ದೇವರು ಅರೆಸ್ಟ್ ಆದ

ದೇವರು ಅರೆಸ್ಟ್ ಆದ

ಪುಸ್ತಕದ ಲೇಖಕ/ಕವಿಯ ಹೆಸರು
ಶಿವಕುಮಾರ್ ಮಾವಲಿ
ಪ್ರಕಾಶಕರು
ಮಾವಲಿ ಪಬ್ಲಿಕೇಶನ್ಸ್, ಸೊರಬ, ಶಿವಮೊಗ್ಗ
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೩

ಶಿವಕುಮಾರ ಮಾವಲಿ ಅವರ ಮೊದಲ ಕಥಾ ಸಂಕಲನ `ದೇವರು ಅರೆಸ್ಟ್ ಆದ’. ಇಲ್ಲಿಯ ಕತೆಗಳ ನವೀನ ನಿರೂಪಣೆ, ಸೃಜನಾತ್ಮಕತೆ, ನವಿರಾದ ಹಗುರ ಭಾವಗಳು ಓದಿನೊಂದಿಗೆ ನಮ್ಮದಾಗುತ್ತದೆ. ತಮ್ಮ ತಾಜಾತನದ ಕತೆಯ ಎಳೆಯೊಂದಿಗೆ ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗುತ್ತವೆ. ೧೦೪ ಪುಟಗಳ ಈ ಪುಟ್ಟ ಕಥಾ ಸಂಕಲನದ ಎಲ್ಲಾ ಕತೆಗಳು ಓದುವಂತಿವೆ.

'ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ಧಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ ಆಳದಲ್ಲಿ ವಿಶೇಷ ಅನುಭವಗಳನ್ನು ಕಟ್ಟಿಕೊಡುತ್ತದೆ. ಶಿವಕುಮಾರ ಮೂಲತಃ ರಂಗಭೂಮಿಯವರಾದ್ದರಿಂದ ಅವರು ಬಳಸಿರುವ ವ್ಯಂಗ್ಯ ಮಿಶ್ರಿತ ಮಾತುಗಳು, ಕೊಟ್ಟು ತೆಗೆದುಕೊಳ್ಳುವ ಸಂಭಾಷಣೆಯ ಮಾದರಿ ಕತೆಗೆ ಮತ್ತಷ್ಟು ಗಟ್ಟಿತನ ತಂದುಕೊಟ್ಟಿದೆ. ಲೇಖಕರಾದ ಸಾಸ್ವೇಹಳ್ಳಿ ಸತೀಶ್ ಅವರು ಈ ಕಥಾ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಅದರಲ್ಲಿ...

“ಶಿವಕುಮಾರ ಮಾವಲಿಯವರ ಮೊದಲ ಕಥಾ ಸಂಕಲನ ದೇವರು ಅರೆಸ್ಟ್ ಆದ ಇದೀಗ ಮೂರನೇ ಮುದ್ರಣ ಕಂಡಿದೆ. ಸಂಕಲನದಲ್ಲಿರುವ ಕತೆಗಳೆಲ್ಲಾ ಸಮಕಾಲೀನ ಘಟನೆಗಳಿಗೆ ಮುಖಾಮುಖಿಯಾಗುತ್ತಲೇ ಹೊಸದನ್ನು ಹೇಳಿ ನಾನೂ ಹೀಗೆ ಅಂದುಕೊಂಡಿದ್ದೆನಲ್ಲಾ ಎಂಬ ಉದ್ಗಾರವನ್ನು ಹೊರಡಿಸುವಂತೆ ಮಾಡುತ್ತವೆ. ಇಲ್ಲಿ ಬರುವಂತಹ ಪಾತ್ರಗಳು ತಮ್ಮ ಸುತ್ತಮುತ್ತಲಿನ ಜಗತ್ತಿನೊಳಗೆ ಏನಿದೆ? ಏನಾಗಬೇಕಿದೆ? ಹೀಗೇ ಏಕಾಗಬೇಕು? ಎಂದು ಪ್ರಶ್ನಿಸಿಕೊಳ್ಳುತ್ತಲೇ ಅಂತರಂಗವನ್ನು ಶೋಧಿಸಿಕೊಳ್ಳುತ್ತಾ ಓದುಗನ ಅಂತರಾಳಕ್ಕೆ ಇಳಿದು ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತವೆ..

‘ನನ್ನಂಥ ಸಾಮಾನ್ಯನೊಳಗೆ ಇರಬಹುದಾದ ದೇವರನ್ನು ಹುಡುಕಲಾರಂಭಿಸಿದೆ.. ಈಗ ನನ್ನಲ್ಲಿ ನಿತ್ಯ ದೇವರು ಸಂಚರಿಸುತ್ತಾನೆ’ ಎನ್ನುವ ಕತೆಯ ಕೊನೆಯ ಸಾಲು ವಚನಕಾರರ ಅನುಭಾವವನ್ನು ನೆನಪಿಸುವಲ್ಲಿ ಸಶಕ್ತವಾಗಿದೆ.

ಈ ಸಂಕಲನದ ವಿಶೇಷವಾದ ಕತೆ ‘ಮಧ್ಯ ವಯಸ್ಕನ ಮನೋಲಾಗ್’. ಈ ಕತೆ ನವ್ಯದ ಆರಂಭದಲ್ಲಿ ಬಹಳಷ್ಟು ಬರೆಸಿಕೊಂಡ ಅಸ್ತಿತ್ವವಾದದ ಸಿದ್ಧಾಂತವನ್ನು ಹೇಳುತ್ತಿದ್ದೆಯೇನೋ ಅನಿಸಿಬಿಡುತ್ತದೆ. ಮರುಕ್ಷಣಕ್ಕೆ ಅಲ್ಲಾ ಎನಿಸುತ್ತದೆ. ಮನುಷ್ಯನ ಬದುಕಿನಲ್ಲಿ ವಯೋ ಸಹಜವಾಗಿ ನಡೆಯಬೇಕಾದ ಕ್ರಿಯೆಗಳು ಸಫಲವಾಗದೇ ಇದ್ದ ಸಂದರ್ಭದಲ್ಲಿ ಅದು ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಮೇಲ್ನೋಟಕ್ಕೆ ಇದು ರಾಜಶೇಖರನ ಕತೆಯಂತೆ ಕಂಡರೂ ಎಲ್ಲರ ಕತೆಯೂ ಹೌದು, ಹಾಗೆಯೇ ಎಲ್ಲರ ಕತೆಯೂ ಅಲ್ಲ.

ಕತೆಯ ಆರಂಭವೇ ಕುತೂಹಲ ಹುಟ್ಟಿಸುವುದಲ್ಲದೇ ಕೊನೆಯ ಪದದವರೆಗೆ ಓದಲು ಪ್ರೇರೇಪಿಸುತ್ತದೆ. ಕತೆಗಾರ ಶಿವಕುಮಾರ್ ಗೆದ್ದಿರುವುದೇ ಇಲ್ಲಿ. ಕತೆಯೊಂದು ಕೊನೆಯವರೆಗೂ ಸುಮ್ಮನೆ ಓದಿಸಿಕೊಂಡು ಹೋದಾಗಲೇ ಯಶಸ್ವಿ ಕತೆ ಎನಿಸುವುದು. ಈ ಓದಿಸಿಕೊಳ್ಳುವ ಗುಣದ ಹಿಂದೆ ಕತೆಗಾರನ ಕತೆ ಕಟ್ಟುವ ತಂತ್ರ ಕೆಲಸ ಮಾಡಿದೆ. ಪುರಾಣದ ಕಾಲದಿಂದ ಈ ಕಾಲದವರೆಗೂ ಕುತೂಹಲ ಹುಟ್ಟಿಸಿಕೊಂಡೇ ಬಂದಿರುವ ಗಂಡು-ಹೆಣ್ಣುಗಳ ಕಾತರ, ಅನಾಯಸವಾಗಿ ದೊರಕಿಬಿಡಬಹುದಾದ ಗಂಡು/ ಹೆಣ್ಣಿನ ಸಾಂಗತ್ಯ, ಕಾಯುವಿಕೆಯಲ್ಲಿನ ವಿರಹ/ ಖುಷಿ ಇತ್ಯಾದಿ ವಿಚಾರಗಳು ದಂಡಿಯಾಗಿ ಕತೆಯಲ್ಲಿವೆ.

ಸಂಕಲನದಲ್ಲಿ ಬರುವ ‘ಸತ್ತವರ ಸಂಭಾಷಣೆ’ ಕತೆ, ಈಗಾಗಲೇ ಸತ್ತು ಹೋಗಿರಬೇಕಾಗಿದ್ದ ವಿಷಯವೊಂದನ್ನು ಭಿನ್ನವಾಗಿ ಹೇಳುವ ಪ್ರಯತ್ನವನ್ನು ಮಾಡುತ್ತದೆ. ಹೆಣವಾಗಿ ಭೂಮಿ ಸೇರಿದ್ದ ರಾಜನೊಬ್ಬ ತನ್ನ ಪಕ್ಕದಲ್ಲಿ ಮಲಗಿದ್ದ ಹೆಣಕ್ಕೆ ‘ನಾನು ರಾಜನೆಂದು ತಿಳಿದೂ ನನ್ನ ಪಕ್ಕದಲ್ಲಿ ಮಲಗುವ ಧೈರ್ಯವೇ?’ ಎಂದು ಕೇಳುತ್ತಲೇ ಶ್ರೇಣಿಕೃತ ಸಮಾಜದಲ್ಲಿರುವ ಹುಳುಕುಗಳನ್ನು ಕಣ್ಣಮುಂದೆ ತಂದಿಡುತ್ತದೆ. ರಾಜನ ಶವದ ಪಕ್ಕ ಮಲಗಿರುವುದು ಸೇವನಕ ಶವ ಎಂದು ತಿಳಿದಾಗ ಮಂತ್ರಿ, ಪ್ರೀತಿಯ ಪಟ್ಟದ ರಾಣಿ, ಯುವರಾಜ ಬರದೇ ನೀನು ಬಂದಿದ್ದೀಯಲ್ಲ- ನೀನು ಸಾಯುವುದಕ್ಕೆ ಪ್ರತಿಭಟಿಸಲಿಲ್ಲವೇ? ಎಂದು ರಾಜ ಕೇಳುತ್ತಾನೆ.

ಪ್ರತಿಭಟಿಸಿದ್ದರೆ ನನ್ನ ತಲೆ ಹಾರುತ್ತಿತ್ತು. ರಾಜದ್ರೋಹದ ಹಣೆಪಟ್ಟಿ ಹೊದ್ದು ಮಲಗುವುದಕ್ಕಿಂತ ಅವರ ಮಾತು ಕೇಳುವುದೇ ಸರಿಯಲ್ಲವೇ? ಎಂದು ಸೈನಿಕ ಕೇಳುತ್ತಾನೆ. ವ್ಯವಸ್ಥೆಯೊಂದರ ಅಂಚಿನಲ್ಲಿರುವ ವ್ಯಕ್ತಿ ಕೆಳಗೆ ಬೀಳುತ್ತೇನೆೆ ಎಂದು ಗೊತ್ತಿದ್ದರೂ ಕೆಟ್ಟವನಾಗಿ ಬೀಳುವುದು ಬೇಡ ಎಂದುಕೊಳ್ಳುವ ಅವನು ಆತ್ಮ ಸಮ್ಮಾನ ಕಾಯ್ದುಕೊಳ್ಳುವ ಬಗೆ ವಿಶೇಷವೆನಿಸುತ್ತದೆ. ಕಥಾ ಸಂಕಲನದಲ್ಲಿರುವ ‘ವೃದ್ಧಾಶ್ರಮ’ ‘ಒಂದು ಮೌನದ ದಿನ’ 'ಕೊನೆಯ ಮನುಷ್ಯ' ಇತ್ಯಾದಿ ಕತೆಗಳೂ ಕೂಡ ವಸ್ತು, ನಿರೂಪಣೆ ಮತ್ತು ತಂತ್ರಗಳಿಂದಾಗಿ ವಿಶೇಷವಾಗಿವೆ. ಬರಹಗಾರನ ಸಾಮಾಜಿಕ ಹೊಣೆ ಏನು ಎಂಬುದು ಈ ಕತೆಗಳಲ್ಲಿ ತಿಳಿಯುತ್ತದೆ.”