಮಸ್ತ ಸೃಷ್ಟಿಯ ಮೇಲೆ ನಿಯಂತ್ರಣ ಇರುವ ಶಕ್ತಿ ಗೋಚರಿಸುವುದಿಲ್ಲ. ಕುರಾನ್ ಬೈಬಲ್ ವೇದ ಉಪನಿಷತ್ತುಗಳು ಮತ್ತು ಇತರ ಧರ್ಮ ಗ್ರಂಥಗಳು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ. ಆದರೆ ‌ಆ ಯಾವ ಉತ್ತರವೂ ಸರಳವಾಗಿ ಸಹಜವಾಗಿ ನೇರವಾಗಿ ಸಾಮಾನ್ಯ ತಿಳುವಳಿಕೆಗೆ ನಿಲುಕದೆ ಬಹುತೇಕ ಕಾಲ್ಪನಿಕ ಪಲಾಯನವಾದವೇ ಆಗಿರುತ್ತದೆ. ದೇವರನ್ನು ತೋರಿಸುವ ಪ್ರಯತ್ನ ಮಾತ್ರ ಸಫಲವಾಗಿಲ್ಲ.

ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲೆ ಎನ್ನುವ ಗ್ರಂಥಗಳು, ಅದರ ರಚನಾಕಾರರು ಮತ್ತು ಅದನ್ನು ಇಂದಿಗೂ ಪ್ರತಿಪಾದಿಸುತ್ತಿರುವ ಧಾರ್ಮಿಕ ಪ್ರತಿನಿಧಿಗಳು ಖಂಡಿತ ಭ್ರಮಾಧೀನರಾಗಿರುತ್ತಾರೆ. ಅವರಿಗೆ ಕೇಳಿ, ಅಪಘಾತ ಅನಾರೋಗ್ಯ ಕುಟುಂಬ ಕಲಹ ಅಧಿಕಾರ ಬಡತನ ದೌರ್ಭಾಗ್ಯ ಮದುವೆ ನಿರುದ್ಯೋಗ ಎಲ್ಲಕ್ಕೂ ಕಾರಣಗಳನ್ನು ಮತ್ತು ಅದಕ್ಕೆ ಪರಿಹಾರವನ್ನು ಸೂಚಿಸುತ್ತಾರೆ. ನಮಗೆ ಗೊತ್ತಿಲ್ಲ ಎಂದು ಹೇಳುವುದೇ ಇಲ್ಲ. ಹಾಗಾದರೆ ಇದು ಸಾಧ್ಯವೇ. ಇದು ಸಾಧ್ಯವಾಗಿದಿದ್ದರೆ ಇಡೀ ವಿಶ್ವವೇ ಸ್ವರ್ಗವಾಗುತ್ತಿತ್ತು.

ಇದನ್ನು ಮರೆಮಾಚಲು ವಿಧಿ ಲಿಖಿತ - ಹಣೆ ಬರಹ ಎಂಬ ಮತ್ತೊಂದು ಪಲಾಯನವಾದದ ಸೂತ್ರ ಮುಂದಿಡುತ್ತಾರೆ.ಹುಟ್ಟುವ ಪ್ರತಿ ಜೀವಿಗೂ ಹಣೆ ಬರಹ ಬರೆಯುತ್ತಾ ಕೂರಲು ದೇವರಿಗೆ ಕೆಲಸವಿಲ್ಲವೇ ? ಇದು ಸಾಧ್ಯವೇ? ವಿಶ್ವದ ಪ್ರತಿ ನಾಗರಿಕತೆಯು ಒಂದೊಂದು ದೇವರನ್ನು ‌ಸೃಷ್ಟಿಸಿರುವುದು ಮನುಷ್ಯನೇ ದೇವರ ಸೃಷ್ಟಿಕರ್ತ ಎಂಬುದನ್ನು ಸೂಚಿಸುತ್ತದೆಯಲ್ಲವೇ. ಜ್ಞಾನವೆಂಬುದು ನಿಂತ ನೀರಲ್ಲ ಅದು ಹರಿಯುವ ಪ್ರವಾಹ ಎಂಬ ಸೂಕ್ಷ್ಮ ತಿಳಿವಳಿಕೆ ಅವರಿಗೆ ಇರುವುದಿಲ್ಲ. ಇದ್ದರೂ ಅದನ್ನು ಒಪ್ಪಿಕೊಂಡರೆ ಅವರ ಅಸ್ತಿತ್ವವೇ ಕುಸಿಯುತ್ತದೆ. ಸಾವಿನ ಭಯ, ಹಣ ಅಧಿಕಾರ ಸಿಗುವ ದುರಾಸೆ, ದಾರಿದ್ರ್ಯ ಸ್ಥಿತಿಗೆ ತಲುಪುವ ಆತಂಕ, ಸಂಕೀರ್ಣ ಜೀವನ ಶೈಲಿ, ಯಶಸ್ಸನ್ನು ತಪ್ಪಾಗಿ ಅರ್ಥೈಸಿರುವುದು, ಪ್ರಬುದ್ದತೆಯ ಮಟ್ಟ ಕುಸಿದು ಸ್ವತಂತ್ರ ಕ್ರಿಯಾತ್ಮಕ ಚಿಂತನೆಯ ಕೊರತೆ ದೇವರ ಬಗ್ಗೆ ನಾವು ನಿಷ್ಪಕ್ಷಪಾತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗತ್ತಿಲ್ಲ. ಇದನ್ನೆಲ್ಲಾ ಮೀರಿ ಯೋಚಿಸಿದರೆ ದೇವರ ಇರುವಿಕೆ ಮತ್ತು ಇಲ್ಲದಿರುವಿಕೆಯ ಸ್ಪಷ್ಟ ಚಿತ್ರಣ ಸಿಗುತ್ತದೆ. ನಿಮ್ಮ ನಂಬಿಕೆ ಮತ್ತು ಅಭಿಪ್ರಾಯ ಗೌರವಿಸುತ್ತಾ....

ದೇವರಲ್ಲಿಯೇ ಒಂದು ಕೋರಿಕೆ.

ನನ್ನ ಪ್ರೀತಿಯ ದೇವರೆ ನೀನೆಲ್ಲಿರುವೆ, 

ನಿನ್ನನ್ನು ಒಮ್ಮೆ ನೋಡಬೇಕೆನಿಸಿದೆ ,

ನಿನ್ನ ಬಳಿ ತುಂಬಾ ಮಾತನಾಡಬೇಕಿದೆ,

ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರ ಬೇಕಿದೆ,

ನಿನ್ನಲ್ಲಿ ನಾನು ಲೀನವಾಗಬೇಕಿದೆ,

ಯಾಕೆ  ಸಾಧ್ಯವಿಲ್ಲವೆ?, ನಾನು ಕೆಟ್ಟವನೆ, ಹೋಗಲಿ ಬಿಡು ನಿನ್ನಿಷ್ಟ, ನಾವು ಭೂಮಿಯಲ್ಲಿ 750 ಕೋಟಿ ಜನರಿದ್ದೇವೆ, ಅವರಲ್ಲಿ ನಿನಗಿಷ್ಟದ ಯಾರಿಗಾದರೂ ದರ್ಶನ ನೀಡು, ಅವರಿಗೆ ಹೇಳು, ನೀನು ಎಲ್ಲಿರುವೆ ? , ಏನು ಮಾಡುತ್ತಿರುವೆ ?  ಹೇಗಿರುವೆ ? ನಿನ್ನ ಬೇಟಿ ಮಾಡುವುದು ಹೇಗೆ? ನಿನ್ನ ಶಕ್ತಿ ಏನು? ನಿನ್ನ ವ್ಯಾಪ್ತಿ ಏನು? ನಿನ್ನ ರೂಪವೇನು? ನಿನ್ನ ಗುಣವೇನು? ಇಲ್ಲಿ ಕಟ್ಟಿಸಿರುವ ಗುಡಿ ಗೋಪುರ ಚರ್ಚು ಮಸೀದಿಗಳು ನಿನ್ನವೇನು? ಈ ಪೂಜಾರಿ, ಸ್ವಾಮಿ, ಪಾದ್ರಿ, ಮುಲ್ಲಾಗಳು ನಿನ್ನವರೇನು?

ಜಾತಿ, ಧರ್ಮ, ಭಾಷೆಗಳನ್ನು ನೀನೇ ಸೃಷ್ಟಿಸಿದ್ದೇ? ಗಾಳಿ, ನೀರು, ಬೆಳಕು ನಿನ್ನಿಂದಲೇ ಆಗಿದ್ದೇ? ನನಗೆ ಬುದ್ದಿ ತಿಳಿದಾಗಿನಿಂದ ಹುಡುಕುತ್ತಿದ್ದೇನೆ, ಎಲ್ಲಾ ಪುಣ್ಯ ಸ್ಥಳಗಳನ್ನು ಸುತ್ತಿದ್ದೇನೆ, ಎಲ್ಲರೂ ಆಕಾಶ ತೋರುವರು,  ಅಲ್ಲಿಗೂ, ಚಂದ್ರನಲ್ಲಿಗೂ, ಮಂಗಳನಲ್ಲಿಗೂ ಬಂದಿದ್ದೆ, ನೀನು ಕಾಣಲಿಲ್ಲ, ಈ ಜನರ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ, ನನ್ನೊಡೆಯ ಒಮ್ಮೆ,- ಒಮ್ಮೆ ಕಾಣಿಸಿಕೋ, ನಂಬಿಕೆ, ಭಕ್ತಿ, ಶ್ರದ್ಧೆ, ಶುದ್ಧತೆ ಎಂದೆಲ್ಲಾ ಕೇಳಿ ಕೇಳಿ ತಲೆ ಕೆಟ್ಟಿದೆ, ಅದೆಲ್ಲವನ್ನೂ ಕೊಡುವುದು ನೀನೇ ಆಗಿರುವಾಗ ಇವರ ಒತ್ತಡ ಏಕೆ?

ನೀನೇ ಸರ್ವಶಕ್ತ ಎನ್ನುವರು. ಆದರೆ, ನಿನ್ನ ಗುಣಾವಗುಣಗಳನ್ನು ಇವರೇ ನಿರ್ಧರಿಸುವರು, ರಾಶಿ ಭವಿಷ್ಯ ರಾಹು ಕೇತು ಸ್ವರ್ಗ ನರಕ ಶ್ರೇಷ್ಠ ಕನಿಷ್ಠ, ಎಂದೆಲ್ಲಾ ಹೇಳಿ ನಿನ್ನ ಹೆಸರಲ್ಲೇ ಎಲ್ಲಾ ಮಾಡುವರು,ನೀನು ಮಾತ್ರ ಪತ್ತೆಯೇ ಇಲ್ಲ. ಆದರೂ ಕಾಯುತ್ತಿದ್ದೇನೆ ನಿನ್ನ ಬರುವಿಕೆಗಾಗಿ ಶತಶತಮಾನಗಳಿಂದ, ಯಾರು ಏನೇ ಅಂದರೂ, ಯಾರು ಏನೇ ಭಯಪಡಿಸಿದರೂ ನೀನು ಕಾಣುವವರೆಗೂ ನಿನ್ನನ್ನು ಪ್ರಶ್ನಿಸುತ್ತಲೇ ಇರುತ್ತೇನೆ ಮತ್ತು ಹೇಳುತ್ತಲೇ ಇರುತ್ತೇನೆ ನಿನ್ನನ್ನು ಸೃಷ್ಡಿಸಿದ್ದು ನಾನೇ ಎಂದು…!

(ಮುಗಿಯಿತು)

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ